2
ಥೆಸಲೋನಿಕದಲ್ಲಿ ಪೌಲನು ಮಾಡಿದ ಸೇವೆ
ಪ್ರಿಯರೇ, ನಾವು ನಿಮ್ಮ ಬಳಿಗೆ ಬಂದದ್ದು ವ್ಯರ್ಥವಾಗಲಿಲ್ಲವೆಂಬುದನ್ನು ನೀವು ತಿಳಿದಿದ್ದೀರಿ. ಫಿಲಿಪ್ಪಿ ಪಟ್ಟಣದಲ್ಲಿ ಮುಂಚೆ ನಮಗೆ ಹಿಂಸೆ ಮತ್ತು ಅವಮಾನವು ಸಂಭವಿಸಿದ್ದನ್ನು ನೀವು ಬಲ್ಲಿರಿ. ಹಾಗಿದ್ದರೂ ನಾವು ನಮ್ಮ ದೇವರ ಸಹಾಯದಿಂದ ಧೈರ್ಯಗೊಂಡು ಬಹು ವಿರೋಧದ ನಡುವೆ ನಿಮಗೆ ಸುವಾರ್ತೆಯನ್ನು ತಿಳಿಸಿದೆವು. ಏಕೆಂದರೆ ನಮ್ಮ ಬೋಧನೆಯು ದುರುದ್ದೇಶದಿಂದಲೂ ಇಲ್ಲವೆ ವಂಚನೆಗಳಿಂದಲೂ ತಪ್ಪುಗಳಿಂದಲೂ ಕೂಡಿದ್ದಲ್ಲ. ದೇವರು ನಮ್ಮನ್ನು ಅನುಮೋದಿಸಿ ನಮ್ಮ ವಶಕ್ಕೆ ಸುವಾರ್ತೆಯನ್ನು ಒಪ್ಪಿಸಿಕೊಟ್ಟಿದ್ದಾರೆ. ಹಾಗಿರುವುದರಿಂದ, ನಾವು ಮನುಷ್ಯರನ್ನು ಮೆಚ್ಚಿಸದೆ ನಮ್ಮ ಹೃದಯಗಳನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತೇವೆ. ನಾವು ಎಂದಿಗೂ ನಿಮ್ಮನ್ನು ಹೊಗಳಿ ಮಾತನಾಡಲಿಲ್ಲ, ಕೌಶಲ್ಯವನ್ನು ಪ್ರಯೋಗಿಸಿ ಹಣದಾಸೆಯನ್ನು ಮರೆಮಾಡುವವರು ಆಗಿರಲಿಲ್ಲ ಎಂಬುದನ್ನು ನೀವು ತಿಳಿದಿರುವಿರಿ. ಇದಕ್ಕೆ ದೇವರೇ ಸಾಕ್ಷಿ. ಕ್ರಿಸ್ತ ಯೇಸುವಿನ ಅಪೊಸ್ತಲರಾದ ನಾವು ನಿಮ್ಮ ಮೇಲೆ ಭಾರವನ್ನು ಹಾಕಬಹುದಾಗಿದ್ದರೂ ಮನುಷ್ಯರಿಂದ ಬರುವ ಗೌರವವನ್ನು ನಿಮ್ಮಿಂದಾಗಲೀ, ಇತರರಿಂದಾಗಲೀ, ಹುಡುಕುವವರಾಗಿರಲಿಲ್ಲ. ಅದರ ಬದಲಾಗಿ, ನಾವು ನಿಮ್ಮ ನಡುವೆ ಶಿಶುಗಳಂತೆ ಇದ್ದೆವು.
ತಾಯಿಯು ತನ್ನ ಮಕ್ಕಳನ್ನು ಪೋಷಿಸುವಂತೆ, ನಿಮ್ಮನ್ನು ಪೋಷಿಸಿದೆವು. ಏಕೆಂದರೆ ನಾವು ನಿಮ್ಮನ್ನು ಬಹಳವಾಗಿ ಪ್ರೀತಿಸಿದ್ದರಿಂದ, ದೇವರ ಸುವಾರ್ತೆಯನ್ನು ಸಾರುವುದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ನಾವು ನಮ್ಮ ಪ್ರಾಣವನ್ನೇ ಕೊಡುವುದಕ್ಕೂ ಇಷ್ಟವುಳ್ಳವರಾಗಿದ್ದೆವು. ಪ್ರಿಯರೇ, ನಾವು ನಿಮ್ಮಲ್ಲಿ ಯಾರ ಮೇಲೆಯೂ ಭಾರಹಾಕಬಾರದೆಂದು ಹಗಲಿರುಳು ದುಡಿದು ಕಷ್ಟ ಪ್ರಯಾಸದಿಂದ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವೆಂಬುದು ನಿಮ್ಮ ನೆನಪಿನಲ್ಲಿರುವುದಷ್ಟೆ. 10 ನಂಬುವವರಾದ ನಿಮ್ಮೊಂದಿಗೆ ನಾವು ಎಷ್ಟೋ ಪವಿತ್ರರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬುದಕ್ಕೆ ನೀವೇ ಸಾಕ್ಷಿಗಳು, ಮಾತ್ರವಲ್ಲದೆ ದೇವರೂ ಸಾಕ್ಷಿ. 11 ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನನ್ನು ನಡೆಸಿದೆವು. 12 ನಿಮಗೆ ಬುದ್ಧಿ ಹೇಳುತ್ತಾ ಸಂತೈಸುತ್ತಾ ಬಂದೆವು. ಹೀಗೆ ದೇವರ ಹಾಗೂ ಅವರ ರಾಜ್ಯದ ಮಹಿಮೆಗಾಗಿ ಕರೆದಾತನಿಗೆ ನೀವು ಯೋಗ್ಯರಾಗಿ ನಡೆಯಬೇಕೆಂದು ಸಾಕ್ಷಿ ಹೇಳಿದೆವೆಂಬುದು ನಿಮಗೆ ತಿಳಿದಿದೆ.
