26
ಸ್ತುತಿಗೀತೆ
ಆ ದಿವಸದಲ್ಲಿ ಯೆಹೂದ ದೇಶದಲ್ಲಿ ಈ ಹಾಡನ್ನು ಹಾಡುವರು:
ನಮಗೆ ಬಲವಾದ ಪಟ್ಟಣವಿದೆ,
ರಕ್ಷಣೆಯನ್ನು ಕೋಟೆಯನ್ನಾಗಿಯೂ,
ಹೊರಪೌಳಿಯನ್ನಾಗಿಯೂ ದೇವರು ಮಾಡುವರು.
ಬಾಗಿಲುಗಳನ್ನು ತೆರೆಯಿರಿ.
ಸತ್ಯವನ್ನು ಕೈಗೊಳ್ಳುವ ನೀತಿಯುಳ್ಳ ಜನಾಂಗವು ಒಳಗೆ ಪ್ರವೇಶಿಸಲಿ.
ದೃಢ ಮನಸ್ಸುಳ್ಳವರನ್ನು ಪೂರ್ಣ ಸಮಾಧಾನದಲ್ಲಿ
ನೆಲೆಗೊಳಿಸಿ ಕಾಯುವೆ,
ಏಕೆಂದರೆ ಅವರಿಗೆ ನಿನ್ನಲ್ಲಿ ಭರವಸವಿದೆ.
ನೀವು ಯೆಹೋವ ದೇವರಲ್ಲಿ ಸದಾ ಭರವಸವಿಡಿರಿ,
ಏಕೆಂದರೆ ಯೆಹೋವ ದೇವರು, ಹೌದು ಯೆಹೋವ ದೇವರೇ, ನಿತ್ಯವಾದ ಬಂಡೆಯಾಗಿದ್ದಾರೆ.
ಅವರು ಎತ್ತರದಲ್ಲಿ ವಾಸಿಸುವವರನ್ನು ಇಳಿಸಿದ್ದಾರೆ.
ಉನ್ನತದಲ್ಲಿರುವ ಪಟ್ಟಣವನ್ನು ತಗ್ಗಿಸಿದ್ದಾರೆ.
ಅದನ್ನು ಕೆಡವಿ ನೆಲಸಮಮಾಡಿ
ಧೂಳಿಗೆ ತಂದಿದ್ದಾರೆ.
ಕಾಲು, ಬಡವರ ಕಾಲುಗಳೂ,
ದೀನರ ಪಾದಗಳೂ ಅದನ್ನು ತುಳಿಯುವುವು.
 
ನೀತಿವಂತನ ಮಾರ್ಗವು ಸಮಾನವಾಗಿದೆ.
ನೀನು ಅತ್ಯಧಿಕವಾದ ಯಥಾರ್ಥವಂತನು, ನೀತಿವಂತನ ದಾರಿಯನ್ನು ಸರಿಪಡಿಸಿ ಸಮಮಾಡುತ್ತಿ,
ಹೌದು, ಯೆಹೋವ ದೇವರೇ, ನಿಮ್ಮ ನ್ಯಾಯತೀರ್ಪಿನ ಮಾರ್ಗದಲ್ಲಿ ನಡೆಯುತ್ತಾ
ನಾವು ನಿಮಗೋಸ್ಕರ ಕಾದುಕೊಂಡಿದ್ದೇವೆ,
ನಿಮ್ಮ ನಾಮಸ್ಮರಣೆಯೇ
ನಮ್ಮ ಹೃದಯದ ಬಯಕೆ.
ರಾತ್ರಿಯಲ್ಲಿ ನಿಮ್ಮನ್ನು ಮನಃಪೂರ್ವಕವಾಗಿ ಬಯಸಿದ್ದೇನೆ.
ನನ್ನಲ್ಲಿರುವ ನನ್ನ ಆತ್ಮದೊಂದಿಗೆ ನಿಮ್ಮನ್ನು ಮುಂಜಾನೆಯಲ್ಲಿ ಹುಡುಕುತ್ತಿದ್ದೇನೆ.
ಏಕೆಂದರೆ ಭೂಮಿಗೆ ನಿಮ್ಮ ನ್ಯಾಯತೀರ್ಪುಗಳು ನಡೆಯುವಾಗಲೇ
ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.
10 ದುಷ್ಟನಿಗೆ ಕನಿಕರ ತೋರಿಸಿದಾಗ್ಯೂ
ನೀತಿಯನ್ನು ಅವನು ಕಲಿಯಲಾರನು.
ಯಥಾರ್ಥವಂತನ ದೇಶದಲ್ಲಿ ಅವನು ಅನ್ಯಾಯವನ್ನು ಆಚರಿಸುವನು
ಮತ್ತು ಯೆಹೋವ ದೇವರ ಮಹತ್ವವನ್ನು ಲಕ್ಷಿಸುವುದಿಲ್ಲ.
11 ಯೆಹೋವ ದೇವರೇ, ನಿಮ್ಮ ಕೈ ಮೇಲಕ್ಕೆ ಎತ್ತಲಾಗಿದೆ.
ಆದರೆ ಅವರು ಅದನ್ನು ಕಾಣುವುದಿಲ್ಲ.
ನಿಮ್ಮ ಜನರಿಗಾಗಿ ನಿಮ್ಮ ಉತ್ಸಾಹವನ್ನು ಅವರು ನೋಡಲಿ ಮತ್ತು ನಾಚಿಕೆಪಡಲಿ;
ನಿನ್ನ ವಿರೋಧಿಗಳಿಗಾಗಿದ್ದ ಅಗ್ನಿಯು ಅದನ್ನು ದಹಿಸಿಬಿಡಲಿ.
 
12 ಯೆಹೋವ ದೇವರೇ, ನಮಗೆ ಸಮಾಧಾನವನ್ನು ವಿಧಿಸುವಿರಿ.
ಏಕೆಂದರೆ ನೀವು ನಮ್ಮ ಕ್ರಿಯೆಗಳನ್ನೆಲ್ಲಾ ನಮಗೋಸ್ಕರ ನಡೆಸಿದ್ದೀರಿ.
13 ಯೆಹೋವ ದೇವರೇ, ನಮ್ಮ ದೇವರೇ,
ನಿಮ್ಮ ಬದಲು ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು.
ಆದರೆ ನಿಮ್ಮ ನಾಮವನ್ನು ಮಾತ್ರವೇ ನಾವು ಗೌರವಿಸುವೆವು.
14 ಈಗ ಅವರು ಸತ್ತಿದ್ದಾರೆ, ಅವರು ಬದುಕುವುದಿಲ್ಲ.
ತೀರಿಹೋದ ಆ ಆತ್ಮಗಳು ಎದ್ದು ಬರುವುದಿಲ್ಲ.
ನೀವು ಅವರನ್ನು ದಂಡಿಸಿ ಅಳಿಸಿಬಿಟ್ಟಿದ್ದೀರಿ.
ಅವರ ನೆನಪೇ ಉಳಿಯದ ಹಾಗೆ ಮಾಡಿದ್ದೀರಿ.
15 ಜನಾಂಗವನ್ನು ಹೆಚ್ಚಿಸಿದ್ದೀರಿ.
ಯೆಹೋವ ದೇವರೇ, ಜನಾಂಗವನ್ನು ಹೆಚ್ಚಿಸಿದ್ದೀರಿ.
ನೀವು ಮಹಿಮೆ ಹೊಂದಿದ್ದೀರಿ.
ನೀವು ದೇಶದ ಮೇರೆಗಳನ್ನೆಲ್ಲಾ ಭೂಮಿಯ ಕಟ್ಟಕಡೆಯವರೆಗೂ ವಿಸ್ತರಿಸಿದ್ದೀರಿ.
 
16 ಯೆಹೋವ ದೇವರೇ, ಇಕ್ಕಟ್ಟಿನಲ್ಲಿ ಅವರು ನಿಮ್ಮನ್ನು ಹುಡುಕಿದರು.
ನಿಮ್ಮ ಶಿಕ್ಷೆ ಅವರ ಮೇಲಿರುವಾಗ,
ಅವರು ಪ್ರಾರ್ಥನೆಯನ್ನು ಮಾಡಿದರು.
17 ಗರ್ಭಿಣಿ ಸ್ತ್ರೀಯು ಹೆರುವುದಕ್ಕೆ ಸಮೀಪ ಬಂದಾಗ
ನೋವಿನಲ್ಲಿದ್ದು ತನ್ನ ಬೇನೆಯಲ್ಲಿ ಅರಚುವಂತೆ,
ಯೆಹೋವ ದೇವರೇ, ನಾವು ನಿಮ್ಮ ಸಮ್ಮುಖದಲ್ಲಿದ್ದೆವು.
18 ನಾವು ಗರ್ಭಧರಿಸಿ, ವೇದನೆಪಟ್ಟು
ಗಾಳಿಯನ್ನು ಹೆತ್ತಂತಾಯಿತು.
ಭೂಮಿಗೆ ನಮ್ಮಿಂದ ಯಾವ ಬಿಡುಗಡೆಯೂ ಆಗಲಿಲ್ಲ.
ಭೂಲೋಕದ ಜನರಿಗೆ ಜನ್ಮ ಕೊಡಲಿಲ್ಲ.
 
19 ಆದರೆ ಮೃತರಾದ ನಿನ್ನ ಜನರು ಬದುಕುವರು.
ಅವರ ದೇಹಗಳು ಏಳುವುವು.
ಧೂಳಿನ ನಿವಾಸಿಗಳೇ,
ಎಚ್ಚೆತ್ತು ಹರ್ಷಧ್ವನಿಗೈಯಿರಿ!
ಯೆಹೋವ ದೇವರೇ, ನಿಮ್ಮ ಇಬ್ಬನಿ ಮುಂಜಾನೆಯ ಇಬ್ಬನಿಯಂತಿರುವುದು.
ಭೂಮಿಯು ಸತ್ತವರನ್ನು ಹೊರಪಡಿಸುವುದು.
 
20 ನನ್ನ ಜನರೇ, ಹೋಗಿರಿ. ನಿಮ್ಮ ಕೋಣೆಗಳಲ್ಲಿ ಸೇರಿ,
ಬಾಗಿಲನ್ನು ಮುಚ್ಚಿಕೊಳ್ಳಿರಿ.
ಸ್ವಲ್ಪ ಹೊತ್ತು ರೋಷವು
ಹಾದುಹೋಗುವ ತನಕ ಅಡಗಿಕೊಂಡಿರಿ.
21 ಭೂನಿವಾಸಿಗಳ ದುಷ್ಕೃತ್ಯಕ್ಕೆ ಶಿಕ್ಷಿಸುವುದಕ್ಕೆ
ಯೆಹೋವ ದೇವರು ತಮ್ಮ ಸ್ಥಳದಿಂದ ಹೊರಟಿದ್ದಾರೆ.
ಭೂಮಿಯು ಸಹ ತನ್ನಲ್ಲಿ ಕೊಂದುಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ,
ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟ ಮಾಡುವುದು.