10
ವಿವಾಹ ವಿಚ್ಛೇದನೆಯ ಕುರಿತು
ಯೇಸು ಅಲ್ಲಿಂದ ಹೊರಟು ಯೊರ್ದನ್ ನದಿಯ ಆಚೆಯ ಯೂದಾಯ ಪ್ರಾಂತಕ್ಕೆ ಬಂದರು. ಅಲ್ಲಿ ಜನರು ತಿರುಗಿ ಅವರ ಬಳಿಗೆ ಬರಲು, ಯೇಸು ತಮ್ಮ ವಾಡಿಕೆಯಂತೆ ಅವರಿಗೆ ಮತ್ತೆ ಬೋಧಿಸಿದರು.
ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಪರೀಕ್ಷಿಸುವುದಕ್ಕಾಗಿ ಯೇಸುವಿಗೆ, “ಒಬ್ಬ ಪುರುಷನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು.
ಯೇಸು ಉತ್ತರವಾಗಿ ಅವರಿಗೆ, “ಮೋಶೆಯು ನಿಮಗೆ ಏನು ಅಪ್ಪಣೆಕೊಟ್ಟನು?” ಎಂದು ಕೇಳಿದರು.
ಅದಕ್ಕೆ ಅವರು, “ವಿವಾಹ ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಅನುಮತಿ ಕೊಟ್ಟನು,” ಎಂದರು.
ಯೇಸು ಉತ್ತರವಾಗಿ ಅವರಿಗೆ, “ಮೋಶೆಯು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತವಾಗಿ ನಿಮಗೆ ಈ ಆಜ್ಞೆಯನ್ನು ಬರೆದನು. ಆದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು, ‘ಅವರನ್ನು ಗಂಡು ಹೆಣ್ಣಾಗಿ ಮಾಡಿದರು.’* ‘ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರೂ ಒಂದೇ ಶರೀರವಾಗಿರುವರು.’ ಹೀಗೆ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು,” ಎಂದರು.
10 ಶಿಷ್ಯರು ಮನೆಯಲ್ಲಿ ಅದೇ ವಿಷಯವನ್ನು ಯೇಸುವಿಗೆ ತಿರುಗಿ ಕೇಳಿದರು. 11 ಅದಕ್ಕೆ ಯೇಸು ಅವರಿಗೆ, “ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಯಾದರೆ, ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿದ್ದಾನೆ. 12 ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ, ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ,” ಎಂದರು.
ಯೇಸು ಚಿಕ್ಕಮಕ್ಕಳನ್ನು ಆಶೀರ್ವದಿಸಿದ್ದು
13 ಕೆಲವರು ತಮ್ಮ ಚಿಕ್ಕಮಕ್ಕಳನ್ನು ಯೇಸು ಮುಟ್ಟಬೇಕೆಂದು ಅವರ ಬಳಿಗೆ ತಂದರು. ಆದರೆ ಶಿಷ್ಯರು ಜನರನ್ನು ಗದರಿಸಿದರು. 14 ಯೇಸು ಅದನ್ನು ಕಂಡಾಗ ಕೋಪಗೊಂಡು ಅವರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ. 15 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರಾದರೂ ಚಿಕ್ಕಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸದಿದ್ದರೆ, ಅವರು ಅದರೊಳಗೆ ಸೇರುವುದೇ ಇಲ್ಲ,” ಎಂದರು. 16 ಇದಲ್ಲದೆ ಯೇಸು ಆ ಮಕ್ಕಳನ್ನು ಎತ್ತಿಕೊಂಡು ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದರು.
ಐಶ್ವರ್ಯವಂತನೂ ದೇವರಾಜ್ಯವೂ
17 ಯೇಸು ಅಲ್ಲಿಂದ ಹೋಗುತ್ತಿದ್ದಾಗ ಒಬ್ಬನು ಓಡುತ್ತಾ ಬಂದು ಅವರ ಮುಂದೆ ಮೊಣಕಾಲೂರಿ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಯೇಸುವನ್ನು ಕೇಳಿದನು.
