16
ಯೆಹೂದ್ಯರ ಅರಸನಾದ ಆಹಾಜ
ರೆಮಲ್ಯನ ಮಗ ಪೆಕಹನ ಆಳ್ವಿಕೆಯ ಹದಿನೇಳನೆಯ ವರ್ಷದಲ್ಲಿ ಯೆಹೂದದ ಅರಸನಾಗಿರುವ ಯೋತಾಮನ ಮಗ ಆಹಾಜನು ಆಳಲು ಆರಂಭಿಸಿದನು. ಆಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಆದರೆ ಅವನು ತನ್ನ ತಂದೆಯಾದ ದಾವೀದನ ಹಾಗೆ ನಡೆಯದೆ, ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಲಿಲ್ಲ, ಆಹಾಜನು ಇಸ್ರಾಯೇಲಿನ ಅರಸರ ಮಾರ್ಗದಲ್ಲಿ ನಡೆದನು. ಇದಲ್ಲದೆ ಯೆಹೋವ ದೇವರು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಇತರ ಜನಾಂಗಗಳ ಅಸಹ್ಯಕರವಾದ ಆಚಾರಗಳನ್ನು ಅನುಸರಿಸಿ ಅವನು ತನ್ನ ಮಗನನ್ನೇ ಬೆಂಕಿಯಲ್ಲಿ ಯಜ್ಞವಾಗಿ ಅರ್ಪಿಸಿದನು. ಇದಲ್ಲದೆ ಅವನು ಪೂಜಾಸ್ಥಳಗಳ ಮೇಲೆಯೂ ಬೆಟ್ಟಗಳ ಮೇಲೆಯೂ ಎಲ್ಲಾ ಹಸಿರಾದ ಮರಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಅರ್ಪಿಸಿದನು.
ಆಗ ಅರಾಮಿನ ಅರಸನಾದ ರೆಚೀನ್, ಮತ್ತು ಇಸ್ರಾಯೇಲರ ಅರಸನೂ ರೆಮಲ್ಯನ ಮಗನೂ ಆದ ಪೆಕಹನು ಯುದ್ಧಮಾಡಲು ಯೆರೂಸಲೇಮಿಗೆ ಬಂದು ಆಹಾಜನನ್ನು ಮುತ್ತಿಗೆ ಹಾಕಿದರು. ಆದರೆ ಅವನನ್ನು ಜಯಿಸುವುದು ಅವರಿಂದ ಆಗಲಿಲ್ಲ. ಅದೇ ವೇಳೆಯಲ್ಲಿ ಅರಾಮಿನ ಅರಸನಾದ ರೆಚೀನನು ಏಲತ್ ಪಟ್ಟಣವನ್ನು ಅರಾಮ್ ರಾಜ್ಯಕ್ಕೆ ತಿರುಗಿ ಸೇರಿಸಿಕೊಂಡು ಏಲತ್ ಪಟ್ಟಣದಿಂದ ಯೆಹೂದ್ಯರನ್ನು ಓಡಿಸಿಬಿಟ್ಟನು. ಎದೋಮ್ಯರು ಏಲತ್ ಪಟ್ಟಣದಲ್ಲಿ ಬಂದು ಇಂದಿನವರೆಗೂ ಅಲ್ಲಿ ವಾಸವಾಗಿದ್ದಾರೆ.
ಆಹಾಜನು ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನಿಗೆ, “ನಾನು ನಿನ್ನ ಸೇವಕನೂ, ನಿನ್ನ ಮಗನೂ ಆಗಿದ್ದೇನೆ. ನನಗೆ ವಿರೋಧವಾಗಿ ಎದ್ದ ಅರಾಮಿನ ಅರಸನ ಕೈಗೂ, ಇಸ್ರಾಯೇಲಿನ ಅರಸನ ಕೈಗೂ ನನ್ನನ್ನು ತಪ್ಪಿಸಿ, ರಕ್ಷಿಸುವುದಕ್ಕೆ ಬರಬೇಕು,” ಎಂದು ಹೇಳಿ ಸೇವಕರನ್ನು ಕಳುಹಿಸಿದನು. ಆಹಾಜನು ಯೆಹೋವ ದೇವರ ಆಲಯದಲ್ಲಿಯೂ, ಅರಮನೆಯ ಖಜಾನೆಯಲ್ಲಿಯೂ ಇದ್ದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಅಸ್ಸೀರಿಯದ ಅರಸನಿಗೆ ಕಾಣಿಕೆಯಾಗಿ ಕಳುಹಿಸಿದನು. ಆಗ ಅಸ್ಸೀರಿಯದ ಅರಸನು ಅವನ ಮಾತು ಕೇಳಿ, ದಮಸ್ಕಕ್ಕೆ ಹೋಗಿ, ಅದನ್ನು ಮುತ್ತಿಗೆ ಹಾಕಿ, ಅದರ ನಿವಾಸಿಗಳನ್ನು ಕೀರ್ ಪ್ರಾಂತಕ್ಕೆ ಸೆರೆಯಾಗಿ ತಂದು, ರೆಚೀನನನ್ನು ಕೊಂದುಹಾಕಿದನು.
10 ಅರಸನಾದ ಆಹಾಜನು ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನನ್ನು ಎದುರುಗೊಳ್ಳಲು ದಮಸ್ಕಕ್ಕೆ ಹೋಗಿ, ದಮಸ್ಕದಲ್ಲಿ ಒಂದು ಬಲಿಪೀಠವನ್ನು ಕಂಡನು. ಅರಸನಾದ ಆಹಾಜನು ಆ ಬಲಿಪೀಠದ ರೂಪವನ್ನೂ, ಅದರ ಎಲ್ಲಾ ಕೈಕೆಲಸದ ಪ್ರಕಾರ ಮಾದರಿಯನ್ನೂ ಯಾಜಕನಾದ ಊರೀಯನಿಗೆ ಕಳುಹಿಸಿದನು. 11 ಯಾಜಕನಾದ ಊರೀಯನು ಅದರ ಪ್ರಕಾರ ಒಂದು ಬಲಿಪೀಠವನ್ನು ಹಾಗೆಯೇ ಅರಸನಾದ ಆಹಾಜನು ದಮಸ್ಕದಿಂದ ಬರುವ ಮೊದಲೇ ಕಟ್ಟಿ ಮುಗಿಸಿದನು. 12 ಅರಸನು ದಮಸ್ಕದಿಂದ ಬಂದ ಮೇಲೆ ಬಲಿಪೀಠವನ್ನು ಕಂಡನು. ಅರಸನು ಬಲಿಪೀಠದ ಬಳಿಗೆ ಹೋಗಿ, 13 ಬಲಿಪೀಠದ ಮೇಲೆ ದಹನಬಲಿಯನ್ನೂ ತನ್ನ ಧಾನ್ಯ ಸಮರ್ಪಣೆಯನ್ನೂ ಅರ್ಪಿಸಿದನು, ಪಾನಗಳನ್ನು ಹೊಯ್ದನು, ಸಮಾಧಾನದ ಬಲಿಗಳ ರಕ್ತವನ್ನು ಚಿಮುಕಿಸಿದನು. 14 ಯೆಹೋವ ದೇವರ ಸಮ್ಮುಖದಲ್ಲಿ ಕಂಚಿನ ಬಲಿಪೀಠವನ್ನು ದೇವಾಲಯದ ಮುಂಭಾಗದಿಂದ ಅಂದರೆ ಯೆಹೋವ ದೇವರ ಆಲಯಕ್ಕೂ, ಬಲಿಪೀಠಕ್ಕೂ ಮಧ್ಯದಿಂದಲೂ ತಂದು, ಅದನ್ನು ಹೊಸ ಬಲಿಪೀಠಕ್ಕೆ ಉತ್ತರ ಕಡೆಯಲ್ಲಿ ಇಟ್ಟನು.
15 ಆಗ ಅರಸನಾದ ಆಹಾಜನು ಯಾಜಕನಾದ ಊರೀಯನಿಗೆ, “ಉದಯದಲ್ಲಿ ದಹನಬಲಿಯನ್ನೂ, ಸಾಯಂಕಾಲದ ಧಾನ್ಯ ಸಮರ್ಪಣೆಯನ್ನೂ, ಪಾನದ್ರವ್ಯವನ್ನೂ ದೊಡ್ಡ ಹೊಸ ಬಲಿಪೀಠದ ಮೇಲೆ ಅರ್ಪಿಸಿ, ದಹನಬಲಿಯ ರಕ್ತವೆಲ್ಲವನ್ನೂ ಚಿಮುಕಿಸಿದನು. ಆದರೆ ಕಂಚಿನ ಬಲಿಪೀಠವನ್ನು ನಾನು ಮಾರ್ಗದರ್ಶನಕ್ಕಾಗಿ ಉಪಯೋಗಿಸುವೆನು,” ಎಂದು ಆಜ್ಞಾಪಿಸಿದನು. 16 ಅರಸನಾದ ಆಹಾಜನು ಆಜ್ಞಾಪಿಸಿದ ಪ್ರಕಾರವೇ ಯಾಜಕನಾದ ಊರೀಯನು ಮಾಡಿದನು.
17 ಅರಸನಾದ ಆಹಾಜನು ಪೀಠದ ಅಂಚುಗಳನ್ನು ಕೊಯ್ದು, ಕಂಚಿನ ಕಡಲೆಂಬ ದೊಡ್ಡ ಪಾತ್ರೆಯನ್ನು ಅದರ ಮೇಲಿನಿಂದ ಇಳಿಸಿ, ಅದನ್ನು ಕಲ್ಲುಗಳ ಕಟ್ಟೆಯ ಮೇಲೆ ಇಟ್ಟನು. 18 ಯೆಹೋವ ದೇವರ ಆಲಯದ ಪ್ರಾಕಾರದ ಒಳಗೆ ಸಬ್ಬತ್ ದಿನದ ಆರಾಧನೆಗಾಗಿ, ರಾಜರಿಗಾಗಿ ಕಟ್ಟಲಾಗಿದ್ದ ಮಂಟಪವನ್ನು ಹಾಗು ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದನು, ಇವುಗಳನ್ನೆಲ್ಲ ಅಸ್ಸೀರಿಯದ ಅರಸನ ನಿಮಿತ್ತವಾಗಿ ಆಹಾಜನೇ ಬದಲಾಯಿಸಿದನು.
19 ಆಹಾಜನ ಆಳ್ವಿಕೆಯಲ್ಲಿಯ ಇತರ ಕ್ರಿಯೆಗಳು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 20 ಆಹಾಜನು ಮೃತನಾಗಿ ತನ್ನ ಪಿತೃಗಳ ಬಳಿಯಲ್ಲಿ ಸೇರಿದನು. ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗ ಹಿಜ್ಕೀಯನು ಅರಸನಾದನು.