21
ದೇವರು ಚಿದ್ಕೀಯನ ಬಿನ್ನಹವನ್ನು ತಿರಸ್ಕರಿಸಿದ್ದು
1 ಅರಸನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ, ಯಾಜಕನು ಮಾಸೇಯನ ಮಗನು ಆದ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿ,
2 “ದಯಮಾಡಿ ಯೆಹೋವನ ಚಿತ್ತವೇನೆಂದು ಆತನನ್ನು ನಮಗೋಸ್ಕರ ವಿಚಾರಿಸು; ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಮ್ಮ ವಿರುದ್ಧವಾಗಿ ಯುದ್ಧ ಮಾಡುತ್ತಿದ್ದಾನಲ್ಲಾ; ಒಂದು ವೇಳೆ ಯೆಹೋವನು ತನ್ನ ಸಮಸ್ತ ಅದ್ಭುತಕಾರ್ಯಗಳಿಗೆ ಅನುಗುಣವಾಗಿ ನಮ್ಮ ಪಕ್ಷವನ್ನು ವಹಿಸಿ ಈ ಶತ್ರುವು ನಮ್ಮ ಕಡೆಯಿಂದ ತೊಲಗುವಂತೆ ಮಾಡಿಯಾನು” ಎಂದು ಅವರ ಮೂಲಕ ವಿಜ್ಞಾಪಿಸಿದಾಗ ಯೆಹೋವನಿಂದ ಯೆರೆಮೀಯನಿಗೆ ದೈವೋಕ್ತಿಯು ದೊರೆಯಿತು.
3 ಆಗ ಯೆರೆಮೀಯನು, “ಈ ಉತ್ತರವನ್ನು ಚಿದ್ಕೀಯನಿಗೆ ತಿಳಿಸಿರಿ” ಎಂದು ಅವರಿಗೆ ಹೇಳಿದನು.
4 ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಿಮ್ಮನ್ನು ಮುತ್ತುವ ಕಸ್ದೀಯರಿಗೂ ಬಾಬೆಲಿನ ಅರಸನಿಗೂ ವಿರುದ್ಧವಾಗಿ ಪೌಳಿಗೋಡೆಯ ಹೊರಗೆ ಯುದ್ಧಮಾಡುವುದಕ್ಕೆ ನೀವು ಹಿಡಿದಿರುವ ಆಯುಧಗಳನ್ನು ನಾನು ಹಿಂದಕ್ಕೆ ತಳ್ಳಿ, ಈ ಪಟ್ಟಣದೊಳಗೆ ಕೂಡಿಹಾಕುವೆನು.
5 ನಾನೇ ಕೋಪ, ರೋಷ, ಮಹಾಕ್ರೋಧಭರಿತನಾಗಿ ಶಿಕ್ಷಾಹಸ್ತದಿಂದಲೂ ಮತ್ತು ಭುಜಪರಾಕ್ರಮದಿಂದಲೂ ನಿಮ್ಮ ವಿರುದ್ಧವಾಗಿ ಯುದ್ಧಮಾಡುವೆನು.
6 ಈ ಪಟ್ಟಣದಲ್ಲಿ ವಾಸಿಸುವ ಮನುಷ್ಯರನ್ನೂ ಮತ್ತು ಪಶುಗಳನ್ನೂ ಬಾಧಿಸುವೆನು, ಘೋರವ್ಯಾಧಿಯು ಅವರನ್ನು ಸಾಯಿಸುವುದು.
7 ತರುವಾಯ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ ಮತ್ತು ಅವರ ಸೇವಕರನ್ನೂ ವ್ಯಾಧಿ, ಖಡ್ಗ ಮತ್ತು ಕ್ಷಾಮಗಳಿಂದ ಹತರಾಗದೆ ಉಳಿದ ಪ್ರಜೆಗಳನ್ನೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೂ, ಅವರ ಪ್ರಾಣವನ್ನು ಹುಡುಕುತ್ತಿರುವ ಅವರ ಶತ್ರುಗಳ ಕೈಗೂ ಕೊಟ್ಟುಬಿಡುವೆನು. ಅವನು ಅವರನ್ನು ಕರುಣಿಸದೆ, ಕನಿಕರದಿಂದ ಉಳಿಸದೆ ಕತ್ತಿಯಿಂದ ಸಂಹರಿಸುವನು.
