3
ಯೆರೂಸಲೇಮಿನ ಪಾಪ ಮತ್ತು ಬಿಡುಗಡೆ
1 ಅಯ್ಯೋ, ಅವಿಧೇಯತೆ ಮಲಿನವೂ ಆದ ದಬ್ಬಾಳಿಕೆ ನಡೆಸುವ ನಗರದ ಗತಿಯನ್ನು ಏನು ಹೇಳಲಿ!
2 ಅದು ದೇವರ ವಾಕ್ಯಕ್ಕಾಗಲೀ ಆತನ ತಿದ್ದುಪಾಟಿಗಾಗಲಿ ಕಿವಿಗೊಡಲಿಲ್ಲ, ಶಿಕ್ಷಣಕ್ಕೆ ಒಳಪಡಲೇ ಇಲ್ಲ,
ಯೆಹೋವನಲ್ಲಿ ಭರವಸವಿಡಲಿಲ್ಲ, ತನ್ನ ದೇವರ ಸನ್ನಿಧಿಗೆ ಸಮೀಪಿಸಲಿಲ್ಲ.
3 ಅವರೊಳಗಿನ ಮುಖ್ಯಾಧಿಕಾರಿಗಳು ಗರ್ಜಿಸುವ ಸಿಂಹಗಳು;
ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳು; ಮರುದಿನ ಬೆಳಗ್ಗೆ ಕಡಿಯುವುದಕ್ಕೆ ಎಲುಬು ಸಹಾ ಬಿಡದ ಕ್ರೂರರು.
4 ಅಲ್ಲಿರುವ ಪ್ರವಾದಿಗಳು ಬಡಾಯಿ ಕೊಚ್ಚಿಕೊಳ್ಳುವವರು, ವಿಶ್ವಾಸ ದ್ರೋಹಿಗಳು;
ಅದರ ಯಾಜಕರು ಪವಿತ್ರಾಲಯವನ್ನು ಹೊಲೆಗೆಡಿಸಿದ್ದಾರೆ, ಧರ್ಮವಿಧಿಗಳನ್ನು ಭಂಗಮಾಡಿದ್ದಾರೆ.
5 ಅದರ ಮಧ್ಯ ನೆಲೆಗೊಂಡಿರುವ ಯೆಹೋವನು ನೀತಿಸ್ವರೂಪನು; ಎಂದಿಗೂ ಅನ್ಯಾಯವನ್ನು ಮಾಡನು;
ಪ್ರತಿ ಬೆಳಿಗ್ಗೆ ತನ್ನ ನ್ಯಾಯವನ್ನು ತಪ್ಪದೆ ಪ್ರಕಾಶಗೊಳಿಸುವನು; ಅನ್ಯಾಯಗಾರನೋ ನಾಚಿಕೆಪಡುವುದಿಲ್ಲ.
6 ಯೆಹೋವನು ಇಂತೆನ್ನುತ್ತಾನೆ, “ನಾನು ಜನಾಂಗಗಳನ್ನು ಧ್ವಂಸಪಡಿಸಿದ್ದೇನೆ, ಅವುಗಳ ಕೋಟೆ ಕೊತ್ತಲುಗಳು ಪಾಳು ಬಿದ್ದವು;
ಅವುಗಳ ಬೀದಿಗಳನ್ನು ಹಾಳುಮಾಡಿದ್ದೇನೆ; ಯಾರೂ ಹಾದುಹೋಗರು;
ಅವುಗಳ ಪಟ್ಟಣಗಳು ನಾಶವಾದವು, ಜನರೇ ಇಲ್ಲ, ನಿರ್ನಾಮವಾಗಿವೆ.
7 ಇದರಿಂದ ಯೆರೂಸಲೇಮೇ, ನೀನು ನನಗೆ ನಿಶ್ಚಯವಾಗಿ ಭಯಪಡುವಿ, ಶಿಕ್ಷಣಕ್ಕೆ ಒಳಪಡುವಿ,
ನಿನ್ನ ನಿವಾಸವು ನಾಶವಾಗದು, ನಾನು ನಿನಗೆ ವಿಧಿಸಿದ್ದೊಂದೂ ತಗಲದು” ಎಂದು ಅಂದುಕೊಂಡೆನು;
ಅವರಾದರೋ ಆತುರಗೊಂಡು ತಮ್ಮ ನಡತೆಯನ್ನೆಲ್ಲಾ ಕೆಡಿಸಿಕೊಂಡರು.
8 ಯೆಹೋವನು ಇಂತೆನ್ನುತ್ತಾನೆ, “ಹೀಗಿರಲು ನನಗಾಗಿ ಕಾದುಕೊಂಡಿರಿ, ನಾನು ಬೇಟೆಹಿಡಿಯಲಿಕ್ಕೆ ಏಳುವ ದಿನವನ್ನು ಎದುರುನೋಡಿರಿ;
ಜನಾಂಗರಾಜ್ಯಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನೆಲ್ಲಾ ಹೊಯ್ದು ಬಿಡುವುದಕ್ಕಾಗಿ
ಆ ಜನಾಂಗಗಳನ್ನು ಸೇರಿಸಿ ಆ ರಾಜ್ಯಗಳನ್ನು ಕೂಡಿಸಬೇಕೆಂದು ತೀರ್ಮಾನಿಸಿಕೊಂಡಿದ್ದೇನೆ,
ಲೋಕವೆಲ್ಲಾ ನನ್ನ ರೋಷಾಗ್ನಿಗೆ ತುತ್ತಾಗುವುದಷ್ಟೇ.
