15
ಕಳೆದುಹೋದ ಕುರಿಯ ಸಾಮ್ಯ
ಅನೇಕ ಸುಂಕದವರೂ ಪಾಪಿಗಳೆನ್ನಿಸಿಕೊಂಡವರೂ ಯೇಸುವಿನ ಉಪದೇಶವನ್ನು ಕೇಳಲು ಅವರ ಸಮೀಪಕ್ಕೆ ಬಂದರು. ಫರಿಸಾಯರು ಮತ್ತು ನಿಯಮ ಬೋಧಕರು, “ಈತನು ಪಾಪಿಗಳನ್ನು ಸ್ವೀಕರಿಸಿ ಅವರೊಂದಿಗೆ ಊಟಮಾಡುತ್ತಾನೆ,” ಎಂದು ಗೊಣಗುಟ್ಟಿದರು.
ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದರು: “ನಿಮ್ಮಲ್ಲಿ ಯಾವ ಮನುಷ್ಯನು ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದನ್ನು ಕಳೆದುಕೊಂಡರೆ, ಅವನು ತೊಂಬತ್ತೊಂಬತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲಿ ಬಿಟ್ಟು ಕಳೆದುಹೋದ ಆ ಒಂದು ಕುರಿ ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದಿರುವನೇ? ಅದು ಸಿಕ್ಕಿದ ಮೇಲೆ ಸಂತೋಷಪಡುತ್ತಾ ಅದನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು, ಅವನು ಮನೆಗೆ ಬಂದು, ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು ಅವರಿಗೆ, ‘ನನ್ನ ಸಂಗಡ ಸಂತೋಷಪಡಿರಿ; ಕಳೆದುಹೋದ ಕುರಿ ನನಗೆ ಸಿಕ್ಕಿತು ಎನ್ನುವನು.’ ಅದರಂತೆಯೇ, ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಲು ಅವಶ್ಯವಿಲ್ಲದ ತೊಂಬತ್ತೊಂಬತ್ತು ನೀತಿವಂತರಿಗಿಂತ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಬಹಳ ಸಂತೋಷ ಉಂಟಾಗುವುದು ಎಂದು ನಾನು ನಿಮಗೆ ಹೇಳುತ್ತೇನೆ.
ಕಳೆದುಹೋದ ನಾಣ್ಯ
“ಒಬ್ಬ ಸ್ತ್ರೀಯು ತನ್ನ ಬಳಿ ಹತ್ತು ಬೆಳ್ಳಿಯ ನಾಣ್ಯವಿರಲಾಗಿ,* ಒಂದು ನಾಣ್ಯವನ್ನು ಕಳೆದುಕೊಂಡರೆ, ಅವಳು ದೀಪಹಚ್ಚಿ ಮನೆಯನ್ನು ಗುಡಿಸಿ, ಅದು ಸಿಕ್ಕುವವರೆಗೆ ಜಾಗ್ರತೆಯಿಂದ ಹುಡುಕುವುದಿಲ್ಲವೇ? ಅವಳು ಅದನ್ನು ಕಂಡುಕೊಂಡ ಮೇಲೆ, ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ಅವರಿಗೆ, ‘ಕಳೆದುಹೋದ ನಾಣ್ಯವು ಸಿಕ್ಕಿತು; ನನ್ನ ಸಂಗಡ ಸಂತೋಷಪಡಿರಿ,’ ಎನ್ನುವಳು. 10 ಅದೇ ಪ್ರಕಾರ, ಪಶ್ಚಾತ್ತಾಪಪಟ್ಟು ದೇವರ ಕಡೆ ತಿರುಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವುದು, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
ತಪ್ಪಿಹೋದ ಮಗನು
11 ಇನ್ನೂ ಯೇಸು ಹೇಳಿದ್ದು: “ಒಬ್ಬ ಮನುಷ್ಯನಿಗೆ ಇಬ್ಬರು ಪುತ್ರರಿದ್ದರು. 12 ಅವರಲ್ಲಿ ಕಿರಿಯವನು ತನ್ನ ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು,’ ಎಂದನು. ಆಗ ತಂದೆ ತನ್ನ ಆಸ್ತಿಯನ್ನು ಅವರಿಬ್ಬರಿಗೂ ಪಾಲು ಮಾಡಿಕೊಟ್ಟನು.
13 “ಕೆಲವೇ ದಿನಗಳಲ್ಲಿ, ಕಿರಿಯ ಮಗನು ಎಲ್ಲವನ್ನೂ ಕೂಡಿಸಿಕೊಂಡು, ದೂರದೇಶಕ್ಕೆ ಪ್ರಯಾಣಮಾಡಿ, ಅಲ್ಲಿ ದುಂದು ವೆಚ್ಚದ ಜೀವನ ಮಾಡಿ ತನ್ನ ಆಸ್ತಿಯನ್ನು ಹಾಳು ಮಾಡಿಕೊಂಡನು. 14 ಅವನು ಎಲ್ಲವನ್ನೂ ಹಾಳುಮಾಡಿದ ಮೇಲೆ, ಆ ದೇಶದಾದ್ಯಂತ ಘೋರವಾದ ಕ್ಷಾಮವು ಬಂದು, ಕೊರತೆಪಡಲಾರಂಭಿಸಿದನು. 15 ಆಗ ಅವನು ಹೋಗಿ ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿಕೊಂಡನು, ಆ ಮನುಷ್ಯನು ಹಂದಿಗಳನ್ನು ಮೇಯಿಸುವುದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. 16 ಅವನು ಹಂದಿಗಳು ತಿನ್ನುತ್ತಿದ್ದ ಸಿಪ್ಪೆಗಳಿಂದಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕೆ ಆಶೆಪಟ್ಟನು, ಆದರೆ ಅದನ್ನು ಸಹ ಅವನಿಗೆ ಯಾರೂ ಕೊಡಲಿಲ್ಲ.
17 “ಆಗ ಅವನಿಗೆ ಬುದ್ಧಿ ಬಂದು, ‘ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿಯೂ ಉಳಿಯುವಷ್ಟು ಆಹಾರವಿದೆಯಲ್ಲಾ, ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಿದ್ದೇನೆ! 18 ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ, ಆತನಿಗೆ: ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿಮಗೆ ವಿರೋಧವಾಗಿಯೂ ನಾನು ಪಾಪಮಾಡಿದ್ದೇನೆ. 19 ಇನ್ನೆಂದಿಗೂ ನಾನು ನಿಮ್ಮ ಮಗನೆಂದು ಕರೆಸಿಕೊಳ್ಳುವುದಕ್ಕೆ ಯೋಗ್ಯನಲ್ಲ; ನನ್ನನ್ನು ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎನ್ನುವೆನು,’ ಎಂದುಕೊಂಡು, 20 ಎದ್ದು ತನ್ನ ತಂದೆಯ ಬಳಿಗೆ ಹೋದನು.
“ಆದರೆ ಅವನು ಇನ್ನೂ ಬಹಳ ದೂರದಲ್ಲಿರುವಾಗಲೇ, ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು, ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಮುದ್ದಿಟ್ಟನು.
21 “ಆದರೂ ಮಗನು ತಂದೆಗೆ, ‘ಅಪ್ಪಾ, ನಾನು ಪರಲೋಕಕ್ಕೆ ವಿರೋಧವಾಗಿಯೂ ನಿಮ್ಮ ಮುಂದೆಯೂ ಪಾಪಮಾಡಿದ್ದೇನೆ. ಇನ್ನೆಂದಿಗೂ ನಾನು ನಿಮ್ಮ ಮಗನೆಂದು ಕರೆಯಿಸಿಕೊಳ್ಳಲು ಯೋಗ್ಯನಲ್ಲ,’ ಎಂದನು.
