12
ಆತ್ಮಿಕ ವರಗಳು
ಪ್ರಿಯರೇ, ಈಗ ಆತ್ಮಿಕ ವರಗಳನ್ನು ಕುರಿತು ನೀವು ಅಜ್ಞಾನಿಗಳಾಗಿರಬಾರದೆಂದು ಅಪೇಕ್ಷಿಸುತ್ತೇನೆ. ನೀವು ಕ್ರಿಸ್ತನನ್ನು ನಂಬದಿದ್ದಾಗ, ಹೇಗೆ ಮೂಕ ವಿಗ್ರಹಗಳ ಕಡೆಗೆ ಪ್ರಭಾವಗೊಂಡು ದಾರಿತಪ್ಪಿ ಹೋಗಿದ್ದಿರಿ ಎಂಬುದನ್ನು ಬಲ್ಲಿರಿ. ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ: ದೇವರಾತ್ಮರಿಂದ ಮಾತನಾಡುವ ಯಾವನೂ, “ಯೇಸು ಶಾಪಗ್ರಸ್ತನು,” ಎಂದು ಹೇಳುವುದಿಲ್ಲ. ಪವಿತ್ರಾತ್ಮರಿಂದಲೇ ಹೊರತು, ಯಾವನೂ, “ಯೇಸು ಕರ್ತದೇವರು,” ಎಂದು ಹೇಳಲಾರನು.
ಆತ್ಮಿಕ ವರಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಪವಿತ್ರಾತ್ಮರು ಒಬ್ಬರೇ. ಸೇವೆಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಕರ್ತ ಆಗಿರುವವರು ಒಬ್ಬರೇ. ಕಾರ್ಯರೀತಿಗಳಲ್ಲಿ ಬೇರೆ ಬೇರೆ ವಿಧಗಳಿವೆ, ಎಲ್ಲರಲ್ಲಿಯೂ ಎಲ್ಲಾ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬರೇ.
ಸರ್ವರ ಪ್ರಯೋಜನಕ್ಕಾಗಿ ಪವಿತ್ರಾತ್ಮರ ವರಗಳನ್ನು ಪ್ರತಿಯೊಬ್ಬರಿಗೆ ಕೊಡಲಾಗಿದೆ. ಹೇಗೆಂದರೆ, ಪವಿತ್ರಾತ್ಮ ದೇವರ ಮೂಲಕ ಒಬ್ಬನಿಗೆ ಜ್ಞಾನ ವಾಕ್ಯವು, ಒಬ್ಬನಿಗೆ ಆ ಆತ್ಮರ ಅನುಸಾರವಾಗಿ ವಿದ್ಯಾವಾಕ್ಯವು, ಒಬ್ಬನಿಗೆ ಅದೇ ಆತ್ಮನಿಂದ ನಂಬಿಕೆಯು, ಮತ್ತೊಬ್ಬನಿಗೆ ಅದೇ ಆತ್ಮನಿಂದ ರೋಗ ವಾಸಿಮಾಡುವ ವರಗಳು ಕೊಡಲಾಗಿವೆ. 10 ಒಬ್ಬನಿಗೆ ಅದ್ಭುತಕಾರ್ಯಗಳ ಶಕ್ತಿಯೂ ಒಬ್ಬನಿಗೆ ಪ್ರವಾದನೆಯೂ ಒಬ್ಬನಿಗೆ ಆತ್ಮಗಳನ್ನು ವಿವೇಚಿಸುವ ವರವೂ ಒಬ್ಬನಿಗೆ ವಿವಿಧ ಭಾಷೆಗಳನ್ನಾಡುವ ಶಕ್ತಿಯೂ ಮತ್ತೊಬ್ಬನಿಗೆ ಅನ್ಯಭಾಷೆಗಳ ಅರ್ಥವನ್ನು ಹೇಳುವ ವರವೂ ಕೊಡಲಾಗುತ್ತದೆ. 11 ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಚಿತ್ತಾನುಸಾರ ಪ್ರತಿಯೊಬ್ಬನಿಗೂ ಹಂಚಿಕೊಡುತ್ತಾರೆ.
