ದಾನಿಯೇಲ
1
ಬಾಬಿಲೋನಿನಲ್ಲಿ ದಾನಿಯೇಲನಿಗೆ ತರಬೇತಿ
ಯೆಹೂದದ ಅರಸನಾದ ಯೆಹೋಯಾಕೀಮನ ಆಳಿಕೆಯ ಮೂರನೆಯ ವರ್ಷದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆಹಾಕಿದನು. ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು ದೇವಾಲಯದ ಕೆಲವು ವಸ್ತುಗಳನ್ನು ಕೂಡ ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್* ದೇಶಕ್ಕೂ, ತನ್ನ ದೇವರ ಆಲಯಕ್ಕೂ ತಂದು, ಅವುಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.
ಅರಸನು ತನ್ನ ಕಂಚುಕಿಯರ ಮುಖ್ಯಸ್ಥನಾದ ಅಶ್ಪೆನಜನ ಸಂಗಡ ಮಾತನಾಡಿ ಅವನು ಇಸ್ರಾಯೇಲರೊಳಗೆ ಕೆಲವರನ್ನು ಅರಸನ ಸಂತಾನದೊಳಗಿಂದಲೂ, ಪ್ರಧಾನರೊಳಗಿಂದಲೂ ಶಾರೀರಿಕ ನ್ಯೂನತೆ ಇಲ್ಲದವರಾಗಿಯೂ, ಸುಂದರವಾಗಿಯೂ, ಅವರು ಎಲ್ಲಾ ರೀತಿಯ ವಿಷಯಗಳನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿರಬೇಕು. ಅವರು ವಿವೇಕವುಳ್ಳವರಾಗಿಯೂ ಮತ್ತು ತ್ವರಿತವಾಗಿ ಅರ್ಥಮಾಡಿಕೊಳ್ಳುವವರಾಗಿಯೂ, ಅರಸನ ಅರಮನೆಯಲ್ಲಿ ಸೇವೆ ಮಾಡಲು ಸಾಮರ್ಥ್ಯವುಳ್ಳವರಾಗಿಯೂ ಇರುವ ಯೌವನಸ್ಥರನ್ನು ತಂದು ಬಾಬಿಲೋನಿಯರ ವಿದ್ಯೆಯನ್ನೂ, ಭಾಷೆಯನ್ನೂ ಅವರಿಗೆ ಬೋಧಿಸಬೇಕೆಂದು ಆಜ್ಞಾಪಿಸಿದನು. ಅರಸನು ರಾಜಭೋಜನದಲ್ಲಿಯೂ, ತಾನು ಕುಡಿಯುವ ದ್ರಾಕ್ಷಾರಸದಲ್ಲಿಯೂ ಪ್ರತಿದಿನವೂ ಅವರಿಗೆ ಪಾಲನ್ನು ನೇಮಿಸಿದನು. ಹೀಗೆ ಅವರು ಮೂರು ವರ್ಷಗಳ ಕಾಲ ಪೋಷಿಸಲಾದ ಮೇಲೆ ಅರಸನ ಸನ್ನಿಧಿಯ ಸೇವಕರಾಗುವರು.
ಇವರಲ್ಲಿ ಯೆಹೂದದಿಂದ ದಾನಿಯೇಲ, ಹನನ್ಯ, ಮೀಶಾಯೇಲ್, ಅಜರ್ಯ ಎಂಬವರಿದ್ದರು. ಇವರಿಗೆ ಕಂಚುಕಿಯರ ಯಜಮಾನನು ದಾನಿಯೇಲನಿಗೆ ಬೇಲ್ತೆಶಚ್ಚರ್ ಎಂದೂ, ಹನನ್ಯನಿಗೆ ಶದ್ರಕ್ ಎಂದೂ, ಮೀಶಾಯೇಲನಿಗೆ ಮೇಶಕ್ ಎಂದೂ, ಅಜರ್ಯನಿಗೆ ಅಬೇದ್‌ನೆಗೋ ಎಂಬ ಹೆಸರಿಟ್ಟನು.
ದಾನಿಯೇಲನು ಅರಸನ ಭೋಜನದ ಪಾಲಿನಿಂದಲಾದರೂ, ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವುದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು. ಆದ್ದರಿಂದ ತಾನು ಅಶುದ್ಧನಾಗದ ಹಾಗೆ ಕಂಚುಕಿಯರ ಯಜಮಾನನನ್ನು ಬೇಡಿಕೊಂಡನು. ಆಗ ದೇವರು ದಾನಿಯೇಲನ ಮೇಲೆ ಕಂಚುಕಿಯರ ಯಜಮಾನನ ದಯೆ, ಕನಿಕರ ತೋರುವಂತೆ ಮಾಡಿದರು. 10 ಕಂಚುಕಿಯ ಯಜಮಾನನು ದಾನಿಯೇಲನಿಗೆ, “ನಿಮ್ಮ ಅನ್ನಪಾನಾದಿಗಳನ್ನು ನೇಮಿಸಿದ ನನ್ನ ಒಡೆಯ ಅರಸನಿಗೆ ನಾನು ಭಯಪಡುತ್ತೇನೆ. ಏಕೆಂದರೆ ಅರಸನು ಏಕೆ ನಿಮ್ಮ ಮುಖಗಳನ್ನು ನಿಮ್ಮ ಸ್ಥಿತಿಯಲ್ಲಿಯೇ ಇರುವ ಇತರ ಯೌವನಸ್ಥರಿಗಿಂತ ಕಳೆಗುಂದಿದವುಗಳನ್ನಾಗಿ ನೋಡಬೇಕು. ಈ ಪ್ರಕಾರ ನೀವು ಅರಸನ ಹತ್ತಿರ ನನ್ನ ತಲೆಗೆ ಅಪಾಯವನ್ನು ಬರಮಾಡುತ್ತೀರಿ?” ಎಂದನು.
11 ಆಮೇಲೆ ದಾನಿಯೇಲನು ಕಂಚುಕಿಯರ ಯಜಮಾನನು ಹನನ್ಯ, ಮೀಶಾಯೇಲ್, ಅಜರ್ಯ ಮತ್ತು ತನ್ನನ್ನು ನೋಡಿಕೊಳ್ಳುವುದಕ್ಕೆ ಇಟ್ಟಿದ್ದ ಮೇಲ್ವಿಚಾರಕನಿಗೆ, 12 “ನಿನ್ನ ಸೇವಕರನ್ನು ಹತ್ತು ದಿವಸಗಳವರೆಗೂ ಪರೀಕ್ಷಿಸಿ ನೋಡು. ಅವರು ನಮ್ಮ ಆಹಾರಕ್ಕೆ ಕೇವಲ ಕಾಯಿಪಲ್ಯಗಳನ್ನು, ಕುಡಿಯುವುದಕ್ಕೆ ಕೇವಲ ನೀರನ್ನು ಕೊಡಲಿ. 13 ಆಗ ನಮ್ಮ ಮುಖಗಳು ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರ ಮುಖಗಳು ನಿಮ್ಮ ಮುಂದೆ ಕಾಣಬರಲಿ. ನಿನಗೆ ಕಾಣುವ ಪ್ರಕಾರ ನಿನ್ನ ಸೇವಕರಿಗೆ ನೋಡುವ ಹಾಗೆ ಮಾಡು,” ಎಂದು ಬೇಡಿಕೊಂಡನು. 14 ಹಾಗೆಯೇ ಅವನು ಈ ಕಾರ್ಯದ ವಿಷಯವಾಗಿ ಒಪ್ಪಿ, ಹತ್ತು ದಿವಸಗಳವರೆಗೂ ಅವರನ್ನು ಪರೀಕ್ಷಿಸಿದನು.
15 ಹತ್ತು ದಿವಸಗಳಾದ ಮೇಲೆ ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರೆಲ್ಲರಿಗಿಂತ ಇವರು ಆರೋಗ್ಯಕರವಾಗಿಯೂ, ಶರೀರದಲ್ಲಿ ಪುಷ್ಟರಾಗಿಯೂ ಕಾಣಿಸಿದರು. 16 ಹೀಗೆ ಮೇಲ್ವಿಚಾರಕನು ಅವರ ಭೋಜನದ ಪಾಲನ್ನು ಅವರು ಕುಡಿಯುವಂಥ ದ್ರಾಕ್ಷಾರಸವನ್ನು ತೆಗೆದುಹಾಕಿ ಅವರಿಗೆ ಸಸ್ಯಾಹಾರವನ್ನು ಕೊಟ್ಟನು.
17 ಈ ನಾಲ್ಕು ಯೌವನಸ್ಥರಿಗೆ ದೇವರು ಎಲ್ಲಾ ವಿದ್ಯೆಯಲ್ಲಿಯೂ, ಜ್ಞಾನದಲ್ಲಿಯೂ, ತಿಳುವಳಿಕೆಯನ್ನೂ, ವಿವೇಕವನ್ನೂ ಕೊಟ್ಟರು. ದಾನಿಯೇಲನು ಸಕಲ ದರ್ಶನಗಳಲ್ಲಿಯೂ, ಕನಸುಗಳಲ್ಲಿಯೂ ತಿಳುವಳಿಕೆಯುಳ್ಳವನಾಗಿದ್ದನು.
18 ಅರಸನು ಅವರನ್ನು ಕರೆತರಬೇಕೆಂದು ನೇಮಿಸಿದ ದಿವಸಗಳ ಕೊನೆಯಲ್ಲಿ ಕಂಚುಕಿಯರ ಯಜಮಾನನು ಅವರನ್ನು ನೆಬೂಕದ್ನೆಚ್ಚರನ ಮುಂದೆ ತಂದನು. 19 ಅರಸನು ಅವರ ಸಂಗಡ ಮಾತನಾಡಿದನು. ಅವರೆಲ್ಲರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ್ ಮತ್ತು ಅಜರ್ಯ ಇವರ ಹಾಗೆ ಒಬ್ಬನೂ ಸಿಗಲಿಲ್ಲ. ಆದ್ದರಿಂದಲೇ ಇವರು ಅರಸನ ಸನ್ನಿಧಿಯ ಸೇವಕರಾದರು. 20 ಅರಸನು ಅವರ ಹತ್ತಿರ ವಿಚಾರಿಸಿದಾಗ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರರಿಗಿಂತಲೂ, ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡನು.
21 ದಾನಿಯೇಲನು ರಾಜ ಕೋರೆಷನ ಆಳಿಕೆಯ ಮೊದಲನೆಯ ವರ್ಷದ ತನಕ ಅಲ್ಲಿಯೇ ಇದ್ದನು.
* 1:2 1:2 ಶಿನಾರ್ ಅಥವಾ ಬಾಬಿಲೋನ್