25
ದೇವದರ್ಶನದ ಗುಡಾರಕ್ಕಾಗಿ ಕಾಣಿಕೆಗಳು
ಯೆಹೋವ ದೇವರು ಮೋಶೆಗೆ, “ನನಗೆ ಕಾಣಿಕೆಗಳನ್ನು ತೆಗೆದುಕೊಂಡು ಬರುವಂತೆ ಇಸ್ರಾಯೇಲರ ಸಂಗಡ ಮಾತನಾಡು. ಯಾರ ಹೃದಯದಲ್ಲಿ ಕಾಣಿಕೆ ಕೊಡಬೇಕೆಂಬ ಪ್ರೇರಣೆ ಹುಟ್ಟುತ್ತದೋ, ಅಂಥವರ ಕಾಣಿಕೆಯನ್ನು ನೀನು ತೆಗೆದುಕೊಳ್ಳಬೇಕು.
 
“ನೀನು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು:
 
“ಚಿನ್ನ, ಬೆಳ್ಳಿ, ಕಂಚು,
ನೀಲಿ, ಧೂಮ್ರ, ರಕ್ತವರ್ಣದಾರಗಳು, ನಾರುಬಟ್ಟೆಗಳು,
ಮೇಕೆಯ ಕೂದಲು,
ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು, ಕಡಲುಹಂದಿಯ ಚರ್ಮಗಳು,
ಜಾಲಿ ಮರದ ಕಟ್ಟಿಗೆ.
ದೀಪಕ್ಕಾಗಿ ಓಲಿವ್ ಎಣ್ಣೆ ಮತ್ತು
ಅಭಿಷೇಕಿಸುವ ಎಣ್ಣೆಗೋಸ್ಕರ ಪರಿಮಳ ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳು,
ಏಫೋದ್* ಕವಚಕ್ಕಾಗಿ ಗೋಮೇಧಿಕಗಳು ಮತ್ತು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳು ಇವೆ.
 
“ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು. ಗುಡಾರದ ಮಾದರಿಯನ್ನೂ, ಅದರ ಎಲ್ಲಾ ಸಲಕರಣೆಗಳ ಮಾದರಿಯನ್ನೂ ನಾನು ನಿನಗೆ ತೋರಿಸುವಂತೆಯೇ ನೀನು ಮಾಡಬೇಕು.
ಮಂಜೂಷ
10 “ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರವಾಗಿರುವ ಮಂಜೂಷವನ್ನು ಮಾಡಬೇಕು. 11 ಅದನ್ನು ಶುದ್ಧ ಬಂಗಾರದಿಂದ ಒಳಗೂ ಹೊರಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಿಸಬೇಕು. 12 ಅದಕ್ಕೆ ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಎಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು. 13 ಆಮೇಲೆ ಜಾಲಿ ಮರದ ಕೋಲುಗಳನ್ನು ಮಾಡಿಸಿ, ಅವುಗಳಿಗೆ ಬಂಗಾರದಿಂದ ಹೊದಿಸಬೇಕು. 14 ಮಂಜೂಷವನ್ನು ಹೊರುವುದಕ್ಕಾಗಿ ಕೋಲುಗಳನ್ನು ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು. 15 ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯಬಾರದು. 16 ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನದ ಹಲಗೆಯನ್ನು ಇಡಬೇಕು.
17 “ಸುಮಾರು ನೂರಹತ್ತು ಸೆಂಟಿಮೀಟರ್ ಉದ್ದವೂ ಎಪ್ಪತ್ತು ಸೆಂಟಿಮೀಟರ್ ಅಗಲವೂ ಇರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು. 18 ಕರುಣಾಸನದ ಎರಡು ತುದಿಗಳಲ್ಲಿ ಎರಡು ಬಂಗಾರದಿಂದ ಕೆರೂಬಿಗಳನ್ನು ನಕಾಸಿ ಕೆಲಸದಿಂದ ಮಾಡಿಸಬೇಕು. 19 ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ§ ಇನ್ನೊಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಮಾಡಿಸಬೇಕು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯನ್ನು ಮಾಡಿಸಬೇಕು. 20 ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಕರುಣಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಕೆರೂಬಿಗಳ ಮುಖಗಳು ಎದುರುಬದುರಾಗಿ ಕರುಣಾಸನವನ್ನು ನೋಡುತ್ತಿರಬೇಕು. 21 ಕರುಣಾಸನವನ್ನು ಮಂಜೂಷದ ಮೇಲಿಡಬೇಕು ಮತ್ತು ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನಗಳನ್ನು ಇಡಬೇಕು. 22 ನಾನು ಅಲ್ಲಿ ನಿನಗೆ ದರ್ಶನವನ್ನು ಕೊಟ್ಟು, ಕರುಣಾಸನದ ಮೇಲೆ ಒಡಂಬಡಿಕೆಯ ಮಂಜೂಷದ* ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲರ ವಿಷಯದಲ್ಲಿ ನಾನು ನಿನಗೆ ಆಜ್ಞಾಪಿಸುವವುಗಳನ್ನೆಲ್ಲಾ ನಿನಗೆ ತಿಳಿಸುವೆನು.
