7
ಜ್ಞಾನ
ಅಮೂಲ್ಯವಾದ ಸುಗಂಧ ತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ.
ಒಬ್ಬನ ಜನ್ಮ ದಿನಕ್ಕಿಂತ ಮರಣದ ದಿನವೇ ಮೇಲು.
ಔತಣದ ಮನೆಗೆ ಹೋಗುವುದಕ್ಕಿಂತ,
ಶೋಕದ ಮನೆಗೆ ಹೋಗುವುದು ಲೇಸು.
ಏಕೆಂದರೆ ಎಲ್ಲಾ ಮನುಷ್ಯರ ಅಂತ್ಯವು ಸಾವಾಗಿದೆ.
ಇದರಿಂದ ಜೀವಂತರು ಇದನ್ನು ತಮ್ಮ ಹೃದಯದಲ್ಲಿ ಸ್ಮರಿಸಿಕೊಳ್ಳುವರು.
ನಗೆಗಿಂತ ದುಃಖವು ವಾಸಿ,
ಏಕೆಂದರೆ ಮುಖದಲ್ಲಿ ದುಃಖ ಹೃದಯಕ್ಕೆ ಸುಖ.
ಜ್ಞಾನಿಗಳ ಹೃದಯವು ಶೋಕದ ಮನೆಯಲ್ಲಿರುವುದು,
ಆದರೆ ಮೂಢರ ಹೃದಯವು ಉಲ್ಲಾಸದ ಮನೆಯಲ್ಲಿರುವುದು.
ಮೂಢರ ಹಾಡನ್ನು ಕೇಳುವುದಕ್ಕಿಂತ,
ಜ್ಞಾನಿಗಳ ಗದರಿಕೆಯನ್ನು ಕೇಳುವುದು ಲೇಸು.
ಗಡಿಗೆಯ ಕೆಳಗೆ ಉರಿಯುವ ಮುಳ್ಳುಕಡ್ಡಿ ಚಟಚಟನೆಯ ಶಬ್ದ ಹೇಗೋ,
ಮೂಢನ ನಗುವು ಹಾಗೆಯೇ ಇರುವುದು.
ಇದು ಕೂಡ ವ್ಯರ್ಥವೇ.
 
ದಬ್ಬಾಳಿಕೆ ಜ್ಞಾನಿಯನ್ನು ಮೂರ್ಖನನ್ನಾಗಿ ಮಾಡುತ್ತದೆ.
ಲಂಚವು ಹೃದಯವನ್ನು ಕೆಡಿಸುತ್ತದೆ.
 
ಪ್ರಾರಂಭಕ್ಕಿಂತ ಅದರ ಅಂತ್ಯವೇ ಲೇಸು.
ಗರ್ವಿಷ್ಠನಿಗಿಂತ ತಾಳ್ಮೆಯುಳ್ಳವನೇ ಉತ್ತಮ.
ನೀನು ಕೋಪಿಸಿಕೊಳ್ಳುವುದಕ್ಕೆ ಆತುರಪಡದಿರು,
ಏಕೆಂದರೆ ಕೋಪವು ಮೂಢರ ಎದೆಯಲ್ಲಿ ನೆಲೆಗೊಳ್ಳುತ್ತದೆ.
 
10 “ಹಿಂದಿನ ಕಾಲ ಈಗಿನ ಕಾಲಕ್ಕಿಂತ ಮೇಲಾಗಿರುವುದಕ್ಕೆ ಕಾರಣ ಏನು?” ಎಂದು ನೀನು ಕೇಳಬೇಡ.
ಇದು ಬುದ್ಧಿವಂತರು ಕೇಳುವ ಪ್ರಶ್ನೆಯಲ್ಲ.
 
