43
ಈಜಿಪ್ಟಿಗೆ ಎರಡನೆಯ ಪ್ರಯಾಣ
ದೇಶದಲ್ಲಿ ಬರವು ಘೋರವಾಗಿತ್ತು. ಅವರು ಈಜಿಪ್ಟಿನಿಂದ ತಂದಿದ್ದ ಧಾನ್ಯವು ತೀರಿದ ಮೇಲೆ ಅವರ ತಂದೆ ಅವರಿಗೆ, “ತಿರುಗಿ ಹೋಗಿ ನಮಗಾಗಿ ಸ್ವಲ್ಪ ಆಹಾರ ಕೊಂಡುಕೊಳ್ಳಿರಿ,” ಎಂದನು.
ಆಗ ಯೆಹೂದನು ಅವನಿಗೆ, “ಆ ಮನುಷ್ಯನು ನಮಗೆ ನಿಮ್ಮ ಸಹೋದರನು ನಿಮ್ಮ ಸಂಗಡ ಇದ್ದ ಹೊರತು, ನೀವು ನನ್ನ ಮುಖವನ್ನು ನೋಡಬಾರದೆಂದು, ನಮಗೆ ದೃಢವಾಗಿ ನಿರ್ಣಯಿಸಿ ಹೇಳಿದ್ದಾನೆ. ನೀನು ನಮ್ಮ ತಮ್ಮನನ್ನು ನಮ್ಮ ಸಂಗಡ ಕಳುಹಿಸಿದರೆ, ನಾವು ಹೋಗಿ ನಿನಗಾಗಿ ಆಹಾರವನ್ನು ಕೊಂಡುಕೊಂಡು ಬರುತ್ತೇವೆ. ಅವನನ್ನು ಕಳುಹಿಸದೆ ಹೋದರೆ, ನಾವು ಹೋಗುವುದಿಲ್ಲ. ಏಕೆಂದರೆ ಆ ಮನುಷ್ಯನು, ‘ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ, ನನ್ನ ಮುಖವನ್ನು ನೋಡಬಾರದು,’ ಎಂದು ನಮಗೆ ಹೇಳಿದ್ದಾನೆ,” ಎಂದನು.
ಇಸ್ರಾಯೇಲನು, “ನಿಮಗೆ ಇನ್ನೊಬ್ಬ ತಮ್ಮನು ಇದ್ದಾನೆಂದು ನೀವು ಏಕೆ ಆ ಮನುಷ್ಯನಿಗೆ ಹೇಳಿ ನನಗೆ ಕೇಡು ಮಾಡಿದ್ದೀರಿ?” ಎಂದನು.
ಅವರು ಅವನಿಗೆ, “ಆ ಮನುಷ್ಯನು ನಮ್ಮ ವಿಷಯದಲ್ಲಿ ಮತ್ತು ನಮ್ಮ ಮನೆಯವರ ವಿಷಯದಲ್ಲಿ ನೇರವಾಗಿ ಕೇಳಿ ಅವನು, ‘ನಿಮ್ಮ ತಂದೆ ಇನ್ನೂ ಬದುಕಿದ್ದಾನೋ? ನಿಮಗೆ ಇನ್ನೊಬ್ಬ ಸಹೋದರನು ಇದ್ದಾನೋ?’ ಎಂದು ಕೇಳಿದನು. ಆಗ ಈ ಮಾತುಗಳಿಗೆ ತಕ್ಕ ಹಾಗೆ ನಾವು ಅವನಿಗೆ ತಿಳಿಸಿದೆವು. ‘ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿರಿ,’ ಎಂದು ಅವನು ನಮಗೆ ಹೇಳುತ್ತಾನೆಂದು ನಮಗೆ ಹೇಗೆ ತಿಳಿಯಲು ಸಾಧ್ಯ?” ಎಂದರು.
ಯೆಹೂದನು ತನ್ನ ತಂದೆ ಇಸ್ರಾಯೇಲನಿಗೆ, “ಆ ಹುಡುಗನನ್ನು ನನ್ನ ಸಂಗಡ ಕಳುಹಿಸು, ಆಗ ನಾವು ಹೋಗುವೆವು. ನಾವು, ನೀನೂ ಮತ್ತು ನಮ್ಮ ಮಕ್ಕಳು ಸಾಯದೆ ಬದುಕುವೆವು. ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ನೀನು ಅವನ ವಿಷಯದಲ್ಲಿ ನನ್ನನ್ನೇ ಕೇಳಬಹುದು. ನಾನು ಅವನನ್ನು ನಿನ್ನ ಬಳಿಗೆ ತಂದು ನಿನ್ನೆದುರಿಗೆ ನಿಲ್ಲಿಸದಿದ್ದರೆ, ಎಂದೆಂದಿಗೂ ನಾನು ಅಪರಾಧವನ್ನು ಹೊರುವೆನು. 10 ಏಕೆಂದರೆ ನಾವು ತಡಮಾಡದೆ ಇದ್ದಿದ್ದರೆ, ಇಷ್ಟರಲ್ಲಿ ಎರಡು ಸಾರಿ ಹೋಗಿ ಬರಬಹುದಾಗಿತ್ತು,” ಎಂದನು.
