22
“ಸಹೋದರರೇ, ತಂದೆಗಳೇ, ಈಗ ನಾನು ನಿಮಗೆ ಮಾಡುವ ಪ್ರತಿವಾದಕ್ಕೆ ಕಿವಿಗೊಡಿರಿ,” ಎಂದು ಪ್ರಾರಂಭಿಸಿದನು.
ಅವನು ತಮ್ಮೊಂದಿಗೆ ಹೀಬ್ರೂ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿದಾಗ ಅವರು ಮತ್ತಷ್ಟು ನಿಶ್ಶಬ್ದರಾದರು.
ಆಗ ಪೌಲನು: “ನಾನು ಕಿಲಿಕ್ಯದ ತಾರ್ಸದಲ್ಲಿ ಜನಿಸಿದ ಯೆಹೂದ್ಯನು, ಈ ಪಟ್ಟಣದಲ್ಲಿಯೇ ಬೆಳೆದವನು, ಗಮಲಿಯೇಲನ ಪಾದ ಸನ್ನಿಧಿಯಲ್ಲಿ ನಮ್ಮ ಪಿತೃಗಳ ನಿಯಮವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದೆ. ದೇವರ ವಿಷಯದಲ್ಲಿ, ಇಂದು ನೀವೆಲ್ಲರೂ ಇರುವಂತೆಯೇ ನಾನೂ ಆಸಕ್ತಿವುಳ್ಳವನಾಗಿದ್ದೆನು. ಈ ಮಾರ್ಗದವರನ್ನು ಸಾಯುವಷ್ಟು ಹಿಂಸಿಸಿದೆನು. ಸ್ತ್ರೀಪುರುಷರೆನ್ನದೆ ಅವರನ್ನು ಬಂಧಿಸಿ ಅವರನ್ನು ಸೆರೆಮನೆಗೆ ಹಾಕಿಸುತ್ತಿದ್ದೆನು, ಮಹಾಯಾಜಕನೂ ಹಿರಿಸಭೆಯವರೆಲ್ಲರೂ ಇದಕ್ಕೆ ಸಾಕ್ಷಿ. ಅವರಿಂದಲೇ ದಮಸ್ಕದಲ್ಲಿದ್ದ ಸಹೋದರರಿಗೆ ಪತ್ರಗಳನ್ನು ತೆಗೆದುಕೊಂಡು, ಅಲ್ಲಿಗೆ ಹೋದವರನ್ನೂ ದಂಡಿಸುವುದಕ್ಕಾಗಿಯೂ ಸೆರೆಹಿಡಿದು ಯೆರೂಸಲೇಮಿಗೆ ತರುವುದಕ್ಕಾಗಿಯೂ ದಮಸ್ಕಕ್ಕೆ ಪ್ರಯಾಣಮಾಡಿದೆನು.
“ಸುಮಾರು ಮಧ್ಯಾಹ್ನದ ಸಮಯಕ್ಕೆ ನಾನು ದಮಸ್ಕದ ಹತ್ತಿರದಲ್ಲಿದ್ದೆನು. ಇದ್ದಕ್ಕಿದ್ದಂತೆ ಆಕಾಶದಿಂದ ಮಹಾ ಬೆಳಕು ನನ್ನ ಸುತ್ತಲೂ ಹೊಳೆಯಿತು. ನಾನು ನೆಲದ ಮೇಲೆ ಬಿದ್ದೆನು. ಆಗ, ‘ಸೌಲನೇ, ಸೌಲನೇ, ಏಕೆ ನನ್ನನ್ನು ಹಿಂಸೆಪಡಿಸುತ್ತೀ?’ ಎಂದು ಒಂದು ಸ್ವರವು ನನಗೆ ಹೇಳುವುದನ್ನು ಕೇಳಿಸಿಕೊಂಡೆನು.
“ನಾನು, ‘ಸ್ವಾಮಿ, ತಾವು ಯಾರು?’ ಎಂದು ಕೇಳಲು,
“ ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದು ಅವರು ನನಗೆ ಹೇಳಿದರು. ನನ್ನ ಜೊತೆಯಲ್ಲಿದ್ದವರು ಬೆಳಕನ್ನು ಕಂಡರು. ಆದರೆ ನನ್ನ ಕೂಡ ಮಾತನಾಡುತ್ತಿದ್ದ ಸ್ವರವು ಅವರಿಗೆ ಕೇಳಿಸಲಿಲ್ಲ.
10 “ಆಗ ನಾನು, ‘ಸ್ವಾಮಿ, ನಾನೇನು ಮಾಡಬೇಕು?’ ಎಂದು ಕೇಳಲು,
“ ‘ಎದ್ದೇಳು, ದಮಸ್ಕದೊಳಗೆ ಹೋಗು, ನೀನು ಏನೇನು ಮಾಡಬೇಕಾಗಿದೆಯೋ ಅದೆಲ್ಲವನ್ನು ನಿನಗೆ ಅಲ್ಲಿ ಹೇಳಲಾಗುವುದು,’ ಎಂದು ಕರ್ತ ಯೇಸು ನನಗೆ ಹೇಳಿದರು. 11 ಆ ಬೆಳಕಿನ ಉಜ್ವಲ ಪ್ರಕಾಶದ ನಿಮಿತ್ತ ನನ್ನ ಕಣ್ಣು ಕುರುಡಾಗಿದ್ದರಿಂದ ನನ್ನ ಜೊತೆಯಲ್ಲಿದ್ದವರು ನನ್ನ ಕೈಹಿಡಿದು ದಮಸ್ಕದೊಳಗೆ ನಡೆಸಿಕೊಂಡು ಹೋದರು.
12 “ಅನನೀಯ ಎಂಬ ಹೆಸರಿನವನೊಬ್ಬನು ನನ್ನ ಬಳಿ ಬಂದನು. ಅವನು ಮೋಶೆಯ ನಿಯಮಕ್ಕನುಗುಣವಾಗಿ ಭಕ್ತಿವಂತನೂ ಆ ಸ್ಥಳದ ಯೆಹೂದ್ಯರೆಲ್ಲರಿಂದ ಸಾಕ್ಷಿಹೊಂದಿದವನೂ ಆಗಿದ್ದನು. 13 ಅವನು ನನ್ನ ಬಳಿ ನಿಂತುಕೊಂಡು, ‘ಸಹೋದರ ಸೌಲನೇ, ನೀನು ದೃಷ್ಟಿಯನ್ನು ಪಡೆದುಕೋ,’ ಎಂದನು. ಆ ಗಳಿಗೆಯಲ್ಲಿಯೇ ನಾನು ದೃಷ್ಟಿಯನ್ನು ಪಡೆದು ಅವನನ್ನು ಕಂಡೆನು.
14 “ಆಗ ಅವನು, ‘ನಮ್ಮ ಪಿತೃಗಳ ದೇವರು ತಮ್ಮ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕಾಗಿಯೂ ನೀತಿವಂತ ಆಗಿರುವ ಒಬ್ಬರನ್ನು ಕಾಣುವುದಕ್ಕಾಗಿಯೂ ಅವರ ಬಾಯಿಂದ ಒಂದು ಮಾತನ್ನು ಕೇಳುವುದಕ್ಕಾಗಿಯೂ ನಿನ್ನನ್ನು ಮುಂದಾಗಿಯೇ ನೇಮಿಸಿದ್ದಾರೆ. 15 ಏಕೆಂದರೆ ನೀನು ಕಂಡದ್ದಕ್ಕೂ ಕೇಳಿದ್ದಕ್ಕೂ ಎಲ್ಲಾ ಜನರಿಗೆ ಅವರ ಸಾಕ್ಷಿಯಾಗಿರುವೆ. 16 ಈಗ ನೀನು ತಡಮಾಡುವುದೇಕೆ? ಎದ್ದೇಳು, ಅವರ ಹೆಸರನ್ನು ಕರೆದು, ದೀಕ್ಷಾಸ್ನಾನವನ್ನು ಹೊಂದಿ ನಿನ್ನ ಪಾಪಗಳನ್ನು ತೊಳೆದುಕೋ,’ ಎಂದನು.
17 “ನಾನು ಯೆರೂಸಲೇಮಿಗೆ ಹಿಂದಿರುಗಿ ಬಂದು ದೇವಾಲಯದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಆತ್ಮಪರವಶನಾದೆನು. 18 ಆಗ ಕರ್ತ ಯೇಸು ನನ್ನೊಂದಿಗೆ ಮಾತನಾಡುತ್ತಿರುವುದನ್ನು ಕಂಡೆನು. ಅವರು, ‘ತಡಮಾಡದೆ! ತಕ್ಷಣವೇ ಯೆರೂಸಲೇಮನ್ನು ಬಿಟ್ಟು ಹೊರಟು ಹೋಗು, ಏಕೆಂದರೆ ನೀನು ನನ್ನನ್ನು ಕುರಿತು ಹೇಳುವ ಸಾಕ್ಷಿಯನ್ನು ಅವರು ಸ್ವೀಕರಿಸುವುದಿಲ್ಲ,’ ಎಂದರು.
19 “ಅದಕ್ಕೆ ನಾನು, ‘ಸ್ವಾಮಿ, ಎಲ್ಲಾ ಸಭಾಮಂದಿರಗಳಲ್ಲಿಯೂ ನಿಮ್ಮಲ್ಲಿ ನಂಬಿಕೆಯಿಟ್ಟವರನ್ನು ಬಂಧಿಸಿ, ಹೊಡೆದು ಸೆರೆಮನೆಗೆ ಹಾಕಿಸುತ್ತಿದ್ದೇನೆಂದು ಈ ಜನರು ಬಲ್ಲರು. 20 ನಿಮ್ಮ ಸಾಕ್ಷಿಯಾದ ಸ್ತೆಫನನ ರಕ್ತ ಸುರಿಸಿದಾಗ ಅದಕ್ಕೆ ನಾನೂ ಸಮ್ಮತಿ ಕೊಟ್ಟು ಅವನನ್ನು ಕೊಲ್ಲುವವರ ಬಟ್ಟೆಗಳನ್ನು ಕಾಯುತ್ತಾ ನಿಂತಿದ್ದೆನು,’ ಎಂದೆನು.
21 “ಆಗ ಕರ್ತ ಯೇಸುವು, ‘ಹೋಗು, ನಾನು ಯೆಹೂದ್ಯರಲ್ಲದವರ ಬಳಿಗೆ ನಿನ್ನನ್ನು ದೂರಪ್ರದೇಶಗಳಿಗೆ ಕಳುಹಿಸುವೆನು,’ ಎಂದು ನನಗೆ ಹೇಳಿದರು.”
ರೋಮನ್ ಪೌರನಾದ ಪೌಲನು
22 ಇದನ್ನು ಹೇಳುವವರೆಗೆ ಜನರು ಪೌಲನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಅನಂತರ ಅವರು ತಮ್ಮ ಸ್ವರವೆತ್ತಿ, “ಇಂಥವನನ್ನು ಭೂಲೋಕದಿಂದ ತೊಲಗಿಸಿರಿ! ಇವನು ಜೀವಿಸುವುದಕ್ಕೆ ಯೋಗ್ಯನಲ್ಲ!” ಎಂದು ಕೂಗಿದರು.
23 ಅವರು ಅರಚುತ್ತ ತಮ್ಮ ಮೇಲಂಗಿಗಳನ್ನು ಹರಿಯುತ್ತ ಗಾಳಿಯಲ್ಲಿ ಮಣ್ಣು ತೂರುತ್ತಿರಲು, 24 ಸಹಸ್ರಾಧಿಪತಿಯು ಪೌಲನನ್ನು ಸೈನಿಕರ ಪಾಳ್ಯದೊಳಗೆ ಒಯ್ಯಬೇಕೆಂದು, ಅವನನ್ನು ಕೊರಡೆಗಳಿಂದ ಹೊಡೆದು ಯಾವ ಅಪರಾಧಕ್ಕಾಗಿ ಜನರು ಅವನಿಗೆ ವಿರೋಧವಾಗಿ ಅರಚುತ್ತಿದ್ದರು ಎಂಬುದನ್ನು ಅವನಿಂದ ವಿಚಾರಿಸಬೇಕೆಂದು ಆಜ್ಞಾಪಿಸಿದನು. 25 ಆದರೆ ಅವರು ಅವನನ್ನು ಹೊಡೆಯುವುದಕ್ಕೆ ಬಾರುಕೋಲನ್ನು ಚಾಚಿದಾಗ ಪೌಲನು ಅಲ್ಲಿ ನಿಂತಿದ್ದ ಶತಾಧಿಪತಿಗೆ, “ಅಪರಾಧಿಯೆಂದು ಸಿದ್ಧವಾಗುವ ಮೊದಲೇ ರೋಮ್ ಪೌರನನ್ನು ಕೊರಡೆಗಳಿಂದ ಹೊಡೆಯುವುದು ನ್ಯಾಯವಾದದ್ದೋ?” ಎಂದು ಕೇಳಿದನು.
26 ಶತಾಧಿಪತಿ ಈ ಮಾತುಗಳನ್ನು ಕೇಳಿದಾಗ, ಸಹಸ್ರಾಧಿಪತಿಯ ಬಳಿಗೆ ಹೋಗಿ ಇದನ್ನು ವರದಿ ಮಾಡಿ, “ಇವನು ರೋಮ್ ಪೌರನು. ಈಗ ನೀನೇನು ಮಾಡಬೇಕೆಂದಿದ್ದೀ?” ಎಂದು ಅವನನ್ನು ಪ್ರಶ್ನಿಸಿದನು.
27 ಸಹಸ್ರಾಧಿಪತಿಯು ಪೌಲನ ಬಳಿಗೆ ಹೋಗಿ, “ನೀನು ರೋಮ್ ಪೌರನೋ, ಹೇಳು?” ಎಂದು ಕೇಳಿದ್ದಕ್ಕೆ,
ಅವನು, “ಹೌದು,” ಎಂದನು.
28 “ನಾನು ಈ ಪೌರತ್ವ ಪಡೆಯಬೇಕಾದರೆ ಅದಕ್ಕೆ ನಾನು ಬಹಳ ಹಣ ಕೊಡಬೇಕಾಯಿತು,” ಎಂದು ಸಹಸ್ರಾಧಿಪತಿಯು ಹೇಳಲು, ಪೌಲನು,
“ಆದರೆ ನಾನು ಹುಟ್ಟಿದ ದಿನದಿಂದಲೇ ರೋಮಿನ ಪೌರನಾಗಿದ್ದೇನೆ,” ಎಂದನು.
29 ಪೌಲನನ್ನು ಪ್ರಶ್ನಿಸಲು ಬಂದವರು ತಕ್ಷಣವೇ ಬಿಟ್ಟುಹೋದರು. ಮಾತ್ರವಲ್ಲದೆ ಪೌಲನು ರೋಮ್ ಪೌರನೆಂದು ಗ್ರಹಿಸಿದ ಅವನನ್ನು ಬೇಡಿಗಳಿಂದ ಬಂಧಿಸಿದ್ದರಿಂದ ಸಹಸ್ರಾಧಿಪತಿಯೂ ಭಯಪಟ್ಟನು.
ನ್ಯಾಯಸಭೆಯ ಮುಂದೆ
30 ಯೆಹೂದ್ಯರು ಪೌಲನ ವಿರುದ್ಧ ಏಕೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂಬುದಕ್ಕೆ ನಿಜಸಂಗತಿಯನ್ನು ಕಂಡುಹಿಡಿಯಲು ಸಹಸ್ರಾಧಿಪತಿಯು ಅಪೇಕ್ಷೆಪಟ್ಟನು. ಮರುದಿನ ಪೌಲನನ್ನು ಬಿಡುಗಡೆ ಮಾಡಿ, ಮುಖ್ಯಯಾಜಕರೂ ನ್ಯಾಯಸಭೆಯೂ ಕೂಡಿಬರಬೇಕೆಂದು ಅಪ್ಪಣೆಮಾಡಿದನು. ಆಮೇಲೆ ಪೌಲನನ್ನು ತಂದು ಅವರ ಎದುರಿನಲ್ಲಿ ನಿಲ್ಲಿಸಿದರು.