18 ಯೇಸು ಅವನಿಗೆ, “ನೀನು ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತಿ? ದೇವರೊಬ್ಬನೇ ಹೊರತು ಬೇರೆ ಯಾರೂ ಒಳ್ಳೆಯವರಲ್ಲ. 19 ‘ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’ ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು.
20 ಅವನು, “ಬೋಧಕರೇ, ನಾನು ಇವೆಲ್ಲವನ್ನು ನನ್ನ ಬಾಲ್ಯದಿಂದಲೇ ಅನುಸರಿಸಿದ್ದೇನೆ,” ಎಂದು ಹೇಳಿದನು.
21 ಯೇಸು ಅವನನ್ನು ದೃಷ್ಟಿಸಿ ನೋಡುತ್ತಾ ಅವನನ್ನು ಪ್ರೀತಿಸಿ ಅವನಿಗೆ, “ನಿನಗೆ ಒಂದು ಕಡಿಮೆ ಇದೆ. ನೀನು ಹೋಗಿ ನಿನಗೆ ಇರುವುದೆಲ್ಲವನ್ನು ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.
22 ಆ ಮಾತಿಗೆ ಅವನು ವ್ಯಸನಗೊಂಡು ದುಃಖದಿಂದ ಹೊರಟುಹೋದನು. ಏಕೆಂದರೆ ಅವನಿಗೆ ಬಹಳ ಆಸ್ತಿ ಇತ್ತು.
23 ಯೇಸು ಸುತ್ತಲೂ ನೋಡಿ ತಮ್ಮ ಶಿಷ್ಯರಿಗೆ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ!” ಎಂದರು.
24 ಶಿಷ್ಯರು ಯೇಸುವಿನ ಮಾತುಗಳಿಗೆ ಬೆರಗಾದರು. ಆದರೆ ಯೇಸು ತಿರುಗಿ ಅವರಿಗೆ, “ಮಕ್ಕಳೇ, ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ. 25 ಒಬ್ಬ ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ,” ಎಂದು ಹೇಳಿದರು.
26 ಅದಕ್ಕೆ ಶಿಷ್ಯರು ಅತ್ಯಂತ ಆಶ್ಚರ್ಯಪಟ್ಟು ತಮ್ಮೊಳಗೆ, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದುಕೊಂಡರು.
27 ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, “ಮನುಷ್ಯರಿಗೆ ಇದು ಅಸಾಧ್ಯ, ದೇವರಿಗೆ ಅಲ್ಲ, ದೇವರಿಗೆ ಎಲ್ಲವೂ ಸಾಧ್ಯ,” ಎಂದರು.
28 ಪೇತ್ರನು ಯೇಸುವಿಗೆ, “ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ,” ಎಂದು ಹೇಳಲಾರಂಭಿಸಿದನು.
29 ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಯಾರಾದರೂ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಮನೆಯನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಹೊಲವನ್ನಾಗಲಿ ಬಿಟ್ಟುಬಿಟ್ಟರೆ, 30 ಅವರು ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ಮನೆಗಳನ್ನೂ ಸಹೋದರರನ್ನೂ ಸಹೋದರಿಯರನ್ನೂ ತಾಯಂದಿರನ್ನೂ ಮಕ್ಕಳನ್ನೂ ಹೊಲವನ್ನೂ ನೂರರಷ್ಟು ಪಡೆಯುವುದಲ್ಲದೆ ಮುಂದಿನ ಲೋಕದಲ್ಲಿ ನಿತ್ಯಜೀವವನ್ನು ಹೊಂದುವರು. 31 ಆದರೆ ಮೊದಲನೆಯವರಾದ ಅನೇಕರು ಕಡೆಯವರಾಗುವರು, ಕಡೆಯವರಾದವರು ಮೊದಲಿನವರಾಗುವರು,” ಎಂದರು.
