ಜೆಕರ್ಯನು
ಗ್ರಂಥಕರ್ತೃತ್ವ
ಜೆಕರ್ಯ 1:1 ನೇ ವಚನವು “ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಅದ” ಪ್ರವಾದಿಯಾದ ಜೆಕರ್ಯನನ್ನು, ಜೆಕರ್ಯ ಪುಸ್ತಕದ ಗ್ರಂಥಕರ್ತನೆಂದು ಗುರುತಿಸುತ್ತದೆ. ಇದ್ದೋ ಹಿಂದಿರುಗಿದ ಸೆರೆವಾಸಿಗಳಲ್ಲಿದ್ದ ಯಾಜಕೀಯ ಕುಟುಂಬಗಳ ಪೈಕಿ ಒಂದು ಕುಟುಂಬದ ಮುಖ್ಯಸ್ಥನಾಗಿದ್ದನು (ನೆಹೆ 12:4,16). ಅವನ ಕುಟುಂಬವು ಯೆರೂಸಲೇಮಿಗೆ ಹಿಂದಿರುಗಿದಾಗ ಜೆಕರ್ಯನು ಯುವಕನಾಗಿದ್ದಿರಬಹುದು. ಅವನ ಕುಟುಂಬದ ವಂಶಾವಳಿಯ ನಿಮಿತ್ತ, ಜೆಕರ್ಯನು ಪ್ರವಾದಿಯಾಗಿದ್ದರ ಜೊತೆಗೆ ಯಾಜಕನು ಸಹ ಆಗಿದ್ದನು. ಹಾಗಾಗಿ ಅವನು ಪೂರ್ಣಗೊಂಡ ದೇವಾಲಯದಲ್ಲಿ ಸೇವೆ ಮಾಡದಿದ್ದರೂ ಸಹ, ಅವನಿಗೆ ಯೆಹೂದ್ಯರ ಆರಾಧನೆಯ ಆಚರಣೆಗಳ ಬಗ್ಗೆ ಚೆನ್ನಾಗಿ ತಿಳಿದಿತ್ತು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 520-480 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಾಬಿಲೋನಿನಲ್ಲಿನ ಸೆರೆಯಿಂದ (ಸೆರೆವಾಸ) ಹಿಂದಿರುಗಿದ ನಂತರ ಇದನ್ನು ಬರೆಯಲಾಗಿದೆ. ಪ್ರವಾದಿಯಾದ ಜೆಕರ್ಯನು 1-8 ಅಧ್ಯಾಯಗಳನ್ನು ದೇವಾಲಯದ ಪೂರ್ಣಗೊಳ್ಳುವುದಕ್ಕಿಂತ ಮುಂಚೆ ಬರೆದನು, ದೇವಾಲಯವನ್ನು ಪೂರ್ಣಗೊಳಿಸಿದ ನಂತರ 9-14 ಅಧ್ಯಾಯಗಳನ್ನು ಬರೆದನು.
ಸ್ವೀಕೃತದಾರರು
ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಜನರು ಮತ್ತು ಸೆರೆವಾಸದಿಂದ ಹಿಂದಿರುಗಿದವರು.
ಉದ್ದೇಶ
ಅವಶೇಷ ಜನಸಮುದಾಯದವರಿಗೆ ಜೆಕರ್ಯ ಪುಸ್ತಕವನ್ನು ಬರೆಯುವ ಉದ್ದೇಶವೇನೆಂದರೆ ಅವರಿಗೆ ನಿರೀಕ್ಷೆಯನ್ನು ಮತ್ತು ತಿಳುವಳಿಕೆಯನ್ನು ಕೊಡಲು ಮತ್ತು ಅವರ ಮೆಸ್ಸೀಯನ ಅಂದರೆ ಕ್ರಿಸ್ತ ಯೇಸುವಿನ ಬರೋಣವನ್ನು ಎದುರುನೋಡಲು. ದೇವರು ತನ್ನ ಜನರಿಗೆ ಬೋಧಿಸಲು, ಎಚ್ಚರಿಕೆ ನೀಡಲು ಮತ್ತು ಸರಿಪಡಿಸಲು ತನ್ನ ಪ್ರವಾದಿಗಳನ್ನು ಉಪಯೋಗಿಸಿದ್ದಾನೆ ಎಂದು ಜೆಕರ್ಯನು ಒತ್ತಿಹೇಳಿದನು. ದುರದೃಷ್ಟವಶಾತ್, ಅವರು ಕಿವಿಗೊಡಲು ನಿರಾಕರಿಸಿದರು. ಅವರ ಪಾಪವು ದೇವರ ಶಿಕ್ಷೆಗೆ ಕಾರಣವಾಯಿತು. ಪ್ರವಾದನೆಯು ದೋಷಪೂರಿತವಾಗಬಹುದು ಎಂಬ ಸಾಕ್ಷ್ಯವನ್ನು ಈ ಪುಸ್ತಕವು ನೀಡುತ್ತದೆ.
