33
ಯೆಹೂದದ ಅರಸನಾದ ಮನಸ್ಸೆಯು
1 ಮನಸ್ಸೆಯು ಅರಸನಾದಾಗ ಅವನು ಹನ್ನೆರಡು ವರ್ಷದವನಾಗಿದ್ದನು; ಅವನು ಯೆರೂಸಲೇಮಿನಲ್ಲಿ ಐವತ್ತೈದು ವರ್ಷಗಳ ಕಾಲ ಆಳಿದನು.
2 ಯೆಹೋವನು ಇಸ್ರಾಯೇಲರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಆತನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.
3 ತನ್ನ ತಂದೆಯಾದ ಹಿಜ್ಕೀಯನು ತೆಗೆದುಹಾಕಿದ ಪೂಜಾಸ್ಥಳಗಳನ್ನು ತಿರುಗಿ ಸ್ಥಾಪಿಸಿ, ಬಾಳ್ ದೇವತೆಗಳಿಗಾಗಿ ಯಜ್ಞವೇದಿಗಳನ್ನು ಕಟ್ಟಿಸಿ ಅಶೇರ ವಿಗ್ರಹ ಸ್ತಂಭಗಳನ್ನು ನಿಲ್ಲಿಸಿ ನಕ್ಷತ್ರಮಂಡಲಕ್ಕೆ ಕೈಮುಗಿದು ಆರಾಧಿಸಿದನು.
4 ಯೆಹೋವನು ಯೆರೂಸಲೇಮಿನಲ್ಲಿ ತನ್ನ ಹೆಸರನ್ನು ಸದಾಕಾಲ ಸ್ಥಾಪಿಸುವುದಕ್ಕಾಗಿ ಆರಿಸಿಕೊಂಡ,
5 ಆಲಯದ ಎರಡು ಪ್ರಾಕಾರಗಳಲ್ಲಿಯೂ ಸರ್ವನಕ್ಷತ್ರಮಂಡಲಗಳಿಗಾಗಿ ಯಜ್ಞವೇದಿಗಳನ್ನು ಕಟ್ಟಿಸಿದನು.
6 ಇದಲ್ಲದೆ ಅವನು ತನ್ನ ಮಕ್ಕಳನ್ನು ಬೆನ್ ಹಿನ್ನೋಮ್ ತಗ್ಗಿನಲ್ಲಿ ಅಗ್ನಿಪ್ರವೇಶ ಮಾಡಿಸಿದನು. ಕಣಿಹೇಳಿಸುವುದು, ಶಕುನನೋಡಿಸುವುದು, ಯಂತ್ರಹಾಕಿಸುವುದು, ತಂತ್ರಮಂತ್ರಗಳನ್ನು ಮಾಡಿಸುವುದು, ಸತ್ತವರಲ್ಲಿ ವಿಚಾರಿಸುವವರು ಮತ್ತು ಭೂತ ಪ್ರೇತಗಳನ್ನು ಆರಾಧಿಸುವವರು ತಮ್ಮ ದುಷ್ಕೃತ್ಯಗಳಿಂದ ಯೆಹೋವನಿಗೆ ಕೋಪವನ್ನೆಬ್ಬಿಸಿದನು.
7 ತಾನು ಮಾಡಿಸಿದ ವಿಗ್ರಹ ಸ್ತಂಭವನ್ನು ದೇವಾಲಯದಲ್ಲಿಡಿಸಿದನು. ಯೆಹೋವನು ಆ ಆಲಯದ ವಿಷಯದಲ್ಲಿ ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ, “ಇಸ್ರಾಯೇಲರು ಮೋಶೆಯ ಮುಖಾಂತರ ತಮಗೆ ಕೊಡಲ್ಪಟ್ಟ ನನ್ನ ಎಲ್ಲಾ ಧರ್ಮಶಾಸ್ತ್ರದ ವಿಧಿವಿಧಾನಗಳನ್ನು ಅನುಸರಿಸಿ ನಡೆಯುವುದಾದರೆ ನನ್ನ ನಾಮಮಹತ್ತು ಈ ದೇವಾಲಯದಲ್ಲಿಯೂ ಇಸ್ರಾಯೇಲರ ಎಲ್ಲಾ ಊರುಗಳಲ್ಲಿಯೂ ನನಗೆ ಇಷ್ಟವಾಗಿರುವ ಯೆರೂಸಲೇಮಿನಲ್ಲಿಯೂ ಸದಾಕಾಲವಿರುವುದು.
8 ಇಸ್ರಾಯೇಲರು ಇನ್ನು ಮುಂದೆ ದೇಶಭ್ರಷ್ಟರಾಗಿರದೆ ತಮ್ಮ ಪೂರ್ವಿಕರಿಗೆ ನೇಮಿಸಲ್ಟಟ್ಟ ದೇಶದಲ್ಲಿಯೇ ವಾಸವಾಗಿರುವಂತೆ ಮಾಡುವೆನು” ಎಂದು ಹೇಳಿದನು.
9 ಆದರೆ ಯೆಹೂದ್ಯರೂ ಯೆರೂಸಲೇಮಿನವರೂ ಮನಸ್ಸೆಯಿಂದ ಪ್ರೇರಿತರಾಗಿ ಇಸ್ರಾಯೇಲರ ಮುಂದೆಯೇ ಯೆಹೋವನಿಂದ ನಾಶಹೊಂದಿದ ಅನ್ಯಜನಾಂಗಗಳಿಗಿಂತಲೂ ದುಷ್ಟರಾದರು.
10 ಯೆಹೋವನು ಮನಸ್ಸೆಯನ್ನೂ ಅವನ ಪ್ರಜೆಗಳನ್ನೂ ಎಚ್ಚರಿಸಿದರೂ ಅವರು ಲಕ್ಷಿಸಲಿಲ್ಲ.
11 ಆದುದರಿಂದ ಆತನು ಅಶ್ಶೂರದ ಅರಸನ ಸೈನ್ಯಾಧಿಪತಿಗಳನ್ನು ಅವರ ಮೇಲೆ ಬರಮಾಡಿದನು. ಅವರು ಮನಸ್ಸೆಯನ್ನು ಹಿಡಿದು ಅವನಿಗೆ ಕೊಂಡಿಗಳನ್ನು ಸಿಕ್ಕಿಸಿ ಬೇಡಿಹಾಕಿ ಬಾಬಿಲೋನಿಗೆ ಒಯ್ದರು.
12 ಆದರೆ ಆ ಕಷ್ಟದಲ್ಲಿ ಮನಸ್ಸೆಯು ತನ್ನ ದೇವರಾದ ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು. ಅವನು ತನ್ನ ಪೂರ್ವಿಕರ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನನ್ನು ಪ್ರಾರ್ಥಿಸಲು
13 ಆತನು ಲಾಲಿಸಿ, ಅವನಿಗೆ ಸದುತ್ತರವನ್ನು ದಯಪಾಲಿಸಿ ಅವನನ್ನು ತಿರುಗಿ ಯೆರೂಸಲೇಮಿಗೆ ಬರಮಾಡಿ ಅರಸುತನವನ್ನು ಕೊಟ್ಟನು. ಆಗ ಯೆಹೋವನೇ ದೇವರೆಂಬುದು ಮನಸ್ಸೆಗೆ ಮನದಟ್ಟಾಯಿತು.
14 ಇದಾದ ಮೇಲೆ ಅವನು ಗೀಹೋನ್ ಬುಗ್ಗೆಯ ಪಡುವಣ ಕಡೆಯಿಂದ ಮೀನುಬಾಗಿಲಿನ ಮಾರ್ಗದವರೆಗಿರುವ ತಗ್ಗಿನಲ್ಲಿ ಓಫೆಲ್ ಗುಡ್ಡದ ಸುತ್ತಲೂ ದಾವೀದನಗರದ ಹೊರಗಿನ ಗೋಡೆಯನ್ನು ಇನ್ನೂ ಎತ್ತರವಾಗಿ ಕಟ್ಟಿಸಿ, ಯೆಹೂದ ದೇಶದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳಲ್ಲಿ ಸೇನಾಧಿಪತಿಗಳನ್ನಿರಿಸಿದನು.
15 ಅನ್ಯದೇವತಾಪ್ರತಿಮೆಗಳನ್ನೂ, ತಾನು ಮಾಡಿಸಿದ್ದ ಸ್ತಂಭವನ್ನೂ ಯೆಹೋವನ ಆಲಯದಿಂದ ತೆಗೆಸಿ ಯೆಹೋವನ ಮಂದಿರವಿರುವ ಗುಡ್ಡದಲ್ಲಿಯೂ, ಯೆರೂಸಲೇಮಿನಲ್ಲಿಯೂ ಕಟ್ಟಿಸಿದ್ದ ಎಲ್ಲಾ ಯಜ್ಞವೇದಿಗಳನ್ನು ಕೆಡವಿ ಪಟ್ಟಣದ ಹೊರಗೆ ಹಾಕಿಸಿದನು.
16 ಯೆಹೋವನ ಯಜ್ಞವೇದಿಯನ್ನು ತಿರುಗಿ ಕಟ್ಟಿಸಿ ಅದರ ಮೇಲೆ ಸಮಾಧಾನಯಜ್ಞಗಳನ್ನೂ, ಕೃತಜ್ಞತಾಯಜ್ಞಗಳನ್ನೂ, ಅರ್ಪಿಸಿ ಇಸ್ರಾಯೇಲಿನ ದೇವರಾದ ಯೆಹೋವನನ್ನೇ ಸೇವಿಸಬೇಕೆಂದು ಯೆಹೂದ್ಯರಿಗೆ ಆಜ್ಞಾಪಿಸಿದನು.
17 ಅವರು ಈ ಪ್ರಕಾರ ದೇವರಾದ ಯೆಹೋವನೊಬ್ಬನಿಗೇ ಯಜ್ಞವನ್ನು ಅರ್ಪಿಸುವವರಾದರೂ ಆ ಯಜ್ಞಗಳನ್ನೂ ಇನ್ನೂ ಪೂಜಾಸ್ಥಳಗಳಲ್ಲಿಯೇ ಸಮರ್ಪಿಸುತ್ತಿದ್ದರು.
18 ಮನಸ್ಸೆಯ ಉಳಿದ ಚರಿತ್ರೆಯೂ, ಅವನು ತನ್ನ ದೇವರಿಗೆ ಮಾಡಿದ ಪ್ರಾರ್ಥನೆಯೂ ದರ್ಶಕರು ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ ಮಾತುಗಳೂ ಇಸ್ರಾಯೇಲ್ ರಾಜರ ವೃತ್ತಾಂತಗಳಲ್ಲಿ ಬರೆಯಲ್ಪಟ್ಟಿವೆ.
19 ಅವನ ದೇವರಿಗೆ ಮಾಡಿದ ಪ್ರಾರ್ಥನೆಯೂ, ಅವನಿಗೆ ದೊರಕಿದ ಸದುತ್ತರವೂ, ಅವನು ತನ್ನನ್ನು ತಗ್ಗಿಸಿಕೊಳ್ಳುವುದಕ್ಕಿಂತ ಮೊದಲು ಮಾಡಿದ ಅಪರಾಧದ್ರೋಹಗಳೂ, ಅವನು ಅಲ್ಲಲ್ಲಿ ಪೂಜಾಸ್ಥಳಗಳನ್ನು ನಿರ್ಮಿಸಿ ಅಶೇರ ಸ್ತಂಭ ವಿಗ್ರಹ ಇವುಗಳನ್ನು ನಿಲ್ಲಿಸಿದ್ದೂ ದರ್ಶಕರ ಚರಿತ್ರೆಯಲ್ಲಿ ಬರೆದಿರುತ್ತವೆ.
20 ಮನಸ್ಸೆಯು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಅರಮನೆಯ ನಿವೇಶನದಲ್ಲಿ ಸಮಾಧಿ ಮಾಡಿದರು. ಅವನ ನಂತರ ಅವನ ಮಗನಾದ ಆಮೋನನು ಅರಸನಾದನು.
ಯೆಹೂದದ ಅರಸನಾದ ಆಮೋನನು
21 ಆಮೋನನು ಅರಸನಾದಾಗ ಅವನು ಇಪ್ಪತ್ತೆರಡು ವರ್ಷದವನಾಗಿದ್ದನು; ಅವನು ಯೆರೂಸಲೇಮಿನಲ್ಲಿ ಎರಡು ವರ್ಷಗಳ ಕಾಲ ಆಳಿದನು.
22 ಆಮೋನನು ತನ್ನ ತಂದೆಯಾದ ಮನಸ್ಸೆಯ ಹಾಗೆಯೇ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು. ತನ್ನ ತಂದೆಯಾದ ಮನಸ್ಸೆಯು ಮಾಡಿಸಿದ್ದ ಎಲ್ಲಾ ವಿಗ್ರಹಗಳಿಗೆ ಯಜ್ಞವನ್ನರ್ಪಿಸಿ ಅವುಗಳನ್ನು ಪೂಜಿಸಿದನು.
23 ಆದರೂ ಆಮೋನನ ತಂದೆಯಾದ ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡಿದ್ದನಷ್ಠೆ. ಅಮೋನನಾದರೋ ತನ್ನನ್ನು ತಗ್ಗಿಸಿಕೊಳ್ಳದೆ ಮಹಾ ಅಪರಾಧಿಯಾದನು.
24 ಅವನ ಸೇವಕರು ಅವನಿಗೆ ವಿರುದ್ಧವಾಗಿ ಒಳಸಂಚುಮಾಡಿ ಅವನನ್ನು ಅರಮನೆಯಲ್ಲಿಯೇ ಕೊಂದು ಹಾಕಿದರು.
25 ಆದರೆ ದೇಶದ ಜನರು ಅರಸನಾದ ಆಮೋನನಿಗೆ ವಿರುದ್ಧವಾಗಿ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ ಆಮೋನನಿಗೆ ಬದಲಾಗಿ ಅವನ ಮಗನಾದ ಯೋಷೀಯನನ್ನು ಅರಸನನ್ನಾಗಿ ಮಾಡಿದರು.