ಯೇಸು ಪುನಃ ಮರಣ ಪುನರುತ್ಥಾನಗಳ ಬಗ್ಗೆ ಪ್ರಕಟಿಸಿದ್ದು
32 ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು. ಯೇಸು ಅವರ ಮುಂದಾಗಿ ಹೋದದ್ದರಿಂದ ಶಿಷ್ಯರು ಆಶ್ಚರ್ಯಪಟ್ಟರು. ಯೇಸುವಿನ ಹಿಂದೆ ಬರುತ್ತಿದ್ದವರು ಭಯಪಟ್ಟರು. ಯೇಸು ತಮ್ಮ ಹನ್ನೆರಡು ಮಂದಿಯನ್ನು ತಿರುಗಿ ಕರೆದು ತನಗೆ ಸಂಭವಿಸುವ ಸಂಗತಿಗಳನ್ನು ಅವರಿಗೆ ಹೇಳಲಾರಂಭಿಸಿದರು: 33 “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ಮನುಷ್ಯಪುತ್ರನಾದ ನನ್ನನ್ನು ಮುಖ್ಯಯಾಜಕರ ಮತ್ತು ನಿಯಮ ಬೋಧಕರ ಕೈಗೆ ಒಪ್ಪಿಸಿಕೊಡುವರು. ಅವರು ನನಗೆ ಮರಣದಂಡನೆಯನ್ನು ವಿಧಿಸಿ ನನ್ನನ್ನು ಯೆಹೂದ್ಯರಲ್ಲದವರಿಗೆ ಒಪ್ಪಿಸುವರು. 34 ಇವರು ನನ್ನನ್ನು ಹಾಸ್ಯಮಾಡಿ, ನನ್ನ ಮೇಲೆ ಉಗುಳಿ, ಕೊರಡೆಯಿಂದ ಹೊಡೆದು ನನ್ನನ್ನು ಕೊಂದುಹಾಕುವರು. ನಾನಾದರೋ ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವೆನು,” ಎಂದರು.
ಯಾಕೋಬ, ಯೋಹಾನರ ಬೇಡಿಕೆ
35 ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಯೇಸುವಿನ ಬಳಿಗೆ ಬಂದು, “ಬೋಧಕರೇ, ನಾವು ಕೇಳುವುದನ್ನು ನೀವು ನಮಗೋಸ್ಕರ ಮಾಡಬೇಕು,” ಎಂದರು.
36 ಅದಕ್ಕೆ ಯೇಸು ಅವರಿಗೆ, “ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಿದರು.
37 ಅವರು ಯೇಸುವಿಗೆ, “ನಾವು ನಿನ್ನ ಮಹಿಮೆಯಲ್ಲಿ ಒಬ್ಬನು ನಿಮ್ಮ ಬಲಗಡೆಯಲ್ಲೂ ಇನ್ನೊಬ್ಬನು ನಿಮ್ಮ ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಿಸಬೇಕು,” ಎಂದರು.
38 ಯೇಸು ಅವರಿಗೆ, “ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯುವ ಪಾತ್ರೆಯಲ್ಲಿ ನೀವೂ ಕುಡಿಯುವಿರೋ? ನಾನು ಪಡೆಯಲಿರುವ ದೀಕ್ಷಾಸ್ನಾನವನ್ನು ನೀವೂ ಪಡೆಯುವಿರೋ?” ಎಂದರು.
39 ಅದಕ್ಕೆ ಅವರು, “ಹೌದು, ನಮ್ಮಿಂದಾಗುವುದು,” ಎಂದು ಹೇಳಿದರು.
ಆಗ ಯೇಸು ಅವರಿಗೆ, “ನಾನು ಕುಡಿಯುವ ಪಾತ್ರೆಯಿಂದ ನೀವು ಕುಡಿಯುವಿರಿ. ನಾನು ಹೊಂದುವ ದೀಕ್ಷಾಸ್ನಾನವನ್ನು ನೀವೂ ಹೊಂದುವಿರಿ. 40 ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗೋಸ್ಕರ ಸಿದ್ಧವಾಗಿದೆಯೋ ಅವರಿಗೇ ಕೊಡಲಾಗುವುದು,” ಎಂದರು.
41 ಆ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ, ಯಾಕೋಬ ಮತ್ತು ಯೋಹಾನರ ಮೇಲೆ ಕೋಪಗೊಂಡರು. 42 ಯೇಸು ಶಿಷ್ಯರನ್ನು ತಮ್ಮ ಹತ್ತಿರಕ್ಕೆ ಕರೆದು ಅವರಿಗೆ, “ಆಳುವವರು ಎಂದೆನಿಸಿಕೊಂಡವರು ಯೆಹೂದ್ಯರಲ್ಲದವರ ಮೇಲೆ ದೊರೆತನ ಮಾಡುತ್ತಾರೆ. ಅವರಲ್ಲಿ ಉನ್ನತ ಅಧಿಕಾರಿಗಳು ಅವರ ಮೇಲೆ ಅಧಿಕಾರ ಮಾಡುತ್ತಾರೆಂದು ನೀವು ಬಲ್ಲಿರಿ. 43 ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಲಿ. 44 ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆಂದಿದ್ದರೆ ಎಲ್ಲರಿಗೂ ದಾಸನಾಗಿರಲಿ. 45 ಮನುಷ್ಯಪುತ್ರನಾದ ನಾನು ಸಹ ಸೇವೆಮಾಡಿಸಿಕೊಳ್ಳುವುದಕ್ಕಾಗಿ ಅಲ್ಲ, ಸೇವೆಮಾಡುವುದಕ್ಕಾಗಿಯೂ ಅನೇಕರಿಗಾಗಿ ನನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕಾಗಿಯೂ ಬಂದಿದ್ದೇನೆ,” ಎಂದು ಹೇಳಿದರು.
ಕುರುಡ ಬಾರ್ತಿಮಾಯನಿಗೆ ದೃಷ್ಟಿ ಬಂದದ್ದು
46 ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸು ತಮ್ಮ ಶಿಷ್ಯರೊಡನೆಯೂ ಅಸಂಖ್ಯಾತ ಜನರೊಡನೆಯೂ ಯೆರಿಕೋವಿನಿಂದ ಹೊರಟಾಗ ತಿಮಾಯನ ಮಗ ಕುರುಡ ಬಾರ್ತಿಮಾಯನು ದಾರಿಯಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 47 ನಜರೇತಿನ ಯೇಸು ಬರುತ್ತಿದ್ದಾರೆ ಎಂದು ಅವನು ಕೇಳಿದಾಗ, “ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸು,” ಎಂದು ಕೂಗಿಕೊಳ್ಳಲಾರಂಭಿಸಿದನು.
48 ಸುಮ್ಮನಿರುವಂತೆ ಅನೇಕರು ಅವನಿಗೆ ಒತ್ತಾಯಪಡಿಸಿ ಹೇಳಿದರು. ಆದರೆ ಅವನು ಇನ್ನೂ ಗಟ್ಟಿಯಾಗಿ, “ದಾವೀದನ ಪುತ್ರನೇ, ನನ್ನನ್ನು ಕರುಣಿಸು,” ಎಂದು ಇನ್ನಷ್ಟು ಕೂಗಿದನು.
49 ಯೇಸು ನಿಂತು, ಅವನನ್ನು ಕರೆಯಬೇಕೆಂದು ಆಜ್ಞಾಪಿಸಲು,
ಅವರು ಆ ಕುರುಡನನ್ನು ಕರೆದು, “ಧೈರ್ಯವಾಗಿರು, ಏಳು, ಯೇಸು ನಿನ್ನನ್ನು ಕರೆಯುತ್ತಿದ್ದಾರೆ,” ಎಂದು ಅವನಿಗೆ ಹೇಳಿದರು. 50 ಅವನು ತನ್ನ ಮೇಲಂಗಿಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು.
51 ಯೇಸು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ?” ಎಂದು ಕೇಳಲು,
ಆ ಕುರುಡನು ಯೇಸುವಿಗೆ, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡಬೇಕು,” ಎಂದನು.
52 ಅದಕ್ಕೆ ಯೇಸು ಅವನಿಗೆ, “ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು. ಕೂಡಲೇ ಅವನು ತನ್ನ ದೃಷ್ಟಿಯನ್ನು ಪಡೆದು, ದಾರಿಯಲ್ಲಿ ಯೇಸುವನ್ನು ಹಿಂಬಾಲಿಸಿದನು.
* 10:6 10:6 ಆದಿ 1:27 10:8 10:8 ಆದಿ 2:24 10:19 10:19 ವಿಮೋ 20:12-16; ಧರ್ಮೋ 5:16-20