2
ಪ್ರವಾದಿಯಾಗಲು ಯೆಹೆಜ್ಕೇಲನಿಗೆ ಕರೆ
ಯೆಹೋವ ದೇವರು ನನಗೆ, “ಮನುಷ್ಯಪುತ್ರನೇ, ಎದ್ದು ನಿಲ್ಲು, ನಿನ್ನ ಸಂಗಡ ಮಾತನಾಡಬೇಕು.” ಹೀಗೆ ಅವರು ನನ್ನ ಸಂಗಡ ಮಾತನಾಡುವಾಗ, ದೇವರಾತ್ಮರು ನನ್ನೊಳಗೆ ಪ್ರವೇಶಿಸಿ, ನನ್ನನ್ನು ನಿಂತುಕೊಳ್ಳುವಂತೆ ಮಾಡಿದರು. ಆಗ ಅವರು ನನ್ನೊಂದಿಗೆ ಮಾತನಾಡುವುದನ್ನು ಚೆನ್ನಾಗಿ ಕೇಳಿದೆನು.
ಅವರು, “ಮನುಷ್ಯಪುತ್ರನೇ, ನನಗೆ ವಿರೋಧವಾಗಿ ತಿರುಗಿ ಬಿದ್ದಿರುವ ಮತ್ತು ದ್ರೋಹಮಾಡಿದ ಜನಾಂಗದವರಾದ ಇಸ್ರಾಯೇಲರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ. ಅವರೂ, ಅವರ ಪಿತೃಗಳೂ ಇಂದಿನವರೆಗೂ ನನಗೆ ವಿರೋಧವಾಗಿ ದ್ರೋಹ ಮಾಡಿದ್ದಾರೆ. ಅವರು ಕಠಿಣ ಹೃದಯದವರು ಮತ್ತು ಹಠಮಾರಿ ಆಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ. ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ,’ ಎಂದು ಹೇಳಬೇಕು. ಅವರು ಕೇಳಲಿ ಅಥವಾ ಕೇಳದೇ ಇರಲಿ, ಏಕೆಂದರೆ ಅವರು ತಿರುಗಿಬೀಳುವ ಜನರು, ಆದರೆ ತಮ್ಮೊಳಗೆ ಪ್ರವಾದಿ ಇರುವನೆಂದು ತಿಳಿದುಕೊಂಡರೆ ಸಾಕು. ಮನುಷ್ಯಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು, ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯೆ ಇದ್ದರೂ, ಅವರಿಗೆ ಭಯಪಡಬೇಡ. ಅವರ ಗದರಿಕೆಗೆ ಹೆದರದಿರು. ಅವರು ದ್ರೋಹಿ ವಂಶದವರು. ಅವರ ಬಿರುನುಡಿಗೆ ದಿಗಿಲು ಪಡಬೇಡ. ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು. ಅವರು ಕೇಳಿದರೂ ಸರಿ, ಕೇಳದಿದ್ದರೂ ಸರಿ, ಏಕೆಂದರೆ ಅವರು ತಿರುಗಿಬೀಳುವ ಜನರು. ಆದರೆ ಮನುಷ್ಯಪುತ್ರನೇ, ನೀನಾದರೋ ನಾನು ಹೇಳುವುದನ್ನು ಕೇಳು: ಆ ತಿರುಗಿಬೀಳುವ ಜನರ ಹಾಗೆ ನೀನೂ ತಿರುಗಿಬೀಳಬೇಡ. ನಿನ್ನ ಬಾಯನ್ನು ತೆರೆದು ನಾನು ನಿನಗೆ ಕೊಡುವುದನ್ನು ತಿನ್ನು,” ಎಂದರು.
ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು. ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು. 10 ಆ ಸುರುಳಿಯನ್ನು ನನ್ನೆದುರಿನಲ್ಲೇ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಪ್ರಲಾಪ, ಶೋಕ ಮತ್ತು ಶಾಪದ ಪದಗಳನ್ನು ಬರೆಯಲಾಗಿತ್ತು.