20
ಖಾಲಿಯಾದ ಸಮಾಧಿ
1 ವಾರದ ಮೊದಲನೆಯ ದಿನದಲ್ಲಿ ಮುಂಜಾನೆ ಇನ್ನೂ ಕತ್ತಲಿರುವಾಗಲೇ ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದು ಸಮಾಧಿಯಿಂದ ಬಂಡೆ ತೆಗೆದು ಹಾಕಿರುವುದನ್ನು ಕಂಡಳು.
2 ಆಗ ಆಕೆಯು ಸೀಮೋನ ಪೇತ್ರನ ಬಳಿಗೂ ಯೇಸು ಪ್ರೀತಿಸಿದ ಇನ್ನೊಬ್ಬ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ, “ಕರ್ತನನ್ನು ಅವರು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ, ಅವರು ಕರ್ತನನ್ನು ಎಲ್ಲಿ ಇಟ್ಟಿದ್ದಾರೋ ನಮಗೆ ಗೊತ್ತಿಲ್ಲ,” ಎಂದು ಹೇಳಿದಳು.
3 ಆಗ ಪೇತ್ರನೂ ಇನ್ನೊಬ್ಬ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು.
4 ಅವರಿಬ್ಬರೂ ಜೊತೆಯಾಗಿ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಮೊದಲು ಸಮಾಧಿಗೆ ಬಂದನು.
5 ಅವನು ಬಗ್ಗಿ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವುದನ್ನು ಕಂಡನು. ಆದರೂ ಅವನು ಒಳಗೆ ಪ್ರವೇಶಿಸಲಿಲ್ಲ.
6 ಆಗ ಸೀಮೋನ ಪೇತ್ರನು ಸಹ ಅವನ ಹಿಂದೆ ಬಂದು ನೇರವಾಗಿ ಸಮಾಧಿಯೊಳಕ್ಕೆ ಪ್ರವೇಶಿಸಿ, ನಾರುಬಟ್ಟೆಗಳು ಬಿದ್ದಿರುವುದನ್ನೂ
7 ಯೇಸುವಿನ ತಲೆಗೆ ಸುತ್ತಿದ ವಸ್ತ್ರವು ನಾರುಬಟ್ಟೆಗಳೊಂದಿಗೆ ಇರದೆ ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು.
8 ಆಗ ಮೊದಲು ಸಮಾಧಿಗೆ ಬಂದಿದ್ದ ಆ ಇನ್ನೊಬ್ಬ ಶಿಷ್ಯನು ಸಹ ಪ್ರವೇಶಿಸಿ, ಕಂಡು ನಂಬಿದನು.
9 ಯೇಸು ಸತ್ತವರೊಳಗಿಂದ ಪುನಃ ಎದ್ದು ಬರಬೇಕು ಎಂಬ ಪವಿತ್ರ ವೇದದ ವಾಕ್ಯವು ಅವರಿಗೆ ಇನ್ನೂ ತಿಳಿದಿರಲಿಲ್ಲ.
10 ತರುವಾಯ ಆ ಶಿಷ್ಯರು ಉಳಿದವರ ಬಳಿಗೆ ಹೊರಟು ಹೋದರು.
ಮಗ್ದಲದ ಮರಿಯಳಿಗೆ ಯೇಸುವಿನ ದರ್ಶನ
11 ಆದರೆ ಮರಿಯಳು ಸಮಾಧಿಯ ಹೊರಗೆ ಅಳುತ್ತಾ ನಿಂತಿದ್ದಳು. ಆಕೆಯು ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ,
12 ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಬಿಳಿವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೂತರು, ಒಬ್ಬನು ಯೇಸುವಿನ ತಲೆಯ ಕಡೆಗೂ ಮತ್ತೊಬ್ಬನು ಅವರ ಪಾದಗಳಿದ್ದ ಕಡೆಗೂ ಕುಳಿತಿರುವುದನ್ನು ಕಂಡಳು.
13 ಅವರು ಆಕೆಗೆ, “ಅಮ್ಮಾ, ನೀನು ಏಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು ಅವರಿಗೆ,
“ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಕರ್ತನನ್ನು ಅವರು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ,” ಎಂದಳು.
14 ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು. ಆದರೆ ಅವರು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ.
15 ಯೇಸು ಆಕೆಗೆ, “ಅಮ್ಮಾ, ನೀನು ಏಕೆ ಅಳುತ್ತಿರುವೆ? ಯಾರನ್ನು ಹುಡುಕುತ್ತಿರುವೆ?” ಎಂದು ಕೇಳಲು,
ಆಕೆಯು ಅವರು ತೋಟಗಾರನೆಂದು ನೆನಸಿ ಅವರಿಗೆ, “ಅಯ್ಯಾ, ನೀನು ಅವರನ್ನು ತೆಗೆದುಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು; ನಾನು ಅವರನ್ನು ತೆಗೆದುಕೊಂಡು ಹೋಗುತ್ತೇನೆ,” ಎಂದಳು.
16 ಯೇಸು ಆಕೆಗೆ, “ಮರಿಯಳೇ,” ಎಂದು ಹೇಳಲು,
ಆಕೆಯು ತಿರುಗಿಕೊಂಡು ಹೀಬ್ರೂ ಭಾಷೆಯಲ್ಲಿ ಅವರಿಗೆ, “ರಬ್ಬೂನಿ!” ಎಂದಳು. ಹಾಗೆಂದರೆ “ಬೋಧಕನೇ” ಎಂದರ್ಥ.
17 ಯೇಸು ಆಕೆಗೆ, “ನನ್ನನ್ನು ಹಿಡಿಯಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಹೋಗಲಿಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ‘ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವ ತಂದೆಯ ಬಳಿಗೆ ನಾನು ಹೋಗುತ್ತೇನೆ’ ಎಂದು ತಿಳಿಸು,” ಎಂದರು.
18 ಆಗ ಮಗ್ದಲದ ಮರಿಯಳು ಬಂದು, “ನಾನು ಕರ್ತನನ್ನು ಕಂಡಿದ್ದೇನೆ,” ಎಂದು ಹೇಳಿ, ಅವರು ತನಗೆ ಈ ಸಂಗತಿಗಳನ್ನು ಹೇಳಿದರೆಂದು ಶಿಷ್ಯರಿಗೆ ತಿಳಿಸಿದಳು.
ಯೇಸು ತಮ್ಮ ಶಿಷ್ಯರಿಗೆ ದರ್ಶನಕೊಟ್ಟದ್ದು
19 ಅದೇ ಭಾನುವಾರದ ಸಾಯಂಕಾಲದಲ್ಲಿ ಯೆಹೂದ್ಯರ ಭಯದಿಂದ ಶಿಷ್ಯರು ಕೂಡಿದ್ದ ಮನೆಯ ಬಾಗಿಲುಗಳು ಮುಚ್ಚಿದ್ದವು. ಆಗ ಯೇಸು ಬಂದು ಅವರ ಮಧ್ಯೆ ನಿಂತು, “ನಿಮಗೆ ಸಮಾಧಾನವಾಗಲಿ!” ಎಂದು ಅವರಿಗೆ ಹೇಳಿದರು.
20 ಇದನ್ನು ಹೇಳಿದ ಮೇಲೆ ತಮ್ಮ ಕೈಗಳನ್ನೂ ಪಕ್ಕೆಯನ್ನೂ ಅವರಿಗೆ ತೋರಿಸಿದರು. ಆಗ ಶಿಷ್ಯರು ಕರ್ತನನ್ನು ಕಂಡು ಸಂತೋಷಪಟ್ಟರು.
21 ಯೇಸು ತಿರುಗಿ ಅವರಿಗೆ, “ನಿಮಗೆ ಸಮಾಧಾನವಾಗಲಿ, ತಂದೆಯು ನನ್ನನ್ನು ಕಳುಹಿಸಿದಂತೆಯೇ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ,” ಎಂದರು.
22 ಯೇಸು ಇದನ್ನು ಹೇಳಿ ಅವರ ಮೇಲೆ ಉಸಿರೂದಿ ಅವರಿಗೆ, “ನೀವು ಪವಿತ್ರಾತ್ಮರನ್ನು ಪಡೆದುಕೊಳ್ಳಿರಿ.
23 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ ಅವು ಅವರಿಗೆ ಕ್ಷಮಿಸಲಾಗುವುದು ಮತ್ತು ಯಾರ ಪಾಪಗಳನ್ನು ನೀವು ಉಳಿಸುತ್ತೀರೋ ಅವು ಅವರಿಗೆ ಉಳಿಸಲಾಗುವುದು,” ಎಂದು ಹೇಳಿದರು.
ಯೇಸು ತೋಮನಿಗೆ ದರ್ಶನಕೊಟ್ಟದ್ದು
24 ಆದರೆ ಯೇಸು ಬಂದಾಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮನು ಎನಿಸಿಕೊಂಡ ತೋಮನು ಅವರ ಸಂಗಡ ಇರಲಿಲ್ಲ.
25 ಉಳಿದ ಶಿಷ್ಯರು ಅವನಿಗೆ, “ನಾವು ಕರ್ತನನ್ನು ಕಂಡಿದ್ದೇವೆ,” ಎಂದು ಹೇಳಿದರು.
ಆದರೆ ಅವನು ಅವರಿಗೆ, “ನಾನು ಅವರ ಕೈಗಳಲ್ಲಿ ಮೊಳೆಗಳ ಗುರುತನ್ನು ಕಂಡು, ಅದರಲ್ಲಿ ನನ್ನ ಬೆರಳನ್ನು ಇಟ್ಟು ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕಿದ ಹೊರತು ನಂಬುವುದೇ ಇಲ್ಲ,” ಎಂದು ಹೇಳಿದನು.
26 ಎಂಟು ದಿವಸಗಳಾದ ಮೇಲೆ ಯೇಸುವಿನ ಶಿಷ್ಯರು ಪುನಃ ಮನೆಯ ಒಳಗಿದ್ದಾಗ ತೋಮನೂ ಅವರ ಸಂಗಡ ಇದ್ದನು. ಆಗ ಬಾಗಿಲುಗಳು ಮುಚ್ಚಿರಲಾಗಿ ಯೇಸು ಬಂದು ಮಧ್ಯದಲ್ಲಿ ನಿಂತು, “ನಿಮಗೆ ಸಮಾಧಾನವಾಗಲಿ!” ಎಂದರು.
27 ಆಮೇಲೆ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿ ಇಡು. ನನ್ನ ಕೈಗಳನ್ನು ನೋಡು, ನಿನ್ನ ಕೈಚಾಚಿ ನನ್ನ ಪಕ್ಕೆಯಲ್ಲಿ ಇಡು. ನಂಬದವನಾಗಿರಬೇಡ, ನಂಬುವವನಾಗಿರು,” ಎಂದರು.
28 ಆಗ ತೋಮನು, “ನನ್ನ ಕರ್ತ, ನನ್ನ ದೇವರೇ!” ಎಂದನು.
29 ಯೇಸು ಅವನಿಗೆ, “ನೀನು ನನ್ನನ್ನು ಕಂಡಿದ್ದರಿಂದ ನಂಬಿದ್ದೀಯಾ? ಕಾಣದೆ ನಂಬಿದವರು ಧನ್ಯರು,” ಎಂದರು.
ಯೋಹಾನನು ಬರೆದ ಸುವಾರ್ತೆಯ ಉದ್ದೇಶ
30 ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ಶಿಷ್ಯರ ಮುಂದೆ ಮಾಡಿದರು. ಅವುಗಳು ಈ ಪುಸ್ತಕದಲ್ಲಿ ಬರೆದಿಲ್ಲ.
31 ಆದರೆ ಯೇಸುವೇ ದೇವಪುತ್ರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬಿ ಅವರ ಹೆಸರಿನ ಮೂಲಕ ನಿತ್ಯಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆಯಲಾಗಿದೆ.