ನ್ಯಾಯಸ್ಥಾಪಕರು
1
ಉಳಿದ ಕಾನಾನ್ಯರೊಡನೆ ಇಸ್ರಾಯೇಲರ ಯುದ್ಧ
ಯೆಹೋಶುವನು ಮರಣ ಹೊಂದಿದ ಬಳಿಕ ಇಸ್ರಾಯೇಲರು, “ಕಾನಾನ್ಯರೊಡನೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ಯೆಹೋವ ದೇವರನ್ನು ಕೇಳಿದರು.
ಅದಕ್ಕೆ ಯೆಹೋವ ದೇವರು, “ಯೆಹೂದ ಗೋತ್ರದವರು ಹೋಗಲಿ; ನಾನು ಆ ದೇಶವನ್ನು ಇವರ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ,” ಎಂದರು.
ಯೆಹೂದ ಗೋತ್ರದವರು ತಮ್ಮ ಸಹೋದರರಾದ ಸಿಮೆಯೋನ್ಯರಿಗೆ, “ನೀವು ನಮ್ಮ ಸಂಗಡ ನಮ್ಮ ಪ್ರಾಂತಕ್ಕೆ ಬನ್ನಿರಿ, ಕಾನಾನ್ಯರ ಮೇಲೆ ಯುದ್ಧ ಮಾಡೋಣ. ಹಾಗೆಯೇ ನಾವು ನಿಮ್ಮ ಸಂಗಡ ನಿಮ್ಮ ಪ್ರಾಂತಕ್ಕೆ ಬರುತ್ತೇವೆ,” ಎಂದರು. ಹೀಗೆ ಸಿಮೆಯೋನ್ಯರು ಅವರ ಸಂಗಡ ಹೋದರು.
ಯೆಹೂದ ಗೋತ್ರದವರು ಹೋದಾಗ, ಯೆಹೋವ ದೇವರು ಕಾನಾನ್ಯರನ್ನೂ ಪೆರಿಜೀಯರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟರು. ಅವರು ಬೆಜೆಕಿನಲ್ಲಿ ಹತ್ತು ಸಾವಿರ ಜನರನ್ನು ಕೊಂದರು. ಅವರು ಬೆಜೆಕಿನಲ್ಲಿ ಅರಸನಾದ ಅದೋನೀಬೆಜೆಕನನ್ನು ಸಂಧಿಸಿ, ಅವನ ವಿರೋಧವಾಗಿ ಯುದ್ಧಮಾಡಿ, ಕಾನಾನ್ಯರನ್ನೂ ಪೆರಿಜೀಯರನ್ನೂ ಕೊಂದುಹಾಕಿದರು. ಆದರೆ ಅದೋನೀಬೆಜೆಕನು ಓಡಿ ಹೋದದ್ದರಿಂದ, ಅವನನ್ನು ಹಿಂದಟ್ಟಿ ಹಿಡಿದು, ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು.
ಆಗ ಅದೋನೀಬೆಜೆಕನು, “ನಾನು ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟ ಎಪ್ಪತ್ತು ಮಂದಿ ಅರಸರು, ನನ್ನ ಮೇಜಿನ ಕೆಳಗೆ ಬೀಳುವ ಚೂರುಗಳನ್ನು ಕೂಡಿಸಿಕೊಂಡು ತಿನ್ನುತ್ತಿದ್ದರು. ನಾನು ಅವರಿಗೆ ಮಾಡಿದಂತೆಯೇ, ದೇವರು ನನಗೆ ಮಾಡಿದ್ದಾರೆ,” ಎಂದನು. ಅವರು ಅವನನ್ನು ಯೆರೂಸಲೇಮಿಗೆ ತೆಗೆದುಕೊಂಡು ಬಂದರು. ಅಲ್ಲಿ ಅವನು ಮರಣಹೊಂದಿದನು.