22 “ಆದರೆ ತಂದೆಯು ತನ್ನ ಸೇವಕರಿಗೆ, ‘ಶ್ರೇಷ್ಠವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಇವನ ಬೆರಳಿಗೆ ಉಂಗುರವನ್ನು ತೊಡಿಸಿರಿ, ಪಾದಗಳಿಗೆ ಪಾದರಕ್ಷೆಗಳನ್ನೂ ಮೆಟ್ಟಿಸಿರಿ. 23 ಇದಲ್ಲದೆ ವಿಶೇಷ ಆಹಾರವನ್ನು ತಂದು ಕೊಯ್ದು ವಿಶೇಷ ಔತಣವನ್ನು ಬೇಗ ಸಿದ್ಧಮಾಡಿರಿ. ನಾವು ಉಂಡು ಸಂತೋಷಪಡೋಣ. 24 ಏಕೆಂದರೆ ಈ ನನ್ನ ಮಗನು ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ,’ ಎಂದು ಹೇಳಿದನು. ಹೀಗೆ ಅವರು ಅವನ ಬರುವಿಕೆಯನ್ನು ಆಚರಿಸತೊಡಗಿದರು.
25 “ಆಗ, ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿದ್ದಾಗ, ನರ್ತನವನ್ನೂ ವಾದ್ಯವನ್ನೂ ಕೇಳಿ, 26 ಸೇವಕರಲ್ಲಿ ಒಬ್ಬನನ್ನು ಕರೆದು, ‘ಇವುಗಳು ಏನು?’ ಎಂದು ಕೇಳಿದನು. 27 ಆ ಸೇವಕನು ಅವನಿಗೆ, ‘ನಿನ್ನ ತಮ್ಮನು ಬಂದಿದ್ದಾನೆ, ನಿನ್ನ ತಂದೆಯು ಅವನು ಸುರಕ್ಷಿತವಾಗಿ ಮತ್ತು ಸೌಖ್ಯವಾಗಿ ಹಿಂದಿರುಗಿದ್ದರಿಂದ, ವಿಶೇಷ ಔತಣವನ್ನು ಮಾಡಿಸಿದ್ದಾನೆ,’ ಎಂದನು.
28 “ಅದಕ್ಕೆ ಹಿರಿಯ ಮಗನು ಕೋಪಗೊಂಡು ಒಳಗೆ ಹೋಗಲು ಇಷ್ಟಪಡಲಿಲ್ಲ. ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು. 29 ಆದರೆ ಅವನು ಉತ್ತರವಾಗಿ ತನ್ನ ತಂದೆಗೆ, ‘ಎಷ್ಟೋ ವರ್ಷಗಳಿಂದ ನಾನು ನಿನ್ನ ಸೇವೆ ಮಾಡುತ್ತಿದ್ದೇನೆ. ನಾನು ನಿನ್ನ ಒಂದು ಅಪ್ಪಣೆಯನ್ನಾದರೂ ಎಂದೂ ಮೀರಲಿಲ್ಲ. ಆದರೂ ನಾನು ನನ್ನ ಸ್ನೇಹಿತರೊಂದಿಗೆ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಮೇಕೆಯ ಮರಿಯನ್ನಾದರೂ ಕೊಡಲಿಲ್ಲ. 30 ಆದರೆ ನಿನ್ನ ಆಸ್ತಿಯನ್ನು ವೇಶ್ಯೆಯರೊಂದಿಗೆ ನುಂಗಿಬಿಟ್ಟ ಈ ನಿನ್ನ ಮಗನು ಬಂದಾಗ, ವಿಶೇಷ ಔತಣವನ್ನೇ ಮಾಡಿಸಿದ್ದೀಯಲ್ಲಾ!’ ಎಂದನು.
31 “ಆಗ ತಂದೆ, ‘ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ನನಗಿರುವುದೆಲ್ಲವೂ ನಿನ್ನದೇ. 32 ಆದರೆ ಈ ನಿನ್ನ ತಮ್ಮ ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಉಲ್ಲಾಸಪಟ್ಟು ಆನಂದಪಡುವುದು ಯುಕ್ತವಾದದ್ದೇ ಎಂದು ಹೇಳಿದನು.’ ”
* 15:8 ಒಂದು ದ್ರಹ್ಮ ನಾಣ್ಯದ ಮೌಲ್ಯವು, ಒಂದು ದಿನದ ಕೂಲಿ 15:23 ಮೂಲಭಾಷೆಯಲ್ಲಿ ಕೊಬ್ಬಿಸಿದ ಕರು