3
ನಮ್ಮನ್ನು ನಾವೇ ತಿರುಗಿ ಶಿಫಾರಸ್ಸು ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸುತ್ತೇವೋ? ಬೇರೆಯವರಂತೆ ನಿಮಗೆ ತೋರಿಸುವುದಕ್ಕೆ ಯೋಗ್ಯತಾಪತ್ರವು ಬೇಕೋ ಅಥವಾ ನಿಮ್ಮಿಂದ ನಮಗೆ ಯೋಗ್ಯತಾಪತ್ರವು ಬೇಕಾಗಿದೆಯೋ? ನೀವೇ ನಮ್ಮ ಹೃದಯದ ಮೇಲೆ ಎಲ್ಲರೂ ಓದಿ ತಿಳಿದುಕೊಳ್ಳಬಹುದಾದ ಪತ್ರವಾಗಿರುತ್ತೀರಿ. ನಮ್ಮ ಸುವಾರ್ತಾ ಸೇವೆಯ ಫಲಿತಾಂಶವಾಗಿ, ನೀವು ಕ್ರಿಸ್ತ ಯೇಸುವಿನ ಪತ್ರವೆಂದು ಪ್ರಕಟಿಸುತ್ತಿದ್ದೀರಿ ಎಂಬುದು ಸ್ಪಷ್ಟವಾಗಿದೆ. ಆ ಪತ್ರವು ಮಸಿಯಿಂದ ಬರೆದದ್ದಲ್ಲ, ಜೀವವುಳ್ಳ ದೇವರ ಆತ್ಮನಿಂದಲೇ ಬರೆಯಲಾಗಿದೆ, ಕಲ್ಲಿನ ಹಲಗೆಗಳ ಮೇಲೆಯಲ್ಲ, ಮಾನವ ಹೃದಯಗಳೆಂಬ ಹಲಗೆಗಳ ಮೇಲೆ ಬರೆಯಲಾಗಿದೆ.
ಕ್ರಿಸ್ತ ಯೇಸುವಿನ ಮೂಲಕ ದೇವರ ಮುಂದೆ ನಮಗೆ ಅಂಥಾ ಭರವಸೆಯು ಇರುವುದರಿಂದ ನಾವು ಹಾಗೆ ಹೇಳುತ್ತಿದ್ದೇವೆ. ನಮ್ಮಿಂದಲೇ ಉಂಟಾಯಿತು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಯಾವ ಸಾಮರ್ಥ್ಯವೂ ಇಲ್ಲ. ನಮ್ಮ ಸಾಮರ್ಥ್ಯವು ದೇವರಿಂದಲೇ ಬರುತ್ತದೆ. ದೇವರು ನಮಗೆ ಹೊಸ ಒಡಂಬಡಿಕೆಯ ಸೇವಕರಾಗುವಂತೆ ಸಾಮರ್ಥ್ಯವನ್ನು ನೀಡಿರುತ್ತಾರೆ. ಇದು ಲಿಖಿತ ನಿಯಮಕ್ಕೆ ಸೇರಿದ್ದಾಗಿರದೆ, ಪವಿತ್ರಾತ್ಮನ ನಿಯಮದ ಸೇವೆಯಾಗಿರುತ್ತದೆ. ಏಕೆಂದರೆ, ಲಿಖಿತವಾದದ್ದು ಮರಣವನ್ನುಂಟುಮಾಡುತ್ತದೆ. ದೇವರಾತ್ಮನಿಂದಾದದ್ದು ಜೀವವನ್ನು ಉಂಟುಮಾಡುತ್ತದೆ.
