14
1 ತರುವಾಯ ಯೆಹೋವ ದೇವರು ಮಾತನಾಡಿ ಮೋಶೆಗೆ,
2 “ಇಸ್ರಾಯೇಲರು ಹಿಂತಿರುಗಿ ಹೋಗಿ ಪೀಹಹೀರೋತಿಗೆ ಎದುರಾಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯದಲ್ಲಿ ಬಾಲ್ಜೆಫೋನಿಗೆ ಎದುರಾಗಿ ಇಳಿದುಕೊಳ್ಳಬೇಕೆಂದು ಅವರಿಗೆ ಹೇಳು. ಅದರ ಎದುರಾಗಿ ನೀವು ಸಮುದ್ರದ ತೀರದಲ್ಲಿ ಇಳಿದುಕೊಳ್ಳಬೇಕು.
3 ಏಕೆಂದರೆ ಫರೋಹನು ಇಸ್ರಾಯೇಲರ ವಿಷಯದಲ್ಲಿ, ‘ಅವರು ಗಲಿಬಿಲಿಗೊಂಡು ಮರುಭೂಮಿಯನ್ನು ಸುತ್ತುವರಿದ ಪ್ರದೇಶದಲ್ಲಿ ಅತ್ತಿತ್ತ ಹೋಗುತ್ತಿರುವರು,’ ಎಂದುಕೊಳ್ಳುವನು.
4 ಇದಲ್ಲದೆ ಫರೋಹನು ನಿಮ್ಮನ್ನು ಹಿಂದಟ್ಟುವಂತೆ ನಾನು ಅವನ ಹೃದಯವನ್ನು ಕಠಿಣ ಮಾಡುವೆನು. ಫರೋಹನಲ್ಲಿಯೂ, ಅವನ ಎಲ್ಲಾ ಸೈನ್ಯದಲ್ಲಿಯೂ ನನ್ನನ್ನು ಘನಪಡಿಸಿಕೊಳ್ಳುವೆನು. ಆಗ ನಾನೇ ಯೆಹೋವ ದೇವರೆಂದು ಈಜಿಪ್ಟಿನವರು ತಿಳಿಯುವರು,” ಎಂದು ಹೇಳಿದರು. ಅದರಂತೆಯೇ ಇಸ್ರಾಯೇಲರು ಮಾಡಿದರು.
5 ಜನರು ಓಡಿಹೋದರೆಂಬ ವಿಷಯ ಈಜಿಪ್ಟಿನ ಅರಸನಿಗೆ ತಿಳಿಯಿತು. ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಅವರಿಗೆ ವಿರೋಧವಾಗಿ ತಿರುಗಿಕೊಂಡಿತು. ಅವರು, “ಇಸ್ರಾಯೇಲರು ನಮ್ಮ ಸೇವೆ ಮಾಡುವುದನ್ನು ಬಿಟ್ಟು ಹೋಗಿಬಿಡುವಂತೆ ನಾವು ಏಕೆ ಮಾಡಿದೆವು?” ಎಂದುಕೊಂಡರು.
6 ಆಗ ಫರೋಹನು ತನ್ನ ರಥವನ್ನು ಸಿದ್ಧಮಾಡಿ, ತನ್ನ ಸೈನ್ಯವನ್ನು ತನ್ನೊಂದಿಗೆ ತೆಗೆದುಕೊಂಡನು.
7 ಇದಲ್ಲದೆ ಅವನು ಆರಿಸಿಕೊಂಡ ಅತ್ಯುತ್ತಮ ಆರುನೂರು ರಥಗಳನ್ನೂ, ಈಜಿಪ್ಟಿನ ಎಲ್ಲಾ ರಥಗಳನ್ನೂ, ಅವುಗಳ ಮೇಲೆ ಅಧಿಪತಿಗಳನ್ನೂ ತೆಗೆದುಕೊಂಡನು.
8 ಈಜಿಪ್ಟಿನ ಅರಸನಾದ ಫರೋಹನ ಹೃದಯವನ್ನು ಯೆಹೋವ ದೇವರು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲರನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲರು ಧೈರ್ಯದಿಂದ ಹೊರಗೆ ಹೋದರು.
9 ಈಜಿಪ್ಟಿನವರು ಅವರನ್ನು ಹಿಂದಟ್ಟಿದರು. ಅವರು ಸಮುದ್ರ ತೀರದಲ್ಲಿ ಇಳಿದುಕೊಂಡಿರುವಾಗ, ಫರೋಹನ ಎಲ್ಲಾ ಕುದುರೆಗಳೂ ರಥಗಳೂ ಕುದುರೆ ಸವಾರರೂ ಅವನ ಸೈನ್ಯವೂ ಪೀಹಹೀರೋತಿನ ಸಮೀಪದಲ್ಲಿ ಬಾಲ್ಜೆಫೋನಿನ ಎದುರಾಗಿ ಇಸ್ರಾಯೇಲರನ್ನು ಸಮೀಪಿಸಿದರು.