ಯೆಹೂದ ಗೋತ್ರದವರು ಯೆರೂಸಲೇಮಿನವರ ಮೇಲೆ ಯುದ್ಧಮಾಡಿ, ಅಲ್ಲಿದ್ದವರನ್ನು ಖಡ್ಗದಿಂದ ಸಂಹರಿಸಿ, ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
ತರುವಾಯ ಯೆಹೂದ ಗೋತ್ರದವರು ಬೆಟ್ಟದಲ್ಲಿಯೂ ದಕ್ಷಿಣದಲ್ಲಿಯೂ ತಗ್ಗಿನಲ್ಲಿಯೂ ವಾಸಿಸಿದ ಕಾನಾನ್ಯರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋದರು. 10 ಯೆಹೂದ ಗೋತ್ರದವರು ಪೂರ್ವದಲ್ಲಿ ಕಿರ್ಯತ್ ಅರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್, ತಲ್ಮೈರನ್ನು ಸೋಲಿಸಿದರು. 11 ಅಲ್ಲಿಂದ ದೆಬೀರಿನ ನಿವಾಸಿಗಳ ವಿರೋಧವಾಗಿ ಹೋದರು. ದೆಬೀರಿಗೆ ಮೊದಲು ಕಿರ್ಯತ್ ಸೇಫೆರ್ ಎಂಬ ಹೆಸರಿತ್ತು.
12 ಕಾಲೇಬನು, “ಕಿರ್ಯತ್ ಸೇಫೆರ ಮೇಲೆ ದಾಳಿಮಾಡಿ ತೆಗೆದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ,” ಎಂದು ಹೇಳಿದ್ದನು. 13 ಆಗ ಕಾಲೇಬನ ತಮ್ಮನಾದ ಕೆನಾಜನ ಮಗನಾದ ಒತ್ನಿಯೇಲನು ಅದನ್ನು ಹಿಡಿದನು. ಅನಂತರ ಕಾಲೇಬನು ತನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.
14 ಒಂದು ದಿನ ಅಕ್ಷಾ ಒತ್ನಿಯೇಲನೊಂದಿಗೆ ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಇನ್ನೂ ಒಂದು ಹೊಲವನ್ನು ಕೇಳುವುದಕ್ಕೆ ಅವನನ್ನು ಪ್ರೇರೇಪಿಸಿ, ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳಿಗೆ, “ನಿನಗೆ ಏನು ಬೇಕು?” ಎಂದನು.
15 ಅದಕ್ಕೆ ಅವಳು ಅವನಿಗೆ, “ನನಗೆ ಒಂದು ಸಹಾಯಮಾಡಬೇಕು. ಮೊದಲು ದಕ್ಷಿಣ ಹೊಲವನ್ನು ನೀನು ನನಗೆ ಕೊಟ್ಟೆ; ನೀರಿನ ಬುಗ್ಗೆಗಳನ್ನು ಸಹ ನನಗೆ ಕೊಡು,” ಎಂದಳು. ಆಗ ಕಾಲೇಬನು ಅವಳಿಗೆ ಮೇಲಿನ ಹಾಗೂ ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು.
16 ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು, ಯೆಹೂದ ಗೋತ್ರದವರ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೆಹೂದದ ಗೋತ್ರದವರ ಮರುಭೂಮಿಗೆ ಬಂದು, ಅಲ್ಲಿನ ಜನರ ಸಂಗಡ ವಾಸವಾಗಿದ್ದರು.
