4
1 ಜನರೆಲ್ಲರು ಯೊರ್ದನ್ ನದಿಯ ಆಚೆಗೆ ದಾಟಿದ ಮೇಲೆ, ಯೆಹೋವ ದೇವರು ಯೆಹೋಶುವನೊಂದಿಗೆ ಮಾತನಾಡಿ,
2 “ನೀನು ಜನರಲ್ಲಿ ಪ್ರತಿ ಗೋತ್ರಕ್ಕೆ ಒಬ್ಬೊಬ್ಬನಂತೆ ಹನ್ನೆರಡು ಮಂದಿ ಗಂಡಸರನ್ನು ಆರಿಸಿಕೊಂಡು,
3 ಯೊರ್ದನ್ ನದಿ ಮಧ್ಯದಲ್ಲಿ ಯಾಜಕರ ಕಾಲುಗಳು ಸ್ಥಿರವಾಗಿ ನಿಂತ ಸ್ಥಳದಲ್ಲಿಂದ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಅವುಗಳನ್ನು ನಿಮ್ಮ ಸಂಗಡ ಆಚೆದಡಕ್ಕೆ ತಂದು, ನೀವು ಈ ರಾತ್ರಿಯಲ್ಲಿ ಇಳಿದುಕೊಳ್ಳುವ ಸ್ಥಳದಲ್ಲಿ ಅವುಗಳನ್ನು ಹಾಕಿರಿ ಎಂದು ಅವರಿಗೆ ಆಜ್ಞಾಪಿಸು,” ಎಂದರು.
4 ಆಗ ಯೆಹೋಶುವನು ಇಸ್ರಾಯೇಲರಲ್ಲಿ ಒಂದೊಂದು ಗೋತ್ರಕ್ಕೆ ಒಬ್ಬೊಬ್ಬನ ಪ್ರಕಾರ ತಾನು ಆರಿಸಿಕೊಂಡ ಹನ್ನೆರಡು ಮಂದಿ ಗಂಡಸರನ್ನು ಕರೆದನು.
5 ಯೆಹೋಶುವನು ಅವರಿಗೆ, “ನೀವು ಯೊರ್ದನ್ ನದಿ ಮಧ್ಯದಲ್ಲಿ ನಿಮ್ಮ ದೇವರಾದ ಯೆಹೋವ ದೇವರ ಮಂಜೂಷದ ಮುಂದೆ ಇಸ್ರಾಯೇಲರ ಗೋತ್ರಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬನೂ ಒಂದೊಂದು ಕಲ್ಲನ್ನು ಭುಜದ ಮೇಲೆ ಹೊತ್ತುಕೊಂಡು ಬನ್ನಿರಿ.
6 ಏಕೆಂದರೆ ಇದು ನಿಮ್ಮ ಮಧ್ಯದಲ್ಲಿ ಗುರುತಾಗಿರಬೇಕು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳೇನು?’ ಎಂದು ಕೇಳುವಾಗ,
7 ನೀವು ಅವರಿಗೆ, ‘ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಯೊರ್ದನ್ ನದಿಯ ನೀರು ವಿಭಾಗವಾಯಿತು. ಒಡಂಬಡಿಕೆಯ ಮಂಜೂಷವು ಯೊರ್ದನ್ ನದಿಯನ್ನು ದಾಟುವಾಗ, ಯೊರ್ದನ್ ನದಿಯ ನೀರು ನಿಂತುಹೋಯಿತು. ಈ ಕಲ್ಲುಗಳು ಇಸ್ರಾಯೇಲರಿಗೆ ಎಂದೆಂದಿಗೂ ಜ್ಞಾಪಕಾರ್ಥವಾದ ಗುರುತು,’ ಎಂದು ಉತ್ತರಕೊಡಬೇಕು,” ಎಂದನು.
8 ಆಗ ಇಸ್ರಾಯೇಲರು ಯೆಹೋಶುವನು ಆಜ್ಞಾಪಿಸಿದ ಹಾಗೆ ಮಾಡಿದರು. ಯೆಹೋವ ದೇವರು ಯೆಹೋಶುವನಿಗೆ ಹೇಳಿದ ಪ್ರಕಾರ ಇಸ್ರಾಯೇಲರ ಗೋತ್ರಗಳ ಲೆಕ್ಕಕ್ಕೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ಯೊರ್ದನ್ ನದಿಯ ಮಧ್ಯದಿಂದ ತೆಗೆದುಕೊಂಡು, ಅವುಗಳನ್ನು ತಮ್ಮ ಸಂಗಡ ತಂದು ತಾವು ಇಳಿದುಕೊಂಡ ಸ್ಥಳದಲ್ಲಿ ಅವುಗಳನ್ನು ಇಟ್ಟರು.
9 ಯೆಹೋಶುವನು ಯೊರ್ದನ್ ನದಿ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರ ಕಾಲುಗಳು ಇಟ್ಟ ಸ್ಥಳದಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಅವು ಈ ದಿನದವರೆಗೂ ಅಲ್ಲಿಯೇ ಇವೆ.
10 ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿದ ಪ್ರಕಾರ, ಯೆಹೋವ ದೇವರು ಆಜ್ಞಾಪಿಸಿದ್ದೆಲ್ಲಾ ನೆರವೇರಿಸುವ ತನಕ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನ್ ನದಿ ನಡುವೆಯೇ ನಿಂತರು. ಜನರು ತ್ವರೆಯಾಗಿ ಆಚೆಗೆ ದಾಟಿಹೋದರು.
11 ಜನರೆಲ್ಲರೂ ಆಚೆಗೆ ದಾಟಿದ ಮೇಲೆ ಯೆಹೋವ ದೇವರ ಮಂಜೂಷವೂ ಯಾಜಕರೂ ಜನರ ಎದುರಿನಲ್ಲಿ ದಾಟಿದರು.
