28
1 ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕಾಗಿ ಸೈನ್ಯವನ್ನು ಕೂಡಿಸತೊಡಗಿದರು. ಆಗ ಆಕೀಷನು ದಾವೀದನಿಗೆ, “ನೀನೂ ನಿನ್ನ ಜನರೂ ಯುದ್ಧಕ್ಕೆ ನನ್ನ ಜೊತೆಯಲ್ಲಿ ಬರಬೇಕೆಂಬುದು ನಿನಗೆ ಗೊತ್ತಿಲ್ಲವೋ” ಎನ್ನಲು ದಾವೀದನು,
2 “ಹೌದು ನಿನ್ನ ದಾಸನ ಸಾಹಸವು ಗೊತ್ತಾಗುವುದು” ಅಂದನು. ಆಕೀಷನು ಅವನಿಗೆ, “ಹಾಗಾದರೆ ಯುದ್ಧಕಾಲದಲ್ಲೆಲ್ಲಾ ನಿನ್ನನ್ನೇ ನನ್ನ ಮೈಗಾವಲಿಗೆ ನೇಮಿಸಿಕೊಳ್ಳುವೆನು” ಅಂದನು.
ಸೌಲನು ಒಬ್ಬ ಯಕ್ಷಿಣಿಯನ್ನು ವಿಚಾರಿಸಿದ್ದು
3 ಸಮುವೇಲನು ಮರಣ ಹೊಂದಿದನು. ಇಸ್ರಾಯೇಲರು ಅವನಿಗೋಸ್ಕರ ಗೋಳಾಡಿ, ಅವನ ಶವವನ್ನು ಅವನ ಸ್ವಂತ ಊರಾದ ರಾಮದಲ್ಲಿ ಸಮಾಧಿಮಾಡಿದ್ದರು. ಸೌಲನು ಸತ್ತವರಲ್ಲಿ ವಿಚಾರಿಸುವವರನ್ನೂ, ಬೇತಾಳಿಕರನ್ನೂ ದೇಶದಿಂದ ಹೊರಡಿಸಿಬಿಟ್ಟನು.
4 ಫಿಲಿಷ್ಟಿಯರು ಸೈನ್ಯಕೂಡಿಸಿಕೊಂಡು ಬಂದು ಶೂನೇಮಿನಲ್ಲಿ ಪಾಳೆಯಮಾಡಿಕೊಂಡರು. ಸೌಲನು ಎಲ್ಲಾ ಇಸ್ರಾಯೇಲರೊಡನೆ ಬಂದು, ಗಿಲ್ಬೋವದಲ್ಲಿ ಇಳಿದುಕೊಂಡರು.
5 ಅವನು ಫಿಲಿಷ್ಟಿಯರ ಪಾಳೆಯವನ್ನು ಕಂಡು ಬಹಳ ಭಯದಿಂದ ಎದೆಯೊಡೆದವನಂತಾದನು.
6 ಅವನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದರೂ, ಆತನು ಅವನಿಗೆ ಕನಸುಗಳಿಂದಾಗಲಿ ಊರೀಮಿನಿಂದಾಗಲಿ, ಪ್ರವಾದಿಗಳಿಂದಾಗಲಿ ಉತ್ತರ ಕೊಡಲೇ ಇಲ್ಲ.
7 ಆದುದರಿಂದ ಅವನು ತನ್ನ ಸೇವಕರಿಗೆ, “ಸತ್ತವರಲ್ಲಿ ವಿಚಾರಿಸಬಲ್ಲ ಒಬ್ಬ ಸ್ತ್ರೀಯನ್ನು ಹುಡುಕಿರಿ. ನಾನು ಆಕೆಯ ಹತ್ತಿರ ಹೋಗಿ ವಿಚಾರಿಸುವೆನು” ಎಂದು ಹೇಳಿದನು. ಆಗ ಅವರು, “ಅಂಥವಳೊಬ್ಬಳು ಏಂದೋರಿನಲ್ಲಿದ್ದಾಳೆ” ಅಂದರು.
8 ಆಗ ಸೌಲನು ವಸ್ತ್ರಗಳಿಂದ ತನ್ನನ್ನು ಮಾರ್ಪಡಿಸಿಕೊಂಡು, ಇಬ್ಬರು ಸೇವಕರೊಡನೆ ಹೊರಟು, ರಾತ್ರಿಯಲ್ಲಿ ಆಕೆಯ ಮನೆ ಸೇರಿ, “ದಯವಿಟ್ಟು ನನಗೋಸ್ಕರ ಸತ್ತವರಲ್ಲಿ ವಿಚಾರಿಸಿ ಕಣಿಹೇಳು. ನಾನು ಯಾವನ ಹೆಸರು ಹೇಳುತ್ತೇನೋ ಅವನನ್ನು ಇಲ್ಲಿಗೆ ಬರಮಾಡು” ಎಂದು ಆಕೆಯನ್ನು ಬೇಡಿಕೊಂಡನು
9 ಆಗ ಆಕೆಯು ಅವನಿಗೆ, “ಸೌಲನು ಮಾಡಿದ್ದು ನಿನಗೆ ಗೊತ್ತುಂಟು. ಅವನು ಸತ್ತವರಲ್ಲಿ ವಿಚಾರಿಸುವವರನ್ನು ಬೇತಾಳಿಕರನ್ನೂ ದೇಶದಿಂದ ಹೊರಡಿಸಿಬಿಟ್ಟನಲ್ಲಾ, ಹೀಗಿದ್ದರೂ ನಾನೂ ಸಾಯುವಂತೆ ನೀನು ನನ್ನ ಪ್ರಾಣಕ್ಕೆ ಉರುಲೊಡ್ಡುವುದೇಕೆ?” ಅಂದಳು.
