12
ರೆಹಬ್ಬಾಮನಿಗೆ ವಿರೋಧವಾಗಿ ಇಸ್ರಾಯೇಲಿನ ದಂಗೆ
ರೆಹಬ್ಬಾಮನು ಶೆಕೆಮಿಗೆ ಹೋದನು; ಅವನನ್ನು ಅರಸನಾಗಿ ಮಾಡುವುದಕ್ಕೆ ಸಮಸ್ತ ಇಸ್ರಾಯೇಲರು ಶೆಕೆಮಿಗೆ ಬಂದರು. ಅರಸನಾದ ಸೊಲೊಮೋನನ ಸಮ್ಮುಖದಿಂದ ಓಡಿಹೋಗಿ ಈಜಿಪ್ಟಿನಲ್ಲಿ ವಾಸವಾಗಿದ್ದ ನೆಬಾಟನ ಮಗ ಯಾರೊಬ್ಬಾಮನು ಇದನ್ನು ಕೇಳಿದಾಗ, ಅವನು ಈಜಿಪ್ಟಿನಿಂದ ತಿರುಗಿಬಂದನು. ಆಗ ಯಾರೊಬ್ಬಾಮನೂ ಸಮಸ್ತ ಇಸ್ರಾಯೇಲರೂ ರೆಹಬ್ಬಾಮನ ಬಳಿಗೆ ಬಂದು, ಅವನ ಸಂಗಡ ಮಾತನಾಡಿ, “ನಿನ್ನ ತಂದೆಯು ನಮ್ಮ ನೊಗವನ್ನು ಭಾರವಾಗಿ ಮಾಡಿದನು. ಈಗ ನೀನು ನಿನ್ನ ತಂದೆಯ ಕಠಿಣವಾದ ಸೇವೆಯನ್ನೂ, ಅವನು ನಮ್ಮ ಮೇಲೆ ಹಾಕಿದ ಅವನ ಭಾರವಾದ ನೊಗವನ್ನೂ ಹಗುರಮಾಡಿದರೆ, ನಾವು ನಿನಗೆ ಸೇವೆಮಾಡುತ್ತೇವೆ,” ಎಂದರು.
ಅವನು ಅವರಿಗೆ, “ನೀವು ಹೋಗಿ ಮೂರು ದಿವಸಗಳಾದ ತರುವಾಯ ತಿರುಗಿ ನನ್ನ ಬಳಿಗೆ ಬನ್ನಿರಿ,” ಎಂದು ಹೇಳಿದ್ದರಿಂದ ಜನರು ಹೊರಟು ಹೋದರು.
ಆಗ ಅರಸನಾದ ರೆಹಬ್ಬಾಮನು ತನ್ನ ತಂದೆ ಸೊಲೊಮೋನನು ಬದುಕಿರುವಾಗ ಮಂತ್ರಿಗಳಾಗಿದ್ದ ಹಿರಿಯರನ್ನು ಕೂಡಿಸಿ ಅವರಿಗೆ, “ನಾನು ಈ ಜನರಿಗೆ ಪ್ರತ್ಯುತ್ತರವನ್ನು ಕೊಡಲು ನಿಮ್ಮ ಆಲೋಚನೆಯೇನು?” ಎಂದು ಕೇಳಿದನು.
ಅವರು ಅವನಿಗೆ, “ನೀನು ಇಂದು ಈ ಜನರಿಗೆ ಸೇವಕನಾಗಿ ಅವರನ್ನು ಸೇವಿಸಿ, ಒಳ್ಳೆಯ ಮಾತುಗಳಿಂದ ಅವರಿಗೆ ಉತ್ತರವನ್ನು ಕೊಡು, ಆಗ ಅವರು ನಿರಂತರವಾಗಿ ನಿನ್ನ ಸೇವಕರಾಗಿರುವರು,” ಎಂದು ಹೇಳಿದರು.
ಆದರೆ ರೆಹಬ್ಬಾಮನು, ಹಿರಿಯರು ತನಗೆ ಹೇಳಿದ ಆಲೋಚನೆಯನ್ನು ಬಿಟ್ಟು, ತನ್ನ ಸಂಗಡ ಬೆಳೆದು ತನ್ನ ಮುಂದೆ ನಿಂತಿರುವ ಯೌವನಸ್ಥರ ಆಲೋಚನೆಯನ್ನು ಕೇಳಿ, ಅವನು ಅವರಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹಾಕಿದ ನೊಗವನ್ನು ಹಗುರ ಮಾಡೆಂದು ನನಗೆ ಹೇಳಿದ ಈ ಜನರಿಗೆ ಉತ್ತರ ಕೊಡಲು ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
10 ಆಗ ಅವನ ಸಂಗಡ ಬೆಳೆದ ಯೌವನಸ್ಥರು ಅವನಿಗೆ, “ನಿನ್ನ ತಂದೆಯು ನಮ್ಮ ನೊಗವನ್ನು ಭಾರಮಾಡಿದನು. ಆದರೆ ನೀನು ಅದನ್ನು ನಮಗೆ ಹಗುರ ಮಾಡೆಂದು ನಿನ್ನ ಸಂಗಡ ಮಾತನಾಡಿದ ಈ ಜನರಿಗೆ, ‘ನನ್ನ ಕಿರುಬೆರಳು ನನ್ನ ತಂದೆಯ ನಡುವಿಗಿಂತ ದಪ್ಪವಾಗಿರುವುದು. 11 ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೊರಿಸಿದನು. ಆದರೆ ನಾನು ನಿಮ್ಮ ನೊಗವನ್ನು ಇನ್ನೂ ಹೆಚ್ಚು ಭಾರವಾಗಿ ಮಾಡುವೆನು. ನನ್ನ ತಂದೆಯು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ, ನಾನಾದರೋ ನಿಮ್ಮನ್ನು ಚೇಳು ಕೊರಡೆಗಳಿಂದ ಶಿಕ್ಷಿಸುವೆನು,’ ಎಂದು ನೀನು ಅವರಿಗೆ ಹೇಳು,” ಎಂದರು.
12 ಆಗ, “ಮೂರನೆಯ ದಿವಸದಲ್ಲಿ ನನ್ನ ಬಳಿಗೆ ಬನ್ನಿರಿ,” ಎಂದು ಅರಸನು ಹೇಳಿದ ಪ್ರಕಾರ, ಮೂರನೆಯ ದಿವಸದಲ್ಲಿ ಯಾರೊಬ್ಬಾಮನೂ, ಸಮಸ್ತ ಜನರೂ ಅರಸನಾದ ರೆಹಬ್ಬಾಮನ ಬಳಿಗೆ ಬಂದರು. 13 ಆದರೆ ಅರಸನು ಜನರಿಗೆ ಕಠಿಣವಾದ ಉತ್ತರವನ್ನು ಕೊಟ್ಟು, ಹಿರಿಯರು ಅವನಿಗೆ ಕೊಟ್ಟ ಆಲೋಚನೆಯನ್ನು ನಿರಾಕರಿಸಿ, 14 ಯುವಕರ ಆಲೋಚನೆಯ ಪ್ರಕಾರ ಅವರ ಸಂಗಡ ಮಾತನಾಡಿ ಅವರಿಗೆ, “ನನ್ನ ತಂದೆಯು ನಿಮ್ಮ ನೊಗವನ್ನು ಭಾರವಾಗಿ ಮಾಡಿದನು. ನಾನು ಅದನ್ನು ಇನ್ನೂ ಹೆಚ್ಚು ಭಾರ ಮಾಡುತ್ತೇನೆ. ನನ್ನ ತಂದೆಯು ನಿಮ್ಮನ್ನು ಬಾರುಕೋಲುಗಳಿಂದ ಶಿಕ್ಷಿಸಿದನು. ಆದರೆ ನಾನು ಮುಳ್ಳು ಕೊರಡೆಗಳಿಂದ ಶಿಕ್ಷಿಸುವೆನು,” ಎಂದನು. 15 ಅರಸನು ಜನರ ಮಾತನ್ನು ಕೇಳದೆಹೋದದ್ದು ಯೆಹೋವ ದೇವರಿಂದಲೇ. ಹೀಗೆ ಯೆಹೋವ ದೇವರು ಶೀಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿಸಿದ ಮಾತು ಈಡೇರುವುದಕ್ಕೆ ಕಾರಣವಾಯಿತು.
16 ಅರಸನು ಅವರ ಮಾತನ್ನು ಕೇಳದೆ ಹೋದನೆಂದು ಸಮಸ್ತ ಇಸ್ರಾಯೇಲರು ತಿಳಿದಾಗ, ಜನರು ಅರಸನಿಗೆ ಉತ್ತರವಾಗಿ,
“ದಾವೀದನಲ್ಲಿ ನಮಗೆ ಭಾಗವೇನು?
ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಏನು?
ಇಸ್ರಾಯೇಲರೇ, ನಿಮ್ಮ ಡೇರೆಗಳಿಗೆ ಹೋಗಿರಿ.
ದಾವೀದನೇ, ಈಗ ನಿನ್ನ ಕುಟುಂಬವನ್ನು ನೀನೇ ನೋಡಿಕೋ,”
ಎಂದು ಹೇಳಿ, ಇಸ್ರಾಯೇಲರು ತಮ್ಮ ತಮ್ಮ ಡೇರೆಗಳಿಗೆ ಹೋದರು. 17 ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲರ ಮೇಲೆ ರೆಹಬ್ಬಾಮನು ಆಳಿದನು.
18 ಆಗ ರೆಹಬ್ಬಾಮನು ದಾಸರ ಮೇಲ್ವಿಚಾರಕನಾದ ಅದೋನೀರಾಮನನ್ನು ಕಳುಹಿಸಿದನು. ಆದರೆ ಇಸ್ರಾಯೇಲರೆಲ್ಲರು ಅವನ ಮೇಲೆ ಕಲ್ಲೆಸೆದು ಕೊಂದುಹಾಕಿದರು. ಆದ್ದರಿಂದ ಅರಸನಾದ ರೆಹಬ್ಬಾಮನು ಆತುರಪಟ್ಟು ತನ್ನ ರಥವನ್ನೇರಿ ಯೆರೂಸಲೇಮಿಗೆ ಓಡಿಹೋದನು. 19 ಹೀಗೆ ಇಂದಿನವರೆಗೂ ಇಸ್ರಾಯೇಲರು ದಾವೀದನ ಕುಟುಂಬದವರೊಡನೆ ವಿರೋಧವಾಗಿ ತಿರುಗಿಬೀಳುತ್ತಲೇ ಇದ್ದಾರೆ.
20 ಇಸ್ರಾಯೇಲರು ಯಾರೊಬ್ಬಾಮನು ತಿರುಗಿ ಬಂದಿದ್ದಾನೆಂದು ಕೇಳಿದಾಗ, ಅವರು ಸಭೆಗೆ ಅವನನ್ನು ಕರೆಕಳುಹಿಸಿ, ಸಮಸ್ತ ಇಸ್ರಾಯೇಲಿನ ಮೇಲೆ ಅವನನ್ನು ಅರಸನನ್ನಾಗಿ ಮಾಡಿದರು. ಯೆಹೂದನ ಗೋತ್ರ ಹೊರತಾಗಿ ದಾವೀದನ ಮನೆಯನ್ನು ಹಿಂಬಾಲಿಸುವವರು ಯಾರೂ ಇರಲಿಲ್ಲ.
21 ಸೊಲೊಮೋನನ ಮಗನಾದ ರೆಹಬ್ಬಾಮನು ಯೆರೂಸಲೇಮಿಗೆ ಬಂದ ತರುವಾಯ, ರಾಜ್ಯವನ್ನು ತಿರುಗಿ ಪಡೆಯುವ ಹಾಗೆ ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಲು ಬೆನ್ಯಾಮೀನನ ಗೋತ್ರದ ಮತ್ತು ಯೆಹೂದನ ಸಮಸ್ತ ಕುಟುಂಬಗಳಿಂದ 1,80,000 ಸಮರ್ಥ ಸೈನಿಕರನ್ನು ಆಯ್ದುಕೊಂಡು ಒಟ್ಟುಗೂಡಿಸಿದನು.
22 ಆದರೆ ದೇವರ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಗಿ, 23 “ನೀನು ಯೆಹೂದದ ಅರಸನಾದ ಸೊಲೊಮೋನನ ಮಗನಾಗಿರುವ ರೆಹಬ್ಬಾಮನಿಗೂ, ಯೆಹೂದ ಬೆನ್ಯಾಮೀನನ ಸಮಸ್ತ ಮನೆಯವರಿಗೂ ಮತ್ತು ಮಿಕ್ಕಿದ ಜನರಿಗೂ ಹೇಳಬೇಕಾದದ್ದೇನೆಂದರೆ, 24 ‘ನೀವು ಇಸ್ರಾಯೇಲರಾಗಿರುವ ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡಲು ಹೋಗಬೇಡಿರಿ. ಪ್ರತಿ ಮನುಷ್ಯನು ತನ್ನ ಮನೆಗೆ ಹಿಂದಿರುಗಲಿ.’ ಏಕೆಂದರೆ ಈ ಕಾರ್ಯವು ತಮ್ಮಿಂದ ಉಂಟಾಯಿತೆಂದು ಯೆಹೋವ ದೇವರು ಹೇಳುತ್ತಾರೆ,” ಎಂದನು. ಆದ್ದರಿಂದ ಅವರು ಯೆಹೋವ ದೇವರ ವಾಕ್ಯವನ್ನು ಕೇಳಿ, ಯೆಹೋವ ದೇವರ ವಾಕ್ಯದ ಪ್ರಕಾರವೇ ಹಿಂದಿರುಗಿ ಹೋದರು.
ಬೇತೇಲ್ ಹಾಗೂ ದಾನ್ ಕಡೆಯಲ್ಲಿ ಬಂಗಾರದ ಕರುಗಳು
25 ಯಾರೊಬ್ಬಾಮನು ಎಫ್ರಾಯೀಮನ ಬೆಟ್ಟದಲ್ಲಿ ಶೆಕೆಮ್ ಪಟ್ಟಣವನ್ನು ಭದ್ರಪಡಿಸಿ, ಅದರಲ್ಲಿ ವಾಸಿಸಿದನು. ಅಲ್ಲಿಂದ ಹೊರಟುಹೋಗಿ ಪೆನೀಯೇಲ್ ಪಟ್ಟಣವನ್ನು ಭದ್ರಪಡಿಸಿದನು.
26 ಆದರೆ ಯಾರೊಬ್ಬಾಮನು ತನ್ನ ಮನಸ್ಸಿನಲ್ಲಿ, “ಈಗ ರಾಜ್ಯವು ದಾವೀದನ ಮನೆಯವರಿಗೆ ಹಿಂದಿರುಗುವುದು ಏನೋ, 27 ಈ ಜನರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಮಂದಿರಕ್ಕೆ ಬಲಿ ಅರ್ಪಿಸಲು ಹೋದರೆ, ಆಗ ಇವರ ಹೃದಯವು ಯೆಹೂದದ ಅರಸನಾದ ರೆಹಬ್ಬಾಮನ ಕಡೆಗೆ ಮತ್ತೆ ತಿರುಗುವುದು. ಅವರು ನನ್ನನ್ನು ಕೊಂದುಹಾಕಿ, ಯೆಹೂದದ ಅರಸನಾದ ರೆಹಬ್ಬಾಮನ ಕಡೆಗೆ ತಿರುಗಿ ಹೋದಾರು,” ಎಂದುಕೊಂಡನು.
28 ಅರಸನು ತನ್ನ ಸಲಹೆಗಾರರನ್ನು ಕೇಳಿ, ಎರಡು ಬಂಗಾರದ ಕರುಗಳನ್ನು ಮಾಡಿಸಿ ಜನರಿಗೆ, “ಯೆರೂಸಲೇಮಿನವರೆಗೂ ಜಾತ್ರೆಗೆ ಹೋಗುವುದು ನಿಮಗೆ ಕಷ್ಟವಾಗಿದೆ. ಇಸ್ರಾಯೇಲರೇ, ಇಗೋ ಈಜಿಪ್ಟಿನಿಂದ ನಿಮ್ಮನ್ನು ಬರಮಾಡಿದ ನಿಮ್ಮ ದೇವರುಗಳು,” ಎಂದನು. 29 ಒಂದನ್ನು ಬೇತೇಲಿನಲ್ಲಿಯೂ, ಒಂದನ್ನು ದಾನಿನಲ್ಲಿಯೂ ಸ್ಥಾಪಿಸಿದನು. 30 ಇದು ಪಾಪಕ್ಕೆ ಕಾರಣವಾಯಿತು. ದಾನಿನಲ್ಲಿರುವುದನ್ನು ಪೂಜಿಸಲು ಜನರು ಅಲ್ಲಿಯವರೆಗೆ ಹೋಗುತ್ತಿದ್ದರು.
31 ಅವನು ಉನ್ನತ ಸ್ಥಳಗಳಲ್ಲಿ ಪೂಜಾಸ್ಥಳಗಳನ್ನು ಕಟ್ಟಿಸಿ, ಲೇವಿಯರಲ್ಲದ ಸಾಮಾನ್ಯ ಜನರನ್ನು ಯಾಜಕರನ್ನಾಗಿ ನೇಮಿಸಿದನು. 32 ಯಾರೊಬ್ಬಾಮನು ಎಂಟನೆಯ ತಿಂಗಳ ಹದಿನೈದನೆಯ ದಿವಸದಲ್ಲಿ ಯೆಹೂದದಲ್ಲಿರುವ ಹಬ್ಬದ ಪ್ರಕಾರ ಹಬ್ಬವನ್ನು ನೇಮಿಸಿ, ಪೀಠದ ಮೇಲೆ ಬಲಿಗಳನ್ನು ಅರ್ಪಿಸಿದನು. ಈ ಪ್ರಕಾರ ಅವನು ಬೇತೇಲಿನಲ್ಲಿ ಮಾಡಿ, ಅವನು ರೂಪಿಸಿದ ಕರುಗಳ ವಿಗ್ರಹಗಳಿಗೆ ಬಲಿಗಳನ್ನು ಅರ್ಪಿಸಲು ಬೇತೇಲಿನಲ್ಲಿ ತಾನು ನೇಮಿಸಿದ ಉನ್ನತ ಸ್ಥಳಗಳ ಯಾಜಕರನ್ನೇ ಇರಿಸಿದನು. 33 ಹೀಗೆ ಅವನು ತನ್ನ ಸ್ವಂತ ಹೃದಯದಲ್ಲಿ ಯೋಚಿಸಿದ ತಿಂಗಳಲ್ಲಿ ಎಂಟನೆಯ ತಿಂಗಳ ಹದಿನೈದನೆಯ ದಿವಸದಲ್ಲಿ ಅವನು ಬೇತೇಲಿನಲ್ಲಿ ಕಟ್ಟಿಸಿದ ಪೀಠದ ಮೇಲೆ ಬಲಿಗಳನ್ನರ್ಪಿಸಿ, ಇಸ್ರಾಯೇಲರಿಗೆ ಹಬ್ಬವನ್ನು ನೇಮಿಸಿದನು. ಇದಲ್ಲದೆ ತಾನೇ ಪೀಠದ ಮೇಲೆ ಬಲಿಗಳನ್ನರ್ಪಿಸಿ ಧೂಪವನ್ನು ಸುಟ್ಟನು.