17 ಯೆಹೂದ ಗೋತ್ರದವರು ತನ್ನ ಸಹೋದರರಾದ ಸಿಮೆಯೋನ್ಯರ ಸಂಗಡ ಹೊರಟು, ಚೆಫೆತ್‌ನಲ್ಲಿ ವಾಸವಾಗಿರುವ ಕಾನಾನ್ಯರ ಮೇಲೆ ದಾಳಿಮಾಡಿ, ಆ ಪಟ್ಟಣವನ್ನು ನಿರ್ಮೂಲ ಮಾಡಿದರು. ಆ ಪಟ್ಟಣವು ಹೊರ್ಮಾ ಎಂದು ಕರೆಯಲಾಗಿತ್ತು. 18 ಇದಲ್ಲದೆ ಯೆಹೂದ ಗೋತ್ರದವರು ಗಾಜಾವನ್ನೂ ಅದರ ಮೇರೆಯನ್ನೂ; ಅಷ್ಕೆಲೋನನ್ನೂ, ಅದರ ಮೇರೆಯನ್ನೂ; ಎಕ್ರೋನನ್ನೂ, ಅದರ ಮೇರೆಯನ್ನೂ ತೆಗೆದುಕೊಂಡರು.
19 ಯೆಹೋವ ದೇವರು ಯೆಹೂದ ಗೋತ್ರದವರ ಸಂಗಡ ಇದ್ದುದರಿಂದ, ಅವರು ಬೆಟ್ಟದ ಪ್ರದೇಶಗಳನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಆದರೆ ತಗ್ಗಿನ ನಿವಾಸಿಗಳಿಗೆ ಕಬ್ಬಿಣದ ರಥಗಳಿದ್ದುದರಿಂದ, ಅವರು ಅವರನ್ನು ಹೊರಡಿಸಲಾರದೆ ಹೋದರು. 20 ಮೋಶೆಯು ಹೇಳಿದ ಪ್ರಕಾರ, ಅವರು ಹೆಬ್ರೋನನ್ನು ಕಾಲೇಬನಿಗೆ ಕೊಟ್ಟರು. ಅವರು ಅನಾಕನ ಮೂವರು ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟರು. 21 ಬೆನ್ಯಾಮೀನ್ಯರಿಗೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಯೆಬೂಸಿಯರು ಈ ದಿನದವರೆಗೂ ಬೆನ್ಯಾಮೀನರ ಸಂಗಡ ವಾಸವಾಗಿದ್ದಾರೆ.
22 ಇದಲ್ಲದೆ ಯೋಸೇಫನ ಮನೆಯವರು ಬೇತೇಲಿಗೆ ಏರಿಹೋದರು. ಯೆಹೋವ ದೇವರು ಅವರ ಸಂಗಡ ಇದ್ದರು. 23 ಆದರೆ ಮೊದಲು ಲೂಜ್ ಎಂದು ಹೆಸರಿದ್ದ ಬೇತೇಲೆಂಬ ಪಟ್ಟಣವನ್ನು ಸಂಚರಿಸಿ ನೋಡಲು, ಯೋಸೇಫನ ಮನೆಯವರನ್ನು ಕಳುಹಿಸಲಾಯಿತು. 24 ಗೂಢಚಾರರು ಪಟ್ಟಣದೊಳಗಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ, “ದಯಮಾಡಿ ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ನಮಗೆ ತೋರಿಸು. ನಾವು ನಿನಗೆ ಕರುಣೆ ತೋರಿಸುವೆವು,” ಎಂದರು. 25 ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ, ಅವರು ಬಂದು ಪಟ್ಟಣವನ್ನು ಖಡ್ಗದಿಂದ ಹೊಡೆದು, ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು. 26 ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ, ಅಲ್ಲಿ ಒಂದು ಪಟ್ಟಣವನ್ನು ಕಟ್ಟಿ, ಅದಕ್ಕೆ ಲೂಜ್ ಎಂದು ಹೆಸರಿಟ್ಟನು. ಈವರೆಗೂ ಅದಕ್ಕೆ ಅದೇ ಹೆಸರಿದೆ.