10 ಅದಕ್ಕೆ ಸೌಲನು, “ಯೆಹೋವನಾಣೆ, ಈ ವಿಷಯದಲ್ಲಿ ನೀನು ದಂಡನೆಗೆ ಗುರಿಯಾಗುವುದಿಲ್ಲ” ಎಂದು ಆಕೆಗೆ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದನು.
11 ಆಗ ಸ್ತ್ರೀಯು, “ನಿನಗೆ ಯಾರನ್ನು ಬರಮಾಡಬೇಕು?” ಎನ್ನಲು, “ಸಮುವೇಲನನ್ನು” ಎಂದು ಉತ್ತರಕೊಟ್ಟನು.
12 ಆ ಸ್ತ್ರೀಯು ಸಮುವೇಲನನ್ನು ಕಂಡಕೂಡಲೇ ಗಟ್ಟಿಯಾಗಿ ಕೂಗಿ ಸೌಲನಿಗೆ, “ನೀನು ನನ್ನನ್ನು ವಂಚಿಸಿದ್ದೇಕೆ, ನೀನು ಸೌಲನಲ್ಲವೋ?” ಅಂದಳು.
13 ಅರಸನು, “ಹೆದರಬೇಡ, ನಿನಗೇನು ಕಾಣಿಸುತ್ತದೆ?” ಎಂದು ಆಕೆಯನ್ನು ಕೇಳಲು, “ಭೂಮಿಯೊಳಗಿಂದ ಒಬ್ಬ ದೇವನು ಬರುತ್ತಿರುವುದನ್ನು ನೋಡುತ್ತೇನೆ” ಎಂದು ಉತ್ತರ ಕೊಟ್ಟಳು.
14 ಅವನು ತಿರುಗಿ, “ಅವನ ರೂಪ ಹೇಗಿದೆ?” ಎಂದು ಕೇಳಲು ಆಕೆಯು, “ನಿಲುವಂಗಿಯನ್ನು ಉಟ್ಟುಕೊಂಡ ಒಬ್ಬ ಮುದುಕನು ಬರುತ್ತಿದ್ದಾನೆ” ಎಂದು ಹೇಳಿದಳು. ಅವನು ಸಮುವೇಲನೆ ಎಂದು ಸೌಲನು ತಿಳಿದು, ನೆಲದ ಮಟ್ಟಿಗೂ ಬೊಗ್ಗಿ ನಮಸ್ಕರಿಸಿದನು.
15 ಆಗ ಸಮುವೇಲನು ಸೌಲನನ್ನು, “ನೀನು ನನ್ನ ವಿಶ್ರಾಂತಿಯನ್ನು ಕೇಡಿಸಿದ್ದೇಕೆ? ನನ್ನನ್ನು ಇಲ್ಲಿಗೆ ಯಾಕೆ ಬರಮಾಡಿದೆ?” ಎಂದು ಕೇಳಿದನು. ಅದಕ್ಕೆ ಸೌಲನು, “ನಾನು ಬಲು ಇಕ್ಕಟ್ಟಿನಲ್ಲಿದ್ದೇನೆ. ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಕ್ಕೆ ಬಂದಿದ್ದಾರೆ. ದೇವರು ನನ್ನನ್ನು ಬಿಟ್ಟು ದೂರ ಹೋಗಿದ್ದಾನೆ. ಆತನು ನನಗೆ ಪ್ರವಾದಿಗಳಿಂದಾಗಲಿ, ಕನಸುಗಳಿಂದಾಗಲಿ ಉತ್ತರಕೊಡಲೊಲ್ಲನು. ಆದುದರಿಂದ ನಾನು ಮಾಡಬೇಕಾದದ್ದನ್ನು ನೀನು ತಿಳಿಸುವಿಯೆಂದು ನಿನ್ನನ್ನು ಇಲ್ಲಿಗೆ ಬರಮಾಡಿದೆನು” ಅಂದನು.
16 ಆಗ ಸಮುವೇಲನು, “ಯೆಹೋವನು ನಿನ್ನನ್ನು ಬಿಟ್ಟು ನಿನಗೆ ವಿರೋಧಿಯಾದ ಮೇಲೆ, ನೀನು ನನ್ನನ್ನು ವಿಚಾರಿಸುವುದೇಕೆ?
