4
ತಿಳಿಯದೆ ತಪ್ಪುಮಾಡಿದವನ ದೋಷಪರಿಹಾರ
ಯೆಹೋವನು ಮೋಶೆಗೆ ಇಂತೆಂದನು, “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಹೇಳಬೇಕಾದದ್ದೇನೆಂದರೆ ‘ಯಾರೇ ಆಗಲಿ ತಿಳಿಯದೆ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ಮಾಡಿ ದೋಷಿಯಾದರೆ ಅವನಿಗೆ ದೋಷಪರಿಹಾರ ಮಾಡಿಕೊಳ್ಳುವ ಕ್ರಮ ಹೀಗಿದೆ. *ಅಭಿಷಿಕ್ತನಾದ ಯಾಜಕನೇ ದೋಷಿಯಾಗಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ, ತನ್ನ ದೋಷಪರಿಹಾರಕ್ಕಾಗಿ ಅವನು ಪೂರ್ಣಾಂಗವಾದ ಹೋರಿಯನ್ನು ಯೆಹೋವನಿಗೆ ಸಮರ್ಪಿಸಬೇಕು. ಅವನು ಆ ಹೋರಿಯನ್ನು ಯೆಹೋವನ ಸನ್ನಿಧಿಗೆ ದೇವದರ್ಶನದ ಗುಡಾರದ ಬಾಗಿಲಿಗೆ ತಂದು, ಅದರ ತಲೆಯ ಮೇಲೆ ಕೈಯನ್ನಿಟ್ಟು, ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು. ಅಭಿಷಿಕ್ತ ಯಾಜಕನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನದ ಗುಡಾರದೊಳಗೆ ಬರಬೇಕು. ಯಾಜಕನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ, ಮಹಾಪವಿತ್ರಸ್ಥಾನದ ಮುಂದಿನ ತೆರೆಯ ಎದುರಾಗಿ ಯೆಹೋವನ ಸನ್ನಿಧಿಯಲ್ಲಿ ಏಳು ಸಾರಿ ಚಿಮುಕಿಸಬೇಕು. ಆಗ ಯಾಜಕನು ದೇವದರ್ಶನದ ಗುಡಾರದೊಳಗೆ ಯೆಹೋವನ ಸನ್ನಿಧಿಯಲ್ಲಿರುವ ಪರಿಮಳಧೂಪವೇದಿಯ ಕೊಂಬುಗಳಿಗೆ ಆ ರಕ್ತವನ್ನು ಹಚ್ಚಿ, ಹೋರಿಯ ಉಳಿದ ರಕ್ತವನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿ ಸರ್ವಾಂಗಹೋಮಮಾಡುವ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು. ಆ ದೋಷಪರಿಹಾರಕ ಯಜ್ಞದ ಹೋರಿಯ ಕೊಬ್ಬನ್ನೆಲ್ಲಾ ಅಂದರೆ ಅಂಗಾಂಶದ ಕೊಬ್ಬನ್ನು, ಕರುಳುಗಳ ಮೇಲಣ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು, ಇವುಗಳ ಮೇಲೆ ಸೊಂಟದ ಹತ್ತಿರ ಇರುವ ಕೊಬ್ಬನ್ನು ಮತ್ತು ಕಳಿಜದ ಹತ್ತಿರದಿಂದ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನು ತೆಗೆದುಬಿಡಬೇಕು. 10 ಅವನು ಅವುಗಳನ್ನು ಸಮಾಧಾನಯಜ್ಞದ ಹೋರಿಯಲ್ಲಿ ಪ್ರತ್ಯೇಕಿಸಿದಂತೆಯೇ ಇದರಲ್ಲಿಯೂ ಪ್ರತ್ಯೇಕಿಸಿ ಸರ್ವಾಂಗಹೋಮದ ಯಜ್ಞವೇದಿಯ ಮೇಲೆ ಹೋಮ ಮಾಡಬೇಕು. 11 ಆ ಹೋರಿಯಲ್ಲಿ ಉಳಿದದ್ದನ್ನೆಲ್ಲಾ ಅಂದರೆ ಅದರ ಚರ್ಮ, ಮಾಂಸ, ತಲೆ, ಕಾಲುಗಳು, 12 ಕರುಳುಗಳು, ಕರುಳುಗಳಲ್ಲಿರುವ ಕಲ್ಮಷ ಇವುಗಳನ್ನೆಲ್ಲಾ ಪಾಳೆಯದ ಹೊರಗೆ ಯಜ್ಞವೇದಿಯ ಬೂದಿಯನ್ನು ಹಾಕುವ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಕಟ್ಟಿಗೆಯ ಮೇಲಿರಿಸಿ, ಬೆಂಕಿಯಲ್ಲಿ ಸುಡಿಸಿಬಿಡಬೇಕು. ಬೂದಿಯನ್ನು ಹಾಕುವ ಸ್ಥಳದಲ್ಲೇ ಅದನ್ನು ಸುಡಿಸಿಬಿಡಬೇಕು.
ಇಸ್ರಾಯೇಲ್ ಸಮೂಹದ ದೋಷಪರಿಹಾರ
13 “ ‘ಇಸ್ರಾಯೇಲರ ಸಮೂಹವೆಲ್ಲಾ ತಿಳಿಯದೆ ದೋಷಿಗಳಾದರೆ ಅಂದರೆ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಅವರು ಯಾವುದನ್ನಾದರೂ ಮಾಡಿ ದೋಷಕ್ಕೆ ಗುರಿಯಾದರೆ, 14 ಮೊದಲು ತಮಗೂ ಮರೆಯಾಗಿದ್ದ ಆ ದೋಷವು ತಿಳಿದುಬಂದ ನಂತರ ಅದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಪೂರ್ಣಾಂಗವಾದ ಹೋರಿಯನ್ನು ಸಮರ್ಪಿಸಬೇಕು. ಆ ಹೋರಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತರಿಸಬೇಕು. 15 ಸಮೂಹದ ಹಿರಿಯರು ಯೆಹೋವನ ಸನ್ನಿಧಿಯಲ್ಲಿ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟು ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು. 16 ಅಭಿಷಿಕ್ತ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನ ಗುಡಾರದೊಳಗೆ ತಂದು, 17 ಅದರಲ್ಲಿ ಬೆರಳನ್ನು ಅದ್ದಿ, ತೆರೆಯ ಮುಂದೆ ಯೆಹೋವನ ಸನ್ನಿಧಿಯಲ್ಲಿ ಅದನ್ನು ಏಳು ಸಾರಿ ಚಿಮುಕಿಸಬೇಕು. 18 ಆ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನದ ಗುಡಾರದೊಳಗೆ ಯೆಹೋವನ ಸನ್ನಿಧಿಯಲ್ಲಿರುವ ಧೂಪವೇದಿಯ ಕೊಂಬುಗಳಿಗೆ ಹಚ್ಚಿ ಉಳಿದದ್ದನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿರುವ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು. 19 ಅವನು ಹೋರಿಯ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಯಜ್ಞವೇದಿಯ ಮೇಲೆ ಹೋಮಮಾಡಬೇಕು. 20 ಅವನು (ಅಭಿಷಿಕ್ತ ಯಾಜಕ) ದೋಷಪರಿಹಾರಕ ಯಜ್ಞದ ಹೋರಿಯ ವಿಷಯದಲ್ಲಿ ಹೇಗೆ ಮಾಡಬೇಕೆಂದು ವಿಧಿಸಲ್ಪಟ್ಟಿತೋ, ಇದರ ವಿಷಯದಲ್ಲಿಯೂ ಹಾಗೆಯೇ ಮಾಡಬೇಕು. ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದನಂತರ ಅವರಿಗೆ ಕ್ಷಮಾಪಣೆಯಾಗುವುದು. 21 ಆ ಮೊದಲನೆಯ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಡಿಸಿಬಿಟ್ಟ ಪ್ರಕಾರ ಈ ಹೋರಿಯನ್ನು ಸುಡಿಸಿಬಿಡಬೇಕು. ಇದು ಜನಸಮೂಹದ ದೋಷಪರಿಹಾರಕ ಯಜ್ಞ.
ಮುಖ್ಯಾಧಿಕಾರಿಯ ದೋಷಪರಿಹಾರ
22 “ ‘ಮುಖ್ಯಾಧಿಕಾರಿ ತನ್ನ ದೇವರಾಗಿರುವ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ, 23 ತನ್ನ ತಪ್ಪು ತನಗೆ ತಿಳಿದುಬಂದಾಗ ಅವನು ಪೂರ್ಣಾಂಗವಾದ ಹೋತವನ್ನು ತಂದು ಸಮರ್ಪಿಸಬೇಕು. 24 ಅವನು ಆ ಹೋತದ ತಲೆಯ ಮೇಲೆ ಕೈಯನ್ನಿಟ್ಟು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮದ ಪಶುಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು. ಅದು ದೋಷಪರಿಹಾರಕ ಯಜ್ಞ. 25 ಯಾಜಕನು ಆ ಪಶುರಕ್ತದಲ್ಲಿ ಸ್ವಲ್ಪವನ್ನು ಬೆರೆಳಿನಿಂದ ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು. 26 ಸಮಾಧಾನಯಜ್ಞದ ಪಶುವಿನ ಕೊಬ್ಬನ್ನು ಅವನು ಹೋಮಮಾಡುವ ಪ್ರಕಾರವೇ ಇದರ ಎಲ್ಲಾ ಕೊಬ್ಬನ್ನು ಹೋಮಮಾಡಬೇಕು. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮಾಪಣೆಯಾಗುವುದು.
ಸಾಮಾನ್ಯ ಜನರ ದೋಷಪರಿಹಾರ
27 “ ‘ನಿಮ್ಮ ದೇಶದ ಜನರಲ್ಲಿ ಬೇರೆ ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ, 28 ತನ್ನ ತಪ್ಪು ತನಗೆ ತಿಳಿದುಬಂದಾಗ ಆ ದೋಷಪರಿಹಾರಕ್ಕಾಗಿ ಪೂರ್ಣಾಂಗವಾದ ಹೆಣ್ಣು ಮೇಕೆಯನ್ನು ತಂದು ಸಮರ್ಪಿಸಬೇಕು. 29 ಅವನು ಅದರ ತಲೆಯ ಮೇಲೆ ಕೈಯನ್ನಿಟ್ಟನಂತರ ಸರ್ವಾಂಗಹೋಮದ ಪಶುಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು. 30 ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನೆಲ್ಲಾ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು. 31 ಸಮಾಧಾನ ಯಜ್ಞಪಶುಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲಾ ಕೊಬ್ಬನ್ನು ಪ್ರತ್ಯೇಕಿಸಿ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕೆ ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮಾಪಣೆಯಾಗುವುದು.
32 “ ‘ಅವನು ತನ್ನ ದೋಷಪರಿಹಾರಕ್ಕಾಗಿ ತರುವುದು ಕುರಿಯಾದರೆ ಅದು ಪೂರ್ಣಾಂಗವಾದ ಹೆಣ್ಣಾಗಿರಬೇಕು. 33 ಅವನು ಅದರ ತಲೆಯ ಮೇಲೆ ಕೈಯನ್ನಿಟ್ಟನಂತರ ಸರ್ವಾಂಗಹೋಮದ ಪಶುಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ದೋಷಪರಿಹಾರಕ್ಕಾಗಿ ವಧಿಸಬೇಕು. 34 ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು, ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನೆಲ್ಲಾ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು. 35 ಸಮಾಧಾನ ಯಜ್ಞಪಶುಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲಾ ಕೊಬ್ಬನ್ನು ಪ್ರತ್ಯೇಕಿಸಿ, ಯಜ್ಞವೇದಿಯಲ್ಲಿ ಉರಿಯುವ ಹೋಮ ದ್ರವ್ಯಗಳ ಮೇಲೆ ಯೆಹೋವನಿಗೆ ಹೋಮಮಾಡಬೇಕು. ಅವನ ತಪ್ಪಿನ ನಿಮಿತ್ತ ಯಾಜಕನು ಹೀಗೆ ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮಾಪಣೆಯಾಗುವುದು.
* 4:3 ಮಹಾಯಾಜಕನು. 4:13 ಕೂಡಿಬಂದ ಎಲ್ಲಾ ಇಸ್ರಾಯೇಲರು. 4:15 ಕೂಡಿಬಂದ ಇಸ್ರಾಯೇಲರು.