7
ಪ್ರಿಯರೇ, ಇಂಥಾ ವಾಗ್ದಾನಗಳು ನಮಗಿರುವುದರಿಂದ ನಮ್ಮ ದೇಹಾತ್ಮಗಳನ್ನು ಮಲಿನಗೊಳಿಸುವ ಎಲ್ಲಾ ವಿಷಯಗಳಿಂದ ನಮ್ಮನ್ನು ಶುದ್ಧಮಾಡಿ, ದೇವರ ಮೇಲಿನ ಭಯಭಕ್ತಿಯಿಂದ ನಮ್ಮ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.
ಪೌಲನ ಆನಂದ
ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳ ಕೊಡಿರಿ. ನಾವು ಯಾರಿಗೂ ಅನ್ಯಾಯ ಮಾಡಲಿಲ್ಲ, ಯಾರಿಗೂ ನಾವು ಕೇಡು ಬಗೆಯಲಿಲ್ಲ, ನಾವು ಸ್ವಂತ ಲಾಭಕ್ಕಾಗಿ ಯಾರನ್ನೂ ದುಡಿಸಿಕೊಳ್ಳಲಿಲ್ಲ. ನಿಮ್ಮ ಮೇಲೆ ತಪ್ಪು ಹೊರಿಸುವುದಕ್ಕಾಗಿ ನಾನು ಇದನ್ನು ನಿಮಗೆ ಹೇಳುತ್ತಿಲ್ಲ. ನಾವು ನಿಮ್ಮೊಂದಿಗೆ ಜೀವಿಸಿ, ಸಾಯುವಷ್ಟರ ಮಟ್ಟಿಗೆ ನಾವು ನಮ್ಮ ಹೃದಯದಾಳದಿಂದ ನಿಮ್ಮನ್ನು ಪ್ರೀತಿಸುತ್ತಿದ್ದೇವೆ ಎಂದು ನಾನು ಹಿಂದೆ ಹೇಳಲಿಲ್ಲವೇ? ನಿಮ್ಮ ಮೇಲೆ ನನಗೆ ಪರಿಪೂರ್ಣ ಭರವಸೆ ಇದೆ. ನಿಮ್ಮ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ನಾನು ಬಹಳವಾಗಿ ಪ್ರೋತ್ಸಾಹ ಹೊಂದಿ, ನಮಗೆ ಬಂದಿದ್ದ ಎಲ್ಲಾ ಸಂಕಟಗಳಲ್ಲಿ ನಾವು ನಿಮ್ಮಿಂದ ಮಿತಿಯಿಲ್ಲದಷ್ಟು ಆನಂದಪಡುತ್ತಿದ್ದೇನೆ.
ನಾವು ಮಕೆದೋನ್ಯಕ್ಕೆ ಬಂದಿದ್ದಾಗ ನಮ್ಮ ದೇಹಕ್ಕೆ ವಿಶ್ರಾಂತಿ ದೊರೆಯಲಿಲ್ಲ. ಎಲ್ಲಾ ವಿಧದಲ್ಲಿಯೂ ಒತ್ತಡಗಳು: ಹೊರಗೆ ಹೋರಾಟ, ಒಳಗೆ ಅಂಜಿಕೆ. ಆದರೆ ಮನಗುಂದಿದವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದರು. ತೀತನು ಬರುವುದರಿಂದ ಮಾತ್ರವಲ್ಲ, ನೀವು ಅವನನ್ನು ಸ್ವೀಕರಿಸಿ, ಆದರಣೆಗಳಿಂದ ಸತ್ಕರಿಸಿದ್ದನ್ನು ಕೇಳಿ ನಮಗೆ ಸಂತೋಷವಾಯಿತು. ನೀವು ನನಗಾಗಿ ಹಂಬಲಿಸುತ್ತಿರುವುದನ್ನೂ, ಚಿಂತಿಸುವುದನ್ನೂ, ನನ್ನ ಮೇಲೆ ನಿಮಗಿರುವ ಆಳವಾದ ಅನುಕಂಪವನ್ನೂ ನಾವು ತೀತನಿಂದ ಕೇಳಿದಾಗ, ನಾನು ಇನ್ನೂ ಅಧಿಕ ಆನಂದಪಟ್ಟೆನು.
