47
ಆಲಯದಿಂದ ಹೊರಡುವ ನದಿ
ಆ ಮನುಷ್ಯನು ನನ್ನನ್ನು ಮತ್ತೆ ಆಲಯದ ಬಾಗಿಲಿನ ಕಡೆಗೆ ಕರೆದುಕೊಂಡು ಹೋದನು. ಇಗೋ, ಆಲಯದ ಹೊಸ್ತಿಲಿನ ಕೆಳಗಿನಿಂದ ನೀರು ಹೊರಟು ಪೂರ್ವದ ಕಡೆಗೆ ನೀರು ಹರಿಯಿತು, ಏಕೆಂದರೆ ಆಲಯದ ಮುಂಭಾಗದಲ್ಲಿ ನೀರು ಇತ್ತು. ಆ ನೀರು ಆಲಯದ ದಕ್ಷಿಣಕ್ಕೆ ಕೆಳಗಡೆ ಹರಿಯಿತು. ಆಮೇಲೆ ಅವನು ನನ್ನನ್ನು ಬಾಗಿಲಿನ ಮಾರ್ಗವಾಗಿ ಉತ್ತರದ ಕಡೆಗೆ ಕರೆದುಕೊಂಡು ಹೋಗಿ ನನ್ನನ್ನು ಹೊರಗಿನ ಬಾಗಿಲಿನವರೆಗೂ ಹೊರಗಿನ ಮಾರ್ಗವಾದ ಪೂರ್ವಕ್ಕೆ ಅಭಿಮುಖವಾದ ಮಾರ್ಗವನ್ನು ಸುತ್ತುವಂತೆ ಮಾಡಿದನು. ಮತ್ತು ದಕ್ಷಿಣ ಭಾಗದಿಂದ ನೀರು ಜಿನುಗುತ್ತಿತ್ತು.
ಕೈಯಲ್ಲಿ ಅಳತೆಮಾಡುವ ನೂಲು ಇದ್ದ ಆ ಮನುಷ್ಯನು ಪೂರ್ವದ ಕಡೆಗೆ ಹೊರಟು ಸಾವಿರ ಮೊಳ ಅಳೆದ ಮೇಲೆ, ನನ್ನನ್ನು ನೀರಿನಿಂದ ದಾಟಿಸಿದನು. ಅಲ್ಲಿ ನೀರು ಪಾದ ಮುಳುಗುವಷ್ಟಿತ್ತು. ಅವನು ಸಾವಿರಮೊಳಗಳನ್ನು ಅಳೆದ ಮೇಲೆ ನನ್ನನ್ನು ನೀರಿನಿಂದ ದಾಟಿಸಲು, ಆಗ ನೀರು ಮೊಣಕಾಲುಗಳ ತನಕ ಇತ್ತು; ಇನ್ನೂ ಸಾವಿರ ಅಳೆದು ನನ್ನನ್ನು ದಾಟಿಸಲಾಗಿ ನೀರು ಸೊಂಟದವರೆಗೂ ಇತ್ತು. ಇನ್ನೂ ಸಾವಿರ ಅಳೆದ ಮೇಲೆ ಅದು ನಾನು ದಾಟಲಾಗದಂಥ ನದಿಯಾಗಿತ್ತು. ಏಕೆಂದರೆ ನೀರು ಹೆಚ್ಚಿ, ಈಜುವಷ್ಟಾಗಿ ದಾಟಲಾಗದಷ್ಟು ನದಿಯಾಗಿತ್ತು. ಅವರು ನನಗೆ, “ಮನುಷ್ಯಪುತ್ರನೇ, ನೀನು ಇದನ್ನು ನೋಡಿದೆಯಾ?”
