3
ಪ್ರಾರ್ಥನೆಗಾಗಿ ಬೇಡಿಕೆ
1 ಕೊನೆಯದಾಗಿ ಪ್ರಿಯರೇ, ಕರ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಹಬ್ಬಿದಂತೆ ಎಲ್ಲ ಕಡೆಗಳಲ್ಲಿಯೂ ಅತಿವೇಗದಿಂದ ಹಬ್ಬಿ ಹರಡುವಂತೆ ನಮಗಾಗಿ ಬೇಡಿಕೊಳ್ಳಿರಿ.
2 ವಕ್ರಬುದ್ಧಿಯುಳ್ಳ ದುಷ್ಟರ ಕೈಯಿಂದ ನಾವು ತಪ್ಪಿಸಿಕೊಳ್ಳುವಂತೆಯೂ ಪ್ರಾರ್ಥಿಸಿರಿ. ಏಕೆಂದರೆ ಎಲ್ಲರಲ್ಲಿಯೂ ವಿಶ್ವಾಸವಿಲ್ಲವಲ್ಲಾ.
3 ಆದರೆ ಕರ್ತ ಯೇಸು ನಂಬಿಗಸ್ತರು, ಅವರು ನಿಮ್ಮನ್ನು ದೃಢಪಡಿಸಿ ನಿಮ್ಮನ್ನು ಕೆಡುಕನಿಂದ ತಪ್ಪಿಸುವರು.
4 ನಾವು ನಿಮಗೆ ಆಜ್ಞಾಪಿಸಿದವುಗಳನ್ನು ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ ನಿಮ್ಮ ವಿಷಯವಾಗಿ ಕರ್ತ ಯೇಸುವಿನಲ್ಲಿ ನಮಗೆ ಭರವಸೆಯಿದೆ.
5 ಕರ್ತ ಯೇಸು ದೇವರ ಪ್ರೀತಿಯಲ್ಲಿಯೂ ತಮ್ಮ ತಾಳ್ಮೆಯಲ್ಲಿಯೂ ನಿಮ್ಮ ಹೃದಯಗಳನ್ನು ನಡೆಸಲಿ.
ಸೋಮಾರಿತನದ ಬಗ್ಗೆ ಎಚ್ಚರಿಕೆ
6 ಪ್ರಿಯರೇ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುವುದೇನೆಂದರೆ, ನಮ್ಮಿಂದ ಸ್ವೀಕರಿಸಿದ ಬೋಧನೆಯನ್ನು ಅನುಸರಿಸದೆ, ಸೋಮಾರಿಯಾಗಿ ಅಶಿಸ್ತಿನಿಂದ ನಡೆಯುವ ಪ್ರತಿ ವಿಶ್ವಾಸಿಗೆ ನೀವು ದೂರವಾಗಿರಬೇಕು.
7 ನೀವು ನಮ್ಮ ಮಾದರಿಯನ್ನು ಅನುಸರಿಸಿ ಹೇಗೆ ನಡೆಯಬೇಕೆಂದು ನೀವೇ ಬಲ್ಲಿರಿ. ಏಕೆಂದರೆ ನಾವು ನಿಮ್ಮಲ್ಲಿರುವಾಗ ಸೋಮಾರಿಗಳಾಗಿರಲಿಲ್ಲ.
8 ನಾವು ಉಚಿತವಾಗಿ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಒಬ್ಬರಿಗೂ ನಾವು ಭಾರವಾಗಬಾರದೆಂದು ಹಗಲಿರುಳೂ ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದೆವು.
9 ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದಲ್ಲ. ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಆದರ್ಶರಾಗಿರಬೇಕೆಂದು ಹಾಗೆ ಮಾಡಿದೆವು.
10 ನಾವು ನಿಮ್ಮ ಸಂಗಡ ಇದ್ದಾಗ, “ಕೆಲಸ ಮಾಡಲೊಲ್ಲದವನು ಉಣ್ಣಲೂಬಾರದು,” ಎಂದು ನಿಮಗೆ ಆಜ್ಞಾಪಿಸಿದ್ದೆವು.
11 ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಕೆಲಸದಲ್ಲಿ ಮಾತ್ರ ತಲೆಹಾಕಿ ಅಶಿಸ್ತಿನಿಂದ ನಡೆಯುತ್ತಾರೆಂದು ಕೇಳಿದ್ದೇವೆ.
12 ಅಂಥವರು ಶಾಂತವಾಗಿ ಕೆಲಸಮಾಡಿ ತಮ್ಮ ಸ್ವಂತ ಆಹಾರವನ್ನೇ ಊಟ ಮಾಡಬೇಕೆಂದು ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ.
13 ಪ್ರಿಯರೇ, ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.
14 ಈ ಪತ್ರದ ಮೂಲಕ ಹೇಳಿರುವ ನಮ್ಮ ಮಾತಿಗೆ ಯಾರಾದರೂ ವಿಧೇಯರಾಗದಿದ್ದರೆ ಅಂಥವರನ್ನು ಗುರುತಿಸಿ ಅವರಿಗೆ ನಾಚಿಕೆಯಾಗುವಂತೆ ಅವರ ಸಹವಾಸದಲ್ಲಿ ಸೇರಬೇಡಿರಿ.
15 ಆದರೂ ಅಂಥವರನ್ನು ವೈರಿಯೆಂದು ಎಣಿಸದೆ, ಜೊತೆ ವಿಶ್ವಾಸಿಯೆಂದು ಭಾವಿಸಿ ಬುದ್ಧಿಹೇಳಿರಿ.
ಅಂತಿಮ ವಂದನೆಗಳು
16 ನಮಗೆ ಕರ್ತ ಆಗಿರುವ ಯೇಸು ಈ ಸಮಾಧಾನದಲ್ಲಿ ತಾವೇ ಸದಾಕಾಲದಲ್ಲಿಯೂ ಸಕಲ ವಿಧದಲ್ಲಿಯೂ ನಿಮಗೆ ಸಮಾಧಾನವನ್ನು ದಯಪಾಲಿಸಲಿ. ಕರ್ತದೇವರು ನಿಮ್ಮೆಲ್ಲರೊಂದಿಗೆ ಇರಲಿ.
17 ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದ ಬರೆದ ವಂದನೆಯಿದು. ನನ್ನ ಎಲ್ಲಾ ಪತ್ರಗಳಲ್ಲಿಯೂ ಇದೇ ಗುರುತು. ನಾನು ಹೀಗೆಯೇ ಬರೆಯುತ್ತೇನೆ.
18 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೆಲ್ಲರ ಸಂಗಡ ಇರಲಿ.