16
ದೋಷಪರಿಹಾರಕ ಮಹಾದಿನ
ಆರೋನನ ಇಬ್ಬರು ಗಂಡು ಮಕ್ಕಳು ಯೆಹೋವ ದೇವರ ಸನ್ನಿಧಿಗೆ ಬಂದು ಸತ್ತಾಗ ಮೋಶೆಯಂದಿಗೆ ಯೆಹೋವ ದೇವರು ಮಾತನಾಡಿದರು. ಆಗ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನಿನ್ನ ಅಣ್ಣನಾದ ಆರೋನನು ಮಂಜೂಷದ ಮೇಲಿರುವ ಕರುಣಾಸನದ ಮುಂದಿರುವ ತೆರೆಯ ಒಳಗೆ ಮಹಾಪರಿಶುದ್ಧ ಸ್ಥಳಕ್ಕೆ ಎಲ್ಲಾ ಸಮಯಗಳಲ್ಲಿ ಬಾರದಿರಲಿ, ಇಲ್ಲವಾದರೆ ಅವನು ಸಾಯುತ್ತಾನೆ, ಏಕೆಂದರೆ ಕರುಣಾಸನದ ಮೇಲೆ ಮೇಘದೊಳಗೆ ನಾನು ಪ್ರತ್ಯಕ್ಷನಾಗುವೆನು.
“ಈ ಸೂಚನೆಗಳನ್ನು ಸಂಪೂರ್ಣವಾಗಿ ಅನುಸರಿಸಿದ ನಂತರವೇ ಆರೋನನು ಮಹಾಪರಿಶುದ್ಧ ಸ್ಥಳಕ್ಕೆ ಪ್ರವೇಶಿಸಬೇಕು: ಪಾಪ ಪರಿಹಾರದ ಬಲಿಗಾಗಿ ಒಂದು ಹೋರಿಯನ್ನು ಮತ್ತು ದಹನಬಲಿಗಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು. ಅವನು ಪರಿಶುದ್ಧವಾದ ನಾರುಬಟ್ಟೆಯ ಮೇಲಂಗಿಯನ್ನು ತೊಟ್ಟುಕೊಂಡು, ತನ್ನ ಶರೀರದ ಮೇಲೆ ನಾರುಬಟ್ಟೆಯ ಒಳಉಡುಪನ್ನು ಹಾಕಿಕೊಳ್ಳಬೇಕು ಮತ್ತು ನಾರಿನ ನಡುಕಟ್ಟನ್ನು ಕಟ್ಟಿಕೊಂಡು, ನಾರಿನ ಮುಂಡಾಸವನ್ನು ಧರಿಸಬೇಕು. ಇವು ಪವಿತ್ರವಾದ ಉಡುಪುಗಳು. ಆದಕಾರಣ ಅವನು ನೀರಿನಿಂದ ಸ್ನಾನಮಾಡಿ ಅವುಗಳನ್ನು ಧರಿಸಿಕೊಳ್ಳಬೇಕು. ಅವನು ಇಸ್ರಾಯೇಲರ ಸಭೆಯ ಕಡೆಯಿಂದ ಪಾಪ ಪರಿಹಾರದ ಬಲಿಗಾಗಿ ಎರಡು ಹೋತಗಳನ್ನು, ದಹನಬಲಿಗಾಗಿ ಒಂದು ಟಗರನ್ನೂ ತೆಗೆದುಕೊಳ್ಳಬೇಕು.
“ಇದಲ್ಲದೆ ಆರೋನನು ತನಗೋಸ್ಕರ ಪಾಪ ಪರಿಹಾರದ ಬಲಿಗಾಗಿ ತನ್ನ ಹೋರಿಯನ್ನು ಸಮರ್ಪಿಸಿ, ತನ್ನ ಮನೆಯವರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು. ಅವನು ಎರಡು ಹೋತಗಳನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ತಂದು, ಅವುಗಳನ್ನು ಯೆಹೋವ ದೇವರ ಎದುರಿನಲ್ಲಿ ನಿಲ್ಲಿಸಬೇಕು. ಆರೋನನು ಆ ಎರಡು ಹೋತಗಳಿಗಾಗಿ ಚೀಟುಹಾಕಬೇಕು. ಒಂದು ಚೀಟು ಯೆಹೋವ ದೇವರಿಗೋಸ್ಕರ, ಮತ್ತೊಂದು ಚೀಟು ಬಲಿಪಶುವಿಗೋಸ್ಕರ. ಆರೋನನು ಯೆಹೋವ ದೇವರ ಚೀಟು ಬಿದ್ದ ಹೋತವನ್ನು ತಂದು, ಅದನ್ನು ಪಾಪ ಪರಿಹಾರದ ಬಲಿಗಾಗಿ ಸಮರ್ಪಿಸಬೇಕು. 10 ಆದರೆ ಬಲಿಪಶುವಿಗಾಗಿ ಚೀಟು ಬಿದ್ದ ಆ ಹೋತವನ್ನು ತನ್ನೊಂದಿಗೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ಸಜೀವವಾಗಿ ನಿಲ್ಲಿಸಿ, ಅದನ್ನು ಬಲಿಪಶುವಾಗಿ ಕಾಡಿನಲ್ಲಿ ಹೋಗುವಂತೆ ಬಿಟ್ಟುಬಿಡಬೇಕು.
11 “ಇದಲ್ಲದೆ ಆರೋನನು ಪಾಪ ಪರಿಹಾರದ ಬಲಿಯಾಗಿರುವ ಹೋರಿಯನ್ನು ತಂದು, ತನಗೋಸ್ಕರ ಮತ್ತು ತನ್ನ ಮನೆತನದವರಿಗೋಸ್ಕರ ಪ್ರಾಯಶ್ಚಿತ್ತ ಮಾಡಬೇಕು. ತನಗೋಸ್ಕರ ದೋಷಪರಿಹಾರಕ ಬಲಿಯಾಗಿ ಆ ಹೋರಿಯನ್ನು ವಧಿಸಬೇಕು. 12 ಅವನು ಯೆಹೋವ ದೇವರ ಸನ್ನಿಧಿಯಲ್ಲಿರುವ ಬಲಿಪೀಠದಿಂದ ಬೆಂಕಿಯ ಕೆಂಡಗಳನ್ನು ಧೂಪ ಸುಡುವ ಪಾತ್ರೆಯಲ್ಲಿ ತುಂಬಿಸಿ, ತನ್ನ ಎರಡು ಕೈತುಂಬ ಪರಿಮಳ ಧೂಪದ್ರವ್ಯದ ಚೂರ್ಣವನ್ನು ತೆಗೆದುಕೊಂಡು, ತೆರೆಯನ್ನು ದಾಟಿ ತರಬೇಕು. 13 ಅವನು ಸಾಯದ ಹಾಗೆ ಆ ಧೂಪದ ಹೊಗೆಯು ಸಾಕ್ಷಿಯ ಮೇಲಿರುವ ಕರುಣಾಸನವು ಮುಚ್ಚಿಕೊಳ್ಳುವಂತೆ ಆ ಧೂಪವನ್ನು ಯೆಹೋವ ದೇವರ ಎದುರಿನಲ್ಲಿ ಬೆಂಕಿಯ ಮೇಲೆ ಹಾಕಬೇಕು. 14 ಆ ಹೋರಿಯ ರಕ್ತದಿಂದ ಸ್ವಲ್ಪ ತೆಗೆದುಕೊಂಡು, ಕರುಣಾಸನದ ಮೇಲೆ ಪೂರ್ವಕ್ಕೆ ತನ್ನ ಬೆರಳಿನಿಂದ ಚಿಮುಕಿಸಬೇಕು, ಕರುಣಾಸನದ ಮುಂದೆ ಆ ರಕ್ತವನ್ನು ತನ್ನ ಬೆರಳಿನಿಂದ ಏಳು ಸಾರಿ ಚಿಮುಕಿಸಬೇಕು.
15 “ತರುವಾಯ ಅವನು ಜನರಿಗೋಸ್ಕರ ಪಾಪ ಪರಿಹಾರದ ಬಲಿಯಾಗಿರುವ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯ ಒಳಗಡೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಕರುಣಾಸನದ ಮೇಲೆಯೂ, ಕರುಣಾಸನದ ಮುಂದೆಯೂ ಚಿಮುಕಿಸಬೇಕು. 16 ಇಸ್ರಾಯೇಲರ ಅಶುದ್ಧತ್ವದ ನಿಮಿತ್ತವಾಗಿಯೂ, ಎಲ್ಲಾ ಅಪರಾಧಗಳಿಗಾಗಿಯೂ ಅವನು ಮಹಾಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಅವರು ಅಶುದ್ಧತ್ವದ ಮಧ್ಯದಲ್ಲಿ ಉಳಿದವರಿಗೋಸ್ಕರ ದೇವದರ್ಶನದ ಗುಡಾರಕ್ಕೂ ಅದರಂತೆಯೇ ಮಾಡಬೇಕು. 17 ಅವನು ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಮಹಾಪರಿಶುದ್ಧ ಸ್ಥಳಕ್ಕೆ ಹೋಗಿರುವಾಗ ತನಗೋಸ್ಕರವೂ, ತನ್ನ ಮನೆಯವರಿಗೆಲ್ಲರಿಗೋಸ್ಕರವೂ, ಇಸ್ರಾಯೇಲರ ಸಭೆಯವರೆಲ್ಲರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಿ ಹೊರಗೆ ಬರುವ ತನಕ ದೇವದರ್ಶನದ ಗುಡಾರದಲ್ಲಿ ಒಬ್ಬ ಮನುಷ್ಯನೂ ಇರಬಾರದು.
