138
ರಕ್ಷಣಾ ಕರ್ತನ ಸ್ತುತಿ
ದಾವೀದನ ಕೀರ್ತನೆ.
ಕೀರ್ತ 102:13-23
1 ಯೆಹೋವನೇ, ಪೂರ್ಣಮನಸ್ಸಿನಿಂದ ನಿನ್ನನ್ನು ಕೊಂಡಾಡುವೆನು;
ದೇವರುಗಳ ಎದುರಿನಲ್ಲಿ ನಿನ್ನನ್ನು ಕೀರ್ತಿಸುವೆನು.
2 ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುತ್ತೇನೆ;
ನಿನ್ನ ಕೃಪೆ, ಸತ್ಯತೆ ಇವುಗಳಿಗೋಸ್ಕರ ನಿನ್ನ ನಾಮವನ್ನು ಕೊಂಡಾಡುತ್ತೇನೆ.
ನಿನ್ನ ನಾಮದ ಮತ್ತು ಆಜ್ಞೆಯ ಘನಪಡಿಸಿ ತೋರಿಸಿದ್ದೀ.
3 ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸಿದಿ;
ನನ್ನ ಆತ್ಮಕ್ಕೆ ಬಲಕೊಟ್ಟು ನನ್ನನ್ನು ಧೈರ್ಯಪಡಿಸಿದ್ದೀ.
4 ಯೆಹೋವನೇ, ಭೂರಾಜರೆಲ್ಲರು ನೀನು ನುಡಿದ ನುಡಿಗಳನ್ನು ಕೇಳಿ
ನಿನ್ನನ್ನು ಸ್ತುತಿಸುವರು.
5 ಅವರು ಯೆಹೋವನ ಮಾರ್ಗಗಳನ್ನು ಹಾಡಿಹರಸುವರು;
ಯೆಹೋವನ ಪ್ರಭಾವವು ದೊಡ್ಡದಾಗಿದೆಯಲ್ಲಾ.
6 ಯೆಹೋವನು ಮಹೋನ್ನತನು;
ಆದರೂ ದೀನರನ್ನು ಲಕ್ಷಿಸುತ್ತಾನೆ;
ಗರ್ವಿಷ್ಠರನ್ನು ದೂರದಿಂದಲೇ ಗುರುತು ಹಿಡಿಯುತ್ತಾನೆ.
7 ನಾನು ಇಕ್ಕಟ್ಟಿನ ದಾರಿಯಲ್ಲಿ ನಡೆಯುವಾಗ,
ನನ್ನನ್ನು ಚೈತನ್ಯಗೊಳ್ಳಿಸುವಿ,
ನನ್ನ ಶತ್ರುಗಳ ಕೋಪಕ್ಕೆ ವಿರುದ್ಧವಾಗಿ ನಿನ್ನ ಕೈ ಚಾಚುವಿ,
ನಿನ್ನ ಬಲಗೈ ನನ್ನನ್ನು ರಕ್ಷಿಸುವುದು.
8 ಯೆಹೋವನು ನನ್ನ ಕಾರ್ಯವನ್ನು ಸಿದ್ಧಿಗೆ ತರುವನು.
ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು,
ನೀನು ಕೈಹಾಕಿದ ಕೆಲಸವನ್ನು ನೆರವೇರಿಸದೆ ಬಿಡಬೇಡ.