8
ಯೇಸು ನಾಲ್ಕು ಸಾವಿರ ಜನರಿಗೆ ಊಟಮಾಡಿಸಿದ್ದು
ಆ ದಿವಸಗಳಲ್ಲಿ ದೊಡ್ಡ ಜನಸಮೂಹ ಕೂಡಿಬಂದಿತು. ಅವರಿಗೆ ಊಟಕ್ಕೆ ಏನೂ ಇಲ್ಲದ್ದರಿಂದ ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು, “ನಾನು ಈ ಜನಸಮೂಹವನ್ನು ನೋಡಿ ಕನಿಕರಪಡುತ್ತೇನೆ. ಏಕೆಂದರೆ ಮೂರು ದಿನಗಳಿಂದ ಇವರು ನನ್ನೊಂದಿಗಿದ್ದಾರೆ. ಇವರಿಗೆ ಊಟಕ್ಕೆ ಏನೂ ಇಲ್ಲ. ನಾನು ಇವರನ್ನು ಹಸಿವೆಯಿಂದ ತಮ್ಮ ಮನೆಗಳಿಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಹೋಗುವರು. ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರೆ,” ಎಂದರು.
ಅದಕ್ಕೆ ಶಿಷ್ಯರು ಯೇಸುವಿಗೆ, “ಈ ನಿರ್ಜನ ಪ್ರದೇಶದಲ್ಲಿ ಈ ಜನರನ್ನು ತೃಪ್ತಿಪಡಿಸಲು ಸಾಕಷ್ಟು ರೊಟ್ಟಿಯನ್ನು ಎಲ್ಲಿಂದ ತರುವುದು?” ಎಂದರು.
ಯೇಸು ಅವರಿಗೆ, “ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದ್ದಕ್ಕೆ ಶಿಷ್ಯರು,
“ಏಳು ರೊಟ್ಟಿಗಳಿವೆ,” ಎಂದರು.
ಆಗ ಯೇಸು ಜನಸಮೂಹವು ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ಮುರಿದು ಜನಸಮೂಹಕ್ಕೆ ಹಂಚಲು ತಮ್ಮ ಶಿಷ್ಯರಿಗೆ ಕೊಟ್ಟರು. ಅವರು ಜನಸಮೂಹಕ್ಕೆ ಹಂಚಿದರು. ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು. ಯೇಸು ಅವುಗಳನ್ನೂ ಆಶೀರ್ವದಿಸಿ ಅವರಿಗೆ ಹಂಚುವಂತೆ ಆಜ್ಞಾಪಿಸಿದರು. ಜನರು ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಒಟ್ಟುಗೂಡಿಸಿದಾಗ ಏಳು ಬುಟ್ಟಿಗಳು ತುಂಬಿದವು. ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ. ಯೇಸು ಅವರನ್ನು ಕಳುಹಿಸಿದ ನಂತರ, 10 ತಮ್ಮ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.
11 ಫರಿಸಾಯರು ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಪರಲೋಕದಿಂದ ತಮಗೆ ಒಂದು ಸೂಚಕಕಾರ್ಯವನ್ನು ಮಾಡಬೇಕೆಂದು ಕೇಳಿ, ಅವರೊಂದಿಗೆ ತರ್ಕಿಸುವುದಕ್ಕೆ ಆರಂಭಿಸಿದರು. 12 ಯೇಸು ತಮ್ಮ ಆತ್ಮದಲ್ಲಿ ನೊಂದುಕೊಂಡು, “ಈ ಸಂತತಿಯು ಸೂಚಕಕಾರ್ಯವನ್ನು ಹುಡುಕುವುದು ಏಕೆ? ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲಾಗುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು. 13 ಯೇಸು ಅವರನ್ನು ಬಿಟ್ಟು ತಿರುಗಿ ದೋಣಿಯನ್ನು ಹತ್ತಿ ಆಚೆದಡಕ್ಕೆ ಹೊರಟು ಹೋದರು.
ಹುಳಿಯ ಬಗ್ಗೆ ಎಚ್ಚರಿಕೆ
14 ಶಿಷ್ಯರು ರೊಟ್ಟಿಬುತ್ತಿಯನ್ನು ತೆಗೆದುಕೊಳ್ಳುವುದಕ್ಕೆ ಮರೆತಿದ್ದರು. ಇದಲ್ಲದೆ ದೋಣಿಯಲ್ಲಿ ಅವರಿಗೆ ಒಂದೇ ಒಂದು ರೊಟ್ಟಿ ಇತ್ತು. 15 ಯೇಸು ಅವರಿಗೆ, “ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿಯೂ ಹೆರೋದನ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದಿರಿ,” ಎಂದು ಖಂಡಿತವಾಗಿ ಹೇಳಿದರು.
