3
ಕ್ರೈಸ್ತ ವಿಶ್ವಾಸಿಗಳ ಒಳ್ಳೆ ನಡತೆ ಬೋಧನೆ
*ಅಧಿಪತಿಗಳಿಗೂ, ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕಂತಲೂ, ಸಕಲಸತ್ಕಾರ್ಯಗಳನ್ನು ಮಾಡುವುದಕ್ಕೆ ಸಿದ್ಧರಾಗಿರಬೇಕೆಂತಲೂ, ಯಾರನ್ನೂ ದೂಷಿಸದೆ, ಕುತರ್ಕ ಮಾಡದೆ ಎಲ್ಲಾ ಜನರಿಗೂ ಪೂರ್ಣಸದ್ಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ, ಅವರಿಗೆ ನೆನಪಿಸು. §ಏಕೆಂದರೆ ನಾವು ಸಹ, ಮೊದಲು ಅವಿವೇಕಿಗಳೂ, ಅವಿಧೇಯರೂ, ಮೋಸಹೋದವರೂ, ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ, ಕೆಟ್ಟತನ, ಹೊಟ್ಟೆಕಿಚ್ಚುಗಳಲ್ಲಿ ಕಾಲಕಳೆಯುವವರೂ, ಅಸಹ್ಯರೂ, ಒಬ್ಬರನ್ನೊಬ್ಬರು ಹಗೆಮಾಡುವವರೂ ಆಗಿದ್ದೆವು. ಆದರೆ ನಮ್ಮ ರಕ್ಷಕನಾದ ದೇವರ *ದಯೆಯೂ, ಪ್ರೀತಿಯೂ, ಮನುಷ್ಯರಿಗೆ ಪ್ರತ್ಯಕ್ಷವಾದಾಗ, ನಾವು ಮಾಡಿದ ಪುಣ್ಯಕಾರ್ಯಗಳ ನಿಮಿತ್ತದಿಂದಲ್ಲ ಪುನರ್ಜನ್ಮವನ್ನು ಸೂಚಿಸುವ ದೀಕ್ಷಾಸ್ನಾನದ ಮೂಲಕವಾಗಿಯೂ, ಪವಿತ್ರಾತ್ಮನ §ನವೀಕರಣದ ಮೂಲಕವಾಗಿಯೂ ಆತನು *ತನ್ನ ಕರುಣೆಯಿಂದಲೇ ನಮ್ಮನ್ನು ರಕ್ಷಿಸಿದನು. 6-7 ನಾವು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಗೆ ಬಾಧ್ಯರಾಗುವಂತೆ ದೇವರು ಆತನ ಮೂಲಕ ಪವಿತ್ರಾತ್ಮನನ್ನು ನಮ್ಮ ಮೇಲೆ ಹೇರಳವಾಗಿ §ಸುರಿಸಿದನು. *ಇದು ನಂಬತಕ್ಕ ಮಾತಾಗಿದೆ; ದೇವರಲ್ಲಿ ನಂಬಿಕೆ ಇಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರುವಂತೆ ನೀನು ಈ ಎಲ್ಲಾ ಮಾತುಗಳನ್ನು ದೃಢವಾಗಿ ಹೇಳಬೇಕೆಂದು ಅಪೇಕ್ಷಿಸುತ್ತೇನೆ. ಅದು ಉತ್ತಮವೂ, ಮನುಷ್ಯರಿಗೆ ಪ್ರಯೋಜನಕಾರಿಯೂ ಆಗಿವೆ. ಆದರೆ ಬುದ್ಧಿಯಿಲ್ಲದ ತರ್ಕಗಳಿಂದಲೂ, ವಂಶಾವಳಿಗಳಿಂದಲೂ, ಜಗಳಗಳಿಂದಲೂ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಾಗ್ವಾದಗಳಿಂದಲೂ ದೂರವಾಗಿರು; §ಅವು ನಿಷ್ಪ್ರಯೋಜಕವೂ ವ್ಯರ್ಥವೂ ಆಗಿವೆ. 10 ಸಭೆಯಲ್ಲಿ ಭಿನ್ನಭೇದಗಳನ್ನುಂಟುಮಾಡುವ ಮನುಷ್ಯನನ್ನು *ಒಂದೆರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟು ಬಿಡು; 11 ಅಂಥವನು ಸನ್ಮಾರ್ಗದಿಂದ ದೂರವಾದವನೂ ಪಾಪಮಾಡುವವನೂ ಆಗಿದ್ದಾನೆ; ತಾನು ಶಿಕ್ಷೆಗೆ ಅರ್ಹನೆಂದು ಅವನ ಮನಸ್ಸೇ ನಿರ್ಣಯ ಮಾಡುತ್ತದೆ.
ಕಡೆ ಮಾತುಗಳು
12 ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡಿದ್ದರಿಂದ ಅರ್ತೆಮನನ್ನಾಗಲಿ ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಹತ್ತಿರ ಬರುವುದಕ್ಕೆ ಪ್ರಯತ್ನಿಸು. 13 ನ್ಯಾಯಶಾಸ್ತ್ರಿಯಾದ ಜೇನನನ್ನೂ ಮತ್ತು §ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಕಳುಹಿಸಿಕೊಡು; ಅವರಿಗೇನೂ ಕೊರತೆಯಾಗಬಾರದು. 14 ನಮ್ಮ ಜನರು ಸತ್ಕ್ರಿಯೆಹೀನರಾಗದಂತೆ ಬೋಧಿಸು. ತಮ್ಮ ಸಹಮಾನವರ ಕೊರತೆಗಳನ್ನು ಗುರುತಿಸಿ ನೆರವು ನೀಡಲಿ. ಪರೋಪಕಾರವನ್ನು ಕಲಿತುಕೊಂಡು ಸಾರ್ಥಕ ಜೀವನ ನಡೆಸಲಿ. 15 ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ಕ್ರಿಸ್ತನಲ್ಲಿ ನಂಬಿಕೆಯುಳ್ಳವರಾಗಿ ನಮ್ಮನ್ನು ಪ್ರೀತಿಸುವವರಿಗೆ ವಂದನೆಗಳನ್ನು ಸಲ್ಲಿಸು.
* ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.
* 3:1 ರೋಮಾ 13:1; 1 ಪೇತ್ರ 2:13 3:2 1 ತಿಮೊ 3:3 3:2 2 ತಿಮೊ 2:25 § 3:3 1 ಕೊರಿ 6:11 * 3:4 ರೋಮಾ 2:4 3:5 ರೋಮಾ 3:27 3:5 ಎಫೆ 5:27; ಯೋಹಾ 3:5; 1 ಕೊರಿ 6:11; 1 ಪೇತ್ರ 3:21; § 3:5 ರೋಮಾ 12:2 * 3:5 ಎಫೆ 2:4; 1 ಪೇತ್ರ 1:3 3:6-7 ತೀತ 1:2 3:6-7 ರೋಮಾ. 8:17 § 3:6-7 ಯೋವೇ. 2:28; ಅ. ಕೃ 2:33; 10:45. ರೋಮಾ 5:5 * 3:8 1 ತಿಮೊ. 1:15 3:9 1 ತಿಮೊ. 6:4 3:9 1 ತಿಮೊ. 1:4 § 3:9 2 ತಿಮೊ 2:14 * 3:10 ಮತ್ತಾ 18:15. 2 ಥೆಸ 3:15; ಯಾಕೋಬ 5:19 3:12 2 ತಿಮೊ. 4:10 3:12 2 ತಿಮೊ. 4:12 § 3:13 ಅ. ಕೃ 18:24 * 3:15 ಕೊಲೊ 4:18