13
ಎರಡು ಮೃಗಗಳು
1 ಸಮುದ್ರದಿಂದ ಒಂದು ಮೃಗವು ಏರಿಬರುವುದನ್ನು ಕಂಡೆನು. ಅದಕ್ಕೆ ಏಳು ತಲೆಗಳೂ, ಹತ್ತು ಕೊಂಬುಗಳೂ, ಕೊಂಬುಗಳ ಮೇಲೆ ಹತ್ತು ಕಿರೀಟಗಳೂ, ಹಣೆಗಳ ಮೇಲೆ ದೇವದೂಷಣೆಯ ನಾಮಗಳೂ ಇದ್ದವು.
2 ನಾನು ಕಂಡ ಮೃಗವು ಚಿರತೆಯಂತಿತ್ತು ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಿಯಂತೆಯೂ ಇದ್ದವು. ಅದಕ್ಕೆ ಘಟಸರ್ಪನು ಶಕ್ತಿಯನ್ನೂ, ಸಿಂಹಾಸನವನ್ನೂ, ಮಹಾ ಅಧಿಕಾರವನ್ನೂ ಕೊಟ್ಟನು.
3 ಅದರ ತಲೆಗಳಲ್ಲಿ ಒಂದು ತಲೆ ಗಾಯಹೊಂದಿ ಸಾಯುವ ಹಾಗಿರುವುದನ್ನು ಕಂಡೆನು. ಆ ಮರಣಕರವಾದ ಗಾಯವು ವಾಸಿಯಾಯಿತು, ಭೂಲೋಕದವರೆಲ್ಲರು ಆ ಮೃಗವನ್ನು ನೋಡುತ್ತಾ ಆಶ್ಚರ್ಯಪಟ್ಟರು.
4 ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವನಾದ್ದರಿಂದ ಅವರು ಆ ಘಟಸರ್ಪನಿಗೆ ಆರಾಧನೆ ಮಾಡಿದರು. ಇದಲ್ಲದೆ ಆ ಮೃಗಕ್ಕೂ ಆರಾಧನೆ ಮಾಡಿ, “ಈ ಮೃಗಕ್ಕೆ ಸಮಾನರು ಯಾರು? ಇದರ ವಿರುದ್ಧ ಯುದ್ಧ ಮಾಡುವುದಕ್ಕೆ ಯಾರು ಶಕ್ತರು?” ಎಂದರು.
5 ಬಡಾಯಿಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು ಮತ್ತು ನಲವತ್ತೆರಡು ತಿಂಗಳ ಪರ್ಯಂತರ ತನ್ನ ಕಾರ್ಯಗಳನ್ನು ನಡಿಸುವ ಅಧಿಕಾರವೂ ಅದಕ್ಕೆ ಕೊಡಲ್ಪಟ್ಟಿತು.
6 ಆ ಮೃಗವು ಬಾಯಿದೆರೆದು ದೇವರನ್ನು ದೂಷಿಸಿದ್ದಲ್ಲದೆ ಆತನ ನಾಮವನ್ನೂ, ಆತನು ವಾಸಿಸುವ ನಿವಾಸವನ್ನೂ, ಪರಲೋಕ ನಿವಾಸಿಗಳನ್ನೂ ದೂಷಿಸಿತು.
7 ಇದಲ್ಲದೆ ದೇವಜನರ ಮೇಲೆ ಯುದ್ಧ ಮಾಡಿ ಅವರನ್ನು ಜಯಿಸುವುದಕ್ಕೆ ಅದಕ್ಕೆ ಅಧಿಕಾರ ಕೊಡಲ್ಪಟ್ಟಿತು ಮತ್ತು ಸಕಲ ಕುಲ, ಜನ, ಭಾಷೆ, ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು.
8 ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಮರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪುಸ್ತಕದಲ್ಲಿ ಯಾರಾರ ಹೆಸರುಗಳು ಬರೆದಿರುವುದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಅದಕ್ಕೆ ಆರಾಧನೆ ಮಾಡುವರು.
9 ಕಿವಿಯುಳ್ಳವನು ಕೇಳಲಿ,
10 ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು, ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಸಾಯುವನು. ಇದರಲ್ಲಿ ದೇವಜನರಿಗೆ ತಾಳ್ಮೆಯೂ ನಂಬಿಕೆಯೂ ಅಗತ್ಯವಾಗಿರಬೇಕಾಗಿದೆ.
11 ಮತ್ತೊಂದು ಮೃಗವು ಭೂಮಿಯೊಳಗಿಂದ ಬರುವುದನ್ನು ಕಂಡೆನು. ಇದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು, ಅದು ಘಟಸರ್ಪದಂತೆ ಮಾತನಾಡಿತು.
12 ಈ ಮೃಗವು ಮೊದಲನೆಯ ಮೃಗದ ಎದುರು ತನ್ನ ಅಧಿಕಾರವನ್ನೆಲ್ಲಾ ನಡೆಸಿ, ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ಆರಾಧಿಸುವಂತೆ ಮಾಡಿತು.
13 ಇದು ಜನರ ಮುಂದೆ ಬೆಂಕಿ ಆಕಾಶದಿಂದ ಭೂಮಿಗೆ ಇಳಿದುಬರುವಂತಹ ಅದ್ಭುತಕಾರ್ಯಗಳನ್ನು ಮಾಡುತ್ತಾ,
14 ಆ ಮೊದಲನೆಯ ಮೃಗದ ಸನ್ನಿಧಿಯಲ್ಲಿ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವಿರುವುದರಿಂದ ಭೂನಿವಾಸಿಗಳನ್ನು ಮರಳುಗೊಳಿಸಿತ್ತು. ಅವರಿಗೆ, ಕತ್ತಿಯಿಂದ ಗಾಯಹೊಂದಿ ಸಾಯದೆ ಬದುಕಿದ ಮೃಗದ ಘನಕ್ಕಾಗಿ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಬೋಧಿಸಿತು.
15 ಇದಲ್ಲದೆ ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಇದಕ್ಕೆ ದೊರೆಯಿತು. ಆ ಮೃಗದ ವಿಗ್ರಹವು ಮಾತನಾಡುವುದಲ್ಲದೆ, ತನ್ನನ್ನು ಆರಾಧಿಸದವರೆಲ್ಲರಿಗೂ ಮರಣದಂಡನೆಯಾಗುವಂತೆ ಮಾಡುವ ಶಕ್ತಿಯು ಆದಕ್ಕಿತ್ತು.
16 ಈ ಎರಡನೆಯ ಮೃಗವು, ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ದಾಸರು ಎಲ್ಲರೂ ತಮ್ಮತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತನ್ನು ಹೊಂದಬೇಕೆಂದು ಒತ್ತಾಯ ಮಾಡಿತ್ತು.
17 ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡೆಸಲು ಸಾಧ್ಯವಿರಲಿಲ್ಲ. ಆ ಗುರುತು ಯಾವುದೆಂದರೆ ಮೊದಲನೆಯ ಮೃಗದ ಹೆಸರು ಅಥವಾ ಅದರ ಹೆಸರನ್ನು ಸೂಚಿಸುವ ಸಂಖ್ಯೆ.
18 ಇದನ್ನು ಗ್ರಹಿಸಲು ಜ್ಞಾನವು ಅಗತ್ಯವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆಯಾಗಿದೆ. ಅದರ ಸಂಖ್ಯೆಯು 666.