39
“ಕಾಡುಮೇಕೆಗಳು ಈಯುವ ಕಾಲವನ್ನು ನೀನು ತಿಳಿದಿರುವೆಯಾ?
ಜಿಂಕೆಗಳ ಹೆರಿಗೆಯನ್ನು ನೋಡಿರುವೆಯಾ?
ಅವುಗಳ ಗರ್ಭ ತುಂಬುವ ತಿಂಗಳುಗಳನ್ನು ಎಣಿಸಿರುವೆಯಾ?
ಅವು ಈಯುವ ಕಾಲವನ್ನು ತಿಳಿದಿರುವಿಯೋ?
ಅವು ಬಗ್ಗಿ ಮರಿಗಳನ್ನು ಹಾಕುತ್ತವೆ;
ಅದರ ಪ್ರಸವ ವೇದನೆಯನ್ನು ಮರೆತುಬಿಡುತ್ತವೆ.
ಅವುಗಳ ಮರಿಗಳು ಪುಷ್ಟಿಯಾಗಿ ಕಾಡಿನಲ್ಲಿ ಬೆಳೆಯುತ್ತವೆ;
ಅವು ತಾಯಿಯನ್ನು ಅಗಲಿದ ಬಳಿಕ ತಿರುಗಿ ಬರುವುದಿಲ್ಲ.
 
“ಕಾಡುಕತ್ತೆಗೆ ಸ್ವತಂತ್ರವನ್ನು ಕೊಟ್ಟವರು ಯಾರು?
ಕಾಡುಕತ್ತೆಯ ಕಟ್ಟನ್ನು ಬಿಚ್ಚಿದವರು ಯಾರು?
ಮರುಭೂಮಿಯನ್ನು ಅದರ ನಿವಾಸವನ್ನಾಗಿ ಕೊಟ್ಟಿರುವುದು ನಾನೇ.
ಸವಳುಬಯಲನ್ನು ಅದರ ವಾಸ ಸ್ಥಳವಾಗಿಯೂ ನೇಮಿಸಿದ್ದು ನಾನೇ.
ಪಟ್ಟಣದ ಗದ್ದಲವನ್ನು ಕಾಡುಕತ್ತೆಯು ಧಿಕ್ಕರಿಸುತ್ತದೆ;
ಅದು ಓಡಿಸುವವನ ಕೂಗನ್ನು ಲಕ್ಷಿಸುವುದಿಲ್ಲ.
ಬೆಟ್ಟಗಳಲ್ಲಿ ಕಂಡದ್ದೆಲ್ಲಾ ಅದರ ಮೇವು;
ಹಸುರಾಗಿರುವುದನ್ನು ಎಲ್ಲಿದ್ದರೂ ಹುಡುಕುತ್ತಲೇ ಇರುವುದು.
 
“ಕಾಡುಕೋಣವು ನಿನ್ನ ಸೇವೆ ಮಾಡಲು ಎಂದಾದರೂ ಒಪ್ಪಿದೆಯೆ?
ಅದು ರಾತ್ರಿಯಲ್ಲಿ ನಿನ್ನ ಗೋದಲಿಯ ಬಳಿಯಲ್ಲಿ ಉಳಿದುಕೊಂಡಿದೆಯೆ?
10 ಕಾಡುಕೋಣವನ್ನು ಹಗ್ಗದಿಂದ ನೇಗಿಲ ಸಾಲಿಗೆ ಕಟ್ಟಿರುವೆಯಾ?
ಅದು ಕಣಿವೆಯಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೆ?
11 ಅದರ ಶಕ್ತಿ ಹೆಚ್ಚಾಗಿರುವುದರಿಂದ ನೀನು ಕೆಲಸಕ್ಕಾಗಿ ಅದನ್ನೇ ನಂಬಿರುವೆಯಾ?
ನಿನ್ನ ಭಾರವಾದ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವೆಯಾ?
12 ಅದು ನಿನ್ನ ಧಾನ್ಯ ತೆನೆಗಳನ್ನು ಮನೆಗೆ ತರುವುದೆಂದು ನಂಬುವೆಯಾ?
ನಿನ್ನ ಕಣದಲ್ಲಿ ಕಾಳು ಕೂಡಿಸುವದೆಂದೂ ಅದನ್ನು ನಿರೀಕ್ಷಿಸುವೆಯಾ?
 
13 “ಉಷ್ಟ್ರಪಕ್ಷಿ ಸಂತೋಷದಿಂದ ರೆಕ್ಕೆ ಬಡಿಯುತ್ತದೆ.
ಆದರೂ ಕೊಕ್ಕರೆಯ ರೆಕ್ಕೆ ಗರಿಗಳೊಂದಿಗೆ
ಅವುಗಳನ್ನು ಹೋಲಿಸಲಾಗದು.
14 ಏಕೆಂದರೆ ಉಷ್ಟ್ರಪಕ್ಷಿಯು ತನ್ನ ಮೊಟ್ಟೆಗಳನ್ನು ನೆಲದಲ್ಲಿ ಬಿಟ್ಟು,
ಕೇವಲ ಮರಳಿನಿಂದ ಅವುಗಳಿಗೆ ಕಾವು ಕೊಡುತ್ತದೆ.
15 ಜನರು ಕಾಲಿನಿಂದ ಮೊಟ್ಟೆಗಳನ್ನು ಮೆಟ್ಟಿಯಾರು,
ಇಲ್ಲವೆ ಕಾಡುಮೃಗ ಅದನ್ನು ಅವುಗಳನ್ನು ತುಳಿದೀತು ಎಂಬ ಚಿಂತೆ ಆ ಪಕ್ಷಿಗೆ ಇಲ್ಲ.
16 ತನ್ನ ಮರಿಗಳನ್ನು ತನ್ನವುಗಳಲ್ಲ ಎಂಬಂತೆ ಕ್ರೂರವಾಗಿ ನಡೆಸುತ್ತದೆ;
ಉಷ್ಟ್ರಪಕ್ಷಿಯು ತನ್ನ ಹೆರಿಗೆ ವ್ಯರ್ಥವಾದರೂ ಅದಕ್ಕೆ ಚಿಂತೆ ಇಲ್ಲ.
17 ಏಕೆಂದರೆ ದೇವರು ಉಷ್ಟ್ರಪಕ್ಷಿಗೆ ಜ್ಞಾನವನ್ನು ಮರೆಮಾಡಿ,
ತಿಳುವಳಿಕೆಯನ್ನು ಅದಕ್ಕೆ ಕೊಡಲಿಲ್ಲವಷ್ಟೆ.
18 ಆದರೂ ಆ ಪಕ್ಷಿ ತನ್ನ ರೆಕ್ಕೆಗಳನ್ನು ಹರಡಿ ಓಡಿದಾಗ,
ಅದು ಕುದುರೆ ಸವಾರನನ್ನು ಸಹ ನೋಡಿ ಅಣಕಿಸುತ್ತದೆ.
 
19 “ಯೋಬನೇ, ಕುದುರೆಗೆ ಶಕ್ತಿ ಕೊಟ್ಟವನು ನೀನೋ?
ಅದರ ಕೊರಳಿಗೆ ಜುಟ್ಟುಗುಡುಗನ್ನು ಹೊದಿಸಿದವನು ನೀನೋ?
20 ಮಿಡತೆಯ ಹಾಗೆ ಅದನ್ನು ಹಾರುವಂತೆ ಮಾಡಿದವನು ನೀನೋ?
ಅದರ ಕೆನೆತದ ಪ್ರಭಾವ ಭಯಂಕರವಾಗಿದೆಯಲ್ಲಾ?
21 ಕುದುರೆಯು ನೆಲವನ್ನು ಕೆರೆಯುತ್ತಾ ತನ್ನ ಶಕ್ತಿಯಲ್ಲಿ ಹಿಗ್ಗುತ್ತದೆ;
ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೊರಡುತ್ತದೆ.
22 ಭಯವನ್ನು ಕಂಡು ನಗುತ್ತದೆ; ಯಾವುದಕ್ಕೂ ಹೆದರುವುದಿಲ್ಲ;
ಖಡ್ಗಕ್ಕೆ ಸಹ ಹಿಂದೆಗೆಯುವುದಿಲ್ಲ.
23 ಅದರ ಮೇಲೆ ಬತ್ತಳಿಕೆಯೂ,
ಪ್ರಜ್ವಲಿಸುವ ಭಲ್ಲೆಯೂ, ಭರ್ಜಿಯೂ ಥಳಥಳಿಸುತ್ತವೆ.
24 ಕುದುರೆ ಕಹಳೆಯ ನಾದವನ್ನು ಕೇಳಿದರೂ
ಭೀಕರ ಉತ್ಸಾಹದಲ್ಲಿ ನೆಲನುಂಗುವಂತೆ ನಿಲ್ಲದೆ ಓಡುತ್ತದೆ.
25 ರಣಕಹಳೆ ಮೊಳಗಿದಾಗ ಕುದುರೆ ಕೆನೆಯುತ್ತದೆ.
ಅದು ಅಧಿಪತಿಗಳ ಗರ್ಜನೆಯನ್ನೂ ಕಾಳಗದ ಆರ್ಭಟವನ್ನೂ
ದೂರದಿಂದಲೇ ಮೂಸಿ ನೋಡಿ ತಿಳಿಯುತ್ತದೆ.
 
26 “ಯೋಬನೇ, ಗಿಡುಗವು ತನ್ನ ರೆಕ್ಕೆಗಳನ್ನು ಹರಡಿ,
ದಕ್ಷಿಣದ ಕಡೆಗೆ ಹಾರುವುದು ನಿನ್ನ ಜ್ಞಾನದಿಂದಲೋ?
27 ರಣಹದ್ದು ಎತ್ತರಕ್ಕೆ ಹಾರುವುದೂ,
ಉನ್ನತ ಸ್ಥಳದಲ್ಲಿ ಗೂಡುಕಟ್ಟುವುದು ನಿನ್ನ ಅಪ್ಪಣೆಯಿಂದಲೋ?
28 ಅದು ಬಂಡೆಯ ಸಂದುಗಳಲ್ಲಿ ರಾತ್ರಿಯನ್ನು ಕಳೆಯುತ್ತದೆ;
ಶಿಲಾಶಿಖರದ ದುರ್ಗಗಳಲ್ಲಿಯೂ ಅದು ತಂಗುತ್ತದೆ.
29 ಅಲ್ಲಿಂದಲೇ ಆಹಾರವನ್ನು ಹುಡುಕುತ್ತದೆ;
ಅದರ ಕಣ್ಣುಗಳು ದೂರದಿಂದಲೇ ನೋಡುತ್ತವೆ.
30 ಅದರ ಮರಿಗಳು ತಂದ ಬೇಟೆಯನ್ನು ತಿಂದುಬಿಡುತ್ತವೆ;
ಹೆಣ ಬಿದ್ದಲ್ಲಿಯೇ ರಣಹದ್ದು ಇರುವುದು.”