12 ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಯ ಅರ್ಧ ಗೋತ್ರದವರು ಮೋಶೆಯು ತಮಗೆ ಆಜ್ಞಾಪಿಸಿದಂತೆ ಯುದ್ಧಸನ್ನದ್ಧರಾಗಿ ಮಿಕ್ಕ ಇಸ್ರಾಯೇಲರಿಗಿಂತ ಮುಂದಾಗಿ ಹಾದುಹೋದರು.
13 ಹೆಚ್ಚು ಕಡಿಮೆ ನಾಲ್ವತ್ತು ಸಾವಿರ ಜನರು ಯುದ್ಧಕ್ಕೆ ಸಿದ್ಧರಾಗಿ ಯೆಹೋವ ದೇವರ ಮುಂದೆ ಯುದ್ಧಮಾಡುವುದಕ್ಕೆ ಯೆರಿಕೋವಿನ ಬಯಲುಗಳಿಗೆ ಹಾದುಬಂದರು.
14 ಆ ದಿನದಲ್ಲಿ ಯೆಹೋವ ದೇವರು ಯೆಹೋಶುವನನ್ನು ಇಸ್ರಾಯೇಲರೆಲ್ಲರ ಮುಂದೆ ಘನಪಡಿಸಿದರು. ಅವರು ಮೋಶೆಯನ್ನು ಗೌರವಿಸಿದ ಹಾಗೆಯೇ, ಅವನಿಗೂ ಅವನು ಬದುಕಿದ ದಿನಗಳಲ್ಲೆಲ್ಲಾ ಗೌರವ ಕೊಟ್ಟರು.
15 ಯೆಹೋವ ದೇವರು ಯೆಹೋಶುವನ ಸಂಗಡ ಮಾತನಾಡಿ,
16 “ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರಿಗೆ ಯೊರ್ದನಿನಿಂದ ಮೇಲೆ ಬರಬೇಕೆಂದು ಆಜ್ಞಾಪಿಸು,” ಎಂದು ಹೇಳಿದರು.
17 ಆಗ ಯೆಹೋಶುವನು ಯಾಜಕರಿಗೆ, “ಯೊರ್ದನಿನಿಂದ ಮೇಲಕ್ಕೆ ಬನ್ನಿರಿ,” ಎಂದು ಆಜ್ಞಾಪಿಸಿದನು.
18 ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನ್ ನದಿ ಮಧ್ಯದಲ್ಲಿಂದ ಏರಿ, ತಮ್ಮ ಅಂಗಾಲುಗಳನ್ನು ಒಣನೆಲದ ಮೇಲೆ ಇಟ್ಟಕೂಡಲೇ ನೀರು ಮುಂಚಿನಂತೆ ಬಂದು ಯೊರ್ದನ್ ನದಿಯ ದಡ ತುಂಬಿ ಹರಿಯಿತು.
19 ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಯೊರ್ದನಿನಿಂದ ಹೊರಟು, ಯೆರಿಕೋವಿನ ಪೂರ್ವದಿಕ್ಕಿನ ಮೇರೆಯಾದ ಗಿಲ್ಗಾಲಿನಲ್ಲಿ ಇಳಿದುಕೊಂಡರು.
20 ಅವರು ಯೊರ್ದನಿನಿಂದ ತೆಗೆದುಕೊಂಡ ಹನ್ನೆರಡು ಕಲ್ಲುಗಳನ್ನು ಯೆಹೋಶುವನು ಗಿಲ್ಗಾಲಿನಲ್ಲಿ ನಿಲ್ಲಿಸಿದನು.
21 ಅವನು ಇಸ್ರಾಯೇಲರಿಗೆ, “ನಿಮ್ಮ ಮಕ್ಕಳು, ‘ಈ ಕಲ್ಲುಗಳು ಏನು?’ ಎಂದು ಮುಂದಿನ ಕಾಲದಲ್ಲಿ ತಮ್ಮ ತಂದೆಗಳನ್ನು ಕೇಳುವಾಗ,
22 ನೀವು ಅವರಿಗೆ, ‘ಇಸ್ರಾಯೇಲರು ಒಣನೆಲದಲ್ಲಿ ಈ ಯೊರ್ದನ್ ನದಿಯನ್ನು ದಾಟಿ ಬಂದರು.
23 ನೀವು ಯೊರ್ದನ್ ನದಿ ನೀರನ್ನು ದಾಟಿ ಬರುವವರೆಗೂ, ನಿಮ್ಮ ದೇವರಾದ ಯೆಹೋವ ದೇವರು ಆ ನದಿಯ ನೀರನ್ನು ಒಣಗಿ ಹೋಗುವಂತೆ ಮಾಡಿದರು. ಕೆಂಪು ಸಮುದ್ರವನ್ನು ನಾವು ದಾಟುವವರೆಗೂ ನಮ್ಮ ಮುಂದೆ ಬತ್ತಿಸಿದಂತೆ, ಯೊರ್ದನ್ ನದಿ ನೀರನ್ನೂ ಬತ್ತಿಸಿದರು.
24 ಭೂಮಿಯ ಜನರೆಲ್ಲಾ ಯೆಹೋವ ದೇವರ ಹಸ್ತವು ಬಲವುಳ್ಳದ್ದೆಂದು ತಿಳಿಯುವಂತೆಯೂ ನೀವು ನಿರಂತರವೂ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡುವಂತೆಯೂ ದೇವರಾದ ಯೆಹೋವ ದೇವರು ಹೀಗೆ ಮಾಡಿದರು,’ ಎಂದು ನೀವು ಹೇಳಬೇಕು,” ಎಂದನು.