ಯೆಹೋಶುವ
1
ಯೆಹೋಶುವನನ್ನು ಅಧಿಕಾರಿಯನ್ನಾಗಿ ನೇಮಿಸಿದ್ದು
ಯೆಹೋವ ದೇವರ ಸೇವಕನಾದ ಮೋಶೆಯ ಮರಣದ ತರುವಾಯ, ನೂನನ ಮಗ ಮತ್ತು ಮೋಶೆಯ ಸೇವಕ ಆಗಿರುವ ಯೆಹೋಶುವನಿಗೆ ಯೆಹೋವ ದೇವರು: “ನನ್ನ ಸೇವಕನಾದ ಮೋಶೆಯು ಮರಣಹೊಂದಿದನು. ಈಗ ನೀನು ಇಸ್ರಾಯೇಲರಾದ ಈ ಜನರೆಲ್ಲರ ಸಹಿತವಾಗಿ ಎದ್ದು, ಯೊರ್ದನ್ ನದಿಯನ್ನು ದಾಟಿ, ಇಸ್ರಾಯೇಲರಿಗೆ ನಾನು ಕೊಡುವ ದೇಶಕ್ಕೆ ಹೋಗು. ನಾನು ಮೋಶೆಗೆ ವಾಗ್ದಾನ ಮಾಡಿದ ಪ್ರಕಾರ ನೀವು ಪಾದವಿಡುವ ಎಲ್ಲಾ ಸ್ಥಳವನ್ನು ನಾನು ನಿಮಗೆ ಕೊಟ್ಟಿದ್ದೇನೆ. ಮರುಭೂಮಿಯೂ ಈ ಲೆಬನೋನ್ ಮೊದಲುಗೊಂಡು ಯೂಫ್ರೇಟೀಸ್ ಮಹಾ ನದಿಯವರೆಗೆ ಇರುವ ಹಿತ್ತಿಯರ ದೇಶವೆಲ್ಲಾ ನಿಮ್ಮದಾಗುವುದು. ನಿಮ್ಮ ಸೀಮೆ ಸೂರ್ಯನು ಅಸ್ತಮಿಸುವ ಮಹಾಸಾಗರದವರೆಗೂ* ವಿಸ್ತರಿಸಿಕೊಳ್ಳುವುದು. ನೀನು ಜೀವಿಸುವ ದಿವಸಗಳಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಮರೆಯುವುದಿಲ್ಲ, ನಿನ್ನನ್ನು ತೊರೆಯುವುದಿಲ್ಲ. ಬಲಿಷ್ಠನಾಗಿರು, ಧೈರ್ಯದಿಂದಿರು. ಏಕೆಂದರೆ ನಾನು ಈ ಜನರಿಗೆ ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನು ಇವರಿಗೆ ಸ್ವಾಧೀನಪಡಿಸಬೇಕಾದವನು ನೀನೇ.
“ನನ್ನ ಸೇವಕನಾದ ಮೋಶೆಯು ನಿನಗೆ ಆಜ್ಞಾಪಿಸಿದ ದೇವರ ನಿಯಮದ ಪ್ರಕಾರ ನೀನು ಕೈಗೊಂಡು ನಡೆಯುವ ಹಾಗೆ ಬಲಿಷ್ಠನಾಗಿರು, ಧೈರ್ಯದಿಂದಿರು. ನೀನು ಹೋಗುವ ಸ್ಥಳದಲ್ಲೆಲ್ಲಾ ಸಫಲವಾಗುವ ಹಾಗೆ, ಅದನ್ನು ಬಿಟ್ಟು ಬಲಕ್ಕಾದರೂ, ಎಡಕ್ಕಾದರೂ ತಿರುಗಬೇಡ. ಈ ದೇವರ ನಿಯಮವು ನಿನ್ನ ಬಾಯಿಂದ ತೊಲಗಬಾರದು, ಅದರಲ್ಲಿ ಬರೆದಿರುವ ಪ್ರಕಾರವೇ ಕೈಗೊಂಡು ನಡೆಯುವ ಹಾಗೆ ಹಗಲುರಾತ್ರಿ ಅದನ್ನು ಧ್ಯಾನಿಸಬೇಕು. ಆಗ ನಿನ್ನ ಮಾರ್ಗವು ಸಮೃದ್ಧಿಯಾಗಿ ನೀನು ಜಯಶಾಲಿಯಾಗುವೆ. ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ, ಬಲಿಷ್ಠನಾಗಿರು. ಧೈರ್ಯದಿಂದಿರು, ಭಯಪಡಬೇಡ, ನಿರುತ್ಸಾಹಗೊಳ್ಳಬೇಡ. ಏಕೆಂದರೆ ನೀನು ಹೋಗುವ ಕಡೆಯೆಲ್ಲಾ ನಿನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದು ಹೇಳಿದರು.
10 ಆಗ ಯೆಹೋಶುವನು ಅಧಿಕಾರಿಗಳಿಗೆ ಆಜ್ಞಾಪಿಸಿ: 11 “ನೀವು ಪಾಳೆಯದ ಮಧ್ಯದಲ್ಲಿ ನಡೆದುಹೋಗಿ ಜನರಿಗೆ, ‘ನಿಮಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಟ್ಟಿರುವ ದೇಶವನ್ನು ನೀವು ಸ್ವಾಧೀನಮಾಡಿಕೊಳ್ಳಲು ಇನ್ನು ಮೂರು ದಿವಸಗಳಲ್ಲಿ ಯೊರ್ದನ್ ನದಿಯನ್ನು ದಾಟಿ ಹೋಗಬೇಕು,’ ಎಂದು ತಿಳಿಸಿರಿ,” ಎಂದನು.
12 ಇದಲ್ಲದೆ ಯೆಹೋಶುವನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಯ ಅರ್ಧ ಗೋತ್ರದವರಿಗೂ, 13 “ಯೆಹೋವ ದೇವರ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ವಾಕ್ಯವನ್ನು ಜ್ಞಾಪಕಮಾಡಿಕೊಳ್ಳಿರಿ. ‘ನಿಮ್ಮ ದೇವರಾದ ಯೆಹೋವ ದೇವರು ಈ ದೇಶವನ್ನು ನಿಮಗೆ ಕೊಟ್ಟು ನಿಮ್ಮನ್ನು ವಿಶ್ರಾಂತಿಪಡಿಸಿದ್ದಾರೆ.’ 14 ನಿಮ್ಮ ಹೆಂಡತಿಯರೂ ಮಕ್ಕಳೂ ಪಶುಗಳು ಮೋಶೆ ನಿಮಗೆ ಕೊಟ್ಟ ಯೊರ್ದನ್ ನದಿಯ ಈಚೆ ಇರುವ ದೇಶದಲ್ಲೇ ಇರಲಿ. ಆದರೆ ನಿಮ್ಮಲ್ಲಿ ಇರುವ ಪರಾಕ್ರಮಶಾಲಿಗಳೆಲ್ಲಾ ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರ ಮುಂದೆ ಹೊರಟು, ನದಿದಾಟಿ, 15 ಯೆಹೋವ ದೇವರು ನಿಮ್ಮ ಹಾಗೆಯೇ ನಿಮ್ಮ ಸಹೋದರರನ್ನು ವಿಶ್ರಾಂತಿಪಡಿಸಿ, ಅವರು ನಿಮ್ಮ ದೇವರಾದ ಯೆಹೋವ ದೇವರು ತಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವವರೆಗೆ ಅವರಿಗೆ ಸಹಾಯಮಾಡಬೇಕು. ತರುವಾಯ ಯೆಹೋವ ದೇವರ ಸೇವಕನಾದ ಮೋಶೆಯು ಯೊರ್ದನ್ ನದಿಯ ಈಚೆಯಲ್ಲಿ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ನಿಮಗೆ ಕೊಟ್ಟ ನಿಮ್ಮ ಸೊತ್ತಾಗಿರುವ ದೇಶಕ್ಕೆ ತಿರುಗಿಬಂದು, ಅದನ್ನು ಸ್ವಾಧೀನಮಾಡಿಕೊಂಡು, ಅದನ್ನು ಅನುಭವಿಸಿರಿ,” ಎಂದನು.
16 ಆಗ ಅವರು ಯೆಹೋಶುವನಿಗೆ ಉತ್ತರವಾಗಿ, “ನೀನು ನಮಗೆ ಆಜ್ಞಾಪಿಸುವುದನ್ನೆಲ್ಲಾ ಮಾಡುವೆವು. ಎಲ್ಲಿಗೆ ಕಳುಹಿಸುತ್ತೀಯೋ, ಅಲ್ಲಿಗೆ ಹೋಗುವೆವು. 17 ನಾವು ಮೋಶೆಯ ಎಲ್ಲಾ ಮಾತು ಕೇಳಿದ ಹಾಗೆಯೇ ನಿನ್ನ ಮಾತು ಕೇಳುವೆವು. ನಿನ್ನ ದೇವರಾದ ಯೆಹೋವ ದೇವರು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರಲಿ. 18 ನೀನು ಆಜ್ಞಾಪಿಸುವ ಎಲ್ಲದರಲ್ಲಿ ಯಾರು ನಿನ್ನ ಮಾತುಗಳನ್ನು ಕೇಳದೆ, ನಿನ್ನ ಬಾಯಿ ಮಾತಿಗೆ ಎದುರು ಬೀಳುವರೋ ಅವರು ಮರಣಕ್ಕೆ ಗುರಿಯಾಗಬೇಕು. ಬಲಿಷ್ಠನಾಗಿರು, ಧೈರ್ಯದಿಂದಿರು,” ಎಂದರು.
* 1:4 1:4 ಅಂದರೆ, ಮೆಡಿಟೆರೆನಿಯನ್ ಸಮುದ್ರ