9
ಅಬೀಮೆಲೆಕ
ಯೆರುಬ್ಬಾಳನ ಮಗನಾದ ಅಬೀಮೆಲೆಕನು ಶೆಕೆಮಿನಲ್ಲಿರುವ ತನ್ನ ತಾಯಿಯ ಸಹೋದರರ ಬಳಿಗೆ ಹೋಗಿ, ಅವರ ಸಂಗಡ ಮತ್ತು ತನ್ನ ತಾಯಿಯ ತಂದೆ ಮನೆಯ ಕುಟುಂಬದವರೆಲ್ಲರ ಸಂಗಡ ಮಾತನಾಡಿ, “ನೀವು ದಯಮಾಡಿ ಶೆಕೆಮಿನ ಹಿರಿಯರಿಗೆ, ‘ಯೆರುಬ್ಬಾಳನ ಮಕ್ಕಳಾದ ಎಪ್ಪತ್ತು ಮಂದಿಯು ನಿಮ್ಮನ್ನು ಆಳುವುದು ಒಳ್ಳೆಯದೋ? ಒಬ್ಬನು ಆಳುವುದು ಒಳ್ಳೆಯದೋ?’ ಎಂದು ವಿಚಾರಿಸಿರಿ. ನಾನು ನಿಮ್ಮ ಎಲುಬೂ, ನಿಮ್ಮ ಮಾಂಸವೂ ಆಗಿದ್ದೇನೆಂದು ಜ್ಞಾಪಕಮಾಡಿಕೊಳ್ಳಿರಿ,” ಎಂದನು.
ಹಾಗೆಯೇ ಅವನ ತಾಯಿಯ ಸಹೋದರರು ಅವನನ್ನು ಕುರಿತು ಶೆಕೆಮಿನ ಹಿರಿಯರೆಲ್ಲರೂ ಕೇಳುವಂತೆ ಈ ಮಾತುಗಳನ್ನೆಲ್ಲಾ ಹೇಳಿದರು. ಅವರು, “ಇವನು ನಮ್ಮ ಸಹೋದರನು,” ಎಂದು ಹೇಳಿದ್ದರಿಂದ, ಆ ಜನರ ಹೃದಯವು ಅಬೀಮೆಲೆಕನ ಕಡೆಗೆ ತಿರುಗಿತು. ಅವರು ಬಾಳ್ ಬೆರೀತಿನ ಮನೆಯೊಳಗಿಂದ ಎಪ್ಪತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು ಅವನಿಗೆ ಕೊಟ್ಟರು. ಅವುಗಳಿಂದ ಅಬೀಮೆಲೆಕನು ಪುಂಡಪೋಕರಿಗಳನ್ನು ಸಂಬಳಕ್ಕೆ ಇಟ್ಟುಕೊಂಡನು. ಅವರು ಅವನ ಹಿಂದೆ ಹೋದರು. ಅವನು ಒಫ್ರದಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ, ತನ್ನ ಸಹೋದರರಾದ ಯೆರುಬ್ಬಾಳನ ಎಪ್ಪತ್ತು ಮಂದಿ ಪುತ್ರರನ್ನು ಒಂದು ಬಂಡೆಯ ಮೇಲೆ ಕೊಂದುಹಾಕಿದನು. ಆದರೆ ಯೆರುಬ್ಬಾಳನ ಚಿಕ್ಕ ಮಗ ಯೋತಾಮನು ಒಬ್ಬನೇ ಉಳಿದನು. ಏಕೆಂದರೆ ಅವನು ಅಡಗಿಕೊಂಡನು. ಶೆಕೆಮಿನ ಜನರೆಲ್ಲರೂ, ಮಿಲ್ಲೋನಿನ ಮನೆಯವರೆಲ್ಲರೂ ಕೂಡಿಕೊಂಡು ಹೋಗಿ, ಶೆಕೆಮಿನ ಬಯಲಲ್ಲಿ ಇರುವ ಸ್ತಂಭದ ಬಳಿ ಇರುವ ಅಲ್ಲೋನ್ ಮರದ ಹತ್ತಿರ ಸೇರಿ ಅಬೀಮೆಲೆಕನನ್ನು ಅರಸನನ್ನಾಗಿ ನೇಮಿಸಿದರು.
