ಯೂದನು
ಬರೆದ ಪತ್ರಿಕೆ
1
ಕ್ರಿಸ್ತ ಯೇಸುವಿನ ದಾಸನೂ ಯಾಕೋಬನ ಸಹೋದರನೂ ಆಗಿರುವ ಯೂದನು,
 
ತಂದೆಯಾದ ದೇವರಿಗೆ ಪ್ರಿಯರಾದವವರಿಗೂ ಕ್ರಿಸ್ತ ಯೇಸು ಸುರಕ್ಷತೆಯನ್ನೂ ಅವರ ಕರೆಯುವಿಕೆಯನ್ನೂ ಹೊಂದಿದವರಿಗೆ ಬರೆಯುವ ಪತ್ರ:
 
ನಿಮಗೆ ಕರುಣೆಯೂ ಶಾಂತಿಯೂ ಪ್ರೀತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
 
ಸಭೆಯೊಳಗೆ ದುರ್ಮಾರ್ಗಿಗಳು
ಪ್ರಿಯ ಸ್ನೇಹಿತರೇ, ನಾವು ಹಂಚಿಕೊಳ್ಳುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಜಾಗ್ರತೆಯಿಂದ ಪ್ರಯತ್ನ ಮಾಡುತ್ತಿದ್ದಾಗ, ಪರಿಶುದ್ಧರಿಗೆ ಒಂದೇ ಸಾರಿ ಒಪ್ಪಿಸಲಾದ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು. ಏಕೆಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆಪಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡೆಸುವವರೂ ನಮ್ಮ ಒಬ್ಬರೇ ಕರ್ತ ಆಗಿರುವ ದೇವರನ್ನು ಮತ್ತು ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅಲ್ಲಗಳೆಯುವ ಕೆಲವು ಜನರೂ ರಹಸ್ಯವಾಗಿ ಸಭೆಯೊಳಗೆ ಹೊಕ್ಕಿದ್ದಾರೆ. ಇವರು ದಂಡನೆಗೋಸ್ಕರ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ.
ಇದನ್ನು ನೀವು ಈಗಾಗಲೇ ಒಂದು ಸಾರಿ ತಿಳಿದವರಾಗಿದ್ದೀರಿ. ಆದರೂ ನಾನು ಅದನ್ನೇ ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅದು ಯಾವುದೆಂದರೆ: ಕರ್ತದೇವರು ತಮ್ಮ ಪ್ರಜೆಯನ್ನು ಈಜಿಪ್ಟ್ ದೇಶದೊಳಗಿಂದ ರಕ್ಷಿಸಿದರೂ ತರುವಾಯ ಅವರೊಳಗೆ ನಂಬದೆ ಹೋದವರನ್ನು ಸಂಹಾರ ಮಾಡಿದರು. ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ಅವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿಟ್ಟಿದ್ದಾರೆ. ಸೊದೋಮ ಗೊಮೋರದವರೂ ಹಾಗೆಯೇ ಅವುಗಳ ಸುತ್ತಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಅನೈತಿಕತೆಗೆ ಒಪ್ಪಿಸಿಕೊಟ್ಟರು. ಅವರು ಸ್ವಭಾವಕ್ಕೆ ವಿರುದ್ಧ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲಾಗಿದ್ದಾರೆ.
ಹಾಗೆಯೇ ಈ ದುಃಸ್ವಪ್ನದವರೂ ಶರೀರವನ್ನು ಮಲಿನಮಾಡಿಕೊಳ್ಳುವವರೂ ಪ್ರಭುತ್ವವನ್ನು ಅಸಡ್ಡೆಮಾಡುವವರೂ ದೇವದೂತರುಗಳನ್ನು ದೂಷಿಸುವವರೂ ಆಗಿದ್ದಾರೆ. ಆದರೂ ಪ್ರಧಾನ ದೇವದೂತನಾದ ಮೀಕಾಯೇಲನು, ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ, ಅವನು ಸೈತಾನನನ್ನು ದೂಷಿಸುವುದಕ್ಕೆ ಧೈರ್ಯಗೊಳ್ಳದೆ, “ಕರ್ತದೇವರು ನಿನ್ನನ್ನು ಗದರಿಸಲಿ!” ಎಂದನು. 10 ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡುತ್ತಾರೆ. ತಾವು ವಿವೇಕಶೂನ್ಯ ಮೃಗಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.
11 ಅವರು ಕಾಯಿನನ ಮಾರ್ಗ ಹಿಡಿದವರೂ ಪ್ರತೀಕಾರ ಹೊಂದುವುದಕ್ಕಾಗಿ ಬಿಳಾಮನ ದೋಷವನ್ನು ಮಾಡುವುದಕ್ಕೆ ದುರಾಶೆಯಿಂದ ಓಡುವವರಾಗಿದ್ದಾರೆ. ಅವರು ಕೋರಹನಂತೆ ಎದುರು ಮಾತನಾಡಿ ನಾಶವಾಗುವವರಾಗಿದ್ದಾರೆ. ಆದ್ದರಿಂದ ಅವರ ಗತಿ ಏನೆಂದು ಹೇಳಲಿ!