18 “ಅವನು ಯೆಹೋವ ದೇವರ ಎದುರಿನಲ್ಲಿರುವ ಬಲಿಪೀಠದ ಬಳಿಗೆ ಬಂದು, ಅದಕ್ಕೋಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಹೋರಿಯ ರಕ್ತವನ್ನೂ, ಹೋತದ ರಕ್ತವನ್ನೂ ತೆಗೆದುಕೊಂಡು ಬಲಿಪೀಠದ ಸುತ್ತಲೂ ಇರುವ ಕೊಂಬುಗಳಿಗೆ ಹಚ್ಚಬೇಕು. 19 ಅವನು ಏಳು ಸಾರಿ ಅದರ ಮೇಲೆ ರಕ್ತವನ್ನು ಚಿಮುಕಿಸಿ, ಅದನ್ನು ಶುದ್ಧಮಾಡಬೇಕು ಮತ್ತು ಇಸ್ರಾಯೇಲರ ಅಶುದ್ಧತೆಯನ್ನು ಹೋಗಲಾಡಿಸಿ, ಅದನ್ನು ಪರಿಶುದ್ಧ ಮಾಡಬೇಕು.
20 “ಹೀಗೆ ಮಹಾಪರಿಶುದ್ಧ ಸ್ಥಳಕ್ಕೂ, ಸಭೆಯ ಗುಡಾರಕ್ಕೂ, ಬಲಿಪೀಠಕ್ಕೂ ಸಂಧಾನದ ಕೊನೆಯಲ್ಲಿ ಅವನು ಒಂದು ಜೀವವುಳ್ಳ ಹೋತವನ್ನು ತರಬೇಕು. 21 ಆರೋನನು ಆ ಜೀವವುಳ್ಳ ಹೋತದ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು, ಅದರ ಮೇಲೆ ಇಸ್ರಾಯೇಲರ ಎಲ್ಲಾ ಅಕ್ರಮಗಳನ್ನೂ, ಅವರ ಎಲ್ಲಾ ಪಾಪಗಳಲ್ಲಿರುವ ದ್ರೋಹಗಳನ್ನೂ ಅರಿಕೆಮಾಡಿ ಅವುಗಳನ್ನು ಹೋತದ ತಲೆಯ ಮೇಲೆ ಇರಿಸಿ, ನೇಮಕವಾದ ಒಬ್ಬ ಮನುಷ್ಯನ ಕೈಯಿಂದ ಅದನ್ನು ಅಡವಿಯೊಳಗೆ ಕಳುಹಿಸಿಬಿಡಬೇಕು. 22 ಆ ಹೋತ ಅವರ ಎಲ್ಲಾ ಪಾಪಗಳನ್ನೂ ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಸ್ಥಳಕ್ಕೆ ತೆಗೆದುಕೊಂಡು ಹೋಗುವಂತೆ ಆ ಮನುಷ್ಯನು ಹೋತವನ್ನು ಅಡವಿಗೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
23 “ಆರೋನನು ದೇವದರ್ಶನದ ಗುಡಾರದೊಳಗೆ ಬಂದು, ತಾನು ಮಹಾಪರಿಶುದ್ಧ ಸ್ಥಳದೊಳಕ್ಕೆ ಹೋಗುವಾಗ ತೊಟ್ಟುಕೊಂಡಿದ್ದ ನಾರಿನ ಬಟ್ಟೆಗಳನ್ನು ತೆಗೆದುಹಾಕಿ ಅವುಗಳನ್ನು ಅಲ್ಲಿಯೇ ಬಿಡಬೇಕು. 24 ಅವನು ಪರಿಶುದ್ಧ ಸ್ಥಳದಲ್ಲಿ ನೀರಿನಲ್ಲಿ ಸ್ನಾನಮಾಡಿ, ತನ್ನ ಬಳಕೆಯ ಬಟ್ಟೆಗಳನ್ನು ಧರಿಸಿಕೊಂಡು, ಹೊರಗೆ ಬಂದು ತನ್ನ ದಹನಬಲಿಯನ್ನೂ, ಜನರ ದಹನಬಲಿಯನ್ನೂ ಸಮರ್ಪಿಸಿ ತನಗೋಸ್ಕರವೂ, ಜನರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು. 25 ಪಾಪ ಪರಿಹಾರದ ಬಲಿಯ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು.