ಯೋತಾಮನಿಗೆ ಇದನ್ನು ತಿಳಿಸಿದಾಗ, ಅವನು ಹೋಗಿ ಗೆರಿಜೀಮ್ ಬೆಟ್ಟದ ತುದಿಯಲ್ಲಿ ಏರಿ ನಿಂತು, ತನ್ನ ಸ್ವರವನ್ನೆತ್ತಿ ಕೂಗಿ ಅವರಿಗೆ, “ಶೆಕೆಮಿನ ಹಿರಿಯರೇ, ದೇವರು ನಿಮ್ಮನ್ನು ಕೇಳುವ ಹಾಗೆ ನನ್ನ ಮಾತನ್ನು ಕೇಳಿರಿ. ಮರಗಳು ತಮ್ಮ ಮೇಲೆ ಒಬ್ಬ ಅರಸನನ್ನು ಅಭಿಷೇಕಿಸಿಕೊಳ್ಳುವುದಕ್ಕಾಗಿ ಹೊರಟುಹೋಗಿ, ಹಿಪ್ಪೆಯ ಮರಕ್ಕೆ, ‘ನೀನು ನಮ್ಮನ್ನು ಆಳು,’ ಎಂದವು.
“ಹಿಪ್ಪೆಯ ಮರ ಅವುಗಳಿಗೆ, ‘ಯಾವುದರಿಂದ ದೇವರನ್ನೂ, ಮನುಷ್ಯನನ್ನೂ ಘನಪಡಿಸುತ್ತಾರೋ, ಈ ನನ್ನ ಎಣ್ಣೆಯನ್ನು ಬಿಟ್ಟು, ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ?’ ಎಂದಿತು.
10 “ಮರಗಳು ಅಂಜೂರದ ಗಿಡಕ್ಕೆ, ‘ನೀನು ಬಂದು ನಮ್ಮ ಮೇಲೆ ಆಳಬೇಕು,’ ಎಂದವು.
11 “ಆದರೆ ಅಂಜೂರದ ಗಿಡಗಳು ಅವುಗಳಿಗೆ, ‘ನಾನು ನನ್ನ ಮಧುರವನ್ನೂ, ನನ್ನ ಒಳ್ಳೆಯ ಫಲವನ್ನೂ ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ?’ ಎಂದಿತು.
12 “ಮರಗಳು ದ್ರಾಕ್ಷಿ ಗಿಡಕ್ಕೆ, ‘ನೀನು ಬಂದು ನಮ್ಮನ್ನು ಆಳು,’ ಎಂದವು.
13 “ಆದರೆ ದ್ರಾಕ್ಷಿ ಗಿಡವು ಅವುಗಳಿಗೆ, ‘ದೇವರನ್ನೂ, ಮನುಷ್ಯನನ್ನೂ ಸಂತೋಷಪಡಿಸುವ ನನ್ನ ರಸವನ್ನು ನಾನು ಬಿಟ್ಟು, ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ?’ ಎಂದಿತು.
14 “ಆಗ ಎಲ್ಲಾ ಮರಗಳು ಮುಳ್ಳಿನ ಗಿಡಕ್ಕೆ, ‘ನೀನು ಬಂದು ನಮ್ಮನ್ನು ಆಳು,’ ಎಂದವು.
15 “ಮುಳ್ಳಿನ ಗಿಡವು ಮರಗಳಿಗೆ, ‘ನೀವು ನನ್ನನ್ನು ಅರಸನನ್ನಾಗಿ ಅಭಿಷೇಕ ಮಾಡುವುದು ಸತ್ಯವಾದರೆ, ನನ್ನ ನೆರಳಲ್ಲಿ ಬಂದು ಆಶ್ರಯಿಸಿಕೊಳ್ಳಿರಿ; ಇಲ್ಲದಿದ್ದರೆ ಮುಳ್ಳಿನ ಗಿಡದಿಂದ ಬೆಂಕಿ ಹೊರಟು, ಲೆಬನೋನಿನ ದೇವದಾರುಗಳು ದಹಿಸಿಬಿಡಲಿ,’ ಎಂದಿತು.
