27
ಯೆಹೋವನಿಗೆ ತೀರಿಸಬೇಕಾದ ಹರಕೆಗಳು
ಯೆಹೋವನು ಮೋಶೆಯ ಸಂಗಡ ಮಾತನಾಡಿ, “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಯಾವನಾದರೂ ಮನುಷ್ಯರ ಪ್ರಾಣಗಳನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ, ಅವುಗಳನ್ನು ಬಿಡಿಸುವುದಕ್ಕೆ ದೇವರ ಸೇವೆಗೆ ನೇಮಕವಾದ ಶೆಕೆಲ್ ಮೇರೆಗೆ ನೀವು ಅವನಿಂದ ಕೊಡಿಸಬೇಕಾದ ಈಡು ಹೀಗಿರಬೇಕು. ಇಪ್ಪತ್ತು ವರ್ಷದಿಂದ ಅರುವತ್ತು ವರ್ಷದ ವರೆಗಿನ ವಯಸ್ಸುಳ್ಳ ಪುರುಷನಿಗೋಸ್ಕರ, ದೇವಾಲಯದ *ಶೆಕೆಲ್ ಗೆ ಸರಿಯಾಗಿ ಐವತ್ತು ಶೆಕೆಲ್ ಬೆಳ್ಳಿಯನ್ನು ಸಮರ್ಪಿಸಬೇಕು. ಅದೇ ವಯಸ್ಸಿನ ಸ್ತ್ರೀಗೋಸ್ಕರ ಮೂವತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು. ಐದು ವರ್ಷದ ವಯಸ್ಸಿನಿಂದ ಇಪ್ಪತ್ತು ವರ್ಷದ ವಯಸ್ಸಿನ ವರೆಗೆ ಪುರುಷನಿಗೋಸ್ಕರ ಇಪ್ಪತ್ತು ಶೆಕೆಲ್ ಬೆಳ್ಳಿಯನ್ನು ಮತ್ತು ಸ್ತ್ರೀಗೋಸ್ಕರ ಹತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು. ಒಂದು ತಿಂಗಳಿನ ವಯಸ್ಸು ಮೊದಲುಗೊಂಡು ಐದು ವರ್ಷದ ವಯಸ್ಸಿನ ಹುಡುಗನಿಗೋಸ್ಕರ ಐದು ಶೆಕೆಲ್ ಬೆಳ್ಳಿಯನ್ನು, ಹುಡುಗಿಗೋಸ್ಕರ ಮೂರು ಶೆಕೆಲ್ ಬೆಳ್ಳಿಯನ್ನು ಕೊಡಬೇಕು. ಅರವತ್ತು ವರ್ಷಗಳ ಪ್ರಾಯವನ್ನು ದಾಟಿದ ಪುರುಷನಿಗೋಸ್ಕರ ಹದಿನೈದು ಶೆಕೆಲ್ ಬೆಳ್ಳಿಯನ್ನು ಮತ್ತು ಸ್ತ್ರೀಗೋಸ್ಕರ ಹತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು. ಯಾವನಾದರೂ ಬಡವನಾಗಿ ನೇಮಕವಾದ ಹಣವನ್ನು ಕೊಡಲಾರದೆ ಹೋದರೆ, ಅವನು ಹರಕೆಮಾಡಿ ಪ್ರತಿಷ್ಠಿಸಿದ ಮನುಷ್ಯನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಹರಕೆಮಾಡಿದವನ ಸ್ಥಿತಿಗತಿಗೆ ತಕ್ಕಂತೆ ಅವನು ಕೊಡಬೇಕಾದ ಹಣ ಇಷ್ಟೆಂದು ನಿರ್ಣಯಿಸಬೇಕು.
“ ‘ಯೆಹೋವನಿಗೆ ಸಮರ್ಪಿಸಬಹುದಾದ ಪಶುವನ್ನು ಯಾವನಾದರೂ ಹರಕೆಮಾಡಿ ಪ್ರತಿಷ್ಠಿಸಿದ್ದಾದರೆ ಅದು ದೇವರ ಸೊತ್ತಾಗಿರಬೇಕು. 10 ಅದನ್ನು ಬದಲಾಯಿಸಬಾರದು, ಕೆಟ್ಟದ್ದಕ್ಕೆ ಬದಲಾಗಿ ಒಳ್ಳೆಯದನ್ನೂ ಇಲ್ಲವೇ ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನೂ, ಒಂದಕ್ಕೆ ಬದಲಾಗಿ ಬೇರೊಂದನ್ನೂ ಕೊಡಬಾರದು. ಅವನು ಗೊತ್ತುಮಾಡಿದ ಪಶುವಿಗೆ ಬದಲಾಗಿ ಬೇರೊಂದು ಪಶುವನ್ನು ಪ್ರತ್ಯೇಕಿಸಿಟ್ಟಿರುವ ಪಕ್ಷಕ್ಕೆ, ಮೊದಲನೆಯ ಪಶುವೂ ಹಾಗೂ ಅದಕ್ಕೆ ಬದಲಾಗಿ ಇಟ್ಟ ಪಶುವೂ ಎರಡೂ ಯೆಹೋವನದಾಗಿರಬೇಕು. 11 ಯೆಹೋವನಿಗೆ ಸಮರ್ಪಿಸಬೇಕಾದ ಪಶುವು ಅಶುದ್ಧವಾಗಿದ್ದರೆ, ಅದನ್ನು ಯಾಜಕನ ಮುಂದೆ ನಿಲ್ಲಿಸಬೇಕು. 12 ಅದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಯಾಜಕನು ನೋಡಿಕೊಂಡು ಅದರ ಬೆಲೆ ಇಷ್ಟೆಂದು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆಯೇ ಅಂತಿಮವಾದದ್ದು ಸ್ಥಿರವಾಗಿರುವುದು. 13 ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು.
14 “ ‘ಯಾವನಾದರೂ ತನ್ನ ಮನೆಯನ್ನು ಯೆಹೋವನಿಗೆ ಮೀಸಲಾಗಿ ಪ್ರತಿಷ್ಠಿಸಿದರೆ, ಯಾಜಕನು ಅದು ಉತ್ತಮವಾದ ಮನೆಯೋ ಅಲ್ಲವೋ ಎಂದು ಪರೀಕ್ಷಿಸಿ ಬೆಲೆಯನ್ನು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆ ಅಂತಿಮವಾಗಿರುವುದು. 15 ಹರಕೆಮಾಡಿದವನು ಪ್ರತಿಷ್ಠೆ ಮಾಡಿದ ಆ ಮನೆಯನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು; ಆಗ ಆ ಮನೆ ಅವನದಾಗುವುದು.
16 “ ‘ಯಾವನಾದರೂ ಪಿತ್ರಾರ್ಜಿತ ಭೂಮಿಯಲ್ಲಿ ಒಂದು ಭಾಗವನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ, ಅದರಲ್ಲಿ ಇಷ್ಟು ಬೀಜವನ್ನು ಬಿತ್ತತಕ್ಕದ್ದು ಎಂದು ಆಲೋಚಿಸಿ ಅದರ ಬೆಲೆಯನ್ನು ನಿರ್ಣಯಿಸಬೇಕು. ಒಂದು ಓಮೆರ್ ಜವೆಗೋದಿಯನ್ನು ಬಿತ್ತಬಹುದಾದ ಹೊಲವು ಐವತ್ತು ಶೆಕೆಲ್ ಬೆಳ್ಳಿಯ ಬೆಲೆ ಬಾಳುವುದು. 17 ಅವನು ಜೂಬಿಲಿ ಸಂವತ್ಸರದಿಂದ ಆ ಹೊಲವನ್ನು ಪ್ರತಿಷ್ಠಿಸಿದರೆ ಈ ಕ್ರಯ ಸ್ಥಿರವಾಗಿರುವುದು. 18 ಜೂಬಿಲಿ ಸಂವತ್ಸರದ ತರುವಾಯ ಪ್ರತಿಷ್ಠೆ ಮಾಡಿದ ಭೂಮಿಯನ್ನು ಹರಕೆಮಾಡಿದರೆ, ಮುಂದಣ ಜೂಬಿಲಿ ಸಂವತ್ಸರಕ್ಕೆ ಕಳೆಯಬೇಕಾದ ವರ್ಷಗಳ ಸಂಖ್ಯೆಯ ಮೇರೆಗೆ ಅದರ ಬೆಲೆಯನ್ನು ಕಡಿಮೆಮಾಡಬೇಕು. 19 ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಬೇಕೆಂದಿರುವ ಪಕ್ಷಕ್ಕೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು; ಆಗ ಆ ಹೊಲ ಅವನದಾಗಿರುವುದು. 20 ತಾನು ಅದನ್ನು ಬಿಡಿಸಿಕೊಳ್ಳದೆ ಮತ್ತೊಬ್ಬನಿಗೆ ಮಾರಿದರೆ ಮುಂದೆ ಅದನ್ನು ಬಿಡಿಸಿಕೊಳ್ಳುವ ಅಧಿಕಾರವಿರುವುದಿಲ್ಲ. 21 ಬಿಡುಗಡೆಯಾಗುವ ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಯೆಹೋವನಿಗೆ ಪವಿತ್ರವಾದ ಹೊಲದಂತೆ ಆತನ ಸೊತ್ತಾಗಿಯೇ ಇರಬೇಕು; ಅದು ಯಾಜಕರ ವಶದಲ್ಲಿರಬೇಕು.
22 “ ‘ಯಾವನಾದರೂ ಕ್ರಯಕ್ಕೆ ತೆಗೆದುಕೊಂಡ ಹೊಲವನ್ನು ಅಂದರೆ ಪಿತ್ರಾರ್ಜಿತ ಭೂಮಿಗೆ ಸೇರದಿರುವ ಹೊಲವನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ, 23 ಯಾಜಕನು ಮುಂದಣ ಜೂಬಿಲಿ ಸಂವತ್ಸರದ ತನಕ ಇರುವ ವರ್ಷಗಳಿಗೆ ತಕ್ಕಂತೆ ಅದರ ಬೆಲೆಯನ್ನು ನಿರ್ಣಯಿಸಬೇಕು. ಪ್ರತಿಷ್ಠಿಸಿದವನು ನಿರ್ಣಯಿಸಲ್ಪಟ್ಟ ಹಣವನ್ನು ಯೆಹೋವನಿಗೆ ಮೀಸಲಾದದ್ದೆಂದು ಭಾವಿಸಿ ಅದೇ ದಿನದಲ್ಲಿ ಕೊಟ್ಟುಬಿಡಬೇಕು. 24 ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಮಾರಿದವನಿಗೆ ಅಂದರೆ ಯಾರ ಪಿತ್ರಾರ್ಜಿತ ಭೂಮಿಗೆ ಸೇರಿದೆಯೋ ಅವನಿಗೆ ಪುನಃ ಬರಬೇಕು. 25 §ದೇವರ ಸೇವೆಯಲ್ಲಿ ನೇಮಕವಾದ ಎಲ್ಲಾ ತೂಕವು ದೇವಾಲಯದ ಶೆಕೆಲ್ ಮೇರೆಗೆ ಇರಬೇಕು. ಇಪ್ಪತ್ತು ಗೇರಾ ತೂಕವು ಒಂದು ಶೆಕೆಲಿಗೆ ಸಮವಾಗಿರಬೇಕೆಂದು ಯಾವಾಗಲೂ ನಿರ್ಣಯಿಸಬೇಕು.
26 “ ‘ಶುದ್ಧ ಪಶುವಿನಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಯೆಹೋವನದಾಗಿರುವುದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಬಾರದು; ಹೋರಿಯಾಗಿದ್ದರೂ, ಆಡು ಅಥವಾ ಕುರಿಯಾಗಿದ್ದರೂ ಅದು ಯೆಹೋವನ ಸೊತ್ತೇ. 27 ಅಶುದ್ಧ ಪಶುವಿನಲ್ಲಿ ಚೊಚ್ಚಲಮರಿ ಹುಟ್ಟಿದ್ದಾದರೆ ಹರಕೆಮಾಡಿದವನು ನಿರ್ಣಯವಾದ ಬೆಲೆಯೊಂದಿಗೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಅವನು ಬಿಡಿಸದೆ ಹೋದರೆ ಅದನ್ನು ನಿರ್ಣಯಿಸಲ್ಪಟ್ಟ ಕ್ರಯಕ್ಕೆ ಮಾರಬೇಕು.
28 “ ‘ಯಾವನಾದರೂ ಮನುಷ್ಯನನ್ನಾಗಲಿ, ಪಶುಪ್ರಾಣಿಯನ್ನಾಗಲಿ, ಪಿತ್ರಾರ್ಜಿತ ಭೂಮಿಯನ್ನಾಗಲಿ ಅಥವಾ ಬೇರೆ ಯಾವುದನ್ನಾಗಲಿ ಯಾವ ಷರತ್ತೂ ಇಲ್ಲದೆ ಸಂಪೂರ್ಣವಾಗಿ ಯೆಹೋವನದಾಗಿರುವುದಕ್ಕೆ ಹರಕೆಮಾಡಿ ಕೊಟ್ಟರೆ, ಅದನ್ನು ಮಾರಲೂ ಬಾರದು, ಬಿಡಿಸಿಕೊಳ್ಳಲೂ ಬಾರದು. ಕೇವಲ ಯೆಹೋವನದಾಗಿರುವುದಕ್ಕೆ ಸಮರ್ಪಿಸುವಂಥದೆಲ್ಲಾ ಯೆಹೋವನಿಗೆ ಮೀಸಲಾಗಿಯೇ ಇರಬೇಕು. 29 ಕೇವಲ ಯೆಹೋವನ ಸೊತ್ತಾಗುವುದಕ್ಕೆ ಒಪ್ಪಿಸಲ್ಪಟ್ಟದ್ದು ಮನುಷ್ಯ ಜಾತಿಯಾದರೆ ಬಿಡಿಸುವುದಕ್ಕಾಗದು; ಅವನಿಗೆ ಮರಣವೇ ಆಗಬೇಕು.
ಯೆಹೋವನಿಗೆ ಸಲ್ಲಿಸಬೇಕಾದ ದಶಮಾಂಶ
30 “ ‘ಹೊಲದ ಬೆಳೆಯಾಗಲಿ ಇಲ್ಲವೇ ತೋಟದ ಹಣ್ಣುಗಳಾಗಲಿ ಭೂಮಿಯಿಂದುಂಟಾದ ಎಲ್ಲಾ ಆದಾಯದಲ್ಲಿ ಹತ್ತನೆಯ ಒಂದು ಪಾಲು ಯೆಹೋವನದಾಗಿರಬೇಕು, ಅದು ಯೆಹೋವನಿಗೆ ಮೀಸಲಾದದ್ದು. 31 ಯಾವನಾದರೂ ತಾನು ಕೊಡಬೇಕಾದ ಹತ್ತನೆಯ ಒಂದು ಪಾಲಿನಲ್ಲಿ ಏನಾದರೂ ಬಿಡಿಸಿಕೊಳ್ಳಬೇಕೆಂದಿದ್ದರೆ ಅಷ್ಟರೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು. 32 ದನಗಳಾಗಲಿ ಇಲ್ಲವೇ ಹಿಂಡಿನ ಆಡು ಅಥವಾ ಕುರಿಗಳಾಗಲಿ ಕುರುಬನು ಲೆಕ್ಕಮಾಡಿದ ಎಲ್ಲಾ ಪಶುಗಳಲ್ಲಿ ಪ್ರತಿ ಹತ್ತನೆಯದು ಯೆಹೋವನಿಗೆ ಮೀಸಲಾಗಿರಬೇಕು. 33 ಆ ಪಶುವು ಒಳ್ಳೇದೋ ಅಥವಾ ಕೆಟ್ಟದ್ದೋ ಎಂದು ನೋಡಬಾರದು; ಅದನ್ನು ಬದಲಾಯಿಸಬಾರದು. ಕೊಡಬೇಕಾದವನು ಅದನ್ನು ಬದಲಾಯಿಸಿದ್ದಾದರೆ ಅವನು ಮೊದಲು ಲೆಕ್ಕಿಸಿದ್ದೂ ಮತ್ತು ಅದಕ್ಕೆ ಬದಲಾಗಿ ಇಟ್ಟದ್ದೂ ಎರಡೂ ಯೆಹೋವನದಾಗಿರಬೇಕು; ಅದನ್ನು ಬಿಡಿಸಿಕೊಳ್ಳುವ ಅಧಿಕಾರವಿರುವುದಿಲ್ಲ’ ” ಎಂದು ಹೇಳಿದನು.
34 ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ಇಸ್ರಾಯೇಲರಿಗೆ ಕೊಟ್ಟ ಆಜ್ಞೆಗಳು ಇವೇ.
* 27:3 ಇದು ಯಾಜಕನಿಂದ ನಿರ್ಣಯಿಸಲ್ಪಟ್ಟ ಶೆಕೆಲ್. ಶೆಕೆಲ್ ಅಂದರೆ ಸುಮಾರು 6 ಕಿಲೋಗ್ರಾಂ. 27:16 ಆ ಹೊಲದಲ್ಲಿ ಸುಗ್ಗಿಯಿಂದ ಬಂದಷ್ಟು ಬೀಜದ ಬೆಲೆಯನ್ನು ನಿರ್ಣಯಿಸಬೇಕು. 27:16 ಎರಡು ಖಂಡುಗ. ಹೋಮೆರ್ ಅಂದರೆ 10 ಏಫಾ ಅಥವಾ 300 ಕಿಲೋಗ್ರಾಂ. § 27:25 ವಿಮೋ 30:13 ನೋಡಿರಿ.