17
ಪಾಪ, ವಿಶ್ವಾಸ, ಕರ್ತವ್ಯ
ಯೇಸು ತಮ್ಮ ಶಿಷ್ಯರಿಗೆ: “ಜನರಿಗೆ ಪಾಪದ ಶೋಧನೆಗಳು ಬಂದೇ ಬರುತ್ತವೆ, ಆದರೆ ಅವು ಯಾರಿಂದ ಬರುತ್ತವೋ ಅವರಿಗೆ ಕಷ್ಟ. ಅಂಥವರು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ನಡೆಸುವುದಕ್ಕಿಂತ ಅವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದೊಳಗೆ ಬಿಸಾಡುವುದು ಉತ್ತಮವಾಗಿರುವುದು. ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಿಂದಿರಿ.
“ನಿನ್ನ ಸಹೋದರನು ಅಥವಾ ಸಹೋದರಿ ನಿನಗೆ ವಿರೋಧವಾಗಿ ಪಾಪಮಾಡಿದರೆ, ಅವರನ್ನು ಗದರಿಸು; ಅವರು ಪಶ್ಚಾತ್ತಾಪಪಟ್ಟರೆ, ಅವರನ್ನು ಕ್ಷಮಿಸು. ಅವರು ಒಂದು ದಿನದಲ್ಲಿ ಏಳು ಸಾರಿ ಪಾಪಮಾಡಿ, ಏಳು ಸಾರಿಯೂ ನಿನ್ನ ಬಳಿಗೆ ಬಂದು, ‘ನಾನು ಪಶ್ಚಾತ್ತಾಪಪಡುತ್ತೇನೆ,’ ಎಂದು ಹೇಳಿದರೆ ನೀನು ಅವರನ್ನು ಕ್ಷಮಿಸಬೇಕು,” ಎಂದರು.
ಆಗ ಅಪೊಸ್ತಲರು ಕರ್ತದೇವರಿಗೆ, “ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ,” ಎಂದರು.
ಅದಕ್ಕೆ ಯೇಸು, “ಸಾಸಿವೆ ಕಾಳಿನಷ್ಟು ನಂಬಿಕೆ ನಿಮಗಿರುವುದಾದರೆ, ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ,’ ಎಂದು ಹೇಳುವುದಾದರೆ ಅದು ನಿಮಗೆ ವಿಧೇಯವಾಗುವುದು.
“ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಕೆಲಸದವನಿರಲಾಗಿ, ಅವನು ಹೊಲದ ಕೆಲಸ ಅಥವಾ ಕುರಿ ಮೇಯಿಸಿ ಮನೆಗೆ ಬಂದ ಕೂಡಲೇ ಯಜಮಾನನು ಕೆಲಸದವನಿಗೆ, ‘ಬಾ ಊಟಕ್ಕೆ ಕುಳಿತುಕೋ,’ ಎಂದು ಹೇಳುವುದುಂಟೇ? ಹಾಗೆ ಹೇಳದೆ, ‘ನೀನು ಊಟ ತಯಾರುಮಾಡಿ, ನೀನೂ ಸಿದ್ಧವಾಗಿ, ನಾನು ತಿಂದು ಕುಡಿಯುವ ತನಕ ನನ್ನ ಸೇವೆಮಾಡು; ಆಮೇಲೆ ನೀನು ಊಟಮಾಡು,’ ಎಂದು ಅವನಿಗೆ ಹೇಳುವಿರಲ್ಲವೇ? ತನಗೆ ಅಪ್ಪಣೆ ಕೊಟ್ಟವುಗಳನ್ನು ಆ ಕೆಲಸದವನು ಮಾಡಿದ್ದಕ್ಕೆ ಯಜಮಾನನು ಅವನಿಗೆ ಕೃತಜ್ಞತೆ ಸಲ್ಲಿಸುವನೋ? 10 ಅದೇ ರೀತಿಯಾಗಿ, ನಿಮಗೆ ಆಜ್ಞಾಪಿಸಿದವುಗಳನ್ನೆಲ್ಲಾ ನೀವು ಮಾಡಿದ ಮೇಲೆ, ‘ನಾವು ಅಯೋಗ್ಯರಾದ ಆಳುಗಳಷ್ಟೇ, ನಾವು ಮಾಡಬೇಕಾದ ಕರ್ತವ್ಯವನ್ನೇ ಮಾಡಿದ್ದೇವೆ ಎಂದು ನೀವು ಹೇಳಿರಿ,’ ” ಎಂದು ಹೇಳಿದರು.
ಯೇಸು ಹತ್ತು ಕುಷ್ಠರೋಗಿಗಳನ್ನು ಗುಣಪಡಿಸಿದ್ದು
11 ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ, ಸಮಾರ್ಯ ಮತ್ತು ಗಲಿಲಾಯ ಪ್ರಾಂತಗಳ ಮಧ್ಯದಲ್ಲಿದ್ದ ಹಳ್ಳಿಯ ಮಾರ್ಗವಾಗಿ ಪ್ರಯಾಣಮಾಡಿದರು. 12 ಯೇಸು ಒಂದು ಹಳ್ಳಿಯನ್ನು ಪ್ರವೇಶಿಸಿದಾಗ, ಹತ್ತು ಮಂದಿ ಕುಷ್ಠರೋಗಿಗಳು ಯೇಸುವಿನ ಕಡೆಗೆ ಬಂದು ದೂರದಲ್ಲಿ ನಿಂತುಕೊಂಡು, 13 “ಯೇಸುವೇ, ಗುರುವೇ, ನಮ್ಮನ್ನು ಕರುಣಿಸು!” ಎಂದು ತಮ್ಮ ಧ್ವನಿಯೆತ್ತಿ ಕೂಗಿದರು.
14 ಯೇಸು ಅವರನ್ನು ನೋಡಿ, “ಹೋಗಿ, ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿರಿ,”* ಎಂದರು. ಅವರು ಹೋಗುತ್ತಿರುವಾಗಲೇ ಸ್ವಸ್ಥರಾದರು.
15 ಅವರಲ್ಲಿ ಒಬ್ಬನು, ತಾನು ಸ್ವಸ್ಥವಾದದ್ದನ್ನು ಕಂಡು, ಮಹಾಶಬ್ದದಿಂದ ದೇವರನ್ನು ಮಹಿಮೆಪಡಿಸುತ್ತಾ ಹಿಂದಿರುಗಿ ಬಂದು, 16 ಯೇಸುವಿನ ಪಾದಕ್ಕೆ ಅಡ್ಡಬಿದ್ದು, ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದನು. ಅವನೋ ಸಮಾರ್ಯದವನಾಗಿದ್ದನು.
17 ಯೇಸು ಅವನಿಗೆ, “ಆ ಎಲ್ಲಾ ಹತ್ತು ಮಂದಿ ಸ್ವಸ್ಥರಾದರಲ್ಲವೆ? ಉಳಿದ ಒಂಬತ್ತು ಮಂದಿ ಎಲ್ಲಿ? 18 ದೇವರನ್ನು ಮಹಿಮೆಪಡಿಸುವುದಕ್ಕೆ ಈ ವಿದೇಶಿಯೇ ಹೊರತು ಯಾರೂ ಹಿಂದಿರುಗಲಿಲ್ಲವೇ?” 19 ಎಂದು ಹೇಳಿ ಅವನಿಗೆ, “ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು.
ದೇವರ ರಾಜ್ಯದ ಬರುವಿಕೆ
20 ಒಂದು ದಿನ, ದೇವರ ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಯೇಸುವನ್ನು ಕೇಳಲು, ಅವರಿಗೆ ಉತ್ತರವಾಗಿ ಯೇಸು, “ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವುದಿಲ್ಲ, 21 ‘ಇಗೋ ಇಲ್ಲಿದೆ,’ ಇಲ್ಲವೆ ‘ಅಗೋ ಅಲ್ಲಿದೆ,’ ಎಂದು ಹೇಳುವುದಕ್ಕಾಗುವುದಿಲ್ಲ ಏಕೆಂದರೆ ದೇವರ ರಾಜ್ಯವು ನಿಮ್ಮ ನಡುವೆ ಇದೆ,” ಎಂದರು.
22 ಯೇಸು ತಮ್ಮ ಶಿಷ್ಯರಿಗೆ, “ಮನುಷ್ಯಪುತ್ರನಾದ ನನ್ನ ದಿವಸಗಳಲ್ಲಿ ಒಂದನ್ನು ಕಾಣಬೇಕೆಂದು ನೀವು ಬಯಸುವ ಕಾಲ ಬರುತ್ತದೆ, ಆದರೂ ನೀವು ಅದನ್ನು ಕಾಣುವುದಿಲ್ಲ. 23 ಜನರು ನಿಮಗೆ, ‘ಇಲ್ಲಿ ಇದ್ದಾನೆ!’ ಇಲ್ಲವೆ, ‘ಅಲ್ಲಿ ಇದ್ದಾನೆ’ ಎಂದು ಹೇಳಿದರೆ ಅವರ ಹಿಂದೆ ಓಡಬೇಡಿರಿ. 24 ಏಕೆಂದರೆ ಮಿಂಚು ಆಕಾಶದ ಒಂದು ಭಾಗದಲ್ಲಿ ಮಿಂಚಿ ಮತ್ತೊಂದು ಭಾಗದಲ್ಲಿ ಹೇಗೆ ಹೊಳೆಯುತ್ತದೆಯೋ ಹಾಗೆಯೇ ಮನುಷ್ಯಪುತ್ರನಾದ ನಾನು ಬರುವ ದಿನದಲ್ಲಿ ಕಾಣಿಸಿಕೊಳ್ಳುವೆನು. 25 ಆದರೆ ನಾನು ಮೊದಲು ಅನೇಕ ಕಷ್ಟಗಳನ್ನು ಅನುಭವಿಸಿ ಈ ಸಂತತಿಯವರಿಂದ ತಿರಸ್ಕಾರ ಹೊಂದುವುದು ಅಗತ್ಯವಾಗಿದೆ.
26 “ನೋಹನ ದಿವಸಗಳು ಇದ್ದಂತೆಯೇ, ಅದೇ ರೀತಿಯಲ್ಲಿ ಮನುಷ್ಯಪುತ್ರನಾದ ನನ್ನ ದಿವಸಗಳಲ್ಲಿಯೂ ಇರುವುದು. 27 ನೋಹನು ನಾವೆಯಲ್ಲಿ ಸೇರಿದ ದಿನದವರೆಗೂ ಅವರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ, ಮದುವೆ ಮಾಡಿಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ನಾವೆಯ ಹೊರಗಡೆ ಇದ್ದವರೆಲ್ಲರನ್ನು ನಾಶಮಾಡಿತು.
28 “ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಜನರೆಲ್ಲರೂ ತಿನ್ನುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.§ 29 ಆದರೆ ಲೋಟನು ಸೊದೋಮಿನಿಂದ ತೆರಳಿದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಮಾಡಿತು.
30 “ಮನುಷ್ಯಪುತ್ರನಾದ ನನ್ನ ಪ್ರತ್ಯಕ್ಷತೆಯ ದಿನದಲ್ಲಿಯೂ ಹಾಗೆ ಇರುವುದು. 31 ಆ ದಿನದಲ್ಲಿ ಮನೆಯ ಮಾಳಿಗೆಯ ಮೇಲೆ ಇದ್ದವನು, ಮನೆಯಲ್ಲಿದ್ದ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಕೆಳಗಿಳಿದು ಬರಬಾರದು. ಹಾಗೆಯೇ, ಹೊಲದಲ್ಲಿದ್ದವನು ಹಿಂದಿರುಗಿ ಬರಬಾರದು. 32 ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ! 33 ಯಾರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುವರೋ ಅವರು ಅದನ್ನು ಕಳೆದುಕೊಳ್ಳುವರು ಮತ್ತು ಯಾರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವರೋ ಅವರು ಅದನ್ನು ಕಾಪಾಡಿಕೊಳ್ಳುವರು. 34 ಆ ರಾತ್ರಿಯಲ್ಲಿ ಇಬ್ಬರು ಒಂದೇ ಹಾಸಿಗೆಯಲ್ಲಿ ಇರುವರು; ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. 35 ಇಬ್ಬರು ಹೆಂಗಸರು ಜೊತೆಯಾಗಿ ಕಾಳುಬೀಸುತ್ತಿರುವರು; ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬಳನ್ನು ಬಿಡಲಾಗುವುದು. 36 ಇಬ್ಬರು ಹೊಲದಲ್ಲಿರುವರು. ಒಬ್ಬರನ್ನು ತೆಗೆದುಕೊಳ್ಳಲಾಗುವುದು ಮತ್ತೊಬ್ಬರನ್ನು ಬಿಡಲಾಗುವುದು,* ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
37 ಅವರು ಯೇಸುವಿಗೆ, “ಕರ್ತದೇವರೇ, ಇದು ಎಲ್ಲಿ ನಡೆಯುವುದು?” ಎಂದು ಕೇಳಲು ಯೇಸು ಅವರಿಗೆ,
“ಹೆಣ ಎಲ್ಲಿದೆಯೋ, ಅಲ್ಲಿ ಹದ್ದುಗಳು ಬಂದು ಸೇರುತ್ತವೆ,” ಎಂದರು.
* 17:14 ಯಾಜಕ 14:2-32 17:21 ಅಥವಾ ನಿಮ್ಮೊಳಗೇ 17:26 ಆದಿ 7 ನೋಡಿರಿ § 17:28 ಆದಿ 19 ನೋಡಿರಿ * 17:36 ಕೆಲವು ಮೂಲ ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.