ನಾನು ಬರೆದಿದ್ದ ಪತ್ರದಿಂದ ನಿಮಗೆ ದುಃಖವಾಗಿದ್ದಲ್ಲಿ, ನಾನು ಅದಕ್ಕೆ ಬೇಸರಪಡುವುದಿಲ್ಲ. ನನ್ನ ಪತ್ರದಿಂದ ನಿಮಗೆ ದುಃಖವಾಯಿತಲ್ಲಾ ಎಂದು ಸ್ವಲ್ಪಕಾಲ ನಾನು ನೊಂದುಕೊಂಡಿದ್ದರೂ, ಈಗ ಸಂತೋಷಪಡುತ್ತೇನೆ. ನಿಮಗೆ ದುಃಖವಾಯಿತೆಂಬ ಕಾರಣಕ್ಕಾಗಿ ಅಲ್ಲ. ಆ ದುಃಖವು ನಿಮ್ಮನ್ನು ಪಶ್ಚಾತ್ತಾಪಕ್ಕೆ ನಡೆಸಿ, ನಿಮಗಾದ ದುಃಖವು ದೇವರ ಚಿತ್ತದಿಂದ ಆಗಿದ್ದರಿಂದ ನಮ್ಮಿಂದ ನಿಮಗೆ ನಷ್ಟವಾಗಲಿಲ್ಲ ಎಂಬುದಕ್ಕಾಗಿಯೂ ಈಗ ಸಂತೋಷಪಡುತ್ತೇನೆ. 10 ದೈವಿಕ ದುಃಖವು ಪಶ್ಚಾತ್ತಾಪವನ್ನು ತಂದು ರಕ್ಷಣೆಗೆ ನಡೆಸುತ್ತದೆ. ಆ ಪಶ್ಚಾತ್ತಾಪದಲ್ಲಿ ವಿಷಾಧವಿರುವುದಿಲ್ಲ. ಆದರೆ ಪ್ರಾಪಂಚಿಕ ದುಃಖವು ಮರಣಕ್ಕೆ ನಡೆಸುತ್ತದೆ. 11 ಈ ದೈವಿಕ ದುಃಖವು ನಿಮ್ಮಲ್ಲಿ ಏನು ಉಂಟುಮಾಡಿದೆ ಗಮನಿಸಿರಿ: ನಿಮ್ಮಲ್ಲಿ ಎಂಥಾ ಉತ್ಸಾಹ, ನಿರಪರಾಧಕ್ಕಾಗಿ ಎಂಥಾ ಪ್ರಯಾಸ, ಎಷ್ಟು ರೋಷ, ಎಷ್ಟು ಭಯ, ಎಷ್ಟು ಹಂಬಲ, ಎಷ್ಟು ಆಸಕ್ತಿ, ನ್ಯಾಯಕ್ಕಾಗಿ ಎಷ್ಟು ಆತುರ. ಪ್ರತಿಯೊಂದು ವಿಷಯದಲ್ಲಿಯೂ ನೀವು ನಿರ್ದೋಷಿಗಳೆಂದು ರುಜುಪಡಿಸುತ್ತೀರಿ. 12 ನಾನು ಆ ಪತ್ರ ನಿಮಗೆ ಬರೆದದ್ದು, ತಪ್ಪು ಮಾಡಿದವನಿಗೋಸ್ಕರವಾಗಿ ಅಲ್ಲ ಮತ್ತು ಆ ತಪ್ಪಿನಿಂದ ಹಾನಿಯಾದವರಿಗೋಸ್ಕರವಾಗಿಯೂ ಅಲ್ಲ, ನೀವು ನಮಗೆ ಎಷ್ಟು ನಿಷ್ಠೆಯುಳ್ಳವರು ಎಂದು ದೇವರ ಸನ್ನಿಧಿಯಲ್ಲಿ ನಿಮಗೆ ನೀವೇ ನೋಡುವಂತೆ ಬರೆದೆನು. 13 ಆದಕಾರಣ ಇವೆಲ್ಲವುಗಳಿಂದ ನಮಗೆ ಉತ್ತೇಜನವಾಯಿತು.
ನಮಗೆ ಉತ್ತೇಜನವಾಗಿದ್ದು ಅಲ್ಲದೆ, ನಿಮ್ಮೆಲ್ಲರಿಂದ ತೀತನ ಆತ್ಮಕ್ಕೆ ಉಪಶಮನವಾದ ಕಾರಣ, ನಾವು ಅವನ ಸಂತೋಷಕ್ಕಾಗಿ ಇನ್ನಷ್ಟು ಆನಂದಿಸಿದೆವು. 14 ನಿಮ್ಮ ವಿಷಯವಾಗಿ ನಾನು ತೀತನ ಮುಂದೆ ಹೊಗಳಿದ್ದಕ್ಕೆ ನಾನು ಬೇಸರಪಡಬೇಕಾಗಿರಲಿಲ್ಲ. ನಾನು ನಿಮಗೆ ಹೇಳಿದ್ದೆಲ್ಲವೂ ಹೇಗೆ ಸತ್ಯವಾಗಿತ್ತೋ, ಹಾಗೆಯೇ ನಿಮ್ಮ ಬಗ್ಗೆ ನಾವು ತೀತನ ಬಗ್ಗೆ ಹೊಗಳಿದ್ದೆಲ್ಲವೂ ಸತ್ಯವಾದವು. 15 ನೀವು ತೀತನ ಮಾತುಗಳಿಗೆ ವಿಧೇಯರಾಗಿದ್ದುದ್ದನ್ನೂ ಅವನನ್ನು ಭಯಭಕ್ತಿಯಿಂದಲೂ ನಡುಗುವಿಕೆಯಿಂದಲೂ ಸ್ವೀಕರಿಸಿದ್ದನ್ನೂ, ಅವನು ಜ್ಞಾಪಕಕ್ಕೆ ತಂದುಕೊಂಡಾಗ, ನಿಮ್ಮನ್ನು ಅತ್ಯಧಿಕವಾಗಿ ಪ್ರೀತಿಸುವವನಾಗಿದ್ದಾನೆ. 16 ನಿಮ್ಮ ಮೇಲೆ ಸಂಪೂರ್ಣ ಭರವಸೆ ಇಡಬಹುದೆಂಬುದಕ್ಕಾಗಿ ನಾನು ಹರ್ಷಿಸುತ್ತೇನೆ.