11 ಆಗ ಅವರ ತಂದೆ ಇಸ್ರಾಯೇಲನು ಅವರಿಗೆ, “ಹಾಗಿದ್ದರೆ ನೀವು ಹೀಗೆ ಮಾಡಿರಿ. ಈ ದೇಶದಲ್ಲಿ ದೊರಕುವ ಶ್ರೇಷ್ಠವಾದ ಫಲಗಳನ್ನು ನಿಮ್ಮೊಂದಿಗೆ ಇಟ್ಟುಕೊಂಡು, ಆ ಮನುಷ್ಯನಿಗೆ ಕಾಣಿಕೆ ತೆಗೆದುಕೊಂಡು ಹೋಗಿರಿ. ಅಂದರೆ, ಸ್ವಲ್ಪ ತೈಲ, ಸ್ವಲ್ಪ ಜೇನು, ಸುಗಂಧದ್ರವ್ಯ, ರಕ್ತಬೋಳ, ಆಕ್ರೋಡು ಮತ್ತು ಬಾದಾಮಿ ಇವುಗಳನ್ನು ತೆಗೆದುಕೊಂಡು ಹೋಗಿರಿ. 12 ಇದಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿರಿ. ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳುಹಿಸಿದ ಹಣವನ್ನೂ ತೆಗೆದುಕೊಂಡು ಹೋಗಿರಿ. ಒಂದು ವೇಳೆ ಅದು ಅವರಿಗೆ ತಿಳಿಯದೆ ಬಂದಿರಬಹುದು. 13 ನಿಮ್ಮ ಸಹೋದರನನ್ನು ಕರೆದುಕೊಂಡು ಆ ಮನುಷ್ಯನ ಬಳಿಗೆ ತಿರುಗಿ ಹೋಗಿರಿ. 14 ಸರ್ವಶಕ್ತ ದೇವರು ನಿಮ್ಮ ಮತ್ತೊಬ್ಬ ಸಹೋದರನನ್ನೂ ಬೆನ್ಯಾಮೀನನನ್ನೂ ಕಳುಹಿಸಿಕೊಡುವ ಹಾಗೆ, ಆ ಮನುಷ್ಯನು ನಿಮ್ಮ ಮೇಲೆ ಕರುಣೆ ತೋರಿಸುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳೆದುಕೊಂಡವನಾಗಿರಬೇಕಾದರೆ ಹಾಗೆಯೇ ಆಗಲಿ,” ಎಂದನು.
15 ಆಗ ಅವರು ಆ ಕಾಣಿಕೆಯನ್ನು ತೆಗೆದುಕೊಂಡು, ತಮ್ಮ ಕೈಯಲ್ಲಿ ಎರಡರಷ್ಟು ಹಣವನ್ನೂ, ಬೆನ್ಯಾಮೀನನನ್ನೂ ಕರೆದುಕೊಂಡು ಈಜಿಪ್ಟಿಗೆ ಹೋಗಿ, ಯೋಸೇಫನ ಮುಂದೆ ನಿಂತರು. 16 ಯೋಸೇಫನು ಬೆನ್ಯಾಮೀನನನ್ನು ಅವರ ಸಂಗಡ ಕಂಡಾಗ ತನ್ನ ಮನೆ ಉಗ್ರಾಣಿಕನಿಗೆ, “ಈ ಮನುಷ್ಯರನ್ನು ಮನೆಗೆ ಕರೆದುಕೊಂಡು ಹೋಗಿ, ಮಾಂಸದ ಅಡುಗೆ ಸಿದ್ಧಮಾಡು. ಏಕೆಂದರೆ ಈ ಮನುಷ್ಯರು ಮಧ್ಯಾಹ್ನದಲ್ಲಿ ನನ್ನ ಸಂಗಡ ಊಟಮಾಡಬೇಕು,” ಎಂದನು.