11 ಜ್ಞಾನವು ಆಸ್ತಿಯ ಹಾಗೆ ಒಳ್ಳೆಯದು;
ಅದರಿಂದ ಜೀವಂತರೆಲ್ಲರಿಗೂ ಲಾಭಕರ.
12 ಧನವು ಹೇಗೋ
ಹಾಗೆ ಜ್ಞಾನವು ಆಶ್ರಯ.
ಆದರೆ ಜ್ಞಾನದ ಶ್ರೇಷ್ಠತೆ ಏನೆಂದರೆ,
ಅದು ಜ್ಞಾನಿಗೆ ಜೀವದಾಯಕ.
13 ದೇವರ ಸೃಷ್ಟಿಕಾರ್ಯವನ್ನು ಯೋಚಿಸು:
ದೇವರು ಮಾಡಿದ್ದನ್ನು,
ಪುನಃ ಸರಿಪಡಿಸಲು ಯಾರಿಗೆ ಸಾಧ್ಯ?
14 ಸುಖ ದಿನದಲ್ಲಿ ಸಂತೋಷವಾಗಿರು.
ಆದರೆ ದುಃಖ ದಿನದಲ್ಲಿ ಇದನ್ನು ಯೋಚಿಸು:
ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ.
ಹೀಗೆ ಮನುಷ್ಯನು ತನ್ನ ಆಯುಸ್ಸನ್ನು ಕಳೆದ ಮೇಲೆ ಭವಿಷ್ಯವನ್ನು ಗ್ರಹಿಸಲಾರನು.
15 ನನ್ನ ವ್ಯರ್ಥದ ದಿನಗಳಲ್ಲಿ ಇವೆರಡು ವಿಷಯಗಳನ್ನು ನೋಡಿದ್ದೇನೆ:
ನೀತಿವಂತನು ತನ್ನ ನೀತಿಯಲ್ಲಿ ಗತಿಸಿಹೋಗುತ್ತಾನೆ.
ದುಷ್ಟನು ತನ್ನ ದುಷ್ಟತನದಲ್ಲಿ, ಇಡೀ ಜೀವಮಾನವನ್ನು ಕಳೆಯುತ್ತಾನೆ.
16 ನೀನು ಅತಿಯಾಗಿ ನೀತಿವಂತನಾಗಿರಬೇಡ.
ಅತಿಯಾಗಿ ನಿನ್ನನ್ನು ಜ್ಞಾನಿಯನ್ನಾಗಿಯೂ ಮಾಡಿಕೊಳ್ಳಬೇಡ.
ನಿನ್ನನ್ನು ನೀನೇ ಏಕೆ ನಾಶಪಡಿಸಿಕೊಳ್ಳುವೆ?
17 ನೀನು ದುಷ್ಟತನದಲ್ಲಿ ಸಾಗಬೇಡ,
ಮೂರ್ಖತನದಲ್ಲಿಯೂ ಮುಂದುವರಿಯಬೇಡ.
ನಿನ್ನ ಸಮಯಕ್ಕಿಂತ ಮೊದಲು ನೀನು ಏಕೆ ಸಾಯುವೆ?
18 ನೀನು ಇವುಗಳನ್ನು ಗ್ರಹಿಸಿಕೊಳ್ಳುವುದು ಒಳ್ಳೆಯದು.
ಹೌದು, ಇವುಗಳನ್ನು ಮರೆಯಬೇಡ.
ಏಕೆಂದರೆ ದೇವರಿಗೆ ಭಯಪಡುವವನು ಇವೆಲ್ಲವುಗಳಿಂದ ಪಾರಾಗುವನು.
 
19 ಪಟ್ಟಣದ ಹತ್ತು ಮಂದಿ ಅಧಿಕಾರಿಗಳ ಸ್ಥಿರತೆಗಿಂತ,
ಜ್ಞಾನವು ಜ್ಞಾನಿಯನ್ನು ಹೆಚ್ಚಾಗಿ ಸ್ಥಿರಪಡಿಸುತ್ತದೆ.
 
20 ಪಾಪಮಾಡದೆ ಒಳ್ಳೆಯದನ್ನೇ ನಡೆಸುವ ನೀತಿವಂತನು,
ಭೂಮಿಯ ಮೇಲೆ ಒಬ್ಬನೂ ಇಲ್ಲ.
 
21 ಜನರು ಆಡಿದ ಎಲ್ಲಾ ಮಾತುಗಳನ್ನು ನೀನು ಲಕ್ಷಿಸಬೇಡ,
ನಿನ್ನ ಕೆಲಸದವರೂ ನಿನ್ನನ್ನು ಶಪಿಸಬಹುದು.
22 ನೀನು ಸಹ ಅನೇಕ ವೇಳೆ ಇತರರನ್ನು ಶಪಿಸಿದ್ದೀ,
ಇದು ನಿನ್ನ ಹೃದಯಕ್ಕೆ ತಿಳಿದಿದೆ.
23 ಇದೆಲ್ಲವನ್ನು ನಾನು ಜ್ಞಾನದಿಂದ ಪರೀಕ್ಷಿಸಿದ್ದೇನೆ,
“ನಾನು ಜ್ಞಾನಿಯಾಗಿರಲು ತೀರ್ಮಾನಿಸುತ್ತೇನೆ,” ಎಂದುಕೊಂಡೆನು.
ಆದರೆ ಅದು ನನ್ನಿಂದ ದೂರವಾಯಿತು.
24 ದೂರದಲ್ಲಿರುವುದನ್ನೂ, ಅಗಾಧದಲ್ಲಿರುವುದನ್ನೂ
ಯಾರು ಕಂಡುಕೊಂಡಾರು?
25 ಜ್ಞಾನದ ಮೂಲ ತತ್ವವನ್ನೂ,
ದುಷ್ಟತನದ ಮೂಢತನವನ್ನೂ,
ಮೂಢತ್ವದ ಹುಚ್ಚುತನವನ್ನೂ
ಪರೀಕ್ಷಿಸಿ ತಿಳಿದುಕೊಳ್ಳುವಂತೆ ಮನಸ್ಸುಮಾಡಿದೆನು.
 
26 ಕೆಟ್ಟ ಹೆಂಗಸಿನ ಹೃದಯವು ಬೋನೂ ಬಲೆಯೂ ಆಗಿರುತ್ತದೆ.
ಅವಳ ಕೈ ಸಂಕೋಲೆ ಆಗಿರುತ್ತದೆ.
ಇದು ಮರಣಕ್ಕಿಂತಲೂ ಕಠೋರವಾದದ್ದು ಎಂದು ನಾನು ಕಂಡಿದ್ದೇನೆ.
ದೇವರನ್ನು ಮೆಚ್ಚಿಸುವವನು,
ಅವಳಿಂದ ತಪ್ಪಿಸಿಕೊಳ್ಳುವನು.
ಆದರೆ ಪಾಪಿಯು ಅವಳ ಕೈಗೆ ಸಿಕ್ಕಿಬೀಳುವನು.
27 “ನೋಡು, ನಾನಿದನ್ನು ಹುಡುಕಿ ಕಂಡುಕೊಂಡಿದ್ದೇನೆ,” ಎಂದು ಪ್ರಸಂಗಿಯು ಹೇಳುತ್ತಿದ್ದಾನೆ:
ನಾನು ಒಂದರ ನಂತರ ಮತ್ತೊಂದನ್ನು ಕೂಡಿಸಿ, ಸಂಶೋಧನೆಗಳನ್ನು ನಡೆಸಿದೆ;
28 ನಾನು ಹುಡುಕಿ ನೋಡಿದರೂ
ನನಗೆ ಇದುವರೆಗೆ ಉತ್ತರ ಸಿಕ್ಕಲಿಲ್ಲ.
ನಾನು ಸಾವಿರ ಪುರುಷರಲ್ಲಿ ಒಬ್ಬ ಸತ್ಯವಂತನನ್ನು ಕಂಡೆನು.
ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ಸತ್ಯವಂತಳನ್ನು ಕಂಡುಕೊಳ್ಳಲಿಲ್ಲ.
29 ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ:
ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದರು.
ಮನುಷ್ಯರಾದರೋ ಅನೇಕ ಸ್ವಾರ್ಥ ಯೋಜನೆಗಳನ್ನು ಮಾಡಿಕೊಂಡಿದ್ದಾರೆ.