ಒಂದೇ ದೇಹ ಅನೇಕ ಅಂಗಗಳು
12 ದೇಹವು ಅನೇಕ ಅಂಗಗಳುಳ್ಳದ್ದಾಗಿದ್ದರೂ ಒಂದಾಗಿರುವಂತೆಯೂ, ಅನೇಕ ಅಂಗಗಳೆಲ್ಲವು ಒಂದೇ ದೇಹವನ್ನು ರೂಪಿಸುವಂತೆಯೂ, ಕ್ರಿಸ್ತನ ದೇಹವು ಸಹ ಇರುತ್ತದೆ. 13 ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ಒಂದೇ ದೇಹವಾಗುವಂತೆ, ನಾವೆಲ್ಲರೂ ಒಬ್ಬರೇ ಆತ್ಮದಿಂದ ಸ್ನಾನ ಮಾಡಿಸಿಕೊಂಡೆವು. ನಮ್ಮೆಲ್ಲರಿಗೂ ಒಬ್ಬ ಆತ್ಮವನ್ನು ಪಾನವಾಗಿ ಕೊಡಲಾಗಿದೆ. 14 ದೇಹವು ಒಂದೇ ಅಂಗವಾಗಿರದೆ, ಅನೇಕ ಅಂಗಗಳುಳ್ಳದ್ದಾಗಿದೆ.
15 ಒಂದು ವೇಳೆ ಕಾಲು, “ನಾನು ಕೈಯಲ್ಲದ ಕಾರಣ, ದೇಹಕ್ಕೆ ಸೇರಿಲ್ಲ,” ಎಂದು ಹೇಳಿದರೂ, ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ? 16 ಒಂದು ವೇಳೆ ಕಿವಿ, “ನಾನು ಕಣ್ಣಲ್ಲದ ಕಾರಣ, ದೇಹಕ್ಕೆ ಸೇರಿಲ್ಲ,” ಎಂದು ಹೇಳಿದರೂ ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ? 17 ದೇಹವೆಲ್ಲಾ ಕಣ್ಣಾದರೆ ನಾವು ಕೇಳುವುದೆಲ್ಲಿ? ಅಥವಾ ಅದೆಲ್ಲಾ ಕಿವಿಯಾದರೆ, ಮೂಸಿ ನೋಡುವುದೆಲ್ಲಿ? 18 ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತಮ್ಮ ಇಷ್ಟದ ಪ್ರಕಾರ ದೇಹದಲ್ಲಿ ಇಟ್ಟಿದ್ದಾರೆ. 19 ಅವೆಲ್ಲವೂ ಒಂದೇ ಅಂಗವಾಗಿದ್ದರೆ, ಆಗ ದೇಹವೆಲ್ಲಿ? 20 ಹೀಗೆ ಅಂಗಗಳು ಅನೇಕವಾಗಿದ್ದರೂ, ದೇಹ ಮಾತ್ರ ಒಂದೇ.