16 “ನೀವು ಈಗ ಅಬೀಮೆಲೆಕನನ್ನು ಅರಸನಾಗಿ ಮಾಡಿದ್ದು ಸತ್ಯದಲ್ಲಿಯೂ, ಯಥಾರ್ಥದಿಂದಲೂ ಮಾಡಿರುವುದಾದರೆ ಮತ್ತು ಯೆರುಬ್ಬಾಳನಿಗೂ, ಅವನ ಮನೆಗೂ ಒಳ್ಳೆಯದನ್ನು ಮಾಡಿದ್ದರೆ, 17 ನನ್ನ ತಂದೆಯಾದ ಅವನು ನಿಮಗೋಸ್ಕರ ಯುದ್ಧಮಾಡಿದವನಾಗಿಯೂ, ತನ್ನ ಪ್ರಾಣವನ್ನು ಲೆಕ್ಕಿಸದೆ, ಮಿದ್ಯಾನಿನ ಕೈಯಿಂದ ನಿಮ್ಮನ್ನು ತಪ್ಪಿಸಿದವನಾಗಿಯೂ ಇರಲಾಗಿ, 18 ನೀವು ಈ ಹೊತ್ತು ನನ್ನ ತಂದೆಯ ಮನೆಗೆ ವಿರೋಧವಾಗಿ ಎದ್ದು, ಅವನ ಎಪ್ಪತ್ತು ಮಕ್ಕಳನ್ನು ಒಂದೇ ಬಂಡೆ ಮೇಲೆ ಕೊಂದು, ಅವನ ದಾಸಿಯ ಮಗನಾದ ಅಬೀಮೆಲೆಕನನ್ನು, ಅವನು ನಿಮ್ಮ ಸಹೋದರನಾಗಿರುವುದರಿಂದ ಶೆಕೆಮಿನ ಜನರ ಮೇಲೆ ಅರಸನಾಗಿ ಇಟ್ಟದ್ದು, 19 ಯೆರುಬ್ಬಾಳನ ಯೋಗ್ಯತೆಗೆ ತಕ್ಕದ್ದಾಗಿದ್ದರೆ ಮತ್ತು ಈ ಹೊತ್ತು ಅವನಿಗೂ, ಅವನ ಮಗನಿಗೂ ನೀವು ಸತ್ಯದಲ್ಲಿಯೂ, ಯಥಾರ್ಥತೆಯಲ್ಲಿಯೂ ಕಾರ್ಯ ಮಾಡಿದ್ದರೆ, ಅಬೀಮೆಲೆಕನಲ್ಲಿ ನೀವು ಸಂತೋಷಪಡಿರಿ. ಅವನು ಸಹ ನಿಮ್ಮಲ್ಲಿ ಸಂತೋಷಪಡಲಿ. 20 ಇಲ್ಲದಿದ್ದರೆ ಅಬೀಮೆಲೆಕನಿಂದ ಬೆಂಕಿ ಹೊರಟು ಶೆಕೆಮಿನ ಹಿರಿಯರನ್ನೂ, ಮಿಲ್ಲೋನಿನ ಮನೆಯವರನ್ನೂ ದಹಿಸಿಬಿಡಲಿ. ಶೆಕೆಮಿನ ಜನರಿಂದಲೂ, ಮಿಲ್ಲೋನಿನ ಮನೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ,” ಎಂದನು.
21 ಆಗ ಯೋತಾಮನು ತಪ್ಪಿಸಿಕೊಂಡು ಓಡಿ ಬೇರಕ್ಕೆ ಹೋಗಿ, ತನ್ನ ಸಹೋದರನಾದ ಅಬೀಮೆಲೆಕನ ಭಯದ ನಿಮಿತ್ತವಾಗಿ ಅಲ್ಲಿ ವಾಸವಾಗಿದ್ದನು.
