2
ನಲ್ಲ
ನಾನು ಶಾರೋನಿನ* ನೆಲಸಂಪಿಗೆ,
ತಗ್ಗಿನ ತಾವರೆ.
ಸ್ತ್ರೀಯರಲ್ಲಿ ಶ್ರೇಷ್ಠಳು ನೀನು,
ನನ್ನ ಪ್ರಿಯಳು ಮುಳ್ಳುಗಳ ಮಧ್ಯದಲ್ಲಿರುವ ತಾವರೆಯಂತಿರುವಳು.
ನಲ್ಲೆ
ನನ್ನ ಪ್ರಿಯನು ಪುರುಷೋತ್ತಮನು
ವನವೃಕ್ಷಗಳ ಮಧ್ಯೆ ಸೇಬಿನ ವೃಕ್ಷದಂತಿಹನು.
ಅದರ ಫಲವು ನನ್ನ ನಾಲಿಗೆಗೆ ಸುಮಧುರ
ನಾನು ಆತನ ನೆರಳಿನಲ್ಲಿ ಕುಳಿತು ಪರಮಾನಂದಗೊಂಡೆನು.
ಬರಮಾಡಿಕೊಂಡನು ನನ್ನನ್ನು ಔತಣಶಾಲೆಗೆ,
ನನ್ನ ಮೇಲೆತ್ತಿದನು ಪ್ರೀತಿ ಎಂಬ ಪತಾಕೆ.
ಅಸ್ವಸ್ಥಳಾಗಿರುವೆನು ಅನುರಾಗದಿಂದ,
ದೀಪದ್ರಾಕ್ಷೆಯಿಂದ ನನ್ನನ್ನು ಉಪಚರಿಸಿರಿ,
ಸೇಬು ಹಣ್ಣುಗಳಿಂದ ನನ್ನನ್ನು ಚೈತನ್ಯಗೊಳಿಸಿರಿ.
ಆತನ ಎಡಗೈ ನನಗೆ ತಲೆದಿಂಬಾಗಿದ್ದರೆ,
ಆತನ ಬಲಗೈ ನನ್ನನ್ನು ಆಲಂಗಿಸಿದರೆ ನನಗೆ ಪರಮಾನಂದ!
ಯೆರೂಸಲೇಮಿನ ಮಹಿಳೆಯರೇ,
ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ,
ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು
ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
ಎರಡನೆಯ ಗೀತೆ - ನಲ್ಲೆ
ಅಗೋ ನನ್ನ ಕಾಂತನ ಸಪ್ಪಳ! ಅವನು ಬೆಟ್ಟಗಳ ಮೇಲೆ ಹಾರುತ್ತಾ,
ಗುಡ್ಡಗಳಲ್ಲಿ ಜಿಗಿಯುತ್ತಾ ಬರುತ್ತಿದ್ದಾನೆ;
ನನ್ನ ಪ್ರಿಯನು ಜಿಂಕೆಯಂತೆಯೂ ಪ್ರಾಯದ ಹರಿಣದಂತೆಯೂ ಇದ್ದಾನೆ.
ಆಹಾ, ಇಗೋ ನಮ್ಮ ಗೋಡೆಯ ಆಚೆ ನಿಂತು,
ಕಿಟಕಿಗಳ ಮೂಲಕ ನೋಡುತ್ತಾನೆ,
ಜಾಲಾಂದ್ರಗಳ ಮೂಲಕ ಇಣಿಕುಹಾಕುತ್ತಾನೆ!
ನಲ್ಲ
10 ನನ್ನ ನಲ್ಲನು ನನಗೆ ಹೀಗೆಂದನು,
“ನನ್ನ ಪ್ರಿಯತಮೇ, ಎನ್ನ ಸುಂದರಿಯೇ, ಎದ್ದು ನನ್ನೊಂದಿಗೆ ಬಾ!