16 ಅವರು ತಮ್ಮೊಳಗೆ, “ನಮ್ಮಲ್ಲಿ ರೊಟ್ಟಿ ಇಲ್ಲದಿರುವುದರಿಂದಲೇ ಹೀಗೆ ಹೇಳುತ್ತಿರಬೇಕು,” ಎಂದು ಚರ್ಚಿಸಿಕೊಂಡರು.
17 ಯೇಸು ಅವರು ಮಾತನಾಡಿದ್ದನ್ನು ತಿಳಿದುಕೊಂಡು ಅವರಿಗೆ, “ನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ಏಕೆ ಚರ್ಚಿಸಿಕೊಳ್ಳುತ್ತೀರಿ? ನೀವು ಇನ್ನೂ ಕಾಣದೆಯೂ ತಿಳಿದುಕೊಳ್ಳದೆಯೂ ಇದ್ದೀರೋ? ನೀವು ನಿಮ್ಮ ಹೃದಯವನ್ನು ಇನ್ನೂ ಕಠಿಣ ಮಾಡಿಕೊಂಡಿದ್ದೀರೋ? 18 ಕಣ್ಣುಗಳಿದ್ದೂ ನೀವು ಕಾಣುವುದಿಲ್ಲವೋ? ಕಿವಿಗಳಿದ್ದೂ ನೀವು ಕೇಳುವುದಿಲ್ಲವೋ? 19 ನಾನು ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಬುಟ್ಟಿಗಳ ತುಂಬ ರೊಟ್ಟಿಯ ತುಂಡುಗಳನ್ನು ಕೂಡಿಸಿದಿರಿ ಎಂದು ನಿಮಗೆ ನೆನಪಿಲ್ಲವೇ?” ಎಂದು ಕೇಳಲು ಅವರು ಯೇಸುವಿಗೆ,
“ಹನ್ನೆರಡು ಬುಟ್ಟಿಗಳು,” ಎಂದರು.
20 “ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಬುಟ್ಟಿಗಳ ತುಂಬ ತುಂಡುಗಳನ್ನು ಕೂಡಿಸಿದಿರಿ?” ಎಂದು ಕೇಳಲು ಅವರು,
“ಏಳು ಬುಟ್ಟಿಗಳು,” ಎಂದರು.
21 ಯೇಸು ಅವರಿಗೆ, “ಹಾಗಾದರೆ ನೀವು ಇನ್ನೂ ಗ್ರಹಿಸದೆ ಇರುವುದು ಹೇಗೆ?” ಎಂದು ಕೇಳಿದರು.
ಯೇಸು ಕುರುಡರಿಗೆ ಕಣ್ಣು ಕೊಟ್ಟದ್ದು
22 ಯೇಸು ಬೇತ್ಸಾಯಿದಕ್ಕೆ ಬಂದಾಗ, ಕೆಲವರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು. 23 ಯೇಸು ಆ ಕುರುಡನ ಕೈಹಿಡಿದು ಊರ ಹೊರಗೆ ಕರೆದುಕೊಂಡು ಹೋಗಿ, ಅವನ ಕಣ್ಣುಗಳ ಮೇಲೆ ಉಗುಳಿ ಅವನ ಮೇಲೆ ತಮ್ಮ ಕೈಯಿಟ್ಟು, “ನಿನಗೆ ಏನಾದರೂ ಕಾಣುತ್ತದೋ?” ಎಂದು ಅವನನ್ನು ಕೇಳಿದರು.
24 ಅವನು ಮೇಲಕ್ಕೆ ನೋಡಿ, “ಮನುಷ್ಯರು ಮರಗಳ ಹಾಗೆ ಕಾಣುತ್ತಿದ್ದಾರೆ. ಆದರೂ ಅವರು ನಡೆದಾಡುವುದನ್ನು ನೋಡುತ್ತಿದ್ದೇನೆ,” ಎಂದನು.
