39
ಯೋಸೇಫ ಮತ್ತು ಪೋಟೀಫರನ ಹೆಂಡತಿ
ಯೋಸೇಫನನ್ನು ಕರೆದುಕೊಂಡುಹೋದ ಇಷ್ಮಾಯೇಲರು ಈಜಿಪ್ಟಿಗೆ ಸೇರಿದಾಗ ಅವನನ್ನು ಈಜಿಪ್ಟಿನ ಪೋಟೀಫರ್ ಎಂಬವನಿಗೆ ಮಾರಿಬಿಟ್ಟರು. ಪೋಟೀಫರನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು.
ಯೆಹೋವ ದೇವರು ಯೋಸೇಫನ ಸಂಗಡ ಇದ್ದುದರಿಂದ, ಅವನು ಏಳಿಗೆಯಾಗಿ ಈಜಿಪ್ಟಿನವನಾದ ತನ್ನ ಯಜಮಾನನ ಮನೆಯಲ್ಲಿ ಇದ್ದನು. ಯೆಹೋವ ದೇವರು ಅವನ ಸಂಗಡ ಇದ್ದಾನೆಂದೂ ಅವನು ಮಾಡಿದ್ದನ್ನೆಲ್ಲಾ ಯೆಹೋವ ದೇವರು ಅವನ ಕೈಯಿಂದ ಅಭಿವೃದ್ಧಿಮಾಡಿದನೆಂದೂ ಅವನ ಯಜಮಾನನಿಗೆ ತಿಳಿಯಿತು. ಆದ್ದರಿಂದ ಯೋಸೇಫನು ಪೋಟೀಫರನ ದೃಷ್ಟಿಯಲ್ಲಿ ದಯೆಹೊಂದಿ ಅವನ ಸೇವೆ ಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ, ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು. ಅವನನ್ನು ಮನೆಯಲ್ಲಿಯೂ, ತನಗಿದ್ದ ಎಲ್ಲದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಯೆಹೋವ ದೇವರು ಆ ಈಜಿಪ್ಟಿನವನ ಮನೆಯನ್ನು ಯೋಸೇಫನಿಗಾಗಿ ಆಶೀರ್ವದಿಸಿದರು. ಮನೆಯಲ್ಲಿಯೂ ಹೊಲದಲ್ಲಿಯೂ ಅವನಿಗಿದ್ದ ಎಲ್ಲದರ ಮೇಲೆಯೂ ಯೆಹೋವ ದೇವರ ಆಶೀರ್ವಾದವಿತ್ತು. ಹೀಗಿರುವುದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ, ತನ್ನ ಊಟದ ವಿಷಯದಲ್ಲಿ ಹೊರತು ಬೇರೆ ಯಾವುದರ ವಿಷಯದಲ್ಲಿಯೂ ಚಿಂತಿಸದೆ ಇದ್ದನು.
ಯೋಸೇಫನು ಸುರೂಪಿಯೂ ಸುಂದರನೂ ಆಗಿದ್ದನು. ಸ್ವಲ್ಪ ಸಮಯದ ನಂತರ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ, “ನನ್ನ ಸಂಗಡ ಮಲಗು,” ಎಂದಳು.
ಆದರೆ ಅವನು ಅದಕ್ಕೆ ಒಪ್ಪದೆ, ತನ್ನ ಯಜಮಾನನ ಹೆಂಡತಿಗೆ, “ನನ್ನ ಯಜಮಾನನು ತನ್ನ ಮನೆಯಲ್ಲಿರುವ ಯಾವುದರ ಬಗ್ಗೆಯೂ ಚಿಂತಿಸದೆ, ತನಗಿದ್ದದ್ದನ್ನೆಲ್ಲಾ ನನಗೆ ಒಪ್ಪಿಸಿದ್ದಾನೆ. ಈ ಮನೆಯಲ್ಲಿ ನನಗಿಂತ ದೊಡ್ಡವನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವುದರಿಂದ, ನಿನ್ನನ್ನು ಹೊರತುಪಡಿಸಿ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ಮಹಾ ದುಷ್ಕೃತ್ಯ ಮಾಡಿ, ದೇವರಿಗೆ ವಿರೋಧವಾಗಿ ಪಾಪ ಮಾಡುವುದು ಹೇಗೆ?” ಎಂದನು. 10 ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದರೂ, ಅವನು ಅವಳ ಕೂಡ ಮಲಗುವುದಕ್ಕಾಗಲಿ, ಅವಳ ಹತ್ತಿರ ಇರುವುದಕ್ಕಾಗಲಿ ಒಪ್ಪಲಿಲ್ಲ.
11 ಹೀಗಿರುವಲ್ಲಿ ಒಂದು ದಿನ ಅವನು ತನ್ನ ಕೆಲಸ ಮಾಡುವುದಕ್ಕೆ ಮನೆಯನ್ನು ಪ್ರವೇಶಿಸಿದಾಗ, ಮನೆಯ ಸೇವಕರಲ್ಲಿ ಒಬ್ಬರೂ ಇರಲಿಲ್ಲ. 12 ಆಗ ಆಕೆಯು ಅವನ ಬಟ್ಟೆಯನ್ನು ಹಿಡಿದುಕೊಂಡು, “ನನ್ನ ಸಂಗಡ ಮಲಗು,” ಎಂದಳು. ಆದರೆ ಅವನು ತನ್ನ ವಸ್ತ್ರವನ್ನು ಅವಳ ಕೈಯಲ್ಲಿ ಬಿಟ್ಟು ಹೊರಗೆ ಓಡಿಹೋದನು.
