9
ಅಂತರ ವಿವಾಹದ ಬಗ್ಗೆ ಎಜ್ರನ ಪ್ರಾರ್ಥನೆ
1 ಈ ಸಂಗತಿಗಳನ್ನು ಮಾಡಿದ ತರುವಾಯ ಪ್ರಧಾನರು ನನ್ನ ಬಳಿಗೆ ಬಂದು, “ಇಸ್ರಾಯೇಲರೂ, ಯಾಜಕರೂ, ಲೇವಿಯರೂ ತಮ್ಮ ನೆರೆಯವರಿಂದ ಪ್ರತ್ಯೇಕಿಸಿಕೊಳ್ಳಲಿಲ್ಲ. ಅವರು ಕಾನಾನ್ಯರು, ಹಿತ್ತಿಯರು, ಪೆರಿಜೀಯರು, ಯೆಬೂಸಿಯರು, ಅಮ್ಮೋನ್ಯರು, ಮೋವಾಬ್ಯರು, ಈಜಿಪ್ಟರು, ಅಮೋರಿಯರು ಇವರ ಅಸಹ್ಯ ಸಂಗತಿಗಳ ಪದ್ಧತಿಗಳಂತೆ ನಡೆಯುತ್ತಾ ಇದ್ದಾರೆ.
2 ಇಸ್ರಾಯೇಲರು ತಮಗೂ, ತಮ್ಮ ಪುತ್ರರಿಗೂ ಅವರ ಪುತ್ರಿಯರನ್ನು ತೆಗೆದುಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ. ನಿಶ್ಚಯವಾಗಿ ಪ್ರಧಾನರು ಮತ್ತು ಅಧಿಕಾರಸ್ಥರು ಈ ಅಪನಂಬಿಗಸ್ತಿಕೆಗೆ ಮುಂದಾಳುಗಳಾದರು,” ಎಂದು ತಿಳಿಸಿದರು.
3 ನಾನು ಇದನ್ನು ಕೇಳಿದಾಗ ನನ್ನ ವಸ್ತ್ರವನ್ನೂ, ನನ್ನ ನಿಲುವಂಗಿಯನ್ನೂ ಹರಿದು ನನ್ನ ತಲೆಯ ಮತ್ತು ಗಡ್ಡದ ಕೂದಲನ್ನು ಕಿತ್ತು, ಸ್ತಬ್ಧನಾಗಿ ಕುಳಿತುಕೊಂಡೆನು.
4 ಆಗ ಸೆರೆಯಿಂದ ಬಂದವರ ಅಪರಾಧಕ್ಕೋಸ್ಕರ ಇಸ್ರಾಯೇಲ್ ದೇವರ ಮಾತುಗಳಿಗೆ ಹೆದರಿಕೊಂಡಿದ್ದ ಮನುಷ್ಯರೆಲ್ಲರೂ, ನನ್ನ ಬಳಿಗೆ ಕೂಡಿಬಂದರು. ಆದರೆ ನಾನು ಸಾಯಂಕಾಲದ ಬಲಿಯನ್ನು ಅರ್ಪಿಸುವವರೆಗೆ ಸ್ತಬ್ಧನಾಗಿ ಕುಳಿತುಕೊಂಡಿದ್ದೆನು.
5 ಆದರೆ ಸಾಯಂಕಾಲದ ಬಲಿಯನ್ನರ್ಪಿಸುವಾಗ, ನಾನು ನನ್ನ ಶೋಕ ಸ್ಥಿತಿಯಿಂದ ಎದ್ದು, ನನ್ನ ವಸ್ತ್ರವನ್ನೂ, ನನ್ನ ನಿಲುವಂಗಿಯನ್ನೂ ಹರಿದುಕೊಂಡವನಾಗಿ, ನನ್ನ ಮೊಣಕಾಲುಗಳನ್ನೂರಿ, ನನ್ನ ಕೈಗಳನ್ನು ನನ್ನ ದೇವರಾಗಿರುವ ಯೆಹೋವ ದೇವರ ಮುಂದೆ ಚಾಚಿ,
6 ಪ್ರಾರ್ಥಿಸಿದೆನು:
“ನನ್ನ ದೇವರೇ, ನಾನು ನನ್ನ ಮುಖವನ್ನು ನಿಮ್ಮ ಮುಂದೆ ಎತ್ತಲಾರದೆ, ಲಜ್ಜೆಯಿಂದ ನಾಚಿಕೆಪಡುತ್ತೇನೆ. ನನ್ನ ದೇವರೇ, ನಮ್ಮ ಅಕ್ರಮಗಳು ನಮ್ಮ ತಲೆಮೀರಿ ಬೆಳೆದಿವೆ. ನಮ್ಮ ಅಪರಾಧವು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿವೆ.
7 ನಮ್ಮ ತಂದೆಗಳ ದಿವಸಗಳು ಮೊದಲ್ಗೊಂಡು ಈ ದಿವಸದವರೆಗೆ ದೊಡ್ಡ ಅಪರಾಧಕ್ಕೊಳಗಾಗಿದ್ದೇವೆ. ಇಂದಿನ ಪ್ರಕಾರವೇ ನಾವು ಅನ್ಯದೇಶಗಳ ಅರಸರ ಕೈಗೆ ಸಿಕ್ಕಿಬಿದ್ದೆವು. ನಮ್ಮ ಅಕ್ರಮಗಳಿಗೋಸ್ಕರ ನಾವೂ, ನಮ್ಮ ಅರಸರೂ ನಮ್ಮ ಯಾಜಕರೂ ಖಡ್ಗವೂ ಸೆರೆಗೂ ಕೊಳ್ಳೆಗೂ ನಾಚಿಕೆಗೂ ಗುರಿಯಾಗಿದ್ದೇವೆ.
8 “ಈಗ ನಮ್ಮ ಯೆಹೋವ ದೇವರೇ, ಸ್ವಲ್ಪ ಹೊತ್ತು ನಮಗೆ ದಯೆತೋರಿ ನಮ್ಮ ದಾಸತ್ವದಿಂದ ನಮಗೆ ಬಿಡುಗಡೆ ಕೊಟ್ಟಿದ್ದೀರಿ. ನಮ್ಮ ಕಣ್ಣುಗಳನ್ನು ಬೆಳಗಿಸಿ, ತಮ್ಮ ಪರಿಶುದ್ಧ ಸ್ಥಾನದಲ್ಲಿ ನೆಲೆಗೊಳಿಸುವಂತೆ ಮಾಡಿದ್ದೀರಿ
9 ನಾವು ಗುಲಾಮರಾದರೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮನ್ನು ಕೈಬಿಡಲಿಲ್ಲ; ಹಾಳುಬಿದ್ದ ದೇವಾಲಯವನ್ನು ಪುನಃ ಕಟ್ಟಿ ಭದ್ರಪಡಿಸಲು ನಮಗೆ ನವಜೀವನ ಕೊಟ್ಟು, ಯೆಹೂದ ಮತ್ತು ಯೆರೂಸಲೇಮಿನಲ್ಲಿ ನಮಗೆ ಸಂರಕ್ಷಣೆಯ ಗೋಡೆ ಸಿಗುವಂತೆ, ಪಾರಸಿಯ ರಾಜರ ಸಮ್ಮುಖದಲ್ಲಿ ನಮಗೆ ದಯೆಯನ್ನು ದಯಪಾಲಿಸಿದ್ದೀರಿ.
10 “ಆದರೆ ಈಗ ನಮ್ಮ ದೇವರೇ, ಇದರ ತರುವಾಯ ನಾವು ಏನು ಹೇಳೋಣ? ನಿಮ್ಮ ಆಜ್ಞೆಗಳನ್ನು ನಾವು ತೊರೆದಿದ್ದೇವೆ.
11 ನಿಮ್ಮ ಸೇವಕರಾದ ಪ್ರವಾದಿಗಳ ಮುಖಾಂತರ ನೀವು ಆ ನಿಮ್ಮ ಆಜ್ಞೆಗಳನ್ನು ಕೊಟ್ಟಿದ್ದೀರಿ. ‘ನೀವು ಸ್ವಾಧೀನಮಾಡಿಕೊಳ್ಳಲು ಹೋಗುವ ದೇಶವು, ಆ ದೇಶಗಳ ಜನರ ಅಶುದ್ಧತ್ವದಿಂದ ಮೈಲಿಗೆಯಾದ ದೇಶವಾಗಿದೆ. ಆ ಜನರು ತಮ್ಮ ಅಸಹ್ಯ ಅಭ್ಯಾಸಗಳಿಂದ ಅದನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಯವರೆಗೂ ತುಂಬಿಸಿದ್ದಾರೆ.