25 ತರುವಾಯ ಯೇಸು ತಿರುಗಿ ಅವನ ಕಣ್ಣುಗಳ ಮೇಲೆ ತಮ್ಮ ಕೈಗಳನ್ನಿಟ್ಟರು. ಆಗ ಅವನು ಗುಣಹೊಂದಿದವನಾಗಿ ಎಲ್ಲವನ್ನೂ ಬಹುಸ್ಪಷ್ಟವಾಗಿ ಕಂಡನು. 26 ಯೇಸು ಅವನಿಗೆ, “ನೀನು ಊರೊಳಕ್ಕೆ ಹೋಗಬೇಡ,” ಎಂದು ಹೇಳಿ ಅವನನ್ನು ಮನೆಗೆ ಕಳುಹಿಸಿಬಿಟ್ಟರು.
ಪೇತ್ರನ ಅರಿಕೆ
27 ಯೇಸುವೂ ಅವರ ಶಿಷ್ಯರೂ ಕೈಸರೈಯ ಫಿಲಿಪ್ಪಿ ಊರುಗಳಿಗೆ ಹೋದರು. ಯೇಸು ದಾರಿಯಲ್ಲಿ ತಮ್ಮ ಶಿಷ್ಯರಿಗೆ, “ನಾನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದರು.
28 ಅವರು, “ಕೆಲವರು ಸ್ನಾನಿಕನಾದ ಯೋಹಾನನು, ಮತ್ತೆ ಕೆಲವರು ಎಲೀಯನು, ಇನ್ನು ಕೆಲವರು ಪ್ರವಾದಿಗಳಲ್ಲಿ ಒಬ್ಬನು ಎನ್ನುತ್ತಾರೆ,” ಎಂದು ಹೇಳಿದರು.
29 ಅದಕ್ಕೆ ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಲು,
ಪೇತ್ರನು ಯೇಸುವಿಗೆ, “ನೀನು ಕ್ರಿಸ್ತನೇ,” ಎಂದನು.
30 ತಮ್ಮ ವಿಷಯವಾಗಿ ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಖಂಡಿತವಾಗಿ ಹೇಳಿದರು.
ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು
31 ಮನುಷ್ಯಪುತ್ರನಾದ ನಾನು ಅನೇಕ ಬಾಧೆಗಳನ್ನು ಅನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ ಕೊಲೆಗೆ ಗುರಿಯಾಗಿ ಮೂರು ದಿವಸಗಳಾದ ಮೇಲೆ ಜೀವಂತವಾಗಿ ಎದ್ದು ಬರುವುದು ಅವಶ್ಯ ಎಂದು ಅವರಿಗೆ ಬೋಧಿಸಲಾರಂಭಿಸಿದರು. 32 ಯೇಸು ಆ ಮಾತನ್ನು ಸ್ಪಷ್ಟವಾಗಿ ಹೇಳಿದ್ದರಿಂದ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು ಯೇಸುವನ್ನು ಗದರಿಸಲಾರಂಭಿಸಿದನು.
33 ಆದರೆ ಯೇಸು ತಿರುಗಿ ತಮ್ಮ ಶಿಷ್ಯರ ಕಡೆಗೆ ನೋಡಿ ಪೇತ್ರನನ್ನು ಗದರಿಸಿ, “ಸೈತಾನನೇ, ನನ್ನಿಂದ ತೊಲಗಿಹೋಗು! ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದು ಹೇಳಿದರು.
ಶಿಲುಬೆಯ ಮಾರ್ಗ
34 ಯೇಸು ಜನರನ್ನೂ ಶಿಷ್ಯರನ್ನೂ ತಮ್ಮ ಬಳಿಗೆ ಕರೆದು ಅವರಿಗೆ, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. 35 ತಮ್ಮ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವರು ಅದನ್ನು ಕಳೆದುಕೊಳ್ಳುವರು. ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವರೋ ಅವರು ಅದನ್ನು ಉಳಿಸಿಕೊಳ್ಳುವರು. 36 ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತಮ್ಮ ಸ್ವಂತ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅವರಿಗೆ ಲಾಭವೇನು? 37 ಇಲ್ಲವೆ ತಮ್ಮ ಆತ್ಮಕ್ಕೆ ಬದಲಾಗಿ ಏನು ಕೊಡುವರು? 38 ಯಾರಾದರೂ ವ್ಯಭಿಚಾರದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯವಾಗಿ ನಾಚಿಕೊಳ್ಳುವರೋ ಅವರ ವಿಷಯದಲ್ಲಿ ಮನುಷ್ಯಪುತ್ರನಾದ ನಾನು ಸಹ ನನ್ನ ತಂದೆಯ ಮಹಿಮೆಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿಕೊಳ್ಳುವೆನು,” ಎಂದು ಹೇಳಿದರು.