12
ಯೋಬನ ಉತ್ತರ
ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು:
“ನಿಸ್ಸಂದೇಹವಾಗಿ ನೀವೇ ಆ ಜನರು;
ನಿಮ್ಮ ಸಂಗಡಲೇ ಜ್ಞಾನವು ಸಾಯುವುದು.
ನಿಮ್ಮ ಹಾಗೆಯೇ ನನಗೂ ಸಹ ತಿಳುವಳಿಕೆ ಉಂಟು;
ನಾನು ನಿಮಗಿಂತ ಕಡಿಮೆ ಇಲ್ಲ;
ಇಂಥಾ ವಿಷಯಗಳನ್ನು ತಿಳಿಯದಿರುವವನು ಯಾರು?
 
“ನಾನು ನೀತಿವಂತನೂ, ನಿರ್ದೋಷಿಯಾದರೂ ಗೆಳೆಯರ ಗೇಲಿ ಪರಿಹಾಸ್ಯಕ್ಕೆ ಗುರಿಯಾದೆನು;
ನಾನು ದೇವರಿಗೆ ಪ್ರಾರ್ಥಿಸಿದೆ;
ದೇವರು ನನಗೆ ಉತ್ತರಕೊಟ್ಟರು;
ಸುಖಜೀವಿಗಳಾಗಿರುವ ಜನರು ತೊಂದರೆಯಲ್ಲಿ ಇರುವವರನ್ನು ಅಪಹಾಸ್ಯ ಮಾಡುತ್ತಾರೆ,
ಎಡವಿ ಬೀಳುವ ಜನರಿಗೆ ಕಾದಿದೆ ಆಪತ್ತು.
ಕಳ್ಳರ ಗುಡಾರಗಳು ವೃದ್ಧಿಯಾಗಿವೆ;
ದೇವರನ್ನು ಕೆರಳಿಸುವವರು ನಿಶ್ಚಿಂತರಾಗಿದ್ದಾರೆ;
ದೇವರೇ ತಮ್ಮ ಕೈಯಲ್ಲಿ ಇರುವುದಾಗಿ ತಿಳಿಯುತ್ತಾರೆ.
 
“ಆದರೂ ಮೃಗಗಳನ್ನು ಕೇಳು, ಅವು ನಿನಗೆ ಬೋಧಿಸುವುವು;
ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುವುವು.
ಭೂಮಿಯ ಸಂಗಡ ಮಾತನಾಡು, ಅದು ನಿನಗೆ ಬೋಧಿಸುವುದು,
ಸಮುದ್ರದ ಮೀನುಗಳು ನಿನಗೆ ವಿವರಿಸುವುವು.
ಯೆಹೋವ ದೇವರ ಕೈ ಇವುಗಳನ್ನೆಲ್ಲಾ ಮಾಡಿತೆಂದು
ಇವುಗಳಲ್ಲಿ ತಿಳಿಯದಿರುವುದು ಯಾವುದು?
10 ದೇವರ ಕೈಯಲ್ಲಿ ಎಲ್ಲಾ ಜೀವಿಗಳ ಪ್ರಾಣವೂ
ಎಲ್ಲಾ ಮನುಷ್ಯರ ಶ್ವಾಸವೂ ಇವೆ.
11 ಬಾಯಿಯು ಆಹಾರವನ್ನು ರುಚಿ ನೋಡುವಂತೆ
ಕಿವಿಯು ನುಡಿಗಳನ್ನು ವಿವೇಚಿಸುವುದಿಲ್ಲವೇ?
12 ಮುದುಕರಲ್ಲಿ ಜ್ಞಾನವು ಇರುವುದಿಲ್ಲವೋ?
ದೀರ್ಘಾಯುಷ್ಯರಲ್ಲಿ ತಿಳುವಳಿಕೆಯನ್ನು ತರುವುದಿಲ್ಲವೋ?
 