ಆಗ ಅವನು ನನ್ನನ್ನು ನಡೆಸಿಕೊಂಡು ಮತ್ತೆ ನದಿಯ ತೀರಕ್ಕೆ ಕರೆತಂದನು. ನಾನು ತಿರುಗಿ ಬಂದಾಗ ಇಗೋ, ನದಿಯ ತೀರದಲ್ಲಿ ಆ ಕಡೆಯೂ ಈ ಕಡೆಯೂ ಅತಿ ಹೆಚ್ಚು ಮರಗಳಿದ್ದವು. ಆಗ ಅವನು, “ಈ ನೀರು ಪೂರ್ವಸೀಮೆಗೆ ಹೋಗಿ ಅರಾಬಾ ಎಂಬ ಒಣಭೂಮಿಗೆ ಇಳಿದು ಲವಣ ಸಮುದ್ರ ಸೇರುವುದು. ಲವಣ ಸಮುದ್ರ ಸೇರಿದ ಮೇಲೆ ಅಲ್ಲಿಯ ನೀರು ಸಿಹಿಯಾಗುವುದು. ಈ ದಿನ ಬರುವ ಎಲ್ಲಾ ಸ್ಥಳಗಳಲ್ಲಿ ಸಂಚರಿಸುವಂಥ ಸಮಸ್ತ ಜೀವಿಗಳು ಬದುಕುವುವು ಮತ್ತು ಮೀನುಗಳ ಬಹುದೊಡ್ಡ ಸಮೂಹವಾಗುವುವು. ಏಕೆಂದರೆ ಈ ನೀರು ಅಲ್ಲಿಗೆ ಬರುವಾಗ ಅವು ಶುದ್ಧವಾಗುವುವು. ಈ ನದಿಗಳು ಎಲ್ಲಿಗೆ ಬರುತ್ತವೋ ಅಲ್ಲಿ ಎಲ್ಲಾ ಬದುಕುವುವು. 10 ಏನ್ಗೆದಿ ಮೊದಲುಗೊಂಡು ಎನ್ ಎಗ್ಲಯಿಮಿನವರೆಗೂ ಬೆಸ್ತರು ಅದರ ಬಳಿಯಲ್ಲಿ ನಿಲ್ಲುವರು. ಅಲ್ಲಿ ಬಲೆಹಾಸುವ ಸ್ಥಳಗಳಿರುವುವು. ಅದರ ಮೀನುಗಳು ಮಹಾಸಾಗರದ ಮೀನುಗಳಾಗಿ ಜಾತ್ಯಾನುಸಾರವಾಗಿ ಬಹಳವಾಗಿರುವುವು. 11 ಆದರೆ ಅದರ ಕೆಸರಾದ ಸ್ಥಳಗಳು, ಕೊಳಚೆಗಳು, ಶುದ್ಧವಾಗುವುದಿಲ್ಲ. ಅವು ಉಪ್ಪಿನ ಗಣಿಯಾಗುವುವು. 12 ನದಿಯ ಎರಡೂ ದಡಗಳಲ್ಲಿ ಆಹಾರಕ್ಕಾಗಿ ಎಲ್ಲಾ ತರಹದ ಮರಗಳು ಬೆಳೆಯುವುವು. ಅವುಗಳ ಎಲೆಗಳು ಬಾಡುವುದಿಲ್ಲ. ಅವುಗಳ ಹಣ್ಣು ಮುಗಿದುಹೋಗುವುದಿಲ್ಲ. ಅವು ತಿಂಗಳುಗಳ ಪ್ರಕಾರ ಹೊಸ ಫಲಗಳನ್ನು ಫಲಿಸುವುವು. ಏಕೆಂದರೆ ಅವುಗಳ ನೀರು ಪರಿಶುದ್ಧ ಸ್ಥಳದಿಂದ ಹೊರಟುಬಂದದ್ದು, ಅವುಗಳ ಹಣ್ಣುಗಳು ಆಹಾರಕ್ಕೂ ಅವುಗಳ ಎಲೆಗಳು ಔಷಧಕ್ಕೂ ಆಗುವುವು.”
ದೇಶದ ಮೇರೆಗಳು
13 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀವು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ಪ್ರಕಾರ ದೇಶವನ್ನು ಬಾಧ್ಯವಾಗಿ ಹೊಂದುವ ಹಾಗೆ ಇದು ಮೇರೆಯಾಗಿದೆ. ಯೋಸೇಫನಿಗೆ ಎರಡು ಪಾಲುಗಳು ಕೊಡಲಾಗಿದೆ. 14 ನೀವು ಒಬ್ಬೊಬ್ಬರೂ ಸರಿಯಾಗಿ ಅದನ್ನು ಬಾಧ್ಯವಾಗಿ ಹೊಂದಬೇಕು. ಏಕೆಂದರೆ ಅದನ್ನು ನಿಮ್ಮ ಪಿತೃಗಳಿಗೆ ಕೊಡುವ ಹಾಗೆ ನಾನು ಕೈಯೆತ್ತಿ ಪ್ರಮಾಣ ಮಾಡಿದ್ದೇನೆ. ಈ ದೇಶವು ನಿಮಗೆ ಬಾಧ್ಯವಾಗಿ ಬರುವುದು.