13 ಈ ಕಾರಣಕ್ಕಾಗಿಯೇ ನಂಬುವವರಾದ ನಿಮ್ಮಲ್ಲಿ ಕಾರ್ಯಸಾಧಿಸುವ ದೇವರ ವಾಕ್ಯವನ್ನು ನಮ್ಮಿಂದ ನೀವು ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ, ನಿಜವಾಗಿಯೂ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. 14 ಪ್ರಿಯರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು ಅನುಸರಿಸುವವರಾದಿರಿ. ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನೇ ನೀವೂ ಸಹ ನಿಮ್ಮ ಸ್ವದೇಶಿಯರಿಂದ ಅನುಭವಿಸಿದಿರಿ. 15 ಆ ಯೆಹೂದ್ಯರು ನಮಗೆ ಕರ್ತ ಆಗಿರುವ ಯೇಸುವನ್ನು ಮತ್ತು ಪ್ರವಾದಿಗಳನ್ನು ಕೊಂದರು. ನಮ್ಮನ್ನೂ ಓಡಿಸಿಬಿಟ್ಟರು. ಅವರು ದೇವರನ್ನು ಮೆಚ್ಚಿಸದೆ ಜನರೆಲ್ಲರಿಗೂ ವಿರೋಧಿಗಳಾಗಿದ್ದಾರೆ. 16 ಯೆಹೂದ್ಯರಲ್ಲದವರಿಗೆ ರಕ್ಷಣೆಯಾಗುವಂತೆ ಮಾತನಾಡುವ ನಮಗೆ ಅವರು ಅಡ್ಡಿ ಮಾಡುತ್ತಾರೆ. ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಹೆಚ್ಚೆಚ್ಚಾಗಿ ಕೂಡಿಸಿಕೊಳ್ಳುತ್ತಾ ಹೋಗುತ್ತಾರೆ. ಕೊನೆಗೆ ಕೋಪಾಗ್ನಿಯೂ ಅವರ ಮೇಲೆ ಬರಲಿದೆ.
ಪೌಲನು ಥೆಸಲೋನಿಕದವರನ್ನು ನೋಡುವುದಕ್ಕೆ ಹಾರೈಸಿದ್ದು
17 ಪ್ರಿಯರೇ, ನಾವು ದೈಹಿಕವಾಗಿ ನಿಮ್ಮನ್ನು ಬಿಟ್ಟು ಸ್ವಲ್ಪಕಾಲ ಅಗಲಿದರೂ ಹೃದಯದಲ್ಲಿ ಅಗಲದೆ, ನಿಮ್ಮ ಮುಖವನ್ನು ಕಾಣಲು ಅತ್ಯಾಶೆಯಿಂದ ಬಹಳ ಪ್ರಯತ್ನ ಮಾಡಿದೆವು. 18 ಆದ್ದರಿಂದ ನಿಮ್ಮ ಬಳಿಗೆ ಬರುವುದಕ್ಕೆ ನಮಗೆ ಮನಸ್ಸಿತ್ತು. ಪೌಲನಾದ ನಾನಂತೂ ಮತ್ತೆ ಮತ್ತೆ ಬರಲು ಬಯಸಿದೆನು. ಆದರೆ ಸೈತಾನನು ನಮಗೆ ಅಭ್ಯಂತರ ಮಾಡಿದನು. 19 ನಮಗೆ ಕರ್ತ ಆಗಿರುವ ಯೇಸು ಬರುವಾಗ ಅವರ ಮುಂದೆ ನಮ್ಮ ನಿರೀಕ್ಷೆಯೂ ಆನಂದವೂ ಅಭಿಮಾನದ ಕಿರೀಟವೂ ಯಾರು? ನೀವೇ ಅಲ್ಲವೇ? 20 ನೀವೇ ನಮ್ಮ ಮಹಿಮೆಯೂ ಆನಂದವೂ ಆಗಿದ್ದೀರಿ.