ರೊಟ್ಟಿಗಾಗಿ ಮೇಜು
23 “ಸುಮಾರು ತೊಂಬತ್ತು ಸೆಂಟಿಮೀಟರ್ ಉದ್ದ, ನಲವತ್ತೈದು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರ ಇರುವ ಮೇಜನ್ನು ಜಾಲಿ ಮರದಿಂದ ಮಾಡಬೇಕು. 24 ಶುದ್ಧ ಬಂಗಾರದಿಂದ ಮೇಜನ್ನು ಹೊದಿಸಿ, ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಬೇಕು. 25 ಮೇಜಿನ ಸುತ್ತಲೂ ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿಸಿ, ಅಂಚಿನ ಸುತ್ತಲೂ ಬಂಗಾರದ ತೋರಣವನ್ನು ಮಾಡಬೇಕು. 26 ಇದಲ್ಲದೆ ಆ ಮೇಜಿಗೆ ಬಂಗಾರದ ನಾಲ್ಕು ಬಳೆಗಳನ್ನು ಮಾಡಿ, ಅವುಗಳನ್ನು ಅದರ ನಾಲ್ಕು ಕಾಲುಗಳಲ್ಲಿರುವ ನಾಲ್ಕು ಮೂಲೆಗಳಿಗೆ ಜೋಡಿಸಬೇಕು. 27 ಅಂಚಿಗೆ ಸಮೀಪವಾಗಿ ಮೇಜನ್ನು ಹೊತ್ತುಕೊಂಡು ಹೋಗಲು ಇರುವ ಕೋಲುಗಳಿಗೆ ಬಳೆಗಳು ಇರಬೇಕು. 28 ಮೇಜನ್ನು ಹೊರುವುದಕ್ಕಾಗಿ ಕೋಲುಗಳನ್ನು, ತೋರಣವನ್ನು ಜಾಲಿ ಮರದಿಂದ ಮಾಡಿ, ಬಂಗಾರದಿಂದ ಹೊದಿಸಬೇಕು. 29 ಇದಲ್ಲದೆ ನೀನು ಪಾತ್ರೆಗಳನ್ನು, ಧೂಪಾರತಿಗಳನ್ನು, ಮುಚ್ಚಳಗಳನ್ನು ಪಾನಾರ್ಪಣೆಗೆ ಹೂಜೆಗಳನ್ನೂ ಬೇಕಾದ ಬಟ್ಟಲುಗಳನ್ನೂ, ಶುದ್ಧ ಬಂಗಾರದಿಂದ ಮಾಡಬೇಕು. 30 ಮೇಜಿನ ಮೇಲೆ ನೈವೇದ್ಯದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು.
ಬಂಗಾರದ ದೀಪಸ್ತಂಭ
31 “ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಬೇಕು. ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳಂತೆಯೂ ಹಣತೆಗಳಂತೆಯೂ ಮೊಗ್ಗುಗಳಂತೆಯೂ ಇರಬೇಕು. 32 ದೀಪಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿರಬೇಕು. ಅಂದರೆ ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು. 33 ಒಂದು ಕೊಂಬೆಯಲ್ಲಿ ಬಾದಾಮಿ ಪುಷ್ಟದಂತಿರುವ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿರಬೇಕು ಮತ್ತು ಮತ್ತೊಂದು ಕೊಂಬೆಯಲ್ಲಿ ಬಾದಾಮಿಯ ಪುಷ್ಟವಿದ್ದ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿರಬೇಕು. ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿಯೂ ಇರಬೇಕು. 34 ದೀಪಸ್ತಂಭದಲ್ಲಿಯೇ ಬಾದಾಮಿ ಹೂವುಗಳಂತೆಯೂ ಮೊಗ್ಗುಗಳಂತೆಯೂ ಅದಕ್ಕೊಂದು ಪುಷ್ಪದ ಆಕಾರದಲ್ಲಿ ನಾಲ್ಕು ಹಣತೆಗಳು ಇರಬೇಕು. 35 ದೀಪಸ್ತಂಭದಿಂದ ಹೊರಬರುವ ಒಂದು ಮೊಗ್ಗು ಮೊದಲ ಜೋಡಿ ಕೊಂಬೆಗಳ ಅಡಿಯಲ್ಲಿರಬೇಕು. ಎರಡನೇ ಮೊಗ್ಗು ಎರಡನೇ ಜೋಡಿಯ ಅಡಿಯಲ್ಲಿ ಮತ್ತು ಮೂರನೆಯ ಮೊಗ್ಗು ಮೂರನೆಯ ಜೋಡಿಯ ಅಡಿಯಲ್ಲಿ ಹೀಗೆ ಆರು ಕೊಂಬೆಗಳು ಇರಬೇಕು. 36 ಅದರ ಮೊಗ್ಗುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ದೀಪಸ್ತಂಭವನ್ನೆಲ್ಲಾ ಶುದ್ಧ ಬಂಗಾರದ ಒಂದೇ ಅಚ್ಚಿನಲ್ಲಿ ಬರೆದ ಕಲಾಕೃತಿಯಾಗಿರಬೇಕು.
37 “ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶಕೊಡುವಂತೆ ಅವುಗಳನ್ನು ಹೊತ್ತಿಸಬೇಕು. 38 ಇದಲ್ಲದೆ ಅದರ ಕುಡಿ ಕತ್ತರಿಸುವ ಕತ್ತರಿಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು. 39 ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಒಂದು ತಲಾಂತು§ ಶುದ್ಧ ಬಂಗಾರದಿಂದ ಮಾಡಬೇಕು. 40 ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.
* 25:7 25:7 ಏಫೋದ್ ಅಂದರೆ ಮಹಾಯಾಜಕನ ಉಡುಗೆ 25:10 25:10 ಸುಮಾರು ಎರಡೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಮತ್ತು ಎತ್ತರ 25:17 25:17 ಕರುಣಾಸನ ಹೀಬ್ರೂ ಭಾಷೆಯಲ್ಲಿ ಪ್ರಾಯಶ್ಚಿತ್ತದ ಮುಚ್ಚಳ ಪಾಪ ನಿವಾರಣ ಸ್ಥಳ § 25:19 25:19 ಕೆರೂಬ ಅನ್ನು ಸಾಮಾನ್ಯವಾಗಿ ದೇವದೂತ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ಯಾವ ರೀತಿಯದ್ದು ಎಂದು ನಿಖರವಾಗಿ ಹೇಳಲಾಗದು. ಈ ಜೀವಿಯು ರೆಕ್ಕೆಗಳನ್ನು, ಪ್ರಾಣಿ ಮತ್ತು ಮನುಷ್ಯನ ದೈಹಿಕ ರೂಪವನ್ನು ಹೊಂದಿದೆ * 25:22 25:22 ಒಡಂಬಡಿಕೆಯ ಮಂಜೂಷ ಅಂದರೆ ಆಜ್ಞಾಶಾಸನಗಳನ್ನಿಟ್ಟಿರುವ ಪೆಟ್ಟಿಗೆ 25:23 25:23 ಸುಮಾರು ಎರಡು ಮೊಳ ಉದ್ದ, ಒಂದು ಮೊಳ ಅಗಲ, ಒಂದೂವರೆ ಮೊಳ ಎತ್ತರ 25:25 25:25 ಸುಮಾರು 7.5 ಸೆಂಟಿಮೀಟರ್ § 25:39 25:39 ಸುಮಾರು 34 ಕಿಲೋಗ್ರಾಂಗಳಷ್ಟು