23
ಸಾರಳ ಮರಣ
1 ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದ್ದಳು.
2 ಅವಳು ಕಾನಾನ್ ದೇಶದಲ್ಲಿರುವ ಹೆಬ್ರೋನಿನಲ್ಲಿ ಅಂದರೆ ಕಿರ್ಯತ್ ಅರ್ಬದಲ್ಲಿ ಮರಣಹೊಂದಿದಳು. ಅಬ್ರಹಾಮನು ಸಾರಳಿಗೋಸ್ಕರ ಗೋಳಾಡಿದನು.
3 ಆಗ ಅಬ್ರಹಾಮನು ತನ್ನ ಹೆಂಡತಿಯ ಶವದ ಬಳಿಯಿಂದ ಎದ್ದು, ಹಿತ್ತಿಯರ ಬಳಿಗೆ ಬಂದು, ಅವರಿಗೆ,
4 “ನಾನು ನಿಮ್ಮೊಂದಿಗೆ ಪರದೇಶಸ್ಥನೂ, ಪರವಾಸಿಯೂ ಆಗಿದ್ದೇನೆ. ನನಗೆ ನಿಮ್ಮ ಬಳಿಯಲ್ಲಿ ಸಮಾಧಿಯ ಸ್ಥಳವನ್ನು ಕೊಡಿರಿ. ಆಗ ನನ್ನ ಹೆಂಡತಿಯ ಶವವನ್ನು ಹೂಳಿಡುವೆನು,” ಎಂದನು.
5 ಹಿತ್ತಿಯರು ಅಬ್ರಹಾಮನಿಗೆ ಉತ್ತರಕೊಟ್ಟು,
6 “ಒಡೆಯಾ, ನಮ್ಮ ಮಾತನ್ನು ಕೇಳು, ನೀನು ನಮ್ಮ ಮಧ್ಯದಲ್ಲಿ ಮಹಾಪ್ರಭುವಾಗಿದ್ದೀ. ನಮ್ಮ ಸಮಾಧಿಗಳೊಳಗೆ ಉತ್ತಮವಾದದ್ದರಲ್ಲಿ ನಿನ್ನ ಹೆಂಡತಿಯ ಶವವನ್ನು ಹೂಳಿಡು. ನಮ್ಮಲ್ಲಿ ಯಾರೂ ನಿನಗೆ ಸಮಾಧಿಯನ್ನು ಕೊಡುವುದಿಲ್ಲ ಎಂದು ಹೇಳಲಾರರು,” ಎಂದರು.
7 ಆಗ ಅಬ್ರಹಾಮನು ಎದ್ದು, ಆ ದೇಶದ ಜನರಾದ ಹಿತ್ತಿಯರ ಮುಂದೆ ತಲೆಬಾಗಿ,
8 ಅವರ ಸಂಗಡ ಮಾತನಾಡಿ, “ನಾನು ನನ್ನ ಹೆಂಡತಿಯ ಶವವನ್ನು ಹೂಳಿಡುವುದು ನಿಮ್ಮ ಮನಸ್ಸಿಗೆ ಸರಿಬಿದ್ದರೆ, ನನ್ನ ಮಾತು ಕೇಳಿ ಚೋಹರನ ಮಗ ಎಫ್ರೋನನನ್ನು ನನಗಾಗಿ ಬೇಡಿಕೊಳ್ಳಿರಿ.
9 ಅವನು ತನ್ನ ಹೊಲದ ಅಂಚಿನಲ್ಲಿರುವ ಮಕ್ಪೇಲಾ ಗವಿಯನ್ನು ನನಗೆ ಕೊಡಲಿ. ಅವನು ಅದನ್ನು ತಕ್ಕ ಕ್ರಯಕ್ಕೆ ನಿಮ್ಮ ಎದುರಿನಲ್ಲಿ ನನಗೆ ಕೊಡಲಿ,” ಎಂದನು.