8 “ನೀನು ಈ ಜನರಿಗೆ ಹೀಗೆ ಹೇಳು” ಎಂದು ಯೆಹೋವನು ನನಗೆ ಅಪ್ಪಣೆಕೊಟ್ಟಿದ್ದಾನೆ. ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಜೀವಿಸುವ ಮಾರ್ಗವನ್ನೂ ಮತ್ತು ಸಾಯುವ ಮಾರ್ಗವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ.
9 ಪಟ್ಟಣದಲ್ಲಿ ನಿಲ್ಲುವವನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸಾಯುವನು. ನಿಮ್ಮನ್ನು ಮುತ್ತುವ ಕಸ್ದೀಯರನ್ನು ಮೊರೆಹೋಗಲು ಪಟ್ಟಣವನ್ನು ಬಿಡುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು.
10 ಮೇಲಿಗಲ್ಲ, ಕೇಡಿಗಾಗಿಯೇ ಈ ಪಟ್ಟಣದ ಮೇಲೆ ದೃಷ್ಟಿಯಿಟ್ಟಿದ್ದೇನೆ; ಇದು ಬಾಬೆಲಿನ ಅರಸನ ಕೈವಶವಾಗುವುದು, ಅವನು ಅದನ್ನು ಸುಟ್ಟುಬಿಡುವನು; ಇದು ಯೆಹೋವನ ನುಡಿ.”
ಯೆಹೂದದ ರಾಜಮನೆತನಕ್ಕೆ ಶಾಪ
11 ಯೆಹೂದದ ಅರಸನ ಮನೆತನದ ವಿಷಯವಾಗಿ ಯೆಹೋವನು ಹೇಳಿರುವ ಈ ಮಾತನ್ನು ಕೇಳಿರಿ.
12 ದಾವೀದನ ಮನೆತನದವರೇ, ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ರೋಷವು ಜ್ವಾಲೆಯಂತೆ ಹೊರಟು,
ಯಾರೂ ಆರಿಸಲಾಗದಷ್ಟು ರಭಸವಾಗಿ ದಹಿಸಬಾರದಾಗಿದ್ದರೆ,
ಮುಂಜಾನೆಯಲ್ಲಿ ನ್ಯಾಯತೀರಿಸಿರಿ, ಸುಲಿಗೆಯಾದವನನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ” ಎಂಬುದೇ.
13 ಆಹಾ, ತಗ್ಗಿನ ನಗರವೇ, ಬಯಲು ಭೂಮಿಯ ಶಿಖರದ ಮೇಲಣ ಪುರಿಯೇ, ನಾನು ನಿನ್ನ ವಿರುದ್ಧವಾಗಿದ್ದೇನೆ.
“ಯಾರು ಇಳಿದು ನಮ್ಮ ಮೇಲೆ ಬಂದಾರು? ನಮ್ಮ ನಿವಾಸಗಳಲ್ಲಿ ಯಾರು ನುಗ್ಗುವರು?” ಎಂದು ಹೇಳುವವರೇ,
14 ನಿಮ್ಮ ದುಷ್ಕೃತ್ಯಗಳಿಗೆ ಪ್ರತಿಫಲವಾಗಿ ನಿಮ್ಮನ್ನು ದಂಡಿಸುವೆನು; ನಿಮ್ಮ ಪುರವೆಂಬ ವನಕ್ಕೆ ಬೆಂಕಿ ಹಚ್ಚುವೆನು,
ಅದು ಸುತ್ತುಮುತ್ತಣದ ಪ್ರದೇಶವನ್ನೆಲ್ಲಾ ನುಂಗಿಬಿಡುವುದು.