9
ಯೇಹು ಇಸ್ರಾಯೇಲಿನ ಅರಸನಾಗಿ ನೇಮಕವಾದದ್ದು
ಪ್ರವಾದಿಯಾದ ಎಲೀಷನು ಪ್ರವಾದಿಗಳ ಮಂಡಳಿಯಲ್ಲಿ ಒಬ್ಬನನ್ನು ಕರೆದು ಅವನಿಗೆ, “ನಡುವನ್ನು ಕಟ್ಟಿಕೊಂಡು ಈ ಎಣ್ಣೆಯ ಪಾತ್ರೆಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಗಿಲ್ಯಾದಿನ ರಾಮೋತಿಗೆ ಹೋಗು. ನೀನು ಅಲ್ಲಿಗೆ ಸೇರಿದಾಗ ನಿಂಷಿಯ ಮಗನಾಗಿರುವ ಯೆಹೋಷಾಫಾಟನ ಮಗ ಯೇಹುವನ್ನು ಅಲ್ಲಿ ಕಂಡು, ಒಳಗೆ ಪ್ರವೇಶಿಸಿ, ಅವನನ್ನು ಅವರ ಸಹೋದರರ ಮಧ್ಯದಿಂದ ಎಬ್ಬಿಸಿ, ಒಳಗಿನ ಕೋಣೆಗೆ ಕರೆದುಕೊಂಡು ಹೋಗಿ, ಎಣ್ಣೆಯ ಪಾತ್ರೆಯನ್ನು ತೆಗೆದುಕೊಂಡು, ಅವನ ತಲೆಯ ಮೇಲೆ ಹೊಯ್ದು, ಅವನಿಗೆ, ‘ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆ, ಎಂದು ಯೆಹೋವ ದೇವರು ಹೇಳುತ್ತಾರೆ,’ ಎಂಬುದಾಗಿ ಹೇಳು. ಅನಂತರ ಕದವನ್ನು ತೆರೆದು ತಡಮಾಡದೆ ಓಡಿಹೋಗು,” ಎಂದನು.
ಹಾಗೆಯೇ ಯೌವನಸ್ಥನಾದ ಪ್ರವಾದಿಯು ಗಿಲ್ಯಾದಿನ ರಾಮೋತಿಗೆ ಹೋದನು. ಅವನು ಅಲ್ಲಿ ಸೇರಿದಾಗ, ಅಲ್ಲಿ ಯೇಹುವು ಮತ್ತು ಸೈನ್ಯಾಧಿಪತಿಗಳು ಕುಳಿತುಕೊಂಡಿದ್ದರು. ಆಗ ಅವನು, “ಅಧಿಪತಿಯೇ, ನಿನಗೊಂದು ಮಾತು ಹೇಳುವುದಿದೆ,” ಎಂದನು.
ಯೇಹುವು, “ನಮ್ಮಲ್ಲಿ ಯಾರಿಗೆ?” ಎಂದು ಕೇಳಿದನು.
ಅವನು, “ಅಧಿಪತಿಯಾದ ನಿಮಗೇ ಹೇಳಬೇಕಾಗಿದೆ,” ಎಂದು ಉತ್ತರಕೊಟ್ಟನು.
