20
ಹಿಜ್ಕೀಯನ ಅಸ್ವಸ್ಥತೆ
ಆ ದಿವಸಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನಾದ ಪ್ರವಾದಿ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನೀನು ನಿನ್ನ ಮನೆಯನ್ನು ವ್ಯವಸ್ಥೆ ಮಾಡಿಕೋ, ಏಕೆಂದರೆ ನೀನು ಬದುಕದೆ ಸಾಯುವೆ, ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಹೇಳಿದನು.
ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ, “ಯೆಹೋವ ದೇವರೇ, ನಾನು ಸತ್ಯದಿಂದಲೂ, ಪೂರ್ಣಹೃದಯದಿಂದಲೂ ನಿಮ್ಮ ಮುಂದೆ ನಡೆದು, ನಿಮ್ಮ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ,” ಎಂದು ಬೇಡಿಕೊಂಡನು. ಹೀಗೆ ಹಿಜ್ಕೀಯನು ವ್ಯಥೆಪಟ್ಟು ಅತ್ತನು.
ಯೆಶಾಯನು ಅರಮನೆಯ ಆವರಣದ ಮಧ್ಯಕ್ಕೆ ಹೋಗುವ ಮುಂಚೆ ಯೆಹೋವ ದೇವರ ವಾಕ್ಯವು ಅವನಿಗೆ ಬಂದಿತು, ದೇವರು ಅವನಿಗೆ, “ನೀನು ಹಿಂದಿರುಗಿ ಹೋಗಿ ನನ್ನ ಜನರ ನಾಯಕನಾದ ಹಿಜ್ಕೀಯನಿಗೆ, ‘ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೇಳಿದ್ದೇನೆಂದರೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ಕಂಡಿದ್ದೇನೆ. ನಾನು ನಿನ್ನನ್ನು ಸ್ವಸ್ಥಮಾಡುತ್ತೇನೆ. ಮೂರನೆಯ ದಿವಸದಲ್ಲಿ ಯೆಹೋವ ದೇವರ ಆಲಯಕ್ಕೆ ಹೋಗುವೆ. ಇದಲ್ಲದೆ ನಾನು ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಾಗಿ ಕೂಡಿಸುತ್ತೇನೆ. ನಿನ್ನನ್ನೂ, ಈ ಪಟ್ಟಣವನ್ನೂ ಅಸ್ಸೀರಿಯದ ಅರಸನ ಕೈಯಿಂದ ಬಿಡಿಸುವೆನು. ಈ ಪಟ್ಟಣವನ್ನು ನನ್ನ ನಿಮಿತ್ತವಾಗಿಯೂ, ನನ್ನ ಸೇವಕನಾದ ದಾವೀದನ ನಿಮಿತ್ತವಾಗಿಯೂ ಕಾಪಾಡುವೆನು,’ ಎಂದು ಹೇಳು,” ಎಂದರು.
ಆಗ ಯೆಶಾಯನು ಅಂಜೂರದ ಹಣ್ಣುಗಳ ಉಂಡೆಯನ್ನು ತೆಗೆದುಕೊಂಡು ಬರಲು ಹೇಳಿದ್ದನು. ಅವರು ಹಾಗೆಯೇ ತೆಗೆದುಕೊಂಡು ಬಂದು ಹುಣ್ಣಿನ ಮೇಲೆ ಹಾಕಿದ್ದರಿಂದ ಅವನು ಗುಣಹೊಂದಿದನು.
ಹಿಜ್ಕೀಯನು ಯೆಶಾಯನಿಗೆ, “ಯೆಹೋವ ದೇವರು ನನ್ನನ್ನು ಸ್ವಸ್ಥಮಾಡುವರೆಂಬುದಕ್ಕೆ ಮತ್ತು ನಾನು ಮೂರನೆಯ ದಿವಸದಲ್ಲಿ ಯೆಹೋವ ದೇವರ ಆಲಯಕ್ಕೆ ಹೋಗುವೆನೆಂಬುದಕ್ಕೆ ನನಗೆ ಗುರುತೇನು?” ಎಂದು ಕೇಳಿದನು.
ಯೆಶಾಯನು, “ಯೆಹೋವ ದೇವರು, ತಾವು ಹೇಳಿದ ಕಾರ್ಯವನ್ನು ಮಾಡುವರೆಂಬುದಕ್ಕೆ ಯೆಹೋವ ದೇವರ ಕಡೆಯಿಂದ ನಿನಗೆ ಉಂಟಾಗುವ ಗುರುತು, ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ? ಇಲ್ಲವೆ ಹತ್ತು ಮೆಟ್ಟಲು ಹಿಂದಕ್ಕೆ ಬರಬೇಕೋ?” ಎಂದು ಕೇಳಿದನು.
10 ಅದಕ್ಕೆ ಹಿಜ್ಕೀಯನು, “ನೆರಳು ಹತ್ತು ಮೆಟ್ಟಲು ಮುಂದೆ ಹೋಗುವುದು ಸಾಮಾನ್ಯ, ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡು,” ಎಂದನು.
11 ಆಗ ಪ್ರವಾದಿಯಾದ ಯೆಶಾಯನು ಯೆಹೋವ ದೇವರಿಗೆ ಮೊರೆಯಿಟ್ಟದ್ದರಿಂದ, ದೇವರು ಆಹಾಜನ ಮೆಟ್ಟಲುಗಳಲ್ಲಿ ಇಳಿದು ಹೋದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರಮಾಡಿದರು.
ಬಾಬಿಲೋನಿನಿಂದ ದೂತರು
12 ಅದೇ ಕಾಲದಲ್ಲಿ ಬಲದಾನನ ಮಗನೂ, ಬಾಬಿಲೋನಿನ ಅರಸನೂ ಆದ ಮೆರೋದಕ್ ಬಲದಾನ್ ಎಂಬವನು, ಹಿಜ್ಕೀಯನು ಅಸ್ವಸ್ಥನಾಗಿದ್ದಾನೆಂದು ಕೇಳಿದ್ದರಿಂದ ಪತ್ರಗಳನ್ನೂ, ಉಡುಗೊರೆಗಳನ್ನೂ ಹಿಜ್ಕೀಯನ ಬಳಿಗೆ ಕಳುಹಿಸಿದನು. 13 ಹಿಜ್ಕೀಯನು ಅವರ ಮಾತು ಕೇಳಿ ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳ ತೈಲ ಮೊದಲಾದ ಅಮೂಲ್ಯ ಪದಾರ್ಥಗಳಿರುವ ಮನೆಯನ್ನೂ, ಆಯುಧ ಶಾಲೆಯನ್ನೂ, ತನ್ನ ಭಂಡಾರದಲ್ಲಿ ಇರುವುದೆಲ್ಲವನ್ನೂ ತೋರಿಸಿದನು. ಹೀಗೆ ಹಿಜ್ಕೀಯನು ತನ್ನ ಅರಮನೆಯಲ್ಲಿಯೂ, ತನ್ನ ಸಮಸ್ತ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.
14 ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಆ ಮನುಷ್ಯರು ಎಲ್ಲಿಂದ ಬಂದವರು ಮತ್ತು ಅವರು ನಿನಗೆ ಏನು ಹೇಳಿದರು?” ಎಂದು ಕೇಳಿದನು.
ಹಿಜ್ಕೀಯನು, “ಅವರು ಬಹುದೂರ ದೇಶವಾದ ಬಾಬಿಲೋನಿನಿಂದ ಬಂದವರು,” ಎಂದು ಹೇಳಿದನು.
15 ಅದಕ್ಕೆ ಯೆಶಾಯನು ಪುನಃ ಅವನನ್ನು, “ಅವರು ನಿನ್ನ ಅರಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು.
ಹಿಜ್ಕೀಯನು, “ನನ್ನ ಅರಮನೆಯಲ್ಲಿ ಇರುವುದೆಲ್ಲವನ್ನು ಅವರು ನೋಡಿದರು, ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಏನೂ ಇಲ್ಲ,” ಎಂದು ಉತ್ತರಕೊಟ್ಟನು.
16 ಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವ ದೇವರ ವಾಕ್ಯವನ್ನು ಕೇಳು: 17 ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ನಿನ್ನ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬಿಲೋನಿಗೆ ಕೊಂಡೊಯ್ಯುವ ದಿವಸ ಬರುವುದು. ಇಲ್ಲಿ ಏನೂ ಉಳಿಯುವುದಿಲ್ಲ. 18 ಬಾಬಿಲೋನಿನವರು ನಿನ್ನಿಂದ ಹುಟ್ಟುವಂಥ, ನಿನ್ನ ಮಕ್ಕಳಲ್ಲಿ ಕೆಲವರನ್ನು ತೆಗೆದುಕೊಂಡು ಹೋಗುವರು, ಅವರು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗಿರುವರು,” ಎಂದನು.
19 ಆಗ ಹಿಜ್ಕೀಯನು, “ನೀನು ಹೇಳಿದ ಯೆಹೋವ ದೇವರ ವಾಕ್ಯವು ಒಳ್ಳೆಯದೇ,” ಎಂದು ಯೆಶಾಯನಿಗೆ ಹೇಳಿದನು. ಅವನು, ಹೇಗೂ ನನ್ನ ಜೀವಮಾನದಲ್ಲಿ ಸಮಾಧಾನವು, ಭದ್ರತೆಯೂ ಇರುವುವು, ಎಂದುಕೊಂಡನು.
20 ಹಿಜ್ಕೀಯನ ಇತರ ಕಾರ್ಯಗಳೂ, ಅವನ ಸಮಸ್ತ ಪರಾಕ್ರಮವೂ ಅವನು ಕೆರೆ ಮತ್ತು ಕಾಲುವೆಗಳನ್ನು ಮಾಡಿಸಿ ಪಟ್ಟಣದಲ್ಲಿ ನೀರನ್ನು ಬರಮಾಡಿದ್ದೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 21 ಹಿಜ್ಕೀಯನು ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಮಗ ಮನಸ್ಸೆಯು ಅವನಿಗೆ ಬದಲಾಗಿ ಅರಸನಾದನು.