ಹೊಸ ಒಡಂಬಡಿಕೆಯ ಮಹಿಮೆ
ಕಲ್ಲಿನ ಮೇಲೆ ಅಕ್ಷರಗಳನ್ನು ಕೆತ್ತಿಸಿದ್ದೂ, ಮರಣವನ್ನುಂಟುಮಾಡುವಂಥದ್ದೂ ಆಗಿರುವ ಆ ಸೇವೆಯು ಮಹಿಮೆಯಿಂದ ಕೂಡಿದ್ದಾಗಿತ್ತು. ಕುಂದಿಹೋಗುವಂಥ ಆ ಮಹಿಮೆಯಿಂದ ತುಂಬಿದ ಮೋಶೆಯ ಮುಖವನ್ನು ಇಸ್ರಾಯೇಲರಿಗೆ ದಿಟ್ಟಿಸಿ ನೋಡಲು ಸಾಧ್ಯವಾಗಲಿಲ್ಲ. ಆದರೆ ಪವಿತ್ರಾತ್ಮ ದೇವರಿಂದ ಜೀವವನ್ನು ಉಂಟುಮಾಡುವ ಸೇವೆಯು ಎಷ್ಟೋ ಹೆಚ್ಚಾಗಿ ಮಹಿಮೆಯುಳ್ಳದ್ದಾಗಿರಬೇಕು? ಮನುಷ್ಯರನ್ನು ದಂಡನಾ ತೀರ್ಪಿಗೆ ಒಳಪಡಿಸುವಂಥ ಸೇವೆಯೇ ಮಹಿಮೆಯುಳ್ಳದ್ದಾಗಿದ್ದರೆ, ನೀತಿವಂತರೆಂದು ನಿರ್ಣಯಿಸುವ ಸೇವೆಯು ಇನ್ನೆಷ್ಟು ಮಹಿಮೆಯುಳ್ಳದ್ದಾಗಿರಬೇಕು! 10 ಈ ಸೇವೆಯ ಅಪರಿಮಿತ ಮಹಿಮೆಯ ಮುಂದೆ, ಹಿಂದಿನ ಆ ಶಾಸನದ ಮಹಿಮೆಯು ಇಲ್ಲದಂತಾಗಿದೆ. 11 ಇಲ್ಲದೆ ಹೋಗುವಂಥದ್ದು ಮಹಿಮೆಯುಳ್ಳದ್ದಾಗಿದ್ದಲ್ಲಿ, ನಿತ್ಯವಾಗಿರುವಂಥದ್ದು ಇನ್ನು ಹೆಚ್ಚಾದ ಮಹಿಮೆಯಲ್ಲಿರಬೇಕಲ್ಲವೇ?
12 ಇಂಥಾ ನಿರೀಕ್ಷೆಯು ನಮಗಿರುವುದರಿಂದ ನಾವು ಬಹಳ ಧೈರ್ಯಶಾಲಿಗಳಾಗಿದ್ದೇವೆ. 13 ತನ್ನ ಮುಖದಲ್ಲಿರುವ ಮಹಿಮೆಯು ಕುಂದಿ ಹೋಗುತ್ತಿರುವುದನ್ನು ಇಸ್ರಾಯೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಂಡನು. ನಾವು ಮೋಶೆಯಂತೆ ಮಾಡುವವರಲ್ಲ. 14 ಆದರೆ ಇಸ್ರಾಯೇಲರ ಬುದ್ಧಿ ಮಂದವಾಯಿತು. ಈ ದಿನದವರೆಗೂ ಹಳೆಯ ಒಡಂಬಡಿಕೆಯು ಓದುವಾಗಲೆಲ್ಲಾ, ಅದೇ ಮುಸುಕು ಅವರಲ್ಲಿ ಇರುತ್ತದೆ. ಅದು ಕ್ರಿಸ್ತ ಯೇಸುವಿನಲ್ಲಿ ಮಾತ್ರವೇ ತೆಗೆಯಲು ಸಾಧ್ಯ. ಆದ್ದರಿಂದ ಅದು ಈಗಲೂ ತೆಗೆದುಹಾಕಲಾಗಿಲ್ಲ. 15 ಈ ದಿನದ ತನಕವೂ ಮೋಶೆಯ ಗ್ರಂಥವು ಓದುಗುವಾಗಲೆಲ್ಲಾ, ಅವರ ಹೃದಯಕ್ಕೆ ಮುಸುಕು ಹಾಕಲಾಗಿರುತ್ತದೆ. 16 ಆದರೆ ಯಾರಾದರೂ ಕರ್ತ ಯೇಸುವಿನ ಕಡೆಗೆ ತಿರುಗಿದಾಗೆಲ್ಲಾ, ಆ ಮುಸುಕು ಅವರಿಂದ ತೆಗೆಯಲಾಗುತ್ತದೆ. 17 ಕರ್ತದೇವರೇ ಆತ್ಮರಾಗಿದ್ದಾರೆ. “ಕರ್ತದೇವರ ಆತ್ಮವು ಎಲ್ಲಿರುತ್ತದೋ ಅಲ್ಲಿ ಸ್ವಾತಂತ್ರ್ಯವಿರುವುದು.” 18 ಹಾಗೆಯೇ, ನಾವು ಮುಸುಕಿಲ್ಲದ ನಮ್ಮ ಮುಖದಲ್ಲಿ ಕರ್ತದೇವರ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದ್ದೇವೆ. ಹೀಗೆ ನಾವು ಮಹಿಮೆಯಿಂದ ಅಧಿಕ ಮಹಿಮೆಗೆ ಸಾಗಿ ಅವರ ಸಾರೂಪ್ಯಕ್ಕೆ ಅನುಸಾರವಾಗಿ ನಾವು ರೂಪಾಂತರವಾಗುತ್ತಿದ್ದೇವೆ. ಈ ರೂಪಾಂತರವು ದೇವರಾತ್ಮನಾಗಿರುವ ಕರ್ತನಿಂದಲೇ.