ತೀತನಿಗೆ
ಗ್ರಂಥಕರ್ತೃತ್ವ
ಪೌಲನು ತನ್ನನ್ನು ತಾನು ತೀತನ ಪತ್ರಿಕೆಯ ಗ್ರಂಥಕರ್ತನೆಂದು ಗುರುತಿಸಿಕೊಂಡನು, ಅವನು ತನ್ನನ್ನು ದೇವರ ಸೇವಕನು ಮತ್ತು ಯೇಸುಕ್ರಿಸ್ತನ ಅಪೊಸ್ತಲನು ಎಂದು (1:1) ಕರೆದುಕೊಂಡನು. ತೀತನೊಂದಿಗಿನ ಪೌಲನ ಸಂಬಂಧದ ಉಗಮವು ಗೂಢರಹಸ್ಯವಾಗಿದೆ, ಆದರೆ ಅವನು ಪೌಲನ ಸೇವೆಯಡಿಯಲ್ಲಿ ಪರಿವರ್ತನೆ ಹೊಂದಿದವನಾಗಿರಬಹುದು, ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನು ಎಂದು ಅವನನ್ನು ಪೌಲನು ಕರೆದನು (1:4). ಪೌಲನು ತೀತನನ್ನು ಸುವಾರ್ತೆ ಸೇವೆಯಲ್ಲಿ ಸ್ನೇಹಿತನು ಮತ್ತು ಜೊತೆ ಕೆಲಸದವನು ಎಂದು ಬಹು ಗೌರವವುಳ್ಳವನಾಗಿ ಸ್ಪಷ್ಟವಾಗಿ ಎಣಿಸಿದನು, ಅವನ ಪ್ರೀತಿಗಾಗಿ, ಅವನ ಶ್ರದ್ಧೆಗಾಗಿ ಮತ್ತು ಇತರರಿಗೆ ಸಾಂತ್ವನವನ್ನು ಉಂಟುಮಾಡುವಂಥ ಅವನ ಕಾರ್ಯಕ್ಕಾಗಿ ತೀತನನ್ನು ಪ್ರಶಂಸಿದನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 63-65 ರ ನಡುವೆ ಬರೆಯಲ್ಪಟ್ಟಿದೆ.
ಪೌಲನು ತನ್ನ ಮೊದಲ ರೋಮನ್ ಸೆರೆವಾಸದಿಂದ ಬಿಡುಗಡೆಗೊಂಡ ನಂತರ, ನಿಕೊಪೊಲಿಯಿಂದ ತೀತನಿಗೆ ಪತ್ರಿಕೆಯನ್ನು ಬರೆದನು. ಪೌಲನು ಎಫೆಸದಲ್ಲಿ ತಿಮೊಥೆಯನನ್ನು ಸೇವೆಮಾಡಲು ಬಿಟ್ಟು, ತೀತನನ್ನು ಕರೆದುಕೊಂಡು ಕ್ರೇತ್ ದ್ವೀಪಕ್ಕೆ ಹೋದನು.
ಸ್ವೀಕೃತದಾರರು
ಕ್ರೇತ್ ದ್ವೀಪದಲ್ಲಿರುವ, ಜೊತೆಕೆಲಸದವನು ಮತ್ತು ನಂಬಿಕೆಯಲ್ಲಿ ಮಗನು ಆದ, ತೀತನಿಗೆ.
ಉದ್ದೇಶ
ಕ್ರೇತ್ ದ್ವೀಪದ ನೂತನ ಸಭೆಗಳಲ್ಲಿದ್ದ ಕೆಲವು ಕುಂದುಕೊರತೆಗಳನ್ನು, ಸಂಘಟನೆಯ ಕೊರತೆಯನ್ನು ಮತ್ತು ಆಶಿಸ್ತಿನ ವರ್ತನೆಯುಳ್ಳ ಸದಸ್ಯರನ್ನು ಸರಿಪಡಿಸಲು, (1) ಹೊಸ ಹಿರಿಯರನ್ನು ನೇಮಕ ಮಾಡುವಂತೆ ಮತ್ತು (2) ಕ್ರೇತ್ ದ್ವೀಪದಲ್ಲಿರುವ ಅವಿಶ್ವಾಸಿಗಳ ಮುಂದೆ ನಂಬಿಕೆಯ ಉತ್ತಮ ಸಾಕ್ಷಿಯನ್ನು ನೀಡಲು ಸಿದ್ಧಪಡಿಸುವಂತೆ ಅವರಿಗೆ ಸಹಾಯ ಮಾಡಲು ತೀತನಿಗೆ ಸಲಹೆಯನ್ನು ನೀಡಲು ಬರೆದನು (1:5).