12 ಆದ್ದರಿಂದ ನೀವು ಪ್ರಬಲವಾಗಿ ದೇಶದ ಸಮೃದ್ಧಿಯನ್ನು ಅನುಭವಿಸಿ, ಅದನ್ನು ನಿಮ್ಮ ಮಕ್ಕಳಿಗೆ ಶಾಶ್ವತ ಸ್ವಾಸ್ತ್ಯವನ್ನಾಗಿ ಕೊಡುವ ಹಾಗೆ ನೀವು ನಿಮ್ಮ ಪುತ್ರಿಯರನ್ನು ಅವರ ಪುತ್ರರಿಗೆ ಮದುವೆಮಾಡಿಕೊಡಬೇಡಿರಿ. ಅವರ ಪುತ್ರಿಯರನ್ನು ನಿಮ್ಮ ಪುತ್ರರಿಗೆ ತೆಗೆದುಕೊಳ್ಳಬೇಡಿರಿ. ಅವರ ಸಮಾಧಾನವನ್ನೂ, ಅವರ ಮೇಲನ್ನೂ ಹುಡುಕಲೇ ಬೇಡಿರಿ,’ ಎಂದು ದೇವರೇ ನಮಗೆ ಹೇಳಿದಿರಲ್ಲವೇ?
13 “ನಮ್ಮ ದುಷ್ಕಾರ್ಯ ಹಾಗೂ ನಮ್ಮ ಮಹಾ ಅಪರಾಧಕ್ಕಾಗಿ ನಮ್ಮ ಮೇಲೆ ಬಂದದ್ದೆಲ್ಲ ಬಂದ ತರುವಾಯ, ನಮ್ಮ ದೇವರಾಗಿರುವ ನೀವು ನಮ್ಮ ಪಾಪಗಳಿಗಿಂತ ಕಡಿಮೆ ಶಿಕ್ಷೆ ನೀಡಿದ್ದೀರಿ ಮತ್ತು ನಮ್ಮಲ್ಲಿ ಈ ರೀತಿಯಾಗಿ ಇಷ್ಟುಮಂದಿಯನ್ನು ಉಳಿಸಿದ್ದೀರಿ.
14 ನಾವು ನಿಮ್ಮ ಆಜ್ಞೆಗಳನ್ನು ಪುನಃ ಮೀರಿ ಅಸಹ್ಯ ಅಭ್ಯಾಸಕರಾದ ಈ ಜನರ ಸಂಗಡ ವಿವಾಹ ಸಂಬಂಧ ಮಾಡಬಹುದೇ? ಹಾಗೆ ಮಾಡಿದರೆ, ಉಳಿದವರೂ ತಪ್ಪಿಸಿಕೊಂಡವರೂ ಇಲ್ಲದಂತೆ ದಂಡಿಸಲು, ನೀವು ನಮ್ಮ ಮೇಲೆ ಕೋಪಗೊಳ್ಳುವುದು ಯೋಗ್ಯವೇ?
15 ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರೇ, ನೀವು ನೀತಿವಂತರು! ನಾವು ಇಂದು ತಪ್ಪಿಸಿಕೊಂಡು ಉಳಿದಿದ್ದೇವೆ. ನಾವು ನಮ್ಮ ಅಪರಾಧಗಳ ನಿಮಿತ್ತ ನಿಮ್ಮ ಮುಂದೆ ನಿಲ್ಲಲು ಯೋಗ್ಯರಲ್ಲದಿದ್ದರೂ, ನಮ್ಮ ಅಪರಾಧಗಳೊಂದಿಗೆ ನಿಮ್ಮ ಮುಂದೆ ನಿಂತಿದ್ದೇವೆ,” ಎಂದು ಪ್ರಾರ್ಥನೆಮಾಡಿದೆ.