27 ಮನಸ್ಸೆಯ ಗೋತ್ರದವರು ಬೇತ್ ಷೆಯಾನರನ್ನೂ, ಅವರ ಊರುಗಳವರನ್ನೂ; ತಾನಕದವರನ್ನೂ, ಅವರ ಊರುಗಳವರನ್ನೂ; ದೋರಿನವರನ್ನೂ, ಅವರ ಊರುಗಳವರನ್ನೂ; ಇಬ್ಲೆಯಾಮಿನವರನ್ನೂ, ಅವರ ಊರುಗಳವರನ್ನೂ, ಮೆಗಿದ್ದೋನಿನವರನ್ನೂ, ಅವರ ಊರುಗಳವರನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಆ ದೇಶದಲ್ಲಿ ವಾಸಿಸಬೇಕೆಂದಿದ್ದರು. 28 ಇಸ್ರಾಯೇಲರು ಬಲಗೊಂಡಾಗ, ಅವರನ್ನು ಪೂರ್ಣವಾಗಿ ಹೊರಡಿಸಿಬಿಡದೆ, ಅವರನ್ನು ದಾಸತ್ವಕ್ಕೆ ಕಾನಾನ್ಯರಿಗೆ ನೇಮಕ ಮಾಡಿದರು. 29 ಇದಲ್ಲದೆ ಎಫ್ರಾಯೀಮ್ಯರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು. 30 ಜೆಬುಲೂನ್ಯರು ಕಿಟ್ರೋನಿನ ವಾಸಿಗಳನ್ನೂ ನಹಲೋಲಿನ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಅವರಲ್ಲಿ ದಾಸರಾಗಿ ವಾಸಮಾಡುವವರಾದರು. 31 ಆಶೇರ್ಯರು ಅಕ್ಕೋವಿನ ವಾಸಿಗಳನ್ನೂ; ಸೀದೋನಿನ ವಾಸಿಗಳನ್ನೂ; ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಪಟ್ಟಣಗಳ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. 32 ಆದರೆ ಆಶೇರ್ಯರು ಅವರನ್ನು ಹೊರಡಿಸಿಬಿಡದೆ, ಆ ದೇಶದ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸವಾಗಿದ್ದರು. 33 ನಫ್ತಾಲಿ ಗೋತ್ರದವರು ಬೇತ್ ಷೆಮೆಷ್ ವಾಸಿಗಳನ್ನೂ ಹೊರಡಿಸಿಬಿಡದೆ, ಆ ದೇಶವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸಿಸಿದ್ದರು. ಆದರೆ ಬೇತ್ ಷೆಮೆಷ್, ಬೇತ್ ಅನಾತ್ ಪಟ್ಟಣ ವಾಸಿಗಳು ಅವರಿಗೆ ದಾಸರಾದರು. 34 ಅಮೋರಿಯರು ದಾನ್ಯರನ್ನು ತಗ್ಗಿನಲ್ಲಿ ಇಳಿಯಗೊಡದೆ, ಬೆಟ್ಟಗಳಿಗೆ ಓಡಿಸಿಬಿಟ್ಟರು 35 ಹೀಗೆ ಅಮೋರಿಯರು ಹರ್‌ಹೆರೆಸ್ ಬೆಟ್ಟದಲ್ಲಿಯೂ ಅಯ್ಯಾಲೋನಿನಲ್ಲಿಯೂ ಶಾಲ್ಬೀಮಿನಲ್ಲಿಯೂ ವಾಸಿಸಬೇಕೆಂದಿದ್ದರು. ಆದರೆ ಯೋಸೇಫನ ಗೋತ್ರದವರ ಕೈ ಬಲ ಹೆಚ್ಚಾದದ್ದರಿಂದ ಅವರಿಗೆ ದಾಸರಾದರು. 36 ಹೀಗೆ ಅಮೋರಿಯರ ಮೇರೆಯು ಅಕ್ರಬ್ಬೀಮನ್ನು ಹಿಡಿದು ಸೆಲ ಬಂಡೆಯಿಂದ ಮೇಲಕ್ಕೆ ವಿಸ್ತರಿಸಿಕೊಂಡಿದೆ.