ಯೇಹುವು ಎದ್ದು ಮನೆಯೊಳಕ್ಕೆ ಹೋದನು. ಆಗ ಪ್ರವಾದಿಯು ಎಣ್ಣೆಯನ್ನು ಅವನ ತಲೆಯ ಮೇಲೆ ಹೊಯ್ದು ಅವನಿಗೆ, “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: ಯೆಹೋವ ದೇವರ ಜನರಾದ ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆ. ನಾನು ಪ್ರವಾದಿಗಳಾದ ನನ್ನ ಸೇವಕರ ರಕ್ತಕ್ಕೋಸ್ಕರವೂ ಈಜೆಬೆಲಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವಂತೆ ನೀನು ನಿನ್ನ ಯಜಮಾನನಾದ ಅಹಾಬನ ಮನೆಯನ್ನು ಸಂಹರಿಸಬೇಕು. ಅಹಾಬನ ಮನೆಯೆಲ್ಲಾ ನಾಶವಾಗುವುದು. ಇಸ್ರಾಯೇಲಿನಲ್ಲಿ ಉಳಿದಿರುವ ಅಹಾಬನ ಗಂಡಸರಲ್ಲಿ ಸ್ವತಂತ್ರರಾಗಲಿ, ಗುಲಾಮರಾಗಲಿ ಎಲ್ಲರನ್ನೂ ತೆಗೆದುಹಾಕುವೆನು. ಅಹಾಬನ ಮನೆಯನ್ನು ನೆಬಾಟನ ಮಗ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗ ಬಾಷನ ಮನೆಯ ಹಾಗೆಯೂ ಮಾಡುವೆನು. 10 ಇದಲ್ಲದೆ ಇಜ್ರೆಯೇಲ್ ಊರಿನ ಹೊಲದಲ್ಲಿ ನಾಯಿಗಳು ಈಜೆಬೆಲಳನ್ನು ತಿಂದುಬಿಡುವುವು; ಅವಳ ಶವವನ್ನು ಸಮಾಧಿಮಾಡಲು ಯಾವನೂ ಇರುವುದಿಲ್ಲ,” ಎಂದು ಹೇಳಿ ಬಾಗಿಲನ್ನು ತೆರೆದು ಓಡಿಹೋದನು.
11 ಆಗ ಯೇಹುವು ತನ್ನ ಯಜಮಾನನ ಸೇವಕರ ಬಳಿಗೆ ಬಂದನು. ಅವರು ಅವನಿಗೆ, “ಶುಭವೋ? ಆ ಹುಚ್ಚನು ನಿನ್ನ ಬಳಿಗೆ ಬಂದದ್ದೇನು?” ಎಂದರು.
ಅವನು ಅವರಿಗೆ, “ಆ ಮನುಷ್ಯನನ್ನೂ ಅವನ ಮಾತನ್ನೂ ನೀವು ಬಲ್ಲಿರಿ,” ಎಂದನು.
12 ಅದಕ್ಕವರು, “ಅದು ಸುಳ್ಳು, ದಯಮಾಡಿ ನಮಗೆ ತಿಳಿಸು,” ಎಂದರು.
ಆದ್ದರಿಂದ ಅವನು, “ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆಂಬುದಾಗಿ ಯೆಹೋವ ದೇವರು ಹೇಳುತ್ತಾರೆಂದು ಹೀಗೆ ನನಗೆ ಹೇಳಿದನು,” ಎಂದನು.
13 ಆಗ ಅವರು ತ್ವರೆಪಟ್ಟು ಪ್ರತಿಯೊಬ್ಬರು ತಮ್ಮ ಹೊರ ಉಡುಪುಗಳನ್ನು ತೆಗೆದು, ಮೆಟ್ಟಿಲುಗಳ ಮೇಲೆ ಹಾಸಿ, ಇವನನ್ನು ಕುಳ್ಳಿರಿಸಿ, ತುತೂರಿಗಳನ್ನು ಊದಿ, “ಯೇಹುವು ಅರಸನಾಗಿದ್ದಾನೆ,” ಎಂದು ಆರ್ಭಟಿಸಿದರು.