21 ಕಣ್ಣು ಕೈಗೆ, “ನೀನು ನನಗೆ ಅವಶ್ಯವಿಲ್ಲ!” ಎಂದು ಹೇಳಲಾಗದು. ತಲೆಯು ಕಾಲುಗಳಿಗೆ, “ನೀನು ನನಗೆ ಅವಶ್ಯವಿಲ್ಲ!” ಎಂದು ಹೇಳಲಾಗದು. 22 ಆದರೆ ದೇಹದಲ್ಲಿ ಬಲಹೀನವಾದವುಗಳೆಂದು ತೋರುವ ಅಂಗಗಳೇ ನಮಗೆ ಎಷ್ಟೋ ಹೆಚ್ಚಾಗಿ ಅವಶ್ಯವಾಗಿವೆ. 23 ಕಡಿಮೆ ಗೌರವವುಳ್ಳವುಗಳೆಂದು ಯೋಚಿಸುವವುಗಳನ್ನು ವಿಶೇಷ ಗೌರವದಿಂದ ನೋಡುತ್ತೇವೆ. ಬಹಿರಂಗಪಡಿಸದ ಅಂಗಗಳನ್ನು ವಿಶೇಷ ಮರ್ಯಾದೆಯಿಂದ ಸಂರಕ್ಷಿಸುತ್ತೇವೆ. 24 ನಾವು ಬಾಹ್ಯ ಅಂಗಗಳಿಗೆ ಹೆಚ್ಚಿನ ವಿಶೇಷತೆಯನ್ನು ಕೊಡುವುದಿಲ್ಲ. ಆದರೆ ಗೌರವ ಕಡಿಮೆಯಿರುವ ಅಂಗಗಳಿಗೆ, ದೇವರು ಹೆಚ್ಚು ಗೌರವವನ್ನು ಕೊಡುವಂತೆ, ಎಲ್ಲಾ ಅಂಗಗಳನ್ನು ಒಟ್ಟಾಗಿ ದೇಹದಲ್ಲಿಟ್ಟಿದ್ದಾರೆ. 25 ಹೀಗೆ ದೇವರು ದೇಹದಲ್ಲಿ ಭಿನ್ನಭೇದವಿಲ್ಲದೇ, ಎಲ್ಲವೂ ಒಂದಕ್ಕೊಂದು ಪರಸ್ಪರ ಚಿಂತಿಸುವುದಾಗಿ ಕೂಡಿ ಹೋಗುವಂತೆ ಸಮಾನವಾಗಿ ಮಾಡಿದ್ದಾರೆ. 26 ದೇಹದ ಒಂದು ಅಂಗ ಬಾಧೆಪಟ್ಟರೆ, ಎಲ್ಲಾ ಅಂಗಗಳು ಬಾಧೆಪಡುತ್ತದೆ. ಒಂದು ಅಂಗಕ್ಕೆ ಗೌರವ ದೊರೆತರೆ, ಅದರೊಂದಿಗೆ ಪ್ರತಿಯೊಂದು ಅಂಗವೂ ಆನಂದಪಡುತ್ತವೆ.
27 ಈಗ ನೀವು ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಆ ದೇಹದ ಅಂಗಗಳಾಗಿದ್ದೀರಿ. 28 ದೇವರು ತಮ್ಮ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಅದ್ಭುತಕಾರ್ಯಗಳನ್ನು ಮಾಡುವವರನ್ನು, ರೋಗಗಳನ್ನು ಗುಣಪಡಿಸುವ ವರವನ್ನು, ಪರೋಪಕಾರಿಗಳನ್ನು, ಆಡಳಿತಗಾರರನ್ನು, ವಿವಿಧ ವಾಣಿಗಳನ್ನಾಡುವವರನ್ನು ನೇಮಿಸಿದ್ದಾರೆ. 29 ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಅದ್ಭುತ ಮಾಡುವವರೋ? 30 ಎಲ್ಲರೂ ರೋಗಗಳನ್ನು ಗುಣಪಡಿಸುವ ವರವನ್ನು ಹೊಂದಿದವರೋ? ಎಲ್ಲರೂ ಪರೋಪಕಾರಿಗಳೋ? ಎಲ್ಲರೂ ಆಡಳಿತಗಾರರೋ? ಎಲ್ಲರೂ ಅನ್ಯಭಾಷೆಗಳನ್ನಾಡುವವರೋ? ಅಥವಾ ಅನ್ಯಭಾಷೆಗಳ ವ್ಯಾಖ್ಯಾನ ಮಾಡುವವರೋ? 31 ಆದರೆ ನೀವು ಆಸಕ್ತಿಯಿಂದ ಶ್ರೇಷ್ಠ ವರಗಳನ್ನು ಅಪೇಕ್ಷಿಸಿರಿ.
ಪ್ರೀತಿಯೇ ಪರಮಶ್ರೇಷ್ಠವಾದದ್ದು
ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.