145
ಯೆಹೋವನ ಕೃಪೆ ಪ್ರಭಾವಗಳಿಗಾಗಿ ಕೊಂಡಾಟ
ದಾವೀದನ ಕೀರ್ತನೆ.
1 ನನ್ನ ದೇವರೇ, ರಾಜನೇ, ನಿನ್ನನ್ನು ಘನಪಡಿಸುವೆನು,
ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡುವೆನು.
2 ಪ್ರತಿದಿನವೂ ನಿನ್ನನ್ನು ಕೀರ್ತಿಸುವೆನು,
ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವೆನು.
3 ಯೆಹೋವನು ಮಹೋನ್ನತನೂ, ಮಹಾಸ್ತುತಿಪಾತ್ರನೂ ಆಗಿದ್ದಾನೆ,
ಆತನ ಮಹತ್ತು ಅಪಾರವಾದದ್ದು.
4 ಜನರು ವಂಶ ಪಾರಂಪರ್ಯವಾಗಿ ನಿನ್ನ ಕೃತ್ಯಗಳನ್ನು ಹೊಗಳುವರು,
ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವರು.
5 ಅವರು ನಿನ್ನ ಮಹಾಪ್ರಭಾವಯುಕ್ತವಾದ ಮಹಿಮೆಯನ್ನು ಕೊಂಡಾಡುವರು,
ನಿನ್ನ ಅದ್ಭುತಕಾರ್ಯಗಳನ್ನೂ ಧ್ಯಾನಿಸುವೆನು.
6 ಮನುಷ್ಯರು ನಿನ್ನ ಭಯಂಕರ ಕೃತ್ಯಗಳಲ್ಲಿ ಕಂಡು ಬಂದ ಪ್ರತಾಪವನ್ನು ಕೊಂಡಾಡುವರು.
ನಾನು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವೆನು.
7 ಜನರು ನಿನ್ನ ಮಹೋಪಕಾರವನ್ನು ನೆನಪಿನಲ್ಲಿಟ್ಟುಕೊಂಡು ಪ್ರಕಟಿಸುವರು,
ನಿನ್ನ ನೀತಿಯನ್ನು ಹೊಗಳುವರು.
8 ಯೆಹೋವನು ದಯೆಯು, ಕನಿಕರವು ಉಳ್ಳವನು,
ದೀರ್ಘಶಾಂತನು, ಪ್ರೀತಿಪೂರ್ಣನು ಆಗಿದ್ದಾನೆ.
9 ಯೆಹೋವನು ಸರ್ವೋಪಕಾರಿಯು,
ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.
10 ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವುದು,
ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.
11 ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು,
ನಿನ್ನ ಪ್ರತಾಪವನ್ನು ವರ್ಣಿಸುವರು.
12 ಹೀಗೆ ಮಾನವರು ನಿನ್ನ ಶೂರಕೃತ್ಯಗಳನ್ನೂ,
ನಿನ್ನ ರಾಜ್ಯದ ಮಹಾಪ್ರಭಾವವನ್ನೂ ಗ್ರಹಿಸಿಕೊಳ್ಳುವರು.
13 ನಿನ್ನ ರಾಜ್ಯವು ಶಾಶ್ವತವಾಗಿದೆ,
ನಿನ್ನ ಆಳ್ವಿಕೆಯು ತಲತಲಾಂತರಕ್ಕೂ ಇರುವುದು.
14 ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ,
ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.
15 ಯೆಹೋವನೇ, ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ,
ನೀನು ಅವುಗಳಿಗೆ ಹೊತ್ತುಹೊತ್ತಿಗೆ ಆಹಾರಕೊಡುತ್ತಿ.
16 ನೀನು ಕೈತೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತಿ.
17 ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು,
ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆ ತೋರಿಸುವವನು.
18 ಯೆಹೋವನಿಗೆ ಮೊರೆಯಿಡುವವರು,
ಯಥಾರ್ಥವಾಗಿ ಮೊರೆಯಿಡುವುದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.
19 ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ,
ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.
20 ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ,
ಆದರೆ ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ.
21 ನನ್ನ ಬಾಯಿ ಯೆಹೋವನನ್ನು ಕೀರ್ತಿಸುವುದು,
ಎಲ್ಲಾ ಜೀವಿಗಳು ಆತನ ಪರಿಶುದ್ಧ ನಾಮವನ್ನು
ಯುಗಯುಗಾಂತರಗಳಲ್ಲಿಯೂ ಕೊಂಡಾಡಲಿ.