5
ನಮ್ಮ ಸ್ವರ್ಗನಿವಾಸ
ನಾವು ಜೀವಿಸುತ್ತಿರುವ ನಮ್ಮ ದೇಹವೆಂಬ ಗುಡಾರವು ನಾಶವಾಗಿ ಹೋದರೂ, ಪರಲೋಕದಲ್ಲಿ ಶಾಶ್ವತವಾದ ನಿವಾಸವು ನಮಗೆ ಉಂಟೆಂದು ಬಲ್ಲೆವು. ಅದು ಮಾನವರ ಕೈಯಿಂದ ಕಟ್ಟಿದ ನಿವಾಸವಲ್ಲ, ದೇವರಿಂದಲೇ ನಿರ್ಮಿತವಾದದ್ದಾಗಿದೆ. ನಮ್ಮ ಪರಲೋಕದ ನಿವಾಸವನ್ನು ನೀವೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸಿ, ಈ ಜೀವನದಲ್ಲಿ ನರಳುತ್ತಿದ್ದೇವೆ. ಏಕೆಂದರೆ, ನಾವು ಪರಲೋಕದ ನಿವಾಸವನ್ನು ಧರಿಸಿಕೊಂಡಾಗ, ಆತ್ಮವಿಲ್ಲದ ದೇಹವಾಗಿ ನಾವು ಇರುವುದಿಲ್ಲ. ನಾವು ಈ ದೇಹವೆಂಬ ಗುಡಾರದಲ್ಲಿರುವ ತನಕ ನರಳುತ್ತೇವೆ, ಭಾರದಿಂದ ಬಳಲುತ್ತೇವೆ. ಈ ಗುಡಾರವೆಂಬ ಹಳೆಯ ಶರೀರವು ನಮ್ಮಿಂದ ಕಳಚಿ ಹೋಗಬೇಕೆಂಬುದು ನಮ್ಮ ಇಷ್ಟವಲ್ಲ. ಆದರೆ ಪರಲೋಕದ ನಿವಾಸವೆಂಬ ನೂತನ ಶರೀರವನ್ನು ನಾವು ಧರಿಸಿಕೊಳ್ಳಲು ಬಯಸುತ್ತೇವೆ. ಏಕೆಂದರೆ ನಶ್ವರವಾದ ಈ ನಮ್ಮ ದೇಹವು ಅಮರತ್ವವನ್ನು ಧರಿಸಿಕೊಳ್ಳಬೇಕು. ಈ ಉದ್ದೇಶಕ್ಕಾಗಿಯೇ ನಮ್ಮನ್ನು ಸಿದ್ಧಮಾಡಿದ ದೇವರು, ಮುಂಬರುವುದರ ಖಾತರಿಯಾಗಿ ನಮಗೆ ತಮ್ಮ ಆತ್ಮವನ್ನೇ ಕೊಟ್ಟಿದ್ದಾರೆ.
ಹೀಗಿರುವುದರಿಂದ ಶರೀರದಲ್ಲಿ ವಾಸಿಸುವವರೆಗೂ ನಾವು ಕರ್ತನಿಂದ ದೂರವಾಗಿದ್ದೇವೆಂದು ತಿಳಿದು, ನಾವು ಯಾವಾಗಲೂ ಭರವಸೆ ಉಳ್ಳವರಾಗಿದ್ದೇವೆ. ನಾವು ನೋಡುವವರಾಗಿ ಜೀವಿಸದೆ, ನಂಬುವವರಾಗಿ ಜೀವಿಸುತ್ತಿದ್ದೇವೆ. ನಮ್ಮ ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿಯೇ ಇರುವುದು ಉತ್ತಮವೆಂದು ಆಶಿಸಿ, ಅದರಲ್ಲಿ ಭರವಸೆ ಉಳ್ಳವರಾಗಿರುತ್ತೇವೆ. ಆದ್ದರಿಂದ ನಾವು ದೇಹದಲ್ಲಿದ್ದರೂ ಸರಿಯೇ, ಅದನ್ನು ಬಿಟ್ಟಿದ್ದರೂ ಸರಿಯೇ ಕರ್ತನನ್ನು ಮೆಚ್ಚಿಸಬೇಕೆಂಬುದೇ ನಮ್ಮ ಗುರಿಯಾಗಿದೆ. 10 ಏಕೆಂದರೆ, ನಾವೆಲ್ಲರೂ ನಮ್ಮ ದೇಹದ ಮೂಲಕ ನಡೆಸಿದ ಒಳ್ಳೆಯದಕ್ಕಾಗಲಿ, ಕೆಟ್ಟದ್ದಕ್ಕಾಗಲಿ ಸಿಗಬೇಕಾದ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳಲೇಬೇಕು.