17 ಯೋಸೇಫನು ಹೇಳಿದಂತೆ ಅವನು ಮಾಡಿದನು. ಅವನು ಆ ಮನುಷ್ಯರನ್ನು ಯೋಸೇಫನ ಮನೆಗೆ ಕರೆದುಕೊಂಡು ಹೋದನು. 18 ಯೋಸೇಫನ ಮನೆಗೆ ಕರೆತಂದದ್ದರಿಂದ ಅವರು ಭಯಪಟ್ಟು, “ಹಿಂದೆ ನಮ್ಮ ಚೀಲಗಳಲ್ಲಿ ತಿರುಗಿ ಸೇರಿದ ಹಣಕ್ಕಾಗಿ ನಮ್ಮನ್ನು ಹಿಡಿದು, ನಮ್ಮ ಮೇಲೆ ಬಿದ್ದು, ನಮ್ಮನ್ನು ದಾಸರಾಗಿ ಮಾಡಿ, ನಮ್ಮ ಕತ್ತೆಗಳನ್ನು ತೆಗೆದುಕೊಳ್ಳುವುದಕ್ಕೆ ನಮ್ಮನ್ನು ಇಲ್ಲಿಗೆ ತಂದಿದ್ದಾನೆ,” ಎಂದರು.
19 ಆಗ ಅವರು ಯೋಸೇಫನ ಮನೆಯ ಬಳಿಗೆ ಹೋಗಿ, ಬಾಗಿಲಿನ ಮುಂದೆ ಗೃಹನಿರ್ವಾಹಕನ ಸಂಗಡ ಮಾತನಾಡಿ, 20 “ಒಡೆಯಾ, ನಾವು ಆಹಾರವನ್ನು ಕೊಂಡುಕೊಳ್ಳುವುದಕ್ಕೆ ಮೊದಲನೆಯ ಸಾರಿ ಬಂದದ್ದು ನಿಜವೇ. 21 ಇದಾದ ಮೇಲೆ ನಾವು ವಸತಿಗೃಹಕ್ಕೆ ಬಂದು ನಮ್ಮ ಚೀಲಗಳನ್ನು ತೆರೆದಾಗ, ಪ್ರತಿಯೊಬ್ಬನ ಹಣವು ಅವನವನ ಚೀಲದ ಬಾಯಲ್ಲಿ ಇತ್ತು. ನಮ್ಮ ಕೈಗಳಲ್ಲಿ ಅದನ್ನು ತಿರುಗಿ ತೆಗೆದುಕೊಂಡು ಬಂದಿದ್ದೇವೆ. 22 ಇದಲ್ಲದೆ ಆಹಾರವನ್ನು ಕೊಂಡುಕೊಳ್ಳುವುದಕ್ಕೆ ಬೇರೆ ಹಣವನ್ನೂ ತಂದಿದ್ದೇವೆ. ಈ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೆಂದು ನಮಗೆ ತಿಳಿಯದು,” ಎಂದರು.
23 ಅದಕ್ಕವನು, “ನಿಮಗೆ ಸಮಾಧಾನವಿರಲಿ, ಭಯಪಡಬೇಡಿರಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ನಿಮ್ಮ ಚೀಲಗಳಲ್ಲಿ ನಿಮಗೆ ನಿಕ್ಷೇಪವನ್ನು ಕೊಟ್ಟಿದ್ದಾರೆ. ನಿಮ್ಮ ಹಣವು ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ತಂದನು.
24 ಆ ಮನುಷ್ಯನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಬಂದು ಅವರಿಗೆ ನೀರನ್ನು ಕೊಟ್ಟಾಗ, ಅವರು ತಮ್ಮ ಕಾಲುಗಳನ್ನು ತೊಳೆದುಕೊಂಡರು. ಇದಲ್ಲದೆ ಅವರ ಕತ್ತೆಗಳಿಗೆ ಮೇವನ್ನು ಹಾಕಿದನು. 25 ಅವರು ಅಲ್ಲಿ ಊಟ ಮಾಡಬೇಕೆಂದು ಕೇಳಿದ್ದರಿಂದ, ಯೋಸೇಫನು ಮಧ್ಯಾಹ್ನದಲ್ಲಿ ಮನೆಗೆ ಬರುವಷ್ಟರಲ್ಲಿ ಕಾಣಿಕೆಯನ್ನು ಸಿದ್ಧಮಾಡಿಕೊಂಡರು.