ಯೇಹುವು ಯೋರಾಮನನ್ನು ಮತ್ತು ಅಹಜ್ಯನನ್ನು ಕೊಂದದ್ದು
14 ಹೀಗೆಯೇ ನಿಂಷಿಯ ಮಗ ಯೆಹೋಷಾಫಾಟನ ಮಗ ಯೇಹುವು ಯೋರಾಮನಿಗೆ ವಿರೋಧವಾಗಿ ಒಳಸಂಚು ಮಾಡಿದನು. ಅರಾಮ್ಯರ ಅರಸನಾದ ಹಜಾಯೇಲನ ನಿಮಿತ್ತ ಯೋರಾಮನೂ, ಸಮಸ್ತ ಇಸ್ರಾಯೇಲರೂ ಗಿಲ್ಯಾದಿನ ರಾಮೋತಿನಲ್ಲಿ ಕಾಯುತ್ತಿದ್ದರು. 15 ಆದರೆ ಅರಸನಾದ ಯೋರಾಮನು ಅರಾಮಿನ ಅರಸನಾದ ಹಜಾಯೇಲನ ಸಂಗಡ ಯುದ್ಧಮಾಡುವಾಗ, ಅರಾಮ್ಯರು ತನ್ನನ್ನು ಹೊಡೆದ ಗಾಯವನ್ನು ಸ್ವಸ್ಥಮಾಡಿಕೊಳ್ಳುವ ನಿಮಿತ್ತ ಇಜ್ರೆಯೇಲಿಗೆ ಹೋಗಿದ್ದನು. ಆಗ ಯೇಹುವು, “ನಿಮಗೆ ಮನಸ್ಸಿದ್ದರೆ ಇದನ್ನು ಇಜ್ರೆಯೇಲಿಗೆ ಹೋಗಿ ತಿಳಿಸಲು ಪಟ್ಟಣದಿಂದ ಯಾರೂ ತಪ್ಪಿಸಿಕೊಂಡು ಹೊರಡದೆ ಇರಲಿ,” ಎಂದನು. 16 ಯೇಹುವು ರಥದ ಮೇಲೆ ಏರಿ ಇಜ್ರೆಯೇಲಿಗೆ ಹೋದನು. ಏಕೆಂದರೆ ಯೋರಾಮನು ಅಲ್ಲಿ ವಿಶ್ರಾಂತಿಯಲ್ಲಿದ್ದನು. ಇದಲ್ಲದೆ ಯೋರಾಮನನ್ನು ನೋಡುವುದಕ್ಕೆ ಯೆಹೂದದ ಅರಸನಾದ ಅಹಜ್ಯನು ಅಲ್ಲಿಗೆ ಬಂದಿದ್ದನು.
17 ಇಜ್ರೆಯೇಲ್ ಪಟ್ಟಣದ ಗೋಪುರದಲ್ಲಿದ್ದ ಕಾವಲುಗಾರನು ಯೇಹುವಿನ ಗುಂಪಿನವರನ್ನು ಕಂಡು, “ಜನರ ಒಂದು ಗುಂಪು ಕಾಣಿಸುತ್ತಿದೆ,” ಎಂದು ಯೋರಾಮನಿಗೆ ತಿಳಿಸಿದನು.
ಯೋರಾಮನು, “ನೀನು ಒಬ್ಬ ರಾಹುತನನ್ನು ಕರೆದು, ಬರುತ್ತಿರುವವರು ಶುಭವಾರ್ತೆಯನ್ನು ತರುತ್ತಾರೋ ಇಲ್ಲವೋ ಎಂದು ಕೇಳುವುದಕ್ಕೆ ಕಳುಹಿಸು,” ಎಂಬುದಾಗಿ ಆಜ್ಞಾಪಿಸಿದನು.
18 ಒಬ್ಬ ರಾಹುತನು ಯೇಹುವನ್ನು ಎದುರುಗೊಂಡು, “ಅರಸನು, ‘ಶುಭವಾರ್ತೆ ಉಂಟೋ?’ ಎಂದು ಕೇಳುತ್ತಾನೆ,” ಎನ್ನಲು ಅವನು,
“ಶುಭವಾರ್ತೆಯಿಂದ ನಿನಗೇನು? ನನ್ನ ಹಿಂದೆ ಬಾ,” ಎಂದನು.
ಕಾವಲುಗಾರನು ಅರಸನಿಗೆ, “ರಾಹುತನು ಆ ಗುಂಪನ್ನು ಮುಟ್ಟಿದನು, ಆದರೆ ತಿರುಗಿ ಬರುವುದು ಕಾಣಿಸುವುದಿಲ್ಲ,” ಎಂದು ತಿಳಿಸಿದನು.
19 ಆಗ ಅರಸನು ಇನ್ನೊಬ್ಬ ರಾಹುತನನ್ನು ಕಳುಹಿಸಿದನು. ಇವನು ಹೋಗಿ ಯೇಹುವನ್ನು ಎದುರುಗೊಂಡು, “ಅರಸನು, ‘ಶುಭವಾರ್ತೆ ಉಂಟೋ?’ ಎಂದು ಕೇಳುತ್ತಾನೆ,” ಎನ್ನಲು ಅವನು,
“ಶುಭವಾರ್ತೆಯಿಂದ ನಿನಗೇನು? ನನ್ನ ಹಿಂದೆ ಬಾ,” ಎಂದನು.
20 ಆಗ ಕಾವಲುಗಾರನು, “ಇವನೂ ಅವರ ಬಳಿಗೆ ಹೋಗಿ ತಿರುಗಿ ಬರಲಿಲ್ಲ. ಇದಲ್ಲದೆ ರಥವನ್ನು ಓಡಿಸುವುದು ನಿಂಷಿಯ ಮಗನಾದ ಯೇಹುವು ಓಡಿಸುವ ಹಾಗಿದೆ, ಏಕೆಂದರೆ ಅವನು ಹುಚ್ಚನಂತೆ ಓಡಿಸುತ್ತಿದ್ದಾನೆ,” ಎಂದನು.
21 ಯೋರಾಮನು, “ನನ್ನ ರಥವನ್ನು ಸಿದ್ಧಮಾಡು,” ಎಂದನು. ಅವನ ರಥವು ಸಿದ್ಧವಾಯಿತು. ಆಗ ಇಸ್ರಾಯೇಲಿನ ಅರಸನಾದ ಯೋರಾಮನೂ, ಯೆಹೂದದ ಅರಸನಾದ ಅಹಜ್ಯನೂ ಹೊರಟು, ಅವರವರು ತಮ್ಮ ತಮ್ಮ ರಥದಲ್ಲಿ ಏರಿ ಯೇಹುವಿಗೆ ಎದುರಾಗಿ ಹೊರಟು, ಇಜ್ರೆಯೇಲಿನವನಾದ ನಾಬೋತನಿಗೆ ಸಂಬಂಧಿಸಿದ ಸ್ಥಳದಲ್ಲಿ ಅವನನ್ನು ಸಂಧಿಸಿದರು. 22 ಯೋರಾಮನು ಯೇಹುವನ್ನು ಕಂಡಾಗ, “ಯೇಹುವೇ, ಸಮಾಧಾನದಿಂದ ಬಂದಿರುವೆಯೋ?” ಎಂದನು.
ಅದಕ್ಕವನು, “ನಿನ್ನ ತಾಯಿಯಾದ ಈಜೆಬೆಲಳ ಜಾರತ್ವವೂ, ಅವಳ ಮಾಟಮಂತ್ರಗಳೂ ಅಧಿಕವಾಗಿರುವಾಗ ಸಮಾಧಾನವೆಲ್ಲಿ?” ಎಂದನು.
23 ಆಗ ಯೋರಾಮನು ಅಹಜ್ಯನಿಗೆ, “ಅಹಜ್ಯನೇ, ಇದು ದ್ರೋಹ!” ಎಂದು ಹೇಳಿ ತನ್ನ ಕೈ ತಿರುಗಿಸಿಕೊಂಡು ಓಡಿಹೋದನು.
24 ಆದರೆ ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬಗ್ಗಿಸಿ ತನ್ನ ಕೈಯಿಂದ ಯೋರಾಮನನ್ನು ಅವನ ತೋಳುಗಳ ನಡುವೆ ಹೊಡೆದನು. ಬಾಣ ಹೃದಯದಲ್ಲಿ ತೂರಿ ಹೊರಟಿತು. ಅವನು ರಥದಲ್ಲಿ ಕೆಳಗೆ ಮುದುರಿಕೊಂಡು ಬಿದ್ದನು. 25 ಆಗ ಯೇಹುವು ತನ್ನ ಅಧಿಪತಿಯಾದ ಬಿದ್ಕಾರನಿಗೆ, “ನೀನು ಅವನನ್ನು ತೆಗೆದುಕೊಂಡುಹೋಗಿ ಇಜ್ರೆಯೇಲಿನವನಾದ ನಾಬೋತನ ಪಾಲಾಗಿರುವ ಹೊಲದಲ್ಲಿ ಹಾಕಿಬಿಡು. ಏಕೆಂದರೆ ನಾನೂ, ನೀನೂ ಅವನ ತಂದೆಯಾದ ಅಹಾಬನ ಹಿಂದೆ ರಥವನ್ನು ಏರಿಕೊಂಡು ಹೋಗುತ್ತಿರುವಾಗ, ಯೆಹೋವ ದೇವರು ಈ ಪ್ರವಾದನೆಯನ್ನು ಅವನ ಬಗ್ಗೆ ತಿಳಿಸಿದರೆಂದು ಜ್ಞಾಪಕಮಾಡಿಕೋ. 26 ನಾಬೋತನ ರಕ್ತವನ್ನೂ, ಅವನ ಪುತ್ರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ, ಎಂದು ಯೆಹೋವ ದೇವರು ಹೇಳುತ್ತಾರೆ. ಇದಲ್ಲದೆ ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ಆದ್ದರಿಂದ ಯೆಹೋವ ದೇವರ ವಾಕ್ಯದ ಪ್ರಕಾರ ಎತ್ತಿಕೊಂಡು ಆ ಹೊಲದಲ್ಲಿ ಅವನನ್ನು ಹಾಕಿಬಿಡು,” ಎಂದನು.
27 ಯೆಹೂದದ ಅರಸನಾದ ಅಹಜ್ಯನು ಇದನ್ನೆಲ್ಲಾ ಕಂಡು, ಬೇತ್ ಹಗ್ಗನಿನ ಮಾರ್ಗವಾಗಿ ಓಡಿಹೋದನು. ಯೇಹುವು ಅವನ ಹಿಂದೆ ಹೋಗಿ ರಥದಲ್ಲಿ, “ಅವನನ್ನು ಸಹ ಸಂಹರಿಸಿರಿ,” ಎಂದನು. ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್ ಎಂಬ ಸ್ಥಳಕ್ಕೆ ಏರಿಹೋಗುವ ಅಹಜ್ಯನನ್ನು ಮಾರ್ಗದಲ್ಲಿ ರಥದಲ್ಲಿ ಹೊಡೆದರು. ಅವನು ಮೆಗಿದ್ದೋವಿಗೆ ಓಡಿಹೋಗಿ ಅಲ್ಲಿ ಸತ್ತುಹೋದನು. 28 ಅವನ ಸೇವಕರು ಅವನನ್ನು ರಥದಲ್ಲಿ ಯೆರೂಸಲೇಮಿಗೆ ತೆಗೆದುಕೊಂಡುಹೋಗಿ, ದಾವೀದನ ಪಟ್ಟಣದೊಳಗೆ ಅವನ ಪಿತೃಗಳ ಬಳಿಯಲ್ಲಿ ಅವನ ಸಮಾಧಿಯಲ್ಲಿ ಅವನನ್ನು ಹೂಳಿಟ್ಟರು. 29 ಅಹಾಬನ ಮಗ ಯೋರಾಮನ ಹನ್ನೊಂದನೆಯ ವರ್ಷದಲ್ಲಿ ಅಹಜ್ಯನು ಯೆಹೂದದ ಅರಸನಾಗಿದ್ದನು.
ಈಜೆಬೆಲಳ ಮರಣ
30 ಯೇಹುವು ಇಜ್ರೆಯೇಲಿಗೆ ಬಂದನು. ಅಲ್ಲಿಗೆ ಅವನು ಬಂದಿದ್ದಾನೆಂದು ಈಜೆಬೆಲಳು ಕೇಳಿ, ಅವಳು ತನ್ನ ಕಣ್ಣುಗಳಿಗೆ ಕಾಡಿಗೆ ಹಚ್ಚಿಕೊಂಡು, ತನ್ನ ತಲೆಯನ್ನು ಶೃಂಗರಿಸಿಕೊಂಡು, ಕಿಟಕಿಯಿಂದ ಇಣಿಕಿ ನೋಡಿದಳು. 31 ಯೇಹುವು ಬಾಗಿಲಲ್ಲಿ ಪ್ರವೇಶಿಸಿದಾಗ ಅವಳು, “ತನ್ನ ಯಜಮಾನನನ್ನು ಕೊಂದ ಜಿಮ್ರಿಗೆ ಸಮಾನನೇ, ಕ್ಷೇಮವೋ?” ಎಂದಳು.
32 ಯೇಹುವು ತನ್ನ ಮುಖವನ್ನು ಆ ಕಿಟಕಿಯ ಕಡೆಗೆ ಎತ್ತಿ, “ನನ್ನ ಕಡೆ ಇರುವವರು ಯಾರು?” ಎಂದನು. ಆಗ ಇಬ್ಬರು ಮೂವರು ಕಂಚುಕಿಗಳು ಆ ಕಿಟಕಿಯಲ್ಲಿಂದ ಅವನನ್ನು ನೋಡಿದರು. 33 ಯೇಹುವು, “ಅವಳನ್ನು ಕೆಳಕ್ಕೆ ತಳ್ಳಿಬಿಡಿರಿ,” ಎಂದನು. ಅವರು ಅವಳನ್ನು ಕೆಳಕ್ಕೆ ತಳ್ಳಿಬಿಟ್ಟದ್ದರಿಂದ ಅವಳ ರಕ್ತವು ಗೋಡೆಯ ಮೇಲೆಯೂ, ಕುದುರೆಗಳ ಮೇಲೆಯೂ ಸಿಡಿಯಿತು. ಯೇಹುವು ರಥವನ್ನು ಅವಳ ಮೇಲೆ ಓಡಿಸಿದನು.
34 ಯೇಹುವು ಒಳಗೆ ಹೋಗಿ ತಿಂದು ಕುಡಿದನು. ಆಮೇಲೆ ಅವರಿಗೆ, “ನೀವು ಹೋಗಿ ಆ ಶಾಪಗ್ರಸ್ತ ಸ್ತ್ರೀಯ ಶವವನ್ನು ಕಂಡು, ಅವಳನ್ನು ಹೂಳಿಡಿರಿ. ಏಕೆಂದರೆ ಅವಳು ಅರಸನ ಮಗಳು,” ಎಂದನು. 35 ಅವರು ಅವಳನ್ನು ಹೂಳಿಡಲು ಹೋದಾಗ, ಅವಳ ತಲೆ ಬುರುಡೆಯೂ, ಕಾಲುಗಳೂ, ಅಂಗೈಗಳೂ ಹೊರತು ಮತ್ತೇನೂ ಕಾಣಲಿಲ್ಲ. ಆದ್ದರಿಂದ ಅವರು ತಿರುಗಿಬಂದು ಅವನಿಗೆ ತಿಳಿಸಿದರು. 36 ಅದಕ್ಕವನು, “ಯೆಹೋವ ದೇವರು ತಮ್ಮ ಸೇವಕನಾಗಿರುವ ತಿಷ್ಬೀಯನಾದ ಎಲೀಯನ ಮುಖಾಂತರ ಹೇಳಿದ ವಾಕ್ಯವು ಇದೇ: ಇಜ್ರೆಯೇಲ್ ಊರಿನ ಹೊಲದಲ್ಲಿ ನಾಯಿಗಳು ಈಜೆಬೆಲಳ ಮಾಂಸವನ್ನು ತಿನ್ನುವುವು. 37 ಇದಲ್ಲದೆ ಇದೇ ಈಜೆಬೆಲಳೆಂದು ಗುರುತು ಸಿಕ್ಕದ ಹಾಗೆ ಇಜ್ರೆಯೇಲಿನ ಹೊಲದಲ್ಲಿ ಈಜೆಬೆಲಳ ಹೆಣ ಗೊಬ್ಬರದ ಹಾಗೆ ಇರುವುದು,” ಎಂದನು.