17 ಆತನು ನನ್ನ ಮುಖಾಂತರ ನಿನಗೆ ಹೇಳಿದ್ದನ್ನು ನೆರವೇರಿಸಿದ್ದಾನೆ. ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟಿದ್ದಾನೆ.
18 ನೀನು ಯೆಹೋವನ ಮಾತನ್ನು ಕೇಳಲಿಲ್ಲ. ಆತನು ಅಮಾಲೇಕ್ಯರ ಮೇಲೆ ಉಗ್ರಕೊಪಗೊಂಡು ಮಾಡಿದ ಕೋಪಾಜ್ಞೆಯನ್ನು ನೀನು ನೆರವೇರಿಸಲಿಲ್ಲ. ಆದ್ದರಿಂದ ಯೆಹೋವನು ಈಗ ನಿನಗೆ ಹೀಗೆ ಮಾಡಿದ್ದಾನೆ.
19 ಆತನು ನಿನ್ನ ಕೂಡ ಇಸ್ರಾಯೇಲ್ಯರೆಲ್ಲರನ್ನೂ ಫಿಲಿಷ್ಟಿಯರ ಕೈಗೆ ಒಪ್ಪಿಸುವನು. ನಾಳೆ ನೀನೂ ನಿನ್ನ ಮಕ್ಕಳೂ ನಾನಿರುವಲ್ಲಿಗೆ ಬರುವಿರಿ. ಆತನು ಇಸ್ರಾಯೇಲ್ಯರ ಸೈನ್ಯವನ್ನು ಫಿಲಿಷ್ಟಿಯರ ಕೈಗೆ ಒಪ್ಪಿಸುವನು” ಎಂದು ಹೇಳಿದನು.
20 ಸೌಲನು ಸಮುವೇಲನ ಮಾತುಗಳನ್ನು ಕೇಳಿದ ಕೂಡಲೇ ಭಯಭ್ರಾಂತನಾಗಿ ನೆಲದ ಮೇಲೆ ಉದ್ದಕ್ಕೆ ಬಿದ್ದನು. ಅವನು ಇಡೀ ದಿನ ಊಟಮಾಡಲಿಲ್ಲವಾದ್ದರಿಂದ ಅವನಲ್ಲಿ ಬಲವೇ ಇರಲಿಲ್ಲ.
21 ಆ ಸ್ತ್ರೀಯು ಸೌಲನ ಹತ್ತಿರ ಬಂದು ಅವನು ಬಹು ಭೀತನಾಗಿದ್ದಾನೆಂದು ಕಂಡು ಅವನಿಗೆ, “ನಿನ್ನ ದಾಸಿಯಾದ ನಾನು ನಿನ್ನ ಮಾತನ್ನು ಕೇಳಿದೆನು. ಕೈಯಲ್ಲಿ ಜೀವಹಿಡಿದವಳಾಗಿ ನಿನ್ನ ಅಪ್ಪಣೆಯನ್ನು ನೆರವೇರಿಸಿದೆನು.
22 ಆದುದರಿಂದ ನೀನು ದಯವಿಟ್ಟು ನಿನ್ನ ದಾಸಿಯ ಮಾತನ್ನು ಕೇಳಬೇಕು. ಸ್ವಲ್ಪ ಆಹಾರ ತರುತ್ತೇನೆ, ಪ್ರಯಾಣಕ್ಕೆ ಬಲಬರುವ ಹಾಗೆ ಅದನ್ನು ಊಟಮಾಡು” ಎಂದು ಹೇಳಿದಳು.
23 ಅವನು, “ಒಲ್ಲೆನು, ಊಟಮಾಡುವುದಿಲ್ಲ” ಅಂದನು. ಆದರೆ ಅವನ ಸೇವಕರೂ ಆ ಸ್ತ್ರೀಯೂ ಬಹಳವಾಗಿ ಬೇಡಿಕೊಂಡದ್ದರಿಂದ ಅವನು ಅವರ ಮಾತಿಗೆ ಒಪ್ಪಿಕೊಂಡು ನೆಲದಿಂದೆದ್ದು ಮಂಚದ ಮೇಲೆ ಕುಳಿತುಕೊಂಡನು.
24 ಆ ಸ್ತ್ರೀಗೆ ಮನೆಯಲ್ಲಿ ಒಂದು ಕೊಬ್ಬಿದ ಕರುವಿತ್ತು. ಆಕೆಯು ಶೀಘ್ರವಾಗಿ ಅದನ್ನು ಕೊಯ್ದು, ಸಿದ್ಧಮಾಡಿ, ಹಿಟ್ಟನ್ನು ತೆಗೆದುಕೊಂಡು ನಾದಿ, ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು ಸೌಲನಿಗೂ ಅವನ ಸೇವಕರಿಗೂ ಬಡಿಸಿದಳು.
25 ಅವರು ಊಟಮಾಡಿ ಅದೇ ರಾತ್ರಿ ಹೊರಟುಹೋದರು.