13 “ಜ್ಞಾನವೂ, ಶಕ್ತಿಯೂ ದೇವರಲ್ಲಿವೆ;
ಸಮಾಲೋಚನೆಯೂ, ಗ್ರಹಿಕೆಯೂ ದೇವರವೇ.
14 ದೇವರು ಕೆಡವಿದ್ದನ್ನು ತಿರುಗಿ ಕಟ್ಟಲಾಗುವುದಿಲ್ಲ;
ದೇವರು ಸೆರೆಯಲ್ಲಿ ಹಾಕುವ ಮನುಷ್ಯನನ್ನು ಯಾರೂ ಬಿಡಿಸಲಾಗುವುದಿಲ್ಲ.
15 ದೇವರು ಮಳೆಯನ್ನು ತಡೆಹಿಡಿಯುತ್ತಾರೆ, ಭೂಮಿ ಒಣಗುತ್ತದೆ;
ದೇವರು ನೀರನ್ನು ಬಿಟ್ಟರೆ, ಭೂಮಿಯನ್ನು ಹಾಳುಮಾಡುತ್ತದೆ.
16 ಬಲವೂ, ಜ್ಞಾನವೂ ದೇವರಲ್ಲಿವೆ;
ವಂಚಕ ಹಾಗು ವಂಚಿತ ದೇವರಿಗೆ ಒಳಪಟ್ಟವರು.
17 ದೇವರು ಸಲಹೆಗಾರರನ್ನು ಸೆರೆಹಿಡಿಯುತ್ತಾರೆ;
ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾರೆ.
18 ದೇವರು ಅರಸರಿಂದ ಹಾಕಲಾದ ಬಂಧನಗಳನ್ನು ಬಿಚ್ಚಿ,
ಅವರ ನಡುಗಳಿಗೆ ವಸ್ತ್ರವನ್ನು ಕಟ್ಟುತ್ತಾರೆ.
19 ದೇವರು ಯಾಜಕರನ್ನು ಅಧಿಕಾರದಿಂದ ತೆಗೆದುಹಾಕುತ್ತಾರೆ;
ಪ್ರಧಾನರನ್ನು ಕೆಡವಿಬಿಡುತ್ತಾರೆ.
20 ದೇವರು ವಿಶ್ವಾಸಾರ್ಹ ಸಲಹೆಗಾರರನ್ನು ಮೌನಗೊಳಿಸುತ್ತಾರೆ;
ವೃದ್ಧರ ವಿವೇಚನೆಯನ್ನು ತೆಗೆದುಬಿಡುತ್ತಾರೆ.
21 ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯ್ಯುತ್ತಾರೆ;
ಬಲಿಷ್ಠರ ಬಲವನ್ನು ಸಡಿಲಿಸುತ್ತಾರೆ.
22 ದೇವರು ಕತ್ತಲೆಯೊಳಗಿಂದ ಅಗಾಧವಾದ ವಿಷಯಗಳನ್ನು ಪ್ರಕಟಪಡಿಸುತ್ತಾರೆ,
ಗಾಢಾಂಧಕಾರವನ್ನು ಪ್ರಕಾಶಗೊಳಿಸುತ್ತಾರೆ.
23 ದೇಶಗಳನ್ನು ಬೆಳೆಸುವುದೂ, ದಂಡಿಸುವುದೂ ದೇವರ ಕೈಯಲ್ಲಿದೆ;
ದೇಶಗಳನ್ನು ವಿಸ್ತಾರಮಾಡುವುದೂ, ಚದರಿಸುವುದೂ ದೇವರ ಅಧಿಕಾರದಲ್ಲಿದೆ.
24 ದೇವರು ಭೂಮಿಯ ಮುಖ್ಯಸ್ಥರ ವಿವೇಚನೆಯನ್ನು ತೆಗೆದುಬಿಡುತ್ತಾರೆ;
ಅಂಥವರು ಮಾರ್ಗವಿಲ್ಲದ ಅಲೆಯ ಮಾಡುವುದೂ ದೇವರಿಗೆ ಸಾಧ್ಯ.
25 ನಾಯಕರು ಬೆಳಕು ಇಲ್ಲದ ಕತ್ತಲೆಯಲ್ಲಿ ತಡಕಾಡುವಂತೆಯೂ
ಅವರು ಮತ್ತೇರಿದವರಂತೆ ದಿಗ್ಭ್ರಮೆಗೊಳಿಸುವಂತೆಯೂ ಮಾಡಲು ದೇವರು ಶಕ್ತರು.