11 ಇಗೋ, ಚಳಿಗಾಲ ಕಳೆಯಿತು, ಮಳೆಗಾಲ ಮುಗಿಯಿತು;
12 ಭೂಮಿಯಲ್ಲೆಲ್ಲಾ ಹೂವುಗಳು ಕಾಣುತ್ತವೆ, ಕುಡಿ ಸವರುವ ಕಾಲ ಬಂತು,
ಬೆಳವಕ್ಕಿಯ ಕೂಗು ದೇಶದಲ್ಲಿ ಕೇಳಿಸುತ್ತದೆ;
13 ಅಂಜೂರದ ಕಾಯಿಗಳು ಹಣ್ಣಾಗಿವೆ,
ದ್ರಾಕ್ಷಿಯ ಬಳ್ಳಿಗಳು ಹೂಬಿಟ್ಟಿವೆ, ಅದರ ಪರಿಮಳವನ್ನು ಬೀರುತ್ತಿದೆ.
ನನ್ನ ಪ್ರಿಯಳೇ, ಎನ್ನ ಸುಂದರಿಯೇ, ಎದ್ದು ನನ್ನೊಂದಿಗೆ ಬಾ!
14 ಬಂಡೆಯ ಬಿರುಕುಗಳಲ್ಲಿಯೂ,
ಸಂದುಗಳ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ!
ನಿನ್ನ ರೂಪವನ್ನು ನನಗೆ ತೋರಿಸು,
ನಿನ್ನ ಧ್ವನಿಯನ್ನು ಕೇಳಿಸು;
ಯಾಕೆಂದರೆ ನಿನ್ನ ಸ್ವರ ಎಷ್ಟೋ ಇಂಪು, ನಿನ್ನ ರೂಪವು ಎಷ್ಟೋ ಅಂದ.”
15 ತೋಟಗಳನ್ನು ಹಾಳುಮಾಡುವ ನರಿಗಳನ್ನು, ನರಿಮರಿಗಳನ್ನು ಹಿಡಿಯಿರಿ;
ಹೂಬಿಟ್ಟಿರುವ ನಮ್ಮ ದ್ರಾಕ್ಷಿ ತೋಟಗಳು ಹಾಳು.
ನಲ್ಲೆ
16 ಎನ್ನಿನಿಯನು ನನ್ನವನೇ, ನಾನು ಅವನವಳೇ,
ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ.
17 ಕತ್ತಲು ಕಳೆಯುವ ಮೊದಲು, ಹೊತ್ತು ಮೂಡುವ ಮೊದಲು ಹೊರಟು ಬಾ ನನ್ನ ಪ್ರಿಯನೇ,
ಬೇತೆರ್ ಪರ್ವತದಲ್ಲಿ ಜಿಂಕೆಯಂತೆಯೂ
ಪ್ರಾಯದ ಹರಿಣದಂತೆಯೂ ಇರು.
* 2:1 ಶಾರೋನಿನ ಶಾರೋನ್: ಇಸ್ರಾಯೇಲಿನ ಮೆಡಿಟರೇನಿಯನ್ ಕರಾವಳಿ ಪ್ರಾಂತ್ಯವನ್ನು ಸೂಚಿಸುವ ಸ್ಥಳದ ಹೆಸರಾಗಿದೆ (ಯೆಶಾ 35:2; 65:10). ಆದರೆ ಪದ ವಾಸ್ತವವಾದ ಅರ್ಥವೇನೆಂದರೆ ಬಯಲು ಅಥವಾ ವಿಶಾಲ ಮತ್ತು ಸಮತಟ್ಟಾದ ಮೇಲ್ಮೈ ಪ್ರದೇಶ. 2:15 ನರಿಗಳನ್ನು “ನರಿಗಳು” ಬಹುಶಃ ಯುವತಿಯರ ಪ್ರೀತಿಗಾಗಿ ಸ್ಪರ್ಧಿಸುವ ಇತರ ಪುರುಷರನ್ನು ಸೂಚಿಸುತ್ತದೆ.