ಯೆಹೋವನ ಸರ್ವಾಧಿಪತ್ಯ
9 “ಆಗ ಎಲ್ಲರೂ ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ
ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿಮಾಡುವೆನು.
10 ಚದರಿಹೋಗಿರುವ ನನ್ನ ಜನರು, ನನ್ನ ಭಕ್ತರು, ಕೂಷಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದು ಸಮರ್ಪಿಸುವರು.
ದೇವಜನರ ದೈನ್ಯಭಕ್ತಿ
11 “ನೀನು ನನಗೆ ಮಾಡಿದ ನಾನಾ ದುಷ್ಕೃತ್ಯಗಳು ಮುಂದಿನ ಆ ಕಾಲದಲ್ಲಿ ನಿನಗೆ ನಾಚಿಕೆಗೆ ಈಡಾಗುವವು;
ಆಗ ತಮ್ಮ ಅತಿಗರ್ವದಿಂದ ಮೆರೆಯುವವರನ್ನು ನಿನ್ನೊಳಗಿಂದ ತೊಲಗಿಸಿಬಿಡುವೆನು;
ಅಂದಿನಿಂದ ನನ್ನ ಪವಿತ್ರಪರ್ವತದಲ್ಲಿ ಗರ್ವಪಡದೆ ಇರುವಿ.
12 ದೀನದರಿದ್ರ ಜನರನ್ನು ನಿನ್ನಲ್ಲಿ ಉಳಿಸುವೆನು;
ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು,
13 ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯವನ್ನು ಮಾಡರು, ಸುಳ್ಳಾಡರು;
ಅವರ ಬಾಯಲ್ಲಿ ಮೋಸದ ನಾಲಿಗೆಯು ಇರದು;
ಕುರಿ ಮಂದೆಯಂತೆ ಮೇದು ಮಲಗಿಕೊಳ್ಳುವರು, ಅವರನ್ನು ಯಾರೂ ಹೆದರಿಸರು.”
ಯೆಹೋವನ ಪ್ರಸನ್ನತೆ
14 ಚೀಯೋನ್ ಕುವರಿಯೇ, ಹರ್ಷಧ್ವನಿಗೈ! ಇಸ್ರಾಯೇಲೇ, ಜಯಘೋಷಮಾಡು!
ಯೆರೂಸಲೇಮ್ ಕುವರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು!
15 ನಿನಗೆ ವಿಧಿಸಿದ ದಂಡನೆಯನ್ನು ಯೆಹೋವನು ತಪ್ಪಿಸಿದ್ದಾನೆ, ನಿನ್ನ ಶತ್ರುವನ್ನು ತಳ್ಳಿಬಿಟ್ಟಿದ್ದಾನೆ;
ಇಸ್ರಾಯೇಲಿನ ಅರಸನಾದ ಯೆಹೋವನು ನಿನ್ನ ಮಧ್ಯದಲ್ಲಿದ್ದಾನೆ; ಇನ್ನು ಕೇಡಿಗೆ ಅಂಜದಿರುವಿ.
16 ಆ ದಿನದಲ್ಲಿ ಯೆರೂಸಲೇಮಿಗೆ, “ಚೀಯೋನೇ,
ಭಯಪಡಬೇಡ, ನಿನ್ನ ಕೈಗಳು ಜೋಲುಬೀಳದಿರಲಿ;
17 ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು;
ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು;
ತನ್ನ ಪ್ರೀತಿಯಲ್ಲಿ ನಿನ್ನ ಜೀವನವನ್ನು ನೂತನಗೊಳಿಸುವನು;
ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು.
18 ಅವಮಾನವು ನಮ್ಮ ಪಟ್ಟಣದ ಮೇಲೆ ಹೊರೆಯಾಗಿ ಕಾಡುತ್ತಿದೆ ಎಂದು ತಿಳಿದು ಹಬ್ಬ ಉತ್ಸವಗಳಿಗೆ ದೂರವಾಗಿ ಶೋಕಿಸುತ್ತಿರುವ ನಿನ್ನವರನ್ನು ಒಟ್ಟಿಗೆ ಬರಮಾಡುವೆನು.
19 ಆಹಾ, ಆ ಕಾಲದಲ್ಲಿ ನಿನ್ನನ್ನು ಬಾಧಿಸುವವರಿಗೆ ತಕ್ಕದ್ದನ್ನು ಮಾಡುವೆನು;
ನಿನ್ನಲ್ಲಿ ಕುಂಟುವವರನ್ನು ರಕ್ಷಿಸುವೆನು, ಚದರಿ ಹೋದವರನ್ನು ಕೂಡಿಸುವೆನು;
ಅಂತು ಲೋಕದಲ್ಲೆಲ್ಲಾ ಅವಮಾನಪಟ್ಟವರಿಗೆ ಸ್ತೋತ್ರ ಕೀರ್ತನೆಗಳನ್ನು ಉಂಟುಮಾಡುವೆನು.
20 ಆ ಕಾಲದಲ್ಲಿ ನಿಮ್ಮನ್ನು ಕರೆದು ತರುವೆನು, ಹೌದು, ಆ ಕಾಲದಲ್ಲಿ ನಿಮ್ಮನ್ನು ಒಟ್ಟುಗೂಡಿಸುವೆನು.
ನಾನು ನಿಮ್ಮ ದುರವಸ್ಥೆಯನ್ನು ನಿಮ್ಮ ಕಣ್ಣೆದುರಿಗೇ ತಪ್ಪಿಸುವಾಗ
ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿ ಸ್ತೋತ್ರಗಳಿಗೆ ಗುರಿಮಾಡುವೆನು” ಇದು ಯೆಹೋವನ ನುಡಿ.