 
15 “ಇದೇ ದೇಶದ ಮೇರೆಯು:
 
“ಉತ್ತರದ ಕಡೆಗೆ ಮಹಾ ಸಮುದ್ರದಿಂದ ಮೊದಲುಗೊಂಡು ಹೆತ್ಲೋನಿನ ಮಾರ್ಗವಾಗಿ ಲೆಬೊ ಹಮಾತ್ ದಾಟಿ ಚೆದಾದಿಗೆ ಸೇರುವವರೆಗೂ; 16 ಹಮಾತೂ ಬೇರೋತವು, ದಮಸ್ಕದವರೆಗೂ ಹಾಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು. 17 ಹೀಗೆ ಹಚರ್ ಏನಾನೂ ದಮಸ್ಕದ ಮೇರೆಯೂ ಉತ್ತರದ ಕಡೆಗಿರುವ ಹಮಾತ್ಯರದು ಹಾಮಾತಿನ ಮೇರೆಯೂ ಉತ್ತರದ ಕಡೆಯಾಗಿರುವುದು. ಇದು ಉತ್ತರ ಮೇರೆ.
18 ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಲವಣ ಸಮುದ್ರದಿಂದ ಮತ್ತು ತಾಮರ್ ನೀವು ಅಳೆಯಬೇಕು. ಇದೇ ಪೂರ್ವದಿಕ್ಕಿನ ಮೇರೆಯಾಗಿದೆ.
19 ದಕ್ಷಿಣದ ಕಡೆಗಿರುವ ದಕ್ಷಿಣದ ಮೇರೆಯೂ ತಾಮಾರ್ ಮೊದಲುಗೊಂಡು ಮೆರೀಬಾ ಕಾದೇಶಿನ ಹಳ್ಳದ ಮೇಲೆ ಈಜಿಪ್ಟಿನ ಮುಂದಿರುವ, ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರದವರೆಗೆ ಇರುವುದು. ಇದೇ ದಕ್ಷಿಣದ ಮೇರೆ.
20 ಉತ್ತರದ ಮೇರೆಯಿಂದ ಹಮಾತಿನ ಪ್ರದೇಶದವರೆಗೂ ಇರುವ ದೊಡ್ಡ ಸಮುದ್ರವು ಪಶ್ಚಿಮದ ಕಡೆಗಿದೆ. ಇದೇ ಪಶ್ಚಿಮದ ಮೇರೆ.
 
21 “ಹೀಗೆ ನೀವು ಈ ದೇಶವನ್ನು ಇಸ್ರಾಯೇಲನ ಗೋತ್ರಗಳ ಪ್ರಕಾರ ಪಾಲುಮಾಡಿಕೊಳ್ಳಬೇಕು. 22 ನೀವು ಅದನ್ನು ನಿಮಗೂ ನಿಮ್ಮ ಮಧ್ಯದಲ್ಲಿ ತಂಗುವಂಥವರಿಗೂ ನಿಮ್ಮ ಮಧ್ಯದಲ್ಲಿ ಮಕ್ಕಳನ್ನು ಪಡೆದಂತ ವಿದೇಶಿಯರಿಗೂ ಚೀಟುಹಾಕಿ ಬಾಧ್ಯವಾಗಿ ವಿಭಾಗಿಸಿ ಹಂಚಬೇಕು. ಅವರು ನಿಮಗೆ ಇಸ್ರಾಯೇಲಿನ ಮಕ್ಕಳೊಳಗೆ ಹುಟ್ಟಿದವರೆಂದು ಪರಿಗಣಿಸಬೇಕು. ಅವರಿಗೆ ಇಸ್ರಾಯೇಲಿನ ಗೋತ್ರಗಳೊಳಗೆ ಬಾಧ್ಯತೆಯಾಗಬೇಕು. 23 ವಿದೇಶಿಯರು ಯಾವ ಗೋತ್ರದ ಸಂಗಡ ತಂಗುತ್ತಾರೋ ಅದರಲ್ಲಿಯೇ ನೀವು ಅವರಿಗೆ ಸೊತ್ತನ್ನು ಕೊಡಬೇಕು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.