ಸಮಾಧಾನ ಪಡಿಸುವ ಸೇವೆ
11 ಕರ್ತನ ಭಯಭಕ್ತಿಯನ್ನು ಅರಿತಿರುವ ಕಾರಣ, ಜನರ ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲವರಾಗಿದ್ದಾರೆ. ಅದು ನಿಮ್ಮ ಮನಸ್ಸಾಕ್ಷಿಗೂ ತಿಳಿದಿದೆ ಎಂದು ನಾನು ನಂಬುತ್ತೇನೆ. 12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ. 13 ನಮಗೆ ಬುದ್ಧಿ ಭ್ರಮಣೆಯಾಗಿದ್ದರೆ, ಅದು ದೇವರಿಗಾಗಿಯೇ. ನಾವು ಸ್ವಸ್ಥಬುದ್ಧಿಯುಳ್ಳವರಾಗಿದ್ದರೆ, ಅದು ನಿಮಗಾಗಿಯೇ. 14 ಕ್ರಿಸ್ತ ಯೇಸುವಿನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ. ಏಕೆಂದರೆ, ಎಲ್ಲರಿಗೋಸ್ಕರ ಕ್ರಿಸ್ತ ಯೇಸು ಸತ್ತದ್ದರಿಂದ, ಎಲ್ಲರೂ ಸತ್ತಂತಾಯಿತು. 15 ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ, ತಮಗಾಗಿ ಸತ್ತು ಪುನರುತ್ಥಾನವಾಗಿ ಬಂದ ಕ್ರಿಸ್ತ ಯೇಸುವಿಗೋಸ್ಕರವೇ ಜೀವಿಸಬೇಕೆಂದು ಕ್ರಿಸ್ತ ಯೇಸು ಎಲ್ಲರಿಗೋಸ್ಕರ ಸತ್ತರು.
16 ಇನ್ನು ಮೇಲೆ ನಾವು ಯಾರನ್ನೂ ಶರೀರ ಸಂಬಂಧವಾಗಿ ಅರಿತುಕೊಳ್ಳುವುದಿಲ್ಲ. ಒಂದು ಕಾಲದಲ್ಲಿ ಕ್ರಿಸ್ತ ಯೇಸುವನ್ನು ನಾವು ಶರೀರ ಸಂಬಂಧವಾಗಿ ಅರಿತಿದ್ದೆವು. ಆದರೆ ಇನ್ನು ಮುಂದೆ ಕ್ರಿಸ್ತ ಯೇಸುವನ್ನು ಶರೀರ ಸಂಬಂಧವಾಗಿ ನಾವು ಅರಿತುಕೊಳ್ಳುವುದಿಲ್ಲ. 17 ಆದ್ದರಿಂದ ಯಾರಾದರೂ ಕ್ರಿಸ್ತ ಯೇಸುವಿನಲ್ಲಿದ್ದರೆ, ಅವರು ನೂತನ ಸೃಷ್ಟಿಯಾಗಿದ್ದಾರೆ: ಹಳೆಯದೆಲ್ಲವೂ ಹೋಗಿ ಅವರಿಗೆ ಹೊಸ ಸೃಷ್ಟಿಯು ಬರುವುದು. 18 ಇವೆಲ್ಲವೂ ದೇವರಿಂದಲೇ ಆಯಿತು. ನಮ್ಮನ್ನು ಕ್ರಿಸ್ತ ಯೇಸುವಿನ ಮೂಲಕ ತಮ್ಮೊಂದಿಗೆ ಸಮಾಧಾನ ಮಾಡಿಕೊಂಡ ದೇವರು, ಇತರರನ್ನು ಸಮಾಧಾನಕ್ಕೆ ತರುವ ಸೇವೆಯನ್ನೂ ನಮಗೆ ಕೊಟ್ಟಿರುತ್ತಾರೆ: 19 ಹೇಗೆಂದರೆ, ದೇವರು ಮನುಷ್ಯರ ಪಾಪಗಳನ್ನು ಅವರಿಗೆ ವಿರೋಧವಾಗಿ ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಂದಿಗೆ ಸಮಾಧಾನಪಡಿಸುತ್ತಿದ್ದಾರೆ. ಈ ಸಮಾಧಾನದ ಸಂದೇಶವನ್ನೇ ದೇವರು ನಮಗೊಪ್ಪಿಸಿ ಕೊಟ್ಟಿದ್ದಾರೆ. 20 ಆದ್ದರಿಂದ ನಾವು ಕ್ರಿಸ್ತ ಯೇಸುವಿನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ನಿಮಗೆ ಕರೆ ನೀಡುತ್ತಾರೆ. ಆದ್ದರಿಂದ ಕ್ರಿಸ್ತ ಯೇಸುವಿನ ಪರವಾಗಿ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ: ದೇವರೊಡನೆ ಸಮಾಧಾನ ಮಾಡಿಕೊಳ್ಳಿರಿ. 21 ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪವನ್ನಾಗಿ ಮಾಡಿದರು. ಹೀಗೆ ಕ್ರಿಸ್ತ ಯೇಸುವಿನಲ್ಲಿ ದೇವರ ನೀತಿಯನ್ನಾಗಿ ದೇವರು ನಮ್ಮನ್ನು ಮಾಡಿದರು.