10 ಆಗ ಅವರ ಮಧ್ಯದಲ್ಲಿ ಕುಳಿತುಕೊಂಡಿದ್ದ ಹಿತ್ತಿಯನಾದ ಎಫ್ರೋನನು ಪಟ್ಟಣದ ದ್ವಾರದ ಬಳಿಯಲ್ಲಿ ಕೂತಿದ್ದ ಎಲ್ಲಾ ಹಿತ್ತಿಯರು ಕೇಳುವಂತೆ ಅಬ್ರಹಾಮನಿಗೆ,
11 “ಒಡೆಯನೇ ಹಾಗಲ್ಲ, ನನ್ನ ಮಾತನ್ನು ಕೇಳು. ಆ ಹೊಲವನ್ನು ನಿನಗೆ ಕೊಡುತ್ತೇನೆ. ಅದರಲ್ಲಿರುವ ಗವಿಯನ್ನೂ ನಿನಗೆ ಕೊಡುತ್ತೇನೆ. ಅದನ್ನು ನನ್ನ ಜನರ ಎದುರಿನಲ್ಲಿ ನಿನಗೆ ಕೊಡುತ್ತೇನೆ. ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು.
12 ಆಗ ಅಬ್ರಹಾಮನು ದೇಶದ ಜನರ ಮುಂದೆ ತಲೆಬಾಗಿ,
13 ದೇಶದ ಜನರು ಕೇಳುವಂತೆ ಎಫ್ರೋನನಿಗೆ, “ನೀನು ನನಗೆ ಕೊಡಬೇಕೆಂದಿದ್ದರೆ ನನ್ನ ಮಾತನ್ನು ಕೇಳು. ನಾನು ಹೊಲದ ಕ್ರಯವನ್ನು ಕೊಡುತ್ತೇನೆ. ಅದನ್ನು ನನ್ನಿಂದ ತೆಗೆದುಕೋ, ಆಗ ನನ್ನ ಹೆಂಡತಿಯ ಶವವನ್ನು ಅಲ್ಲಿ ಹೂಳಿಡುವೆನು,” ಎಂದನು.
14 ಎಫ್ರೋನನು ಅಬ್ರಹಾಮನಿಗೆ ಉತ್ತರವಾಗಿ,
15 “ನನ್ನ ಒಡೆಯನೇ, ನನ್ನ ಮಾತನ್ನು ಕೇಳು. ಆ ಭೂಮಿಯು ನಾನೂರು ಬೆಳ್ಳಿಯ ನಾಣ್ಯಗಳ ಬೆಲೆಯುಳ್ಳದ್ದು, ಈ ಕುರಿತು ನಮ್ಮೊಳಗೇ ವಾದವೇಕೆ? ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು.
16 ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿಕೊಂಡು, ಎಫ್ರೋನನು ಹಿತ್ತಿಯರ ಎದುರಿನಲ್ಲಿ ಹೇಳಿದ ಬೆಲೆ ಅಂದರೆ, ವರ್ತಕರಲ್ಲಿ ನಡೆಯುವ ನಾನೂರು ಬೆಳ್ಳಿ ನಾಣ್ಯಗಳನ್ನು ತೂಕಮಾಡಿ ಅವನಿಗೆ ಕೊಟ್ಟನು.
17 ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲದಲ್ಲಿರುವ ಎಫ್ರೋನನ ಹೊಲವೂ, ಆ ಹೊಲದಲ್ಲಿರುವ ಗವಿಯೂ, ಆ ಹೊಲದ ಸುತ್ತಲೂ ಇರುವ ಎಲ್ಲಾ ಮರಗಳೂ,
18 ಹಿತ್ತಿಯರ ಮುಂದೆಯೂ, ಅವರ ಪಟ್ಟಣದ ಹೆಬ್ಬಾಗಿಲಿನಲ್ಲಿ ಸೇರುವ ಎಲ್ಲರ ಮುಂದೆಯೂ ಅಬ್ರಹಾಮನ ಆಸ್ತಿಯೆಂದು ದೃಢವಾಯಿತು.
19 ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಸಾರಳನ್ನು ಕಾನಾನ್ ದೇಶದಲ್ಲಿ ಹೆಬ್ರೋನ್ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲ ಹೊಲದ ಗವಿಯಲ್ಲಿ ಹೂಳಿಟ್ಟನು.
20 ಆ ಹೊಲವೂ, ಅದರಲ್ಲಿರುವ ಗವಿಯೂ ಹಿತ್ತಿಯರಿಂದ ಅಬ್ರಹಾಮನಿಗೆ ಸ್ವಂತ ಸಮಾಧಿ ಎಂದು ಸ್ಥಿರವಾಯಿತು.