22 ಅಬೀಮೆಲೆಕನು ಇಸ್ರಾಯೇಲನ್ನು ಮೂರು ವರ್ಷ ಆಳಿದ ತರುವಾಯ, 23 ದೇವರು ಅಬೀಮೆಲೆಕ ಮತ್ತು ಶೆಕೆಮಿನ ಹಿರಿಯರ ನಡುವೆ ಒಂದು ದುರಾತ್ಮನನ್ನು ಕಳುಹಿಸಿದರು. ಆಗ ಶೆಕೆಮಿನವರು ಅಬೀಮೆಲೆಕನಿಗೆ ದ್ರೋಹಮಾಡಿದರು. 24 ಇದರಿಂದ ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳಿಗೆ ಮಾಡಿದ್ದ ಕ್ರೂರತ್ವವು ಬಂದು ಪ್ರಾಪ್ತಿಸುವ ಹಾಗೆಯೂ, ಅವರ ರಕ್ತವು ಅವರನ್ನು ಕೊಂದ ಅವರ ಸಹೋದರನಾದ ಅಬೀಮೆಲೆಕನ ಮೇಲೆಯೂ, ಅವನ ಸಹೋದರರನ್ನು ಕೊಲ್ಲುವುದಕ್ಕೆ ಅವನ ಕೈಗಳನ್ನು ಬಲಪಡಿಸಿದ ಶೆಕೆಮಿನ ಮನುಷ್ಯರ ಮೇಲೆಯೂ ಬರುವ ಹಾಗೆ, ಶೆಕೆಮಿನ ಜನರು ಅಬೀಮೆಲೆಕನಿಗೆ ದ್ರೋಹಮಾಡಿದರು. 25 ಶೆಕೆಮಿನ ಹಿರಿಯರು ಪರ್ವತ ಶಿಖರಗಳ ಮೇಲೆ ಅವನಿಗೋಸ್ಕರ ಹೊಂಚುಗಾರರನ್ನು ಇಟ್ಟು, ತಮ್ಮ ಸಮೀಪವಾಗಿ ಮಾರ್ಗದಲ್ಲಿ ಹಾದುಹೋಗುವ ಎಲ್ಲರನ್ನು ಸುಲಿದುಕೊಂಡರು. ಈ ವರ್ತಮಾನವು ಅಬೀಮೆಲೆಕನಿಗೆ ಮುಟ್ಟಿತು.
26 ಆಗ ಏಬೆದನ ಮಗನಾದ ಗಾಳನೂ, ಅವನ ಸಹೋದರರೂ ಶೆಕೆಮಿಗೆ ದಾಟಿ ಬಂದರು. ಆದರೆ ಶೆಕೆಮಿನ ಹಿರಿಯರು ಅವನಲ್ಲಿ ಭರವಸೆಯಿಟ್ಟು, 27 ಹೊರಗೆ ಹೋಗಿ ತಮ್ಮ ದ್ರಾಕ್ಷಿ ಫಲಗಳನ್ನು ಕೊಯ್ದು, ಅವುಗಳನ್ನು ತುಳಿದು ಸಂತೋಷಪಟ್ಟು, ತಮ್ಮ ದೇವರ ಮನೆಯೊಳಗೆ ಹೋಗಿ, ತಿಂದು ಕುಡಿದು ಅಬೀಮೆಲೆಕನನ್ನು ಶಪಿಸಿದರು. 28 ಆಗ ಏಬೆದನ ಮಗನಾದ ಗಾಳನು, “ನಾವು ಅವನನ್ನು ಸೇವಿಸುವ ಹಾಗೆ ಅಬೀಮೆಲೆಕನು ಯಾರು? ಶೆಕೆಮನು ಯಾರು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪ್ರಧಾನನು ಜೆಬೂಲನಲ್ಲವೋ? ಶೆಕೆಮಿನ ತಂದೆಯಾದ ಹಮೋರನ ಮನುಷ್ಯರನ್ನೇ ಸೇವಿಸಿರಿ. ಇವನನ್ನು ನಾವು ಏಕೆ ಸೇವಿಸಬೇಕು? 29 ಈ ಜನರನ್ನು ದೇವರು ನನ್ನ ಕೈಗೆ ಒಪ್ಪಿಸಿದರೆ ಚೆನ್ನಾಗಿತ್ತು, ಆಗ ನಾನು ಅಬೀಮೆಲೆಕನನ್ನು ತೆಗೆದುಹಾಕುತ್ತಿದ್ದೆನು. ತರುವಾಯ ಅಬೀಮೆಲೆಕನಿಗೆ, ‘ನೀನು ನಿನ್ನ ಸೈನ್ಯವನ್ನು ಹೆಚ್ಚಿಸಿಕೊಂಡು ಹೊರಟು ಬಾ,’ ಎಂದು ಹೇಳುತ್ತಿದ್ದೆನು,” ಎಂದನು.