ಮುಖ್ಯಾಂಶ
ದೇವರ ಬಿಡುಗಡೆ
ಪರಿವಿಡಿ
1. ಪಶ್ಚಾತ್ತಾಪಕ್ಕಾಗಿ ಕರೆ — 1:1-6
2. ಜೆಕರ್ಯನ ದರ್ಶನಗಳು — 1:7-6:15
3. ಉಪವಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು — 7:1-8:23
4. ಭವಿಷ್ಯದ ಬಗೆಗಿನ ಹೊರೆ — 9:1-14:21
1
ಯೆಹೋವನ ಕಡೆಗೆ ಹಿಂದಿರುಗಬೇಕೆಂಬ ಎಚ್ಚರಿಕೆ
ದಾರ್ಯಾವೆಷನ* ಆಳ್ವಿಕೆಯ ಎರಡನೆಯ ವರ್ಷದ ಎಂಟನೆಯ ತಿಂಗಳಲ್ಲಿ ಯೆಹೋವನು ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಅದ ಜೆಕರ್ಯನೆಂಬ ಪ್ರವಾದಿಗೆ ಈ ವಾಕ್ಯವನ್ನು ದಯಪಾಲಿಸಿದನು. ಅದೇನೆಂದರೆ, “ಯೆಹೋವನು ನಿಮ್ಮ ಪೂರ್ವಿಕರ ಮೇಲೆ ಬಹು ಕೋಪಗೊಂಡಿದ್ದಾನೆ. ಆದಕಾರಣ ನೀನು ನಿನ್ನ ಜನರಿಗೆ ಹೀಗೆ ಹೇಳು,
‘ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ನನ್ನ ಕಡೆಗೆ ಪುನಃ ತಿರುಗಿಕೊಳ್ಳಿರಿ’ ”
ಇದು ಸೇನಾಧೀಶ್ವರನಾದ ಯೆಹೋವನ ನುಡಿ, “ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
ನಿಮ್ಮ ಪೂರ್ವಿಕರಂತಿರಬೇಡಿರಿ; ಪೂರ್ವಕಾಲದ ಪ್ರವಾದಿಗಳು ಅವರಿಗೆ, “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ದುರ್ಮಾರ್ಗ, ದುಷ್ಕೃತ್ಯಗಳಿಂದ ಹಿಂದಿರುಗಿರಿ’ ಎಂದು ಸಾರಿದರೂ ಅವರು ನನ್ನ ಮಾತನ್ನು ಕಿವಿಗೊಟ್ಟು ಕೇಳಲಿಲ್ಲ” ಇದು ಯೆಹೋವನ ನುಡಿ.
“ನಿಮ್ಮ ಪೂರ್ವಿಕರು ಎಲ್ಲಿ? ಪ್ರವಾದಿಗಳು ಸದಾಕಾಲ ನಿತ್ಯನಿರಂತರವಾಗಿ ಇರುವರೇ?
ಆದರೆ ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯಗಳೂ ಮತ್ತು ವಿಧಿಗಳೂ ನಿಮ್ಮ ಪೂರ್ವಿಕರನ್ನು ಹಿಂದಟ್ಟಿ ಹಿಡಿದು ಶಾಶ್ವತವಾಗಿ ಉಳಿದಿದೆ.
ಅವರು ತಿರುಗಿಕೊಂಡು, ಸೇನಾಧೀಶ್ವರ ಯೆಹೋವನಿಗೆ ‘ನಮ್ಮ ದುಷ್ಕೃತ್ಯಗಳಿಗೆ ತಕ್ಕ ಹಾಗೆ ನಮಗೆ ಏನು ಮಾಡಬೇಕೆಂದು ಸಂಕಲ್ಪಿಸಿದನೋ ಅದನ್ನು ನಮಗೆ ಮಾಡಿದ್ದಾನಲ್ಲಾ’ ” ಅಂದುಕೊಂಡರು.
ನಾಲ್ಕು ಅಶ್ವ ಸವಾರರ ವಿಷಯವಾದ ದರ್ಶನ
ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಹನ್ನೊಂದನೆಯ ತಿಂಗಳಿನ ಅಂದರೆ ಶೆಬಾಟ್ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನ ವಾಕ್ಯವು ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನಾದ ಜೆಕರ್ಯನೆಂಬ ಪ್ರವಾದಿಗೆ ಕೇಳಿಬಂತು, “ರಾತ್ರಿಯಲ್ಲಿ ನನಗೆ ದರ್ಶನವಾಯಿತು. ಇಗೋ, ಕೆಂಪು ಕುದುರೆಯನ್ನು ಹತ್ತಿದ ಒಬ್ಬ ಪುರುಷನು ತಗ್ಗಿನಲ್ಲಿರುವ ಸುಗಂಧವೃಕ್ಷಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು, ಕಂದು, ಬಿಳಿ ಕುದುರೆಗಳು ಮತ್ತು ಅವರ ಸವಾರರಿದ್ದರು. ನನಗೆ ಕನಸಿನ ಅರ್ಥವನ್ನು ವಿವರಿಸುವ ದೇವದೂತನನ್ನು, ‘ಸ್ವಾಮಿ ಇವರು ಯಾರು?’ ” ಎಂದು ನಾನು ಕೇಳಲು ಆತನು ನನಗೆ, “ಇವರು ಇಂಥವರೆಂದು ನಿನಗೆ ತೋರಿಸುವೆನು” ಎಂಬುದಾಗಿ ಹೇಳಿದನು.
10 ಕೂಡಲೆ ಸುಗಂಧವೃಕ್ಷಗಳ ನಡುವೆ ನಿಂತಿದ್ದವನು, “ಇವರು ಲೋಕಸಂಚಾರಾರ್ಥವಾಗಿ ಯೆಹೋವನಿಂದ ಕಳುಹಿಸಲ್ಪಟ್ಟವರು” ಎಂದು ಉತ್ತರಕೊಟ್ಟನು. 11 ಆಗ ಅವರು ಸುಗಂಧವೃಕ್ಷಗಳ ನಡುವೆ ನಿಂತಿದ್ದ ಆ ಯೆಹೋವನ ದೂತನಿಗೆ, “ನಾವು ಲೋಕದಲ್ಲಿ ಸಂಚರಿಸಿ ಬಂದಿದ್ದೇವೆ. ಇಗೋ ಲೋಕವೆಲ್ಲಾ ನೆಮ್ಮದಿಯಾಗಿ ಸುಮ್ಮನಿದೆ” ಎಂದು ಅರಿಕೆಮಾಡಿದರು.
12 ಇದನ್ನು ಕೇಳಿ ಯೆಹೋವನ ದೂತನು, “ಸೇನಾಧೀಶ್ವರನಾದ ಯೆಹೋವನೇ, ನೀನು ಎಪ್ಪತ್ತು ವರ್ಷಗಳಿಂದ ರೋಷಗೊಂಡಿರುವ ಯೆರೂಸಲೇಮ್ ಮೊದಲಾದ ಯೆಹೂದದ ಪಟ್ಟಣಗಳನ್ನು ಎಷ್ಟು ಕಾಲ ಕರುಣಿಸದೆ ಇರುವಿ” ಎಂದು ಬಿನ್ನವಿಸಲು, 13 ನನ್ನೊಂದಿಗೆ ಮಾತನಾಡಿದ ದೂತನಿಗೆ, ಯೆಹೋವನು ಕರುಣೆ ಹಾಗೂ ಒಳ್ಳೆಯ ಮಾತುಗಳಿಂದ ಉತ್ತರಕೊಟ್ಟನು.
14 ಆಗ ಆ ದೂತನು ನನಗೆ ಈ ಅಪ್ಪಣೆ ಮಾಡಿದನು, “ನೀನು ಹೀಗೆ ಸಾರಿ ಹೇಳಬೇಕು, ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಯೆರೂಸಲೇಮಿಗೂ, ಚೀಯೋನಿಗೂ ಅವಮಾನವಾಯಿತಲ್ಲಾ’ ಎಂದು ಬಹಳವಾಗಿ ಅಸಮಾಧಾನಗೊಂಡಿದ್ದೇನೆ.
15 ನೆಮ್ಮದಿಯಾಗಿರುವ ಜನಾಂಗಗಳ ಮೇಲೆ ನಾನು ಬಹಳ ಕೋಪಗೊಂಡಿದ್ದೇನೆ;
ನಾನು ಯೆರೂಸಲೇಮಿನ ಮೇಲೆ ಸ್ವಲ್ಪ ಮಾತ್ರ ಸಿಟ್ಟುಗೊಂಡು ಮಾಡಬೇಕೆಂದಿದ್ದ ಕೇಡಿಗಿಂತ ಅವರೇ ಹೆಚ್ಚಾಗಿ ಕೇಡಿಗೆ ಕೇಡು ಸೇರಿಸಿಕೊಂಡರು.”
16 ಹೀಗಿರಲು ಯೆಹೋವನು ಇಂತೆನ್ನುತ್ತಾನೆ,
“ನಾನು ಕನಿಕರವುಳ್ಳವನಾಗಿ ಯೆರೂಸಲೇಮಿಗೆ ಹಿಂದಿರುಗಿದ್ದೇನೆ; ನನ್ನ ಆಲಯವು ಪುನಃ ಅಲ್ಲಿ ಕಟ್ಟಲ್ಪಡುವುದು;
ಯೆರೂಸಲೇಮಿನಲ್ಲಿ ನೂಲು ಎಳೆಯಲ್ಪಡುವುದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
17 ಮತ್ತೊಮ್ಮೆ ಹೀಗೆ ಸಾರಿ ಹೇಳು, ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇನ್ನು ನನ್ನ ಪಟ್ಟಣಗಳಲ್ಲಿ ಶುಭವು ತುಂಬಿ ತುಳುಕುವುದು;
ಯೆಹೋವನು ಇನ್ನು ಚೀಯೋನನ್ನು ಸಂತೈಸುವನು, ಯೆರೂಸಲೇಮನ್ನು ಮತ್ತೆ ತನಗಾಗಿ ಆರಿಸಿಕೊಳ್ಳುವನು.”
ನಾಲ್ಕು ಕೊಂಬುಗಳು ಮತ್ತು ನಾಲ್ವರು ಕಮ್ಮಾರರ ವಿಷಯವಾದ ದರ್ಶನ
18 ನಾನು ಕಣ್ಣೆತ್ತಿ ನೋಡಲು ಇಗೋ, ನಾಲ್ಕು ಕೊಂಬುಗಳು ಕಾಣಿಸಿದವು. 19 ವಿವರಿಸುವ ದೂತನನ್ನು ಕುರಿತು, “ಇವು ಏನು?” ಎಂದು ನಾನು ಕೇಳಿದ್ದಕ್ಕೆ ಅವನು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನು ಚದುರಿಸುವ ಕೊಂಬುಗಳು” ಎಂದು ಉತ್ತರಕೊಟ್ಟನು.
20 ಅನಂತರ ಯೆಹೋವನು ನನಗೆ ನಾಲ್ಕು ಮಂದಿ ಕಮ್ಮಾರರನ್ನು ತೋರಿಸಿದನು. 21 ಆಗ ನಾನು, “ಇವರು ಏನು ಮಾಡುವುದಕ್ಕೆ ಬಂದಿದ್ದಾರೆ?” ಎಂದು ಕೇಳಲು ಅವನು, “ಈ ಕೊಂಬುಗಳು ಯೆಹೂದದವರಲ್ಲಿ ಯಾರೂ ತಲೆಯೆತ್ತದಂತೆ ಅವರನ್ನು ಚದುರಿಸಿವೆಯಷ್ಟೆ; ಇವರಾದರೋ ಯೆಹೂದ ದೇಶದವರನ್ನು ಚದುರಿಸಬೇಕೆಂದು ತಲೆಯೆತ್ತಿದ ಜನಾಂಗಗಳ ಕೊಂಬುಗಳನ್ನು ಹೆದರಿಸಿ ಕೆಡುವುದಕ್ಕೆ ಬಂದಿದ್ದಾರೆ” ಎಂದು ಹೇಳಿದನು.
* 1:1 ದಾರ್ಯಾವೆಷನ ಅರಸನಾದ ದಾರ್ಯಾವೆಷನು ದಾರ್ಯಾವೆಷನಾದ ಹೈಸ್ಪಾಸ್ಪೆಸ್ ಆಗಿದ್ದು, ಕ್ರಿ.ಶ. 522-486 ರಲ್ಲಿ ಪರ್ಷಿಯಾವನ್ನು ಆಳಿದನು, ಪರ್ಷಿಯನ್ ಭಾಷೆಯಲ್ಲಿ ಅವನ ಹೆಸರು ದಾರಾ.