10 ಫರೋಹನು ಸಮೀಪಕ್ಕೆ ಬರುವುದನ್ನು ಇಸ್ರಾಯೇಲರು ಕಣ್ಣೆತ್ತಿ ನೋಡಿದರು. ಈಜಿಪ್ಟಿನವರು ಅವರ ಹಿಂದೆ ಬರುತ್ತಿರುವುದನ್ನು ಕಂಡು ಇಸ್ರಾಯೇಲರು ಬಹಳ ಭಯಪಟ್ಟು ಯೆಹೋವ ದೇವರಿಗೆ ಮೊರೆಯಿಟ್ಟರು.
11 ಅವರು ಮೋಶೆಗೆ, “ಈಜಿಪ್ಟಿನಲ್ಲಿ ಸಮಾಧಿಗಳು ಇಲ್ಲದ ಕಾರಣ ನಾವು ಮರುಭೂಮಿಯಲ್ಲಿ ಸಾಯುವ ಹಾಗೆ ನಮ್ಮನ್ನು ಕರೆದುಕೊಂಡು ಬಂದೆಯೋ? ಏಕೆ ನೀನು ಈ ಪ್ರಕಾರ ನಮಗೆ ಮಾಡಿ, ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆ?
12 ನಾವು ಈಜಿಪ್ಟ್ ದೇಶದಲ್ಲಿದ್ದಾಗಲೇ, ‘ನೀನು ನಮ್ಮ ಗೊಡವೆಗೆ ಬರಬೇಡ, ನಾವು ಈಜಿಪ್ಟಿನವರಿಗೆ ಸೇವೆಮಾಡುತ್ತೇವೆ,’ ಎಂದು ನಿನಗೆ ಹೇಳಲಿಲ್ಲವೇ? ನಾವು ಮರುಭೂಮಿಯಲ್ಲಿ ಸಾಯುವುದಕ್ಕಿಂತ ಈಜಿಪ್ಟಿನವರಿಗೆ ಸೇವೆ ಮಾಡುವುದೇ ಒಳ್ಳೆಯದಾಗಿತ್ತಲ್ಲಾ?” ಎಂದು ಹೇಳಿದರು.
13 ಅದಕ್ಕೆ ಮೋಶೆಯು ಜನರಿಗೆ, “ನೀವು ಭಯಪಡಬೇಡಿರಿ, ದೃಢವಾಗಿ ನಿಲ್ಲಿರಿ. ಯೆಹೋವ ದೇವರು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಈಜಿಪ್ಟಿನವರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವುದಿಲ್ಲ.
14 ಯೆಹೋವ ದೇವರು ನಿಮಗೋಸ್ಕರ ಯುದ್ಧಮಾಡುವರು, ಆದರೆ ನೀವು ವಿಶ್ರಾಂತಿಯಿಂದಿರಿ,” ಎಂದನು.
15 ಆಗ ಯೆಹೋವ ದೇವರು ಮೋಶೆಗೆ, “ನೀನು ನನಗೆ ಮೊರೆಯಿಡುವುದೇನು? ಇಸ್ರಾಯೇಲರಿಗೆ ಮುಂದಕ್ಕೆ ಹೊರಡಬೇಕೆಂದು ಹೇಳು.
16 ನೀನು ನಿನ್ನ ಕೋಲನ್ನು ಎತ್ತಿ, ನಿನ್ನ ಕೈಯನ್ನು ಸಮುದ್ರದ ಮೇಲೆ ಚಾಚಿ, ಅದನ್ನು ವಿಭಾಗಿಸು. ಆಗ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ಹೋಗುವರು.
17 ನಾನು ಈಜಿಪ್ಟಿನವರ ಹೃದಯವನ್ನು ಕಠಿಣ ಮಾಡುತ್ತೇನೆ. ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು.
18 ನಾನು ಫರೋಹನ ಮೇಲೆಯೂ ಅವನ ರಥಗಳ ಮೇಲೆಯೂ ಅವನ ಕುದುರೆ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಂಡಾಗ, ನಾನೇ ಯೆಹೋವ ದೇವರೆಂದು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು.
19 ಆಗ ಇಸ್ರಾಯೇಲ್ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದೆ ಬಂದನು. ಅವರ ಮುಂದೆ ಇದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.
20 ಅದು ಈಜಿಪ್ಟಿನ ದಂಡಿಗೂ ಇಸ್ರಾಯೇಲರ ದಂಡಿಗೂ ನಡುವೆ ಬಂದಿತು. ಮೇಘಸ್ತಂಭವು ಈಜಿಪ್ಟಿನವರಿಗೆ ಕತ್ತಲನ್ನೂ ಇಸ್ರಾಯೇಲರಿಗೆ ಬೆಳಕನ್ನೂ ನೀಡಿತು. ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರ ಒಬ್ಬರು ಬರಲಾಗಲಿಲ್ಲ.