30 ಆ ಪಟ್ಟಣದ ಅಧಿಪತಿಯಾದ ಜೆಬೂಲನು, ಏಬೆದನ ಮಗ ಗಾಳನು ಹೇಳಿದ ಮಾತುಗಳನ್ನು ಕೇಳಿದಾಗ ಕೋಪಗೊಂಡು, 31 ಅವನು ಅಬೀಮೆಲೆಕನ ಬಳಿಗೆ ರಹಸ್ಯವಾಗಿ ದೂತರನ್ನು ಕಳುಹಿಸಿ, “ಏಬೆದನ ಮಗ ಗಾಳನೂ, ಅವನ ಸಹೋದರರೂ ಶೆಕೆಮಿಗೆ ಬಂದಿದ್ದಾರೆ. ಅವರು ಪಟ್ಟಣವನ್ನು ನಿನಗೆ ವಿರೋಧವಾಗಿ ಬಲಪಡಿಸುತ್ತಿದ್ದಾರೆ. 32 ಆದ್ದರಿಂದ ಈಗ ನೀನೂ, ನಿನ್ನ ಸಂಗಡ ಇರುವ ಜನರೂ ಕೂಡಿ, ರಾತ್ರಿಯಲ್ಲಿ ಎದ್ದು, ಹೊಲದಲ್ಲಿ ಹೊಂಚುಹಾಕಿಕೊಂಡಿರಬೇಕು. 33 ಹೊತ್ತಾರೆ ಸೂರ್ಯನು ಉದಯಿಸುವಾಗ, ನೀನು ಎದ್ದು ಪಟ್ಟಣದ ಮೇಲೆ ಬೀಳಬೇಕು. ಗಾಳನೂ, ಅವನ ಸಂಗಡ ಇರುವ ಜನರೂ ನಿಮಗೆದುರಾಗಿ ಹೊರಟು ಬರುವಾಗ, ನೀನು ನಿನ್ನ ಕೈಗೆ ಸರಿಬಂದ ಹಾಗೆ ಅವನಿಗೆ ಮಾಡಬೇಕು,” ಎಂದು ಹೇಳಿದನು.
34 ಹಾಗೆಯೇ ಅಬೀಮೆಲೆಕನೂ, ಅವನ ಸಂಗಡ ಇದ್ದ ಸಮಸ್ತ ಜನರೂ ರಾತ್ರಿಯಲ್ಲಿ ಎದ್ದು, ಶೆಕೆಮಿಗೆ ವಿರೋಧವಾಗಿ ನಾಲ್ಕು ಗುಂಪಾಗಿ ಹೊಂಚಿಕಾಯುತ್ತಿದ್ದರು. 35 ಏಬೆದನ ಮಗ ಗಾಳನು ಹೊರಟುಬಂದು ಪಟ್ಟಣದ ಬಾಗಿಲಿನ ದ್ವಾರದಲ್ಲಿ ನಿಂತನು. ಆಗ ಹೊಂಚುಹಾಕೊಕೊಂಡಿದ್ದ ಅಬೀಮೆಲೆಕನೂ, ಅವನ ಸಂಗಡ ಇದ್ದ ಜನರೂ ಎದ್ದು ಬಂದರು.