ಮುಖ್ಯಾಂಶ
ನಡವಳಿಕೆಯ ಕೈಪಿಡಿ
ಪರಿವಿಡಿ
1. ವಂದನೆಗಳು — 1:1-4
2. ಹಿರಿಯರ ನೇಮಕಾತಿ — 1:5-16
3. ವಿವಿಧ ವಯೋಮಾನದವರ ಕುರಿತಾದ ಆದೇಶ — 2:1-3:11
4. ಅಂತಿಮ ಮಾತುಗಳು — 3:12-15
1
ದೇವರ ಸೇವಕನೂ, *ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು, ನಮ್ಮೆಲ್ಲರಿಗೆ ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನಿಗೆ ಬರೆಯುವ ಪತ್ರ. ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನಿಂದ ನಿನಗೆ ಕೃಪೆ, ಕರುಣೆ ಮತ್ತು ಶಾಂತಿ ದೊರಕಲಿ.
ಸುಳ್ಳಾಡದ ದೇವರು, ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು, ತಾನು ಆರಿಸಿಕೊಂಡವರ ನಂಬಿಕೆಯನ್ನು ಮತ್ತು ದೈವ ಭಕ್ತಿಯನ್ನು ಸತ್ಯದ ಜ್ಞಾನಕ್ಕನುಸಾರವಾಗಿ ದೃಢಪಡಿಸಲು ನಾನು ಕಾರ್ಯ ನಿರ್ವಹಿಸುತ್ತೇನೆ. ಹಾಗು, ಆ ಸಂದೇಶವನ್ನು ಸಾರುವ ಜವಾಬ್ದಾರಿಯು ನಮ್ಮ ರಕ್ಷಕನಾದ ದೇವರ ಆಜ್ಞೆಯ ಅನುಸಾರವಾಗಿ ನನಗೆ ಒಪ್ಪಿಸಲ್ಪಟ್ಟಿದೆ ಹಾಗು ಸೂಕ್ತ ಕಾಲದಲ್ಲಿ ಸಂದೇಶವನ್ನು ಸಾರುವುದರ ಮೂಲಕ ತನ್ನ ವಾಕ್ಯವನ್ನು ನನಗೆ ಪ್ರಕಟಪಡಿಸಿದ್ದಾನೆ.
ಸಭೆಯ ಹಿರಿಯರಲ್ಲಿ ಇರಬೇಕಾದ ಲಕ್ಷಣಗಳು
ಕ್ರೇತ್ ದ್ವೀಪದಲ್ಲಿ ಇನ್ನೂ ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ, ಪಟ್ಟಣ ಪಟ್ಟಣಗಳಲ್ಲಿ ಹಿರಿಯರನ್ನು ನೇಮಿಸಬೇಕೆಂದು ನಾನು ನಿನಗೆ ಅಪ್ಪಣೆಕೊಟ್ಟು ನಿನ್ನನ್ನು ಅಲ್ಲಿ ಬಿಟ್ಟು ಬಂದೆ. ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಅವರ ಮಕ್ಕಳು ದುರ್ಮಾರ್ಗಿಗಳೂ ಮತ್ತು ಅವಿಧೇಯತೆಯ ಆರೋಪವಿಲ್ಲದವರು ಆಗಿರಬೇಕು. ಏಕೆಂದರೆ, ಸಭಾಧ್ಯಕ್ಷನು ದೇವರ ಮೇಲ್ವಿಚಾರಕನಾಗಿರುವುದರಿಂದ ದೋಷರಹಿತನಾಗಿರಬೇಕು; ಅವನು ಸ್ವೇಚ್ಛೆಯಾಗಿ ನಡೆಯುವವನೂ, ಮುಂಗೋಪಿಯೂ, ಕುಡುಕನೂ, ಜಗಳಗಂಟನೂ, ಅತಿಲಾಭವನ್ನು ಅಪೇಕ್ಷಿಸುವವನೂ ಆಗಿರದೆ, ಅತಿಥಿಸತ್ಕಾರಮಾಡುವವನೂ, ಒಳ್ಳೆಯದನ್ನು ಪ್ರೀತಿಸುವವನೂ, ವಿವೇಕಿಯು, ನೀತಿವಂತನೂ, ದೈವಭಕ್ತನು, §ಜಿತೇಂದ್ರಿಯನೂ ಆಗಿದ್ದು, ತಾನು *ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸುವುದಕ್ಕೂ, ಸುವಾರ್ತಾ ವಿರೋಧಿಗಳ ಬಾಯಿ ಕಟ್ಟುವುದಕ್ಕೂ ಶಕ್ತನಾಗಿರುವಂತೆ, ಕ್ರಿಸ್ತನ ಉಪದೇಶಕ್ಕೆ ಅನುಸಾರವಾಗಿ ನಂಬತಕ್ಕ ವಚನಗಳನ್ನು, ದೃಢವಾಗಿ ಅವಲಂಬಿಸಿದವನಾಗಿರಬೇಕು.