21 ಆಗ ಮೋಶೆಯು ಸಮುದ್ರದ ಮೇಲೆ ತನ್ನ ಬಲಗೈಯನ್ನು ಚಾಚಲಾಗಿ, ಯೆಹೋವ ದೇವರು ರಾತ್ರಿಯೆಲ್ಲಾ ಬಲವಾದ ಪೂರ್ವದಿಕ್ಕಿನ ಗಾಳಿಯಿಂದ ಸಮುದ್ರವನ್ನು ಹಿಂದಕ್ಕೆ ಹೋಗುವಂತೆ ಸಮುದ್ರವನ್ನು ಸರಿಸಿ, ಒಣ ನೆಲ ಕಾಣಿಸುವಂತೆ ಮಾಡಿದರು. ಆಗ ನೀರು ವಿಭಾಗವಾಯಿತು.
22 ಹೀಗೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಹೋದರು. ನೀರು ಅವರಿಗೆ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಾಗಿ ನಿಂತಿತ್ತು.
23 ಈಜಿಪ್ಟಿನವರೂ ಫರೋಹನ ಎಲ್ಲಾ ಕುದುರೆಗಳೂ ಅವನ ರಥಗಳೂ ಕುದುರೆ ಸವಾರರೂ ಅವರನ್ನು ಹಿಂದಟ್ಟಿ, ಅವರ ಹಿಂದೆ ಸಮುದ್ರದ ಮಧ್ಯದಲ್ಲಿ ಸೇರಿದರು.
24 ಬೆಳಗಿನ ಜಾವದಲ್ಲಿ ಯೆಹೋವ ದೇವರು ಅಗ್ನಿ ಮೇಘಗಳ ಸ್ತಂಭದೊಳಗಿಂದ ಈಜಿಪ್ಟಿನ ದಂಡಿನ ಮೇಲೆ ದೃಷ್ಟಿಯಿಟ್ಟು, ಈಜಿಪ್ಟಿನ ದಂಡನ್ನು ಗಾಬರಿಗೊಳಿಸಿದರು.
25 ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟು ಕಷ್ಟದಿಂದ ಅವರು ಹೋಗುವಂತೆ ಮಾಡಿದರು. ಆಗ ಈಜಿಪ್ಟಿನವರು, “ಇಸ್ರಾಯೇಲರ ಎದುರಿನಿಂದ ಓಡಿಹೋಗೋಣ. ಏಕೆಂದರೆ ಯೆಹೋವ ದೇವರು ಈಜಿಪ್ಟಿನವರಿಗೆ ವಿರೋಧವಾಗಿ ಯುದ್ಧಮಾಡುತ್ತಾರೆ,” ಎಂದು ಹೇಳಿಕೊಂಡರು.
26 ಆಗ ಯೆಹೋವ ದೇವರು ಮೋಶೆಗೆ, “ಈಜಿಪ್ಟಿನವರನ್ನೂ ಅವರ ರಥಗಳ ಕುದುರೆಯ ಸವಾರರನ್ನೂ ಸಮುದ್ರವು ಮುಳುಗಿಸುವಂತೆ ಸಮುದ್ರದ ಮೇಲೆ ಕೈಚಾಚು,” ಎಂದರು.
27 ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ಮೊದಲಿನಂತೆ ತುಂಬಿಕೊಂಡಿತು. ಈಜಿಪ್ಟಿನವರು ಓಡಿಹೋಗುತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಯೆಹೋವ ದೇವರು ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿಬಿಟ್ಟರು.
28 ನೀರು ತಿರುಗಿಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಹೀಗೆ ಒಬ್ಬರೂ ಉಳಿಯದಂತೆ ಮುಳುಗಿಸಿತು.
29 ಆದರೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿದ್ದ ಒಣಗಿದ ನೆಲದ ಮೇಲೆ ನಡೆದುಹೋದರು. ನೀರು ಅವರಿಗೆ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತಿತ್ತು.
30 ಆ ದಿನದಲ್ಲಿ ಯೆಹೋವ ದೇವರು ಈ ಪ್ರಕಾರ ಇಸ್ರಾಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಇಸ್ರಾಯೇಲರು ಸಮುದ್ರ ತೀರದಲ್ಲಿ ಸತ್ತ ಈಜಿಪ್ಟಿನವರನ್ನು ನೋಡಿದರು.
31 ಈಜಿಪ್ಟಿನವರ ಮೇಲೆ ಯೆಹೋವ ದೇವರು ಮಾಡಿದ ದೊಡ್ಡ ಕಾರ್ಯವನ್ನು ನೋಡಿದಾಗ, ಇಸ್ರಾಯೇಲರು ಯೆಹೋವ ದೇವರಿಗೆ ಭಯಪಟ್ಟು, ಅವರಲ್ಲಿಯೂ ಅವರ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.