36 ಗಾಳನು ಆ ಜನರನ್ನು ಕಂಡಾಗ, “ಬೆಟ್ಟದ ಶಿಖರಗಳಿಂದ ಜನರು ಬರುತ್ತಾರೆ,” ಎಂದು ಜೆಬೂಲನಿಗೆ ಹೇಳಿದರು.
ಜೆಬೂಲನು ಅವನಿಗೆ, “ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ಕಾಣುತ್ತೀ,” ಎಂದನು.
37 ಗಾಳನು ತಿರುಗಿ ಅವನ ಸಂಗಡ ಮಾತನಾಡಿ, “ಇಗೋ, ಜನರು ಭೂಮಧ್ಯ ಸ್ಥಳದಿಂದ ಇಳಿದು ಬರುತ್ತಾರೆ. ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ,” ಎಂದನು.
38 ಆಗ ಜೆಬೂಲನು ಅವನಿಗೆ, “ನಾವು ಅವನನ್ನು ಸೇವಿಸುವ ಹಾಗೆ ಅಬೀಮೆಲೆಕನು ಯಾರು, ಎಂದು ನೀನು ಹೇಳಿದ ನಿನ್ನ ಬಾಯಿ ಈಗ ಎಲ್ಲಿ? ಅದು ನೀನು ಅಲಕ್ಷ್ಯಮಾಡಿದ ಜನರಲ್ಲವೋ? ಈಗ ನೀನು ಹೊರಟು ಅವರ ಸಂಗಡ ಯುದ್ಧ ಮಾಡು,” ಎಂದನು.
39 ಗಾಳನು ಶೆಕೆಮಿನವರ ನಾಯಕನಾಗಿ ಹೊರಟು, ಅಬೀಮೆಲೆಕನ ಸಂಗಡ ಯುದ್ಧಮಾಡಿದನು. 40 ಆದರೆ ಅಬೀಮೆಲೆಕನು ಅವನನ್ನು ಹಿಂದಟ್ಟಿದಾಗ, ಗಾಳನು ಅವನ ಮುಂದೆ ಓಡಿಹೋದನು. ಬಾಗಿಲ ಹತ್ತಿರದವರೆಗೆ ಅನೇಕರು ಸಂಹಾರವಾಗಿ, ಅನೇಕರು ಗಾಯಗೊಂಡರು. 41 ಆಗ ಅಬೀಮೆಲೆಕನು ಅರೂಮದಲ್ಲಿ ವಾಸಮಾಡಿದನು. ಆದರೆ ಜೆಬೂಲನು ಗಾಳನನ್ನೂ, ಅವನ ಸಹೋದರರನ್ನೂ ಶೆಕೆಮಿನಲ್ಲಿ ಇರದ ಹಾಗೆ ಹೊರಡಿಸಿಬಿಟ್ಟನು.
42 ಮಾರನೆಯ ದಿನ ಶೆಕೆಮಿನ ಜನರು ಹೊಲಕ್ಕೆ ಹೊರಟರು. ಸೈನಿಕರು ಅದನ್ನು ಅಬೀಮೆಲೆಕನಿಗೆ ತಿಳಿಸಿದರು. 43 ಅವನು ಸೈನಿಕರನ್ನು ತೆಗೆದುಕೊಂಡು, ಅವರನ್ನು ಮೂರು ಗುಂಪುಗಳಾಗಿ ಮಾಡಿ, ಹೊಲದಲ್ಲಿ ಹೊಂಚಿಹಾಕಿಕೊಂಡನು. ಆಗ ಜನರು ಪಟ್ಟಣದಿಂದ ಹೊರಗೆ ಬಂದರು. ಅವನು ಅವರ ಮೇಲೆ ಎದ್ದು ಬಂದು, ಅವರನ್ನು ಹೊಡೆದನು. 44 ಅಬೀಮೆಲೆಕನೂ, ಅವನ ಸಂಗಡ ಇದ್ದ ಸೈನಿಕರ ಗುಂಪೂ ಮುಂದಕ್ಕೆ ಓಡಿ, ಪಟ್ಟಣದ ಬಾಗಿಲಿನ ಬಳಿ ನಿಂತರು. ಮಿಕ್ಕಾದ ಎರಡು ಗುಂಪಿನ ಜನರು, ಹೊಲದಲ್ಲಿರುವವರೆಲ್ಲರ ಮೇಲೆ ಬಿದ್ದು ಅವರನ್ನು ಹತಮಾಡಿದರು. 45 ಅಬೀಮೆಲೆಕನು ಆ ದಿನವೆಲ್ಲಾ ಪಟ್ಟಣದ ಮೇಲೆ ಯುದ್ಧಮಾಡಿ, ಪಟ್ಟಣವನ್ನು ಹಿಡಿದು, ಅದರಲ್ಲಿದ್ದ ಜನರನ್ನು ಕೊಂದು, ಪಟ್ಟಣವನ್ನು ಕೆಡವಿಬಿಟ್ಟು, ಅದರಲ್ಲಿ ಉಪ್ಪು ಎರಚಿಬಿಟ್ಟನು.
46 ಅದನ್ನು ಶೆಕೆಮಿನ ಗೋಪುರದಲ್ಲಿ ಜನರೆಲ್ಲರೂ ಕೇಳಿದಾಗ, ಅವರು ಬೆರೀತೆಂಬ ದೇವರ ಮನೆಯ ಭದ್ರವಾದ ಸ್ಥಳದಲ್ಲಿ ಅಡಗಿಕೊಂಡರು. 47 ಆದರೆ ಶೆಕೆಮಿನ ಗೋಪುರದಲ್ಲಿದ್ದ ಜನರೆಲ್ಲರೂ ಅಲ್ಲಿ ಕೂಡಿದ್ದಾರೆಂದು ಅಬೀಮೆಲೆಕನಿಗೆ ಗೊತ್ತಾದಾಗ, 48 ಅಬೀಮೆಲೆಕನು ತನ್ನ ಸಂಗಡ ಇದ್ದ ಸೈನಿಕರೆಲ್ಲರ ಸಹಿತವಾಗಿ ಚಲ್ಮೋನ್ ಬೆಟ್ಟವನ್ನೇರಿ, ತನ್ನ ಕೈಯಲ್ಲಿ ಕೊಡಲಿಯನ್ನು ಹಿಡಿದು, ಒಂದು ಮರದ ಕೊಂಬೆಯನ್ನು ಕಡಿದು, ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು, ತನ್ನ ಕೂಡ ಇದ್ದ ಜನರಿಗೆ, “ನಾನು ಮಾಡಿದ್ದನ್ನು ನೋಡಿ ಹಾಗೆಯೇ ತೀವ್ರವಾಗಿ ಮಾಡಿರಿ,” ಎಂದನು. 49 ಸೈನಿಕರೆಲ್ಲರಲ್ಲಿ ಒಬ್ಬೊಬ್ಬನು ಒಂದೊಂದು ಕೊಂಬೆಯನ್ನು ಕಡಿದು, ಅಬೀಮೆಲೆಕನ ಹಿಂದೆ ಹೋಗಿ, ಅವುಗಳನ್ನು ಆ ಭದ್ರವಾದ ಸ್ಥಳಕ್ಕೆ ಹಾಕಿ, ಅದಕ್ಕೆ ಬೆಂಕಿಯನ್ನು ಹಚ್ಚಿದರು. ಆಗ ಶೆಕೆಮಿನ ಗೋಪುರದಲ್ಲಿರುವವರೆಲ್ಲರೂ ಹೆಚ್ಚು ಕಡಿಮೆ ಸಾವಿರ ಜನರು ಸತ್ತುಹೋದರು. ಅವರು ಸ್ತ್ರೀಪುರುಷರೆಲ್ಲಾ ಸುಮಾರು ಸಾವಿರ ಜನರಿದ್ದರು.
50 ಆಗ ಅಬೀಮೆಲೆಕನು ತೆಬೇಚಿಗೆ ಹೋಗಿ, ಅದಕ್ಕೆ ವಿರೋಧವಾಗಿ ಮುತ್ತಿಗೆ ಹಾಕಿ, ಅದನ್ನು ಹಿಡಿದನು. 51 ಆದರೆ ಪಟ್ಟಣದ ಒಳಗೆ ಬಲವಾದ ಗೋಪುರ ಇತ್ತು. ಆ ಪಟ್ಟಣದಲ್ಲಿರುವ ಸಮಸ್ತ ಸ್ತ್ರೀ ಪುರುಷರು ಅಲ್ಲಿಗೆ ಓಡಿಹೋಗಿ, ಅದರಲ್ಲಿ ಹೊಕ್ಕು, ತಮ್ಮ ಹಿಂದಿನಿಂದ ಬಾಗಿಲನ್ನು ಮುಚ್ಚಿ ಗೋಪುರದ ಮೇಲೆ ಏರಿದರು. 52 ಆಗ ಅಬೀಮೆಲೆಕನು ಆ ಗೋಪುರಕ್ಕೆ ಬಂದು, ಅದರ ವಿರುದ್ಧ ಯುದ್ಧಮಾಡಿ, ಗೋಪುರದ ಬಾಗಿಲನ್ನು ಸುಟ್ಟು ಬಿಡುವುದಕ್ಕೆ ಅದರ ಬಳಿಗೆ ಬಂದನು. 53 ಆದರೆ ಒಬ್ಬ ಸ್ತ್ರೀಯು ಒಂದು ಬೀಸುವ ಕಲ್ಲಿನ ತುಂಡನ್ನು ಅಬೀಮೆಲೆಕನ ತಲೆಯ ಮೇಲೆ ಹಾಕಿದಳು. ಅದರಿಂದ ಅವನ ತಲೆಯನ್ನು ಒಡೆದು ಹಾಕಿದಳು.
54 ಆಗ ಅವನು ಶೀಘ್ರವಾಗಿ ತನ್ನ ಆಯುಧಗಳನ್ನು ಹೊರುವ ಸೇವಕನನ್ನು ಕರೆದು ಅವನಿಗೆ, “ಒಬ್ಬ ಸ್ತ್ರೀಯು ಕೊಂದಳೆಂದು ಮನುಷ್ಯರು ನನ್ನನ್ನು ಕುರಿತು ಹೇಳದ ಹಾಗೆ ನೀನು ನಿನ್ನ ಖಡ್ಗದಿಂದ ಇರಿದು, ನನ್ನನ್ನು ಕೊಲ್ಲು,” ಎಂದು ಅವನಿಗೆ ಹೇಳಿದನು. ಹಾಗೆಯೇ ಅವನ ಸೇವಕನು ಅವನನ್ನು ತಿವಿದು ಹಾಕಿದನು. ಅವನು ಮರಣಹೊಂದಿದನು. 55 ಅಬೀಮೆಲೆಕನು ಮರಣಹೊಂದಿದ್ದನ್ನು ಇಸ್ರಾಯೇಲರು ಕಂಡಾಗ, ಅವರು ತಮ್ಮ ತಮ್ಮ ಮನೆಗಳಿಗೆ ಹೋದರು.
56 ಈ ಪ್ರಕಾರ ಅಬೀಮೆಲೆಕನು ತನ್ನ ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿದ್ದರಿಂದ, ತನ್ನ ತಂದೆಗೆ ಮಾಡಿದ ಕೇಡನ್ನು ದೇವರು ಅವನ ಮೇಲೆ ತಿರುಗಿ ಬರಮಾಡಿದರು. 57 ಇದಲ್ಲದೆ ಶೆಕೆಮಿನವರು ಮಾಡಿದ ಸಮಸ್ತ ಕೆಟ್ಟತನವನ್ನು ಅವರ ತಲೆಗಳ ಮೇಲೆ ದೇವರು ಬರಮಾಡಿದರು. ಹೀಗೆ ಯೆರುಬ್ಬಾಳನ ಮಗನಾದ ಯೋತಾಮನ ಶಾಪವು ಅವರ ಮೇಲೆ ಬಂದಿತು.