13 ಅವನು ತನ್ನ ವಸ್ತ್ರವನ್ನು ತನ್ನ ಕೈಯಲ್ಲಿ ಬಿಟ್ಟು ಬಿಟ್ಟಿದ್ದನ್ನೂ, ಹೊರಗೆ ಓಡಿ ಹೋದದ್ದನ್ನೂ ಅವಳು ಕಂಡು, 14 ತನ್ನ ಮನೆಯ ಸೇವಕರನ್ನು ಕರೆದು ಅವರಿಗೆ, “ನೋಡಿರಿ, ನಮ್ಮನ್ನು ಅವಮಾನ ಮಾಡುವುದಕ್ಕೆ ಈ ಹಿಬ್ರಿಯನು ನಮ್ಮಲ್ಲಿಗೆ ಬಂದಿದ್ದಾನೆ. ಅವನು ನನ್ನ ಮೇಲೆ ಅತ್ಯಾಚಾರಮಾಡುವುದಕ್ಕೆ ನನ್ನ ಹತ್ತಿರ ಬಂದನು. ಆಗ ನಾನು ಗಟ್ಟಿಯಾಗಿ ಕೂಗಿದೆನು. 15 ನಾನು ಜೋರಾಗಿ ಕೂಗಿದ್ದನ್ನು ಅವನು ಕೇಳಿ, ತನ್ನ ವಸ್ತ್ರವನ್ನು ನನ್ನ ಬಳಿಯಲ್ಲೇ ಬಿಟ್ಟು ಹೊರಗೆ ಓಡಿಹೋದನು,” ಎಂದಳು.
16 ತನ್ನ ಯಜಮಾನನು ಹೊರಗಿನಿಂದ ಬರುವವರೆಗೆ, ಆಕೆಯು ಅವನ ವಸ್ತ್ರವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಳು. 17 ಅವನು ಬಂದಾಗ ಅವನಿಗೂ ಅದರಂತೆಯೇ ಹೇಳುತ್ತಾ, “ನೀನು ನಮ್ಮ ಬಳಿಗೆ ತಂದ ಹಿಬ್ರಿಯ ಸೇವಕನು ನನ್ನನ್ನು ಅವಮಾನ ಮಾಡುವುದಕ್ಕೆ ನನ್ನ ಬಳಿಗೆ ಬಂದನು. 18 ಆದರೆ ನಾನು ಜೋರಾಗಿ ಕೂಗಿಕೊಂಡಾಗ, ಅವನು ತನ್ನ ವಸ್ತ್ರವನ್ನು ನನ್ನ ಬಳಿಯಲ್ಲಿ ಬಿಟ್ಟು ಹೊರಗೆ ಓಡಿಹೋದನು,” ಎಂದಳು.
19 “ನಿನ್ನ ಸೇವಕನು ನನಗೆ ಹೀಗೆ ಮಾಡಿದ,” ಎಂದು ತನ್ನ ಹೆಂಡತಿ ಹೇಳಿದ್ದನ್ನು ಯಜಮಾನನು ಕೇಳಿ, ಅವನ ಕೋಪವೇರಿತು. 20 ಆಗ ಯೋಸೇಫನ ಯಜಮಾನನು ಅವನನ್ನು ಹಿಡಿದುಕೊಂಡು, ರಾಜನ ಕೈದಿಗಳನ್ನಿಡುವ ಸೆರೆಮನೆಯಲ್ಲಿ ಹಾಕಿದನು.
ಯೋಸೇಫನು ಆ ಸೆರೆಮನೆಯಲ್ಲಿದ್ದನು. 21 ಆದರೆ ಯೆಹೋವ ದೇವರು ಯೋಸೇಫನ ಸಂಗಡ ಇದ್ದು, ಅವನ ಮೇಲೆ ಕರುಣೆಯಿಟ್ಟು, ಸೆರೆಮನೆಯ ಯಜಮಾನನು ಅವನ ಮೇಲೆ ದಯೆ ತೋರಿಸುವಂತೆ ಮಾಡಿದರು. 22 ಆದ್ದರಿಂದ ಸೆರೆಯ ಯಜಮಾನನು ಸೆರೆಮನೆಯಲ್ಲಿ ಬಂಧಿಸಿದ ಕೈದಿಗಳನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸಿದನು. 23 ಯೆಹೋವ ದೇವರು ಅವನ ಸಂಗಡ ಇದ್ದುದರಿಂದಲೂ ಅವನು ಮಾಡುವುದನ್ನು ಯೆಹೋವ ದೇವರು ಅಭಿವೃದ್ಧಿಮಾಡಿದ್ದರಿಂದಲೂ ಸೆರೆಯ ಯಜಮಾನನು ಅವನ ಕೈಗೆ ಒಪ್ಪಿಸಿದ ಯಾವುದಕ್ಕೂ ಚಿಂತೆ ಮಾಡದೆ ಇದ್ದನು.