17
ಯೆಹೂದದ ಅರಸನಾದ ಯೆಹೋಷಾಫಾಟನು
1 ಆಸನ ನಂತರ ಅವನ ಮಗನಾದ ಯೆಹೋಷಾಫಾಟನು ಅರಸನಾದನು. ಅವನು ಇಸ್ರಾಯೇಲರೆದುರು ಪ್ರಬಲನಾಗಿದ್ದನು.
2 ಅವನು ಯೆಹೂದದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳಲ್ಲೂ ಸೈನ್ಯವನ್ನಿರಿಸಿದನು. ಯೆಹೂದ ದೇಶದಲ್ಲಿಯೂ ತನ್ನ ತಂದೆಯಾದ ಆಸನು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ರ ಪಟ್ಟಣಗಳಲ್ಲಿಯೂ ಅಧಿಕಾರಿಗಳನ್ನು ನೇಮಿಸಿದನು.
3 ಇವನು ಬಾಳ್ ದೇವರುಗಳನ್ನು ಅವಲಂಬಿಸದೆ, ತನ್ನ ಪೂರ್ವಿಕನಾದ ದಾವೀದನ ಮೊದಲಿನ ನಡತೆಯ ಪ್ರಕಾರ ನಡೆಯುತ್ತಿದ್ದದರಿಂದ ಯೆಹೋವನು ಯೆಹೋಷಾಫಾಟನ ಸಂಗಡ ಇದ್ದನು.
4 ಇವನು ಇಸ್ರಾಯೇಲರಂತೆ ನಡೆಯದೆ, ತನ್ನ ತಂದೆಯ ದೇವರ ಭಕ್ತನಾಗಿ ಆತನ ಆಜ್ಞೆಗಳನ್ನು ಅನುಸರಿಸಿದನು.
5 ಆದುದರಿಂದ ಯೆಹೋವನು ಇವನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿದನು; ಯೆಹೂದ್ಯರೆಲ್ಲರೂ ಯೆಹೋಷಾಫಾಟನಿಗೆ ಕಾಣಿಕೆ ಕೊಡುತ್ತಿದ್ದುದರಿಂದ ಇವನ ಧನ ಘನತೆಗಳು ಹೆಚ್ಚಾದವು.
6 ಇವನು ಯೆಹೋವನ ಮಾರ್ಗದಲ್ಲಿ ನಡೆದು ಧೈರ್ಯಗೊಂಡನು; ಇದಲ್ಲದೆ ಯೆಹೂದ ದೇಶದಲ್ಲಿದ್ದ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದು ಹಾಕಿಸಿದನು.
7 ಇವನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ತನ್ನ ಅಧಿಕಾರಿಗಳಾದ ಬೆನ್ಹೈಲ್, ಓಬದ್ಯ, ಜೆಕರ್ಯ ನೆತನೇಲ್, ಮಿಕಾಯ ಎಂಬ ಯಾಜಕರನ್ನೂ ಧರ್ಮೋಪದೇಶ ಮಾಡುವುದಕ್ಕೋಸ್ಕರ ಯೆಹೂದ ದೇಶದ ಪಟ್ಟಣಗಳಿಗೆ ಕಳುಹಿಸಿದನು.
8 ಇವರ ಜೊತೆಯಲ್ಲಿ ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ, ಟೋಬೀಯ, ಟೋಬದೋನೀಯ ಎಂಬ ಲೇವಿಯರು ಇದ್ದರು. ಎಲೀಷಾಮಾ, ಯೆಹೋರಾಮ್,
9 ಇವರು ಯೆಹೋವನ ಧರ್ಮಶಾಸ್ತ್ರವನ್ನು ತೆಗೆದುಕೊಂಡು ಯೆಹೂದ ದೇಶದ ಪಟ್ಟಣದಲ್ಲೆಲ್ಲಾ ಸಂಚಾರ ಮಾಡಿ ಜನರಿಗೆ ಬೋಧಿಸಿದರು.
ಯೆಹೋಷಾಫಾಟನ ವೈಭವ
10 ಯೆಹೂದದ ಸುತ್ತಣ ದೇಶಗಳ ರಾಜ್ಯಗಳವರೆಗೆ ಯೆಹೋವನ ಭಯವಿದ್ದುದರಿಂದ ಅವರು ಯೆಹೋಷಾಫಾಟನೊಡನೆ ಯುದ್ಧಕ್ಕೆ ಬರಲಿಲ್ಲ.
11 ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ, ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರಬಿಯರು ತಮ್ಮ ಪಶುಪ್ರಾಣಿಗಳ ಹಿಂಡುಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಆಡುಗಳನ್ನೂ ಕೊಡುತ್ತಿದ್ದರು.
12 ಹೀಗೆ ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ಯೆಹೂದ ದೇಶದಲ್ಲಿ ಕೋಟೆಗಳನ್ನೂ ಮತ್ತು ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
13 ಯೆಹೂದದ ಪಟ್ಟಣಗಳಲ್ಲಿ ದವಸಧಾನ್ಯಗಳ ದೊಡ್ಡ ಮಳಿಗೆಗಳಿದ್ದವು. ಯೆರೂಸಲೇಮಿನಲ್ಲಿ ಯುದ್ಧವೀರರಾದ ಭಟರೂ ಇದ್ದರು.
14 ಪೂರ್ವಿಕರ ಗೋತ್ರಗಳ ಪ್ರಕಾರ ಲೆಕ್ಕಿಸಲ್ಪಟ್ಟ ಗೋತ್ರ ಪ್ರಧಾನರು ಯಾರೆಂದರೆ: ಯೆಹೂದ್ಯರಲ್ಲಿ ಮೂರು ಲಕ್ಷ ಮಂದಿ ಯುದ್ಧವೀರರ ಅಧಿಪತಿಯಾದ ಅದ್ನ;
15 ಇವನ ತರುವಾಯ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಯುದ್ಧವೀರರ ಅಧಿಪತಿಯಾದ ಯೆಹೋಹಾನಾನ್;
16 ತರುವಾಯ ಎರಡು ಲಕ್ಷ ಮಂದಿ ಯುದ್ಧವೀರರೊಡನೆ ಸ್ವಇಚ್ಛೆಯಿಂದ ತನ್ನನ್ನೇ ಯೆಹೋವನಿಗೆ ಪ್ರತಿಷ್ಠಿಸಿಕೊಂಡ ಜಿಕ್ರಿಯನ ಮಗನಾದ ಅಮಸ್ಯ;
17 ಬೆನ್ಯಾಮೀನ್ಯರಲ್ಲಿ ಬಿಲ್ಲುಗುರಾಣಿಗಳನ್ನು ಹಿಡಿದುಕೊಂಡ ಎರಡು ಲಕ್ಷ ಯುದ್ಧವೀರರ ಅಧಿಪತಿಯಾದ ಎಲ್ಯಾದ;
18 ಒಂದು ಲಕ್ಷದ ಎಂಭತ್ತುಸಾವಿರ ಮಂದಿ ಯುದ್ಧಸನ್ನದ್ಧ ಸೈನಿಕರ ನಾಯಕನಾದ ಯೆಹೋಜಾಬಾದ್ ಎಂಬುವವರು.
19 ಅರಸನಿಗೆ ತನ್ನ ಸನ್ನಿಧಿಯಲ್ಲಿ ಸೇವೆ ಮಾಡುತ್ತಿದ್ದ ಈ ಯೋಧರಲ್ಲದೆ, ಕೋಟೆ ಕೊತ್ತಲಗಳುಳ್ಳ ಯೆಹೂದ ಪಟ್ಟಣಗಳಲ್ಲಿಯೂ ಸೈನಿಕರಿದ್ದರು.