10 ಅನೇಕರು, ಪ್ರಮುಖವಾಗಿ ಸುನ್ನತಿಹೊಂದಿದವರು, §ಬರೀ ಮಾತುಗಾರರೂ, ಮೋಸಗಾರರೂ, ಅಧಿಕಾರಕ್ಕೆ ಒಳಪಡದವರು ಆಗಿದ್ದಾರೆ. 11 ಅವರು *ಅತಿಲಾಭವನ್ನು ಪಡೆದುಕೊಳ್ಳುವುದಕ್ಕಾಗಿ ಮಾಡಬಾರದ ಉಪದೇಶವನ್ನು ಮಾಡಿ ಕುಟುಂಬ ಕುಟುಂಬಗಳನ್ನೇ ಹಾಳುಮಾಡುತ್ತಾರಾದ್ದರಿಂದ ಅವರ ಬಾಯಿ ಮುಚ್ಚಿಸಬೇಕಾಗಿದೆ. 12 “ಕ್ರೇತ್ ದ್ವೀಪದವರು ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿಯೇ ಒಬ್ಬ ಪ್ರವಾದಿಯು ಹೇಳಿದ್ದಾನೆ. 13 ಈ ಸಾಕ್ಷಿಯು ನಿಜವೇ ಆಗಿದೆ; ಆದಕಾರಣ ಅವರು §ಯೆಹೂದ್ಯರ ಕಟ್ಟುಕಥೆಗಳಿಗೂ, ಸತ್ಯಭ್ರಷ್ಟರಾದ *ಮನುಷ್ಯರ ವಿಧಿಗಳಿಗೂ ಲಕ್ಷ್ಯಕೊಡದೆ, 14 ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸಿ ತಿಳಿಸು.
15 §ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಅಶುದ್ಧರಿಗೂ, *ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಅಶುದ್ಧವಾಗಿವೆ. 16 ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಅವರು ಅಸಹ್ಯ ಕೃತ್ಯಗಳಲ್ಲಿ ಭಾಗವಹಿಸುವವರೂ, ದೇವರಿಗೆ ಅವಿಧೇಯರೂ ಆಗಿರುವುದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುತ್ತಾರೆ ಹಾಗು ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆಂದು ಸಾಬಿತುಪಡಿಸುತ್ತಾರೆ.
* 1:1 2 ಕೊರಿ 1:1 1:6 1 ತಿಮೊ. 3:1-4 1:7 1 ತಿಮೊ. 3:8; 1 ಪೇತ್ರ 5:2 § 1:8 1 ಕೊರಿ 9:25 * 1:9 1 ತಿಮೊ. 1:10 1:9 2 ಥೆಸ. 2:13-15 1:10 ಅ. ಕೃ. 10:45; 11:2 § 1:10 1 ತಿಮೊ. 1:6 * 1:11 1 ತಿಮೊ. 6:5; 2 ಪೇತ್ರ. 2:3 1:11 2 ತಿಮೊ. 3:6 1:12 ಅ. ಕೃ. 17:28 § 1:13 1 ತಿಮೊ. 1:4 * 1:13 ಕೊಲೊ 2:22 1:14 ತೀತ. 2:1-2 1:14 ತೀತ. 2:15; 1 ತಿಮೊ. 5:20 § 1:15 ಲೂಕ 11:41; 1 ತಿಮೊ. 4:3; ಅ. ಕೃ. 10:15 * 1:15 ರೋಮಾ. 14:23 1:16 1 ಯೋಹಾ 2:4