12 ಕಳಂಕರಾದ ಇವರು ನಿಮ್ಮ ಪ್ರೇಮ ಭೋಜನಗಳಲ್ಲಿ ನಿರ್ಭಯವಾಗಿ ತಿಂದು, ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಚದುರಿ ಹೋಗುವ ನೀರಿಲ್ಲದ ಮೇಘಗಳೂ ಎರಡು ಸಾರಿ ಸತ್ತು, ಹಣ್ಣು ಬಿಡದೆ ಒಣಗಿ ಹೋಗಿ ಬೇರುಸಹಿತ ಕಿತ್ತು ಬಿದ್ದ ಮರಗಳೂ 13 ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲಕ್ಕೆ ಇಡಲಾಗಿದೆ.
14 ಇಂಥವರ ವಿಷಯದಲ್ಲಿಯೇ ಆದಾಮನಿಂದ ಏಳನೆಯವನಾದ ಹನೋಕನು ಸಹ, “ಇಗೋ, ಕರ್ತದೇವರು ತಮ್ಮ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು 15 ಎಲ್ಲರಿಗೆ ನ್ಯಾಯತೀರಿಸುವುದಕ್ಕೆ ಬರುವರು. ಮಾತ್ರವಲ್ಲದೆ ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ದುಷ್ಕೃತ್ಯಗಳನ್ನು ಮತ್ತು ಪಾಪಿಷ್ಠರು ತಮಗೆ ವಿರೋಧವಾಗಿ ಆಡಿದ ಎಲ್ಲಾ ದೂಷಣೆಗಳ ವಿಷಯವಾಗಿ ಅವರನ್ನು ಖಂಡಿಸಲು ಬರುವರು,” ಎಂಬುದಾಗಿ ಪ್ರವಾದಿಸಿದನು. 16 ಇವರು ಗೊಣಗುಟ್ಟುವವರೂ ದೂರುವವರೂ ತಮ್ಮ ದುರಾಶೆಗಳನ್ನು ಅನುಸರಿಸಿ ನಡೆಯುವವರೂ ಆಗಿದ್ದಾರೆ. ಇವರ ಬಾಯಿಂದ ದೊಡ್ಡ ದೊಡ್ಡ ಮಾತುಗಳು ಉದುರುತ್ತವೆ. ಇವರು ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುತ್ತಾರೆ.
ದೇವರ ಮಕ್ಕಳಿಗೆ ಎಚ್ಚರಿಕೆ
17 ಪ್ರಿಯ ಸ್ನೇಹಿತರೇ, ನೀವಾದರೋ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ. 18 “ಭಕ್ತಿಗೆ ವಿರುದ್ಧವಾದ ತಮ್ಮ ಆಶೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರು,” ಎಂದು ಅಪೊಸ್ತಲರು ನಿಮಗೆ ಹೇಳಿದರು. 19 ಇವರು ನಿಮ್ಮಲ್ಲಿ ಭಿನ್ನಾಭಿಪ್ರಾಯವನ್ನು ಉಂಟುಮಾಡುವವರೂ ಪ್ರಾಪಂಚಿಕ ಮನುಷ್ಯರೂ ಪವಿತ್ರಾತ್ಮ ದೇವರಿಲ್ಲದವರೂ ಆಗಿದ್ದಾರೆ.
20 ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ನಂಬಿಕೆಯಲ್ಲಿ ನಿಮ್ಮನ್ನು ನಿರ್ಮಿಸಿಕೊಂಡವರಾಗಿ ಪರಿಶುದ್ಧಾತ್ಮ ದೇವರಲ್ಲಿ ಪ್ರಾರ್ಥಿಸಿರಿ. 21 ನಿತ್ಯಜೀವಕ್ಕಾಗಿ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕರುಣೆಗೋಸ್ಕರ ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.
22 ಸಂಶಯಪಡುವ ಕೆಲವರಿಗೆ ಕನಿಕರವನ್ನು ತೋರಿಸಿರಿ. 23 ಬೇರೆಯವರನ್ನು ಬೆಂಕಿಯಿಂದ ಎಳೆದು ರಕ್ಷಿಸಿರಿ. ಭಯದಿಂದ ಕರುಣೆ ತೋರಿಸಿರಿ. ಪಾಪ ಕೃತ್ಯಗಳಿಂದ ಮೈಲಿಗೆಯಾದ ಅವರ ಜೀವನವನ್ನು* ಸಹ ಹಗೆ ಮಾಡಿರಿ.
 
ಅಂತ್ಯ ಆಶೀರ್ವಾದ
24 ಎಡವಿಬೀಳದಂತೆ ನಿಮ್ಮನ್ನು ಕಾಪಾಡುವುದಕ್ಕೂ ತಮ್ಮ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ಅತ್ಯಂತ ಹರ್ಷದೊಡನೆ ನಿರ್ದೋಷಿಗಳನ್ನಾಗಿ ನಿಲ್ಲಿಸುವುದಕ್ಕೂ ಶಕ್ತರಾಗಿರುವ 25 ನಮ್ಮ ರಕ್ಷಕರಾದ ಒಬ್ಬರೇ ದೇವರಿಗೆ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮುಖಾಂತರ ಮಹಿಮೆ, ಮಹತ್ವ, ಬಲವು, ಅಧಿಕಾರಗಳು ಎಂದೂ ಇದ್ದಂತೆ ಈಗಲೂ ಯಾವಾಗಲೂ ಇರಲಿ. ಆಮೆನ್.
* 1:23 ಅಥವಾ ಅಂಗಿಯನ್ನು