26 ಯೋಸೇಫನು ಮನೆಗೆ ಬಂದ ಮೇಲೆ, ತಮ್ಮ ಕೈಗಳಲ್ಲಿದ್ದ ಕಾಣಿಕೆಯನ್ನು ಮನೆಯೊಳಗೆ ತೆಗೆದುಕೊಂಡು ಬಂದು, ಅವನಿಗೆ ನೆಲದವರೆಗೂ ಅಡ್ಡಬಿದ್ದರು. 27 ಆಗ ಯೋಸೇಫನು ಅವರ ಕ್ಷೇಮಸಮಾಚಾರವನ್ನು ಕೇಳಿ, “ನೀವು ಹೇಳಿದ ವೃದ್ಧನಾದ ನಿಮ್ಮ ತಂದೆ ಕ್ಷೇಮವೋ? ಅವನು ಇನ್ನೂ ಬದುಕಿದ್ದಾನೋ?” ಎಂದನು.
28 ಅದಕ್ಕವರು, “ನಿನ್ನ ದಾಸನಾದ ನಮ್ಮ ತಂದೆಯು ಕ್ಷೇಮದಿಂದಿದ್ದಾನೆ, ಅವನು ಇನ್ನೂ ಬದುಕಿದ್ದಾನೆ,” ಎಂದು ಹೇಳಿ ತಮ್ಮ ತಲೆಗಳನ್ನು ಮತ್ತೆ ಬಾಗಿಸಿ ವಂದಿಸಿದರು.
29 ಆಗ ಅವನು ತನ್ನ ದೃಷ್ಟಿಯಿಟ್ಟು, ತನ್ನ ತಾಯಿಯ ಮಗನೂ ತನ್ನ ತಮ್ಮನೂ ಆದ ಬೆನ್ಯಾಮೀನನನ್ನು ನೋಡಿ, “ನೀವು ನನಗೆ ಹೇಳಿದ ನಿಮ್ಮ ಚಿಕ್ಕ ತಮ್ಮನು ಇವನೋ?” ಎಂದು ಹೇಳಿ, “ನನ್ನ ಮಗನೇ, ದೇವರು ನಿನಗೆ ಕೃಪಾಳುವಾಗಿರಲಿ,” ಎಂದನು. 30 ಆಗ ಯೋಸೇಫನ ಕರುಳು ತನ್ನ ತಮ್ಮನ ಬಗ್ಗೆ ಮರುಗಿದ್ದರಿಂದ ಅವನು ಅವಸರದಲ್ಲಿ ಎದ್ದು ಅಳುವುದಕ್ಕೆ ಸ್ಥಳವನ್ನು ಹುಡುಕಿ, ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು.
31 ತರುವಾಯ ಅವನು ಮುಖವನ್ನು ತೊಳೆದುಕೊಂಡು ಹೊರಗೆ ಬಂದನು. ಅವನು ಮನಸ್ಸನ್ನು ಬಿಗಿಹಿಡಿದುಕೊಂಡು, “ಊಟಕ್ಕೆ ಬಡಿಸಿರಿ,” ಎಂದನು.
32 ಆಗ ಅವರು ಯೋಸೇಫನಿಗೆ, ಅವನ ಅಣ್ಣತಮ್ಮಂದಿರಿಗೂ ಅವನ ಸಂಗಡ ಇದ್ದ ಈಜಿಪ್ಟಿನವರಿಗೂ ಬೇರೆಬೇರೆಯಾಗಿ ಊಟಕ್ಕೆ ಇಟ್ಟರು. ಏಕೆಂದರೆ ಈಜಿಪ್ಟಿನವರು ಹಿಬ್ರಿಯರ ಕೂಡ ಊಟಮಾಡುತ್ತಿರಲಿಲ್ಲ. ಅದು ಈಜಿಪ್ಟಿನವರಿಗೆ ಅಸಹ್ಯವಾಗಿತ್ತು. 33 ಯೋಸೇಫನು ಅವರನ್ನು ಹಿರಿಯವರಿಂದ ಕಿರಿಯವನವರೆಗೆ ಅವರವರ ವಯಸ್ಸಿನ ಪ್ರಕಾರ ಕುಳಿತುಕೊಳ್ಳುವಂತೆ ಮಾಡಿದ್ದರಿಂದ, ಅವರು ತಮ್ಮತಮ್ಮೊಳಗೆ ಆಶ್ಚರ್ಯಪಟ್ಟರು. 34 ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರವನ್ನು ಕಳುಹಿಸಿದಾಗ, ಬೆನ್ಯಾಮೀನನಿಗೆ ಕಳುಹಿಸಿದ ಆಹಾರವು ಅವರೆಲ್ಲರ ಆಹಾರಗಳಿಗಿಂತ ಐದರಷ್ಟು ಹೆಚ್ಚಾಗಿತ್ತು ಮತ್ತು ಅವರು ಅವನ ಸಂಗಡ ಕುಡಿದು ಸಂತೋಷದಿಂದಿದ್ದರು.