10
ಕೊರ್ನೇಲ್ಯನು ಪೇತ್ರನನ್ನು ಕರೆಕಳುಹಿಸಿದ್ದು
ಕೈಸರೈಯದಲ್ಲಿ ಕೊರ್ನೇಲ್ಯ ಎಂಬುವನಿದ್ದನು. “ಇಟಲಿಯ ದಳ” ಎಂದು ಹೆಸರಿನ ದಳಕ್ಕೆ ಅವನು ಶತಾಧಿಪತಿ. ಅವನೂ ಅವನ ಕುಟುಂಬದವರು ಭಕ್ತಿವಂತರೂ ದೇವರಿಗೆ ಭಯಪಡುವವರೂ ಆಗಿದ್ದರು. ಅವನು ಕೊರತೆಯಲ್ಲಿರುವವರಿಗೆ ಧಾರಾಳವಾಗಿ ಕೊಡುತ್ತಿದ್ದನು. ಅವನು ಅನುದಿನವೂ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದನು. ಒಂದು ದಿನ ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ ಅವನಿಗೆ ಒಂದು ದರ್ಶನವಾಯಿತು. ತನ್ನ ಬಳಿಗೆ ಒಬ್ಬ ದೇವದೂತನು ಬಂದು, “ಕೊರ್ನೇಲ್ಯನೇ!” ಎಂದು ಕರೆಯುವ ದೇವದೂತನನ್ನು ಸ್ಪಷ್ಟವಾಗಿ ಕಂಡನು.
ಕೊರ್ನೇಲ್ಯನು ಭಯದಿಂದ ದೇವದೂತನನ್ನೇ ದೃಷ್ಟಿಸಿ ನೋಡಿ, “ಏನು ಸ್ವಾಮೀ?” ಎಂದು ಕೇಳಲು,
“ನಿನ್ನ ಪ್ರಾರ್ಥನೆಗಳು, ಬಡವರಿಗೆ ನೀನು ಕೊಟ್ಟ ದಾನಗಳು ದೇವರ ಸನ್ನಿಧಿಗೆ ಜ್ಞಾಪಕಾರ್ಥ ಅರ್ಪಣೆಗಳಾಗಿ ಬಂದಿವೆ. ಈಗ ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ, ಪೇತ್ರ ಎಂದು ಕರೆಯಲಾಗುವ ಸೀಮೋನನನ್ನು ಇಲ್ಲಿಗೆ ಕರೆದುಕೊಂಡು ಬರಲು ಹೇಳು. ಚರ್ಮಕಾರನಾದ ಸೀಮೋನನ ಮನೆಯಲ್ಲಿ ಅವನು ಇಳಿದುಕೊಂಡಿದ್ದಾನೆ. ಆ ಮನೆ ಸಮುದ್ರ ತೀರದಲ್ಲಿದೆ,” ಎಂದು ದೇವದೂತನು ಹೇಳಿದನು.
ತನ್ನೊಂದಿಗೆ ಮಾತನಾಡಿದ ದೇವದೂತನು ಅದೃಶ್ಯವಾದ ಮೇಲೆ ಕೊರ್ನೇಲ್ಯನು ತನ್ನ ಇಬ್ಬರು ಸೇವಕರನ್ನು ಮತ್ತು ತನ್ನ ಪರಿಚಾರಕರಲ್ಲಿ ಭಕ್ತಿವಂತನಾದ ಒಬ್ಬ ಸಿಪಾಯಿಯನ್ನು ಕರೆದು, ಸಂಭವಿಸಿದ್ದೆಲ್ಲವನ್ನು ಅವರಿಗೆ ವಿವರಿಸಿ, ಅವರನ್ನು ಯೊಪ್ಪಕ್ಕೆ ಕಳುಹಿಸಿದನು.
ಪೇತ್ರನಿಗಾದ ದರ್ಶನ
ಮಾರನೆಯ ದಿನ ಅವರು ಪ್ರಯಾಣಮಾಡಿ ಮಧ್ಯಾಹ್ನದ ಸಮಯ ಯೊಪ್ಪ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆಗತಾನೇ ಪೇತ್ರನು ಪ್ರಾರ್ಥಿಸಲು ಮಾಳಿಗೆಯ ಮೇಲಕ್ಕೆ ಹೋದನು. 10 ಅವನಿಗೆ ಹಸಿವಾಗಿ ಏನನ್ನಾದರೂ ತಿನ್ನಬೇಕೆನಿಸಿತು. ಊಟ ಸಿದ್ಧತೆಯಾಗುತ್ತಿದ್ದಾಗ ಅವನು ಧ್ಯಾನ ಪರವಶನಾದನು. 11 ಪರಲೋಕವು ತೆರೆಯಲಾಗಿ ನಾಲ್ಕು ಮೂಲೆಗಳನ್ನು ಹಿಡಿದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಭೂಮಿಯ ಮೇಲೆ ಇಳಿಯುವದನ್ನು ಕಂಡನು. 12 ಎಲ್ಲಾ ಜಾತಿಯ ನಾಲ್ಕು ಕಾಲಿನ ಪ್ರಾಣಿಗಳು, ಭೂಮಿಯ ಮೇಲೆ ಹರಿದಾಡುವ ಸರೀಸೃಪಗಳು, ಹಾರಾಡುವ ಪಕ್ಷಿಗಳು ಅದರಲ್ಲಿದ್ದವು. 13 ಆಗ, “ಪೇತ್ರನೇ, ಎದ್ದೇಳು, ಕೊಂದು ತಿನ್ನು,” ಎಂಬ ವಾಣಿ ಅವನಿಗೆ ಕೇಳಿಸಿತು.
14 ಆದರೆ ಪೇತ್ರನು, “ಸ್ವಾಮಿ, ನನ್ನಿಂದಾಗದು! ಅಶುದ್ಧವಾದದ್ದನ್ನೂ ನಿಷಿದ್ಧವಾದದ್ದನ್ನೂ ನಾನೆಂದೂ ತಿಂದವನಲ್ಲ,” ಎಂದನು.
15 ವಾಣಿಯು ಎರಡನೆಯ ಬಾರಿಗೆ, “ದೇವರು ಶುದ್ಧೀಕರಿಸಿದ ಯಾವುದನ್ನೂ ಅಶುದ್ಧವೆನ್ನಬೇಡ,” ಎಂದಿತು.
16 ಹೀಗೆ ಮೂರು ಸಾರಿ ನಡೆದಮೇಲೆ, ಕೂಡಲೇ ಆ ಜೋಳಿಗೆಯನ್ನು ಪರಲೋಕಕ್ಕೆ ಎತ್ತಿಕೊಳ್ಳಲಾಯಿತು.
17 ಈ ದರ್ಶನದ ಅರ್ಥವೇನೆಂದು ಪೇತ್ರನು ಯೋಚಿಸುತ್ತಿರಲು, ಇಗೋ, ಕೊರ್ನೇಲ್ಯನು ಕಳುಹಿಸಿದ ಜನರು ಸೀಮೋನನ ಮನೆಯನ್ನು ಕಂಡುಕೊಂಡು ಅಲ್ಲಿ ದ್ವಾರದ ಬಳಿಯಲ್ಲಿ ನಿಂತಿದ್ದರು. 18 ಅವರು ಪೇತ್ರನು ಎಂದು ಕರೆಯಲಾಗುವ ಸೀಮೋನ ಅಲ್ಲಿ ಇಳಿದುಕೊಂಡಿರುವನೋ ಎಂದು ವಿಚಾರಿಸಿದರು.
19 ಪೇತ್ರನು ಇನ್ನೂ ಆ ದರ್ಶನದ ಬಗ್ಗೆ ಯೋಚಿಸುತ್ತಿರಲು, ಪವಿತ್ರಾತ್ಮ ದೇವರು ಅವನಿಗೆ, “ಸೀಮೋನನೇ ಇಗೋ, ಮೂವರು ನಿನ್ನನ್ನು ಹುಡುಕುತ್ತಾ ಬಂದಿದ್ದಾರೆ. 20 ಎದ್ದೇಳು, ಕೆಳಗಿಳಿದು ಹೋಗು. ಅವರ ಜೊತೆಯಲ್ಲಿ ಹೋಗಲು ಹಿಂಜರಿಯಬೇಡ, ನಾನೇ ಅವರನ್ನು ಕಳುಹಿಸಿರುವೆ,” ಎಂದರು.
21 ಪೇತ್ರನು ಕೆಳಗಿಳಿದು ಹೋಗಿ, ಅವರಿಗೆ, “ನೀವು ಹುಡುಕುತ್ತಿರುವವನು ನಾನೇ. ನೀವು ಬಂದಿರುವ ಕಾರಣವೇನು?” ಎಂದು ಕೇಳಿದನು.
22 ಅವರು, “ಕೊರ್ನೇಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನು, ದೇವರಿಗೆ ಭಯಪಡುವವನು, ಯೆಹೂದ್ಯ ಜನರೆಲ್ಲರೂ ಅವನನ್ನು ಗೌರವಿಸುತ್ತಾರೆ. ನೀನು ಹೇಳುವಂಥದ್ದನ್ನು ಕೇಳಲಿಕ್ಕಾಗಿ ನಿನ್ನನ್ನು ಅಲ್ಲಿಗೆ ಕರೆಯಿಸಬೇಕೆಂದು ಒಬ್ಬ ಪರಿಶುದ್ಧ ದೇವದೂತನಿಂದ ಆದೇಶಪಡೆದಿದ್ದಾನೆ,” ಎಂದರು. 23 ಪೇತ್ರನು ಅವರನ್ನು ತನ್ನ ಅತಿಥಿಗಳಾಗಿರಲು ಮನೆಯೊಳಗೆ ಕರೆದನು.
ಕೊರ್ನೇಲ್ಯನ ಮನೆಯಲ್ಲಿ ಪೇತ್ರನು
ಮರುದಿನ ಪೇತ್ರನು ಅವರೊಂದಿಗೆ ಪ್ರಯಾಣ ಬೆಳೆಸಿದನು. ಯೊಪ್ಪದಲ್ಲಿಯ ಕೆಲವು ಸಹೋದರರು ಅವನೊಂದಿಗೆ ಹೊರಟರು. 24 ಮರುದಿನ ಅವನು ಕೈಸರೈಯವನ್ನು ತಲುಪಿದನು ಮತ್ತು ಕೊರ್ನೇಲ್ಯನು ಅವರಿಗಾಗಿ ಕಾಯುತ್ತಿದ್ದನು. ತನ್ನ ಬಂಧುಗಳನ್ನು ಹತ್ತಿರದ ಸ್ನೇಹಿತರನ್ನು ಕರೆಯಿಸಿದ್ದನು. 25 ಆಗ ಪೇತ್ರನು ಮನೆಯಲ್ಲಿ ಪ್ರವೇಶಿಸುತ್ತಿದ್ದಂತೆ ಕೊರ್ನೇಲ್ಯನು ಅವನನ್ನು ಎದುರುಗೊಂಡು ಅವನ ಮುಂದೆ ಪಾದಕ್ಕೆರಗಿ ಸಾಷ್ಟಾಂಗ ನಮಸ್ಕಾರಮಾಡಿದನು. 26 ಆದರೆ ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದೇಳು, ನಾನೂ ಒಬ್ಬ ಮನುಷ್ಯನೇ,” ಎಂದು ಹೇಳಿದನು.
27 ಅವನೊಂದಿಗೆ ಮಾತನಾಡುತ್ತಾ ಪೇತ್ರನು ಮನೆಯೊಳಗೆ ಹೋಗಿ ಅಲ್ಲಿ ಜನರ ದೊಡ್ಡ ಗುಂಪೇ ಇರುವುದನ್ನು ಕಂಡನು. 28 ಪೇತ್ರನು ಅವರಿಗೆ: “ಯೆಹೂದ್ಯನು ಯೆಹೂದ್ಯರಲ್ಲದವರೊಂದಿಗೆ ಸೇರಿ, ಅವರನ್ನು ಭೇಟಿ ಮಾಡುವುದಾಗಲಿ ನಮ್ಮ ಯೆಹೂದಿ ನಿಯಮಕ್ಕೆ ವಿರೋಧವಾದದ್ದು ಎಂದು ನಿಮಗೆಲ್ಲರಿರೂ ತಿಳಿದೇ ಇದೆ. ಆದರೆ ಯಾವ ಮನುಷ್ಯನನ್ನೂ ಅಶುದ್ಧನು ಇಲ್ಲವೆ ನಿಷಿದ್ಧವಾದವನು ಎಂದು ಕರೆಯಬಾರದು ಎಂದು ದೇವರು ನನಗೆ ತೋರಿಸಿಕೊಟ್ಟಿದ್ದಾರೆ. 29 ಆದ್ದರಿಂದ ನನ್ನನ್ನು ಕರೆಕಳುಹಿಸಿದಾಗ ಯಾವ ಆಕ್ಷೇಪಣೆ ಮಾಡದೆ ಇಲ್ಲಿಗೆ ಬಂದಿದ್ದೇನೆ. ನನ್ನನ್ನು ಕರೆಕಳುಹಿಸಿದ ಕಾರಣವನ್ನು ಈಗ ನಾನು ತಿಳಿಯಬಹುದೋ?” ಎಂದನು.
30 ಆಗ ಕೊರ್ನೇಲ್ಯನು, “ನಾಲ್ಕು ದಿನಗಳ ಹಿಂದೆ ಈ ಸಮಯದಲ್ಲಿ ಅಂದರೆ, ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ನಾನು ನನ್ನ ಮನೆಯಲ್ಲಿದ್ದುಕೊಂಡು ಪ್ರಾರ್ಥನೆ ಮಾಡುತ್ತಿದ್ದೆನು. ಆಗ ಫಕ್ಕನೆ ಹೊಳೆಯುತ್ತಿರುವ ವಸ್ತ್ರ ಧರಿಸಿದ್ದ ಒಬ್ಬನು ನನ್ನೆದುರು ಬಂದು ನಿಂತುಕೊಂಡನು. 31 ಅವನು ನನಗೆ, ‘ಕೊರ್ನೇಲ್ಯನೇ, ದೇವರು ನಿನ್ನ ಪ್ರಾರ್ಥನೆ ಕೇಳಿದ್ದಾರೆ. ಬಡವರಿಗೆ ಕೊಟ್ಟ ನಿನ್ನ ದಾನಗಳನ್ನು ಜ್ಞಾಪಿಸಿಕೊಂಡಿದ್ದಾರೆ. 32 ಪೇತ್ರನೆಂದು ಹೆಸರಿನ ಸೀಮೋನನನ್ನು ಕರೆದುಕೊಂಡು ಬರಲು ಯೊಪ್ಪಕ್ಕೆ ಕೆಲವರನ್ನು ಕಳುಹಿಸು. ಪೇತ್ರನು ಸಮುದ್ರ ತೀರದಲ್ಲಿರುವ ಚರ್ಮಕಾರನಾದ ಸೀಮೋನನ ಮನೆಯಲ್ಲಿ ಇಳಿದುಕೊಂಡಿದ್ದಾನೆ,’ ಎಂದು ಹೇಳಿದನು. 33 ಆದ್ದರಿಂದ ನಾನು ನಿನ್ನನ್ನು ಕೂಡಲೇ ಕರೆದುಕೊಂಡು ಬರಲು ಕೆಲವರನ್ನು ಕಳುಹಿಸಿದೆ. ನೀನು ಬಂದಿರುವುದು ಒಳ್ಳೆಯದೇ ಆಯಿತು. ಕರ್ತ ಯೇಸು ನಮಗೆ ಏನು ಹೇಳಬೇಕೆಂದು ನಿನಗೆ ಆಜ್ಞಾಪಿಸಿರುವರೋ ಅದೆಲ್ಲವನ್ನು ಕೇಳಲು ಈಗ ನಾವು ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.
34 ಆಗ ಪೇತ್ರನು ಮಾತನಾಡಲು ಪ್ರಾರಂಭಿಸಿ: “ದೇವರು ಪಕ್ಷಪಾತಿಯಲ್ಲವೆಂದು ಈಗ ನನಗೆ ಮನದಟ್ಟಾಗಿದೆ. 35 ದೇವರು ಪ್ರತಿಯೊಂದು ದೇಶದಲ್ಲಿಯೂ ತಮಗೆ ಭಯಪಡುವ ಮತ್ತು ಸರಿಯಾದದ್ದನ್ನು ಮಾಡುವ ಜನರನ್ನು ಸ್ವೀಕರಿಸುತ್ತಾರೆ. 36 ಸರ್ವಸೃಷ್ಟಿಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮುಖಾಂತರ ಸಮಾಧಾನದ ಶುಭಸಮಾಚಾರ ಹೇಳುತ್ತಾ, ಇಸ್ರಾಯೇಲ್ ಜನರಿಗೆ ದೇವರು ಕಳುಹಿಸಿದ ವಾಕ್ಯವನ್ನು ನೀವು ತಿಳಿದಿದ್ದೀರಿ. 37 ಯೋಹಾನನು ದೀಕ್ಷಾಸ್ನಾನದ ಬಗ್ಗೆ ಬೋಧಿಸಿದ ನಂತರ ಗಲಿಲಾಯದಲ್ಲಿ ಪ್ರಾರಂಭವಾಗಿ ಯೂದಾಯದಲ್ಲೆಲ್ಲಾ ಏನು ಸಂಭವಿಸಿತೆಂಬುದನ್ನೂ ನೀವು ತಿಳಿದಿದ್ದೀರಿ. 38 ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮರಿಂದಲೂ ಶಕ್ತಿಯಿಂದಲೂ ಅಭಿಷೇಕಿಸಿದ್ದರು. ಮಾತ್ರವಲ್ಲದೆ, ದೇವರು ಯೇಸುವಿನೊಡನೆ ಇದ್ದುದರಿಂದ, ಅವರು ಬೇರೆ ಬೇರೆ ಕಡೆಗಳಿಗೆ ಹೋಗಿ ಒಳಿತನ್ನು ಮಾಡಿ, ಪಿಶಾಚನಿಂದ ಪೀಡಿತರಾದವರನ್ನು ಗುಣಪಡಿಸುತ್ತಾ ಸಂಚರಿಸಿದ್ದನ್ನು ನೀವು ಬಲ್ಲಿರಿ.
39 “ಯೆಹೂದ್ಯರ ನಾಡಿನಲ್ಲಿ ಮತ್ತು ಯೆರೂಸಲೇಮ ಪಟ್ಟಣದಲ್ಲಿಯೂ ಯೇಸು ಮಾಡಿದ ಪ್ರತಿಯೊಂದಕ್ಕೂ ನಾವು ಸಾಕ್ಷಿಗಳು. ಮರದ ಕಂಬಕ್ಕೆ ತೂಗುಹಾಕಿ ಯೇಸುವನ್ನು ನಾಯಕರು ಕೊಂದುಹಾಕಿದರು, 40 ಆದರೆ ಮೂರನೆಯ ದಿನದಲ್ಲಿ ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಏಳುವಂತೆ ಮತ್ತು ಕಾಣಿಸಿಕೊಳ್ಳುವಂತೆ ಮಾಡಿದರು. 41 ಯೇಸುವನ್ನು ಎಲ್ಲರೂ ನೋಡಲಿಲ್ಲ. ಆದರೆ ದೇವರು ಮೊದಲೇ ನೇಮಿಸಿಕೊಂಡ ಸಾಕ್ಷಿಗಳಾಗಿರುವ ನಮಗೆ ಕಾಣಿಸಿಕೊಂಡರು. ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದು ಬಂದ ತರುವಾಯ ಅವರೊಡನೆ ಊಟ, ಪಾನಮಾಡಿದ ನಮಗೆ ಕಾಣಿಸಿಕೊಂಡರು. 42 ಜೀವಿಸುವವರಿಗೂ ಸತ್ತವರಿಗೂ ನ್ಯಾಯಾಧೀಶರಾಗಿ ದೇವರಿಂದ ನೇಮಕವಾದವರು ಯೇಸುವೇ ಎಂದು ನಾವು ಜನರಿಗೆ ಬೋಧಿಸಿ ಸಾಕ್ಷಿ ಕೊಡಬೇಕೆಂದೂ ಕ್ರಿಸ್ತ ಯೇಸು ನಮಗೆ ಆಜ್ಞಾಪಿಸಿದ್ದಾರೆ. 43 ಯೇಸುವಿನಲ್ಲಿ ನಂಬಿಕೆಯನ್ನಿಡುವ ಪ್ರತಿಯೊಬ್ಬನು ಅವರ ಹೆಸರಿನ ಮುಖಾಂತರ ಪಾಪಗಳ ಕ್ಷಮಾಪಣೆ ಹೊಂದುವನು ಎಂದು ಅವರ ಬಗ್ಗೆ ಎಲ್ಲಾ ಪ್ರವಾದಿಗಳು ಸಾಕ್ಷಿಕೊಟ್ಟಿದ್ದಾರೆ,” ಎಂದನು.
44 ಪೇತ್ರನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ, ಆ ಸಂದೇಶವನ್ನು ಕೇಳಿದವರೆಲ್ಲರ ಮೇಲೆ ಪವಿತ್ರಾತ್ಮ ದೇವರು ಇಳಿದು ಬಂದರು. 45 ಯೆಹೂದ್ಯರಲ್ಲದವರ ಮೇಲೆಯೂ ಪವಿತ್ರಾತ್ಮ ದೇವರು ವರವನ್ನು ಸುರಿಸಿದ್ದಕ್ಕೆ ಪೇತ್ರನೊಂದಿಗೆ ಸುನ್ನತಿಯಾದ ವಿಶ್ವಾಸಿಗಳು ಅತ್ಯಾಶ್ಚರ್ಯಪಟ್ಟರು. 46 ಏಕೆಂದರೆ ಅವರು ಅನ್ಯಭಾಷೆಗಳಲ್ಲಿ ಮಾತನಾಡುತ್ತಾ ದೇವರನ್ನು ಕೊಂಡಾಡುತ್ತಿದ್ದುದನ್ನು ಅವರು ಕೇಳಿಸಿಕೊಂಡರು,
ಆಗ ಪೇತ್ರನು, 47 “ನೀರಿನಿಂದ ದೀಕ್ಷಾಸ್ನಾನವನ್ನು ಹೊಂದದಂತೆ ಯಾರಾದರೂ ಅಡ್ಡಿಮಾಡುವವರಿದ್ದಾರೋ? ನಾವು ಹೊಂದಿದಂತೆಯೇ ಇವರು ಸಹ ಪವಿತ್ರಾತ್ಮ ದೇವರನ್ನು ಹೊಂದಿಕೊಂಡಿದ್ದಾರಲ್ಲಾ?” ಎಂದು ಹೇಳಿದನು. 48 ಆಗ ಅವರು ಕ್ರಿಸ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಹೊಂದುವಂತೆ ಆಜ್ಞಾಪಿಸಿದನು. ಅನಂತರ ಕೆಲವು ದಿನ ಅಲ್ಲಿಯೇ ಇರಬೇಕೆಂದು ಅವರು ಪೇತ್ರನನ್ನು ಕೇಳಿಕೊಂಡರು.