26 “ಬಲಿಪಶುವಿಗಾಗಿ ಹೋತವನ್ನು ಹೋಗಲು ಬಿಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿದ ಮೇಲೆ ಅವನು ಪಾಳೆಯದೊಳಕ್ಕೆ ಬರಬೇಕು. 27 ಇದಲ್ಲದೆ ಮಹಾಪರಿಶುದ್ಧ ಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯಾವುದರ ರಕ್ತವು ತರಲಾಗಿತ್ತೋ, ಆ ಪಾಪ ಪರಿಹಾರದ ಬಲಿಯ ಹೋರಿಯನ್ನು ಮತ್ತು ದೋಷಪರಿಹಾರ ಬಲಿಯ ಹೋತವನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಅವುಗಳ ಚರ್ಮವನ್ನೂ, ಮಾಂಸವನ್ನೂ, ಸಗಣಿಯನ್ನೂ ಸುಡಬೇಕು. 28 ಅವುಗಳನ್ನು ಸುಡುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿದ ನಂತರ ಪಾಳೆಯದೊಳಕ್ಕೆ ಬರಬೇಕು.
29 “ಇದು ನಿಮಗೆ ಶಾಶ್ವತವಾದ ನಿಯಮ: ಸ್ವದೇಶೀಯರಾದ ನೀವೂ, ನಿಮ್ಮೊಡನೆ ವಾಸಿಸುತ್ತಿರುವ ಪರಕೀಯರೂ, ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಎಲ್ಲಾ ಕೆಲಸಗಳನ್ನು ಬಿಟ್ಟು, ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು. 30 ನೀವು ಯೆಹೋವ ದೇವರ ಸನ್ನಿಧಿಯಲ್ಲಿ ನಿಮ್ಮ ಎಲ್ಲಾ ಪಾಪಗಳಿಂದ ಶುದ್ಧರಾಗಿರುವಂತೆ ನಿಮ್ಮನ್ನು ಶುದ್ಧೀಕರಿಸುವ ಹಾಗೆ, ಆ ದಿನದಲ್ಲಿ ಯಾಜಕನು ನಿಮಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡುವನು. 31 ಇದೇ ನಿಮಗೆ ಸಬ್ಬತ್* ದಿನವಾಗಿರುವುದು. ನಿಮಗೆ ನಿತ್ಯವಾದ ನಿಯಮವಿರುವಂತೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. 32 ಯಾವನು ತನ್ನ ತಂದೆಯ ಬದಲಾಗಿ ಮಹಾಯಾಜಕ ಉದ್ಯೋಗಕ್ಕೋಸ್ಕರ ಅಭಿಷಿಕ್ತನಾಗಿ ಪ್ರತಿಷ್ಟಿಸಲಾಗಿದ್ದಾನೋ, ಆ ಮಹಾಯಾಜಕನು ಪ್ರಾಯಶ್ಚಿತ್ತವನ್ನು ಮಾಡಬೇಕು. ಅವನು ಪರಿಶುದ್ಧ ಉಡುಪುಗಳಾದ ನಾರು ಬಟ್ಟೆಗಳನ್ನು ಧರಿಸಿಕೊಳ್ಳಬೇಕು. 33 ಹೀಗೆ ಅವನು ಮಹಾಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಇದಲ್ಲದೆ ಸಭೆಯ ಗುಡಾರಕ್ಕಾಗಿಯೂ, ಬಲಿಪೀಠಕ್ಕಾಗಿಯೂ ಪ್ರಾಯಶ್ಚಿತ್ತ ಮಾಡಬೇಕು. ಯಾಜಕರಿಗಾಗಿಯೂ, ಸಭೆಯ ಎಲ್ಲಾ ಜನರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು.
34 “ಹೀಗೆ ಇಸ್ರಾಯೇಲರ ಎಲ್ಲಾ ಪಾಪಗಳಿಗಾಗಿ ವರ್ಷಕ್ಕೊಂದಾವರ್ತಿ ಪ್ರಾಯಶ್ಚಿತ್ತ ಮಾಡುವುದು, ನಿಮಗೆ ನಿರಂತರವಾದ ನಿಯಮವಾಗಿರುವುದು,” ಎಂದು ಹೇಳಿದರು.
ಯೆಹೋವ ದೇವರು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.
* 16:31 16:31 ಸಬ್ಬತ್ ಅಂದರೆ